
ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಮದುವೆ ಮತ್ತೆ ಮುನ್ನೆಲೆಗೆ ಬಂದಿದೆ.
ಕ್ರಿಕೆಟ್ ತಾರೆ ಸ್ಮೃತಿ ಮಂಧಾನ, ಪಲಾಶ್ ಮುಚ್ಚಲ್ ಬ್ರೇಕಪ್ ಬಳಿಕ ಮತ್ತೆ ಒಂದಾದ್ರಾ?
ಮುಂಬೈ ರೆಸ್ಟೋರೆಂಟ್ ಬಳಿ ಸ್ಮೃತಿ ತಂದೆಯನ್ನು ಪಲಕ್ ಮುಚ್ಚಲ್ ಭೇಟಿಯಾದ ವಿಡಿಯೋ ವೈರಲ್ ಆಗಿದ್ದು, ಈ ಜೋಡಿ ಮತ್ತೆ ಒಂದಾಗಲಿದ್ದಾರೆಯೇ ಎಂಬ ಕುತೂಹಲ ಮೂಡಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ಮುರಿದುಬಿದ್ದಿದ್ದ ಸಂಬಂಧ ಮತ್ತೆ ಚಿಗುರುತ್ತಿದೆಯೇ ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ತಿದೆ. 2025ರ ನವೆಂಬರ್‌ನಲ್ಲಿ ಕೊನೆಯ ಕ್ಷಣದಲ್ಲಿ ಮದುವೆ ರದ್ದಾಗಿ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದ್ದ ಈ ಜೋಡಿ, ಈಗ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿಗಳು ಹರಡುತ್ತಿದೆ.
ಮುಂಬೈನ ರೆಸ್ಟೋರೆಂಟ್ ಒಂದರ ಹೊರಗೆ ಸ್ಮೃತಿ ತಂದೆ ಶ್ರೀನಿವಾಸ್ ಅವರು ಪಲಾಶ್ ಸಹೋದರಿ ಪಲಕ್ ಮುಚ್ಚಲ್ ಮತ್ತು ಮಿತೂನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪಲಕ್ ಅವರು ಶ್ರೀನಿವಾಸ್ ಅವರ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಿರುವುದು ಕಂಡುಬಂದಿದ್ದು, ಉಭಯ ಕುಟುಂಬಗಳ ನಡುವೆ ಮತ್ತೆ ಸಂಧಾನ ಏರ್ಪಟ್ಟಿದೆಯೇ ಎಂಬ ಚರ್ಚೆ ಶುರುವಾಗಿದೆ. ಆದರೂ ಈ ವಿಡಿಯೋ ಹಳೆಯದೇ ಅಥವಾ ನಕಲಿಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ಬಗ್ಗೆ ಸ್ಮೃತಿ ಅಥವಾ ಪಲಾಶ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಭಾರತೀಯ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಸಂಭ್ರಮದ ಬೆನ್ನಲ್ಲೇ, ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ವಿವಾಹವು 2025ರ ನವೆಂಬರ್‌ನಲ್ಲಿ ಅನಿರೀಕ್ಷಿತವಾಗಿ ಮುಂದೂಡಲ್ಪಟ್ಟಿತ್ತು. ಮದುವೆಯ ಹಿಂದಿನ ರಾತ್ರಿ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳು ಕ್ರೀಡಾ ಮತ್ತು ಗ್ಲಾಮರ್ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದ್ದವು.
ಆರಂಭದಲ್ಲಿ ಸ್ಮೃತಿ ಅವರ ತಂದೆ ಶ್ರೀನಿವಾಸ್ ಅವರ ಅನಾರೋಗ್ಯದ ಕಾರಣ ವಿವಾಹ ಮುಂದೂಡಲಾಗಿದೆ ಎಂದು ಹೇಳಲಾಗಿತ್ತಾದರೂ, ನಂತರ ತೀವ್ರ ಮಾನಸಿಕ ಒತ್ತಡದಿಂದ ಪಲಾಶ್ ಮುಚ್ಚಲ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಪಲಾಶ್ ವಿರುದ್ಧ ಹರಿದಾಡಿದ ವದಂತಿಗಳನ್ನು ಅವರ ಕುಟುಂಬವು ಅಲ್ಲಗಳೆದಿತ್ತು. ಅಂತಿಮವಾಗಿ ಇಬ್ಬರೂ ಅಧಿಕೃತ ಹೇಳಿಕೆ ನೀಡಿ ತಮ್ಮ ಸಂಬಂಧವನ್ನು ಕೊನೆಗೊಳಿಸುತ್ತಿರುವುದಾಗಿ ಘೋಷಿಸಿದ್ದರು.
ವೈಯಕ್ತಿಕ ಜೀವನದ ಈ ಏರಿಳಿತಗಳ ನಡುವೆಯೂ ಸ್ಮೃತಿ ಮಂಧಾನ ಕ್ರೀಡಾಂಗಣದಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿದ್ದಾರೆ. 2026ರಲ್ಲಿ ಡಬ್ಲ್ಯೂಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ಪರ ಮಿಂಚಿದ ಅವರು, ಒಂಬತ್ತು ಪಂದ್ಯಗಳಲ್ಲಿ 377 ರನ್ ಗಳಿಸುವ ಮೂಲಕ ತಂಡಕ್ಕೆ ಟ್ರೋಫಿ ತಂದುಕೊಟ್ಟಿದ್ದಾರೆ. ಕಳೆದ ವರ್ಷದ ಅವರ ಅದ್ಭುತ ಪ್ರದರ್ಶನಕ್ಕಾಗಿ ಬಿಸಿಸಿಐ ನೀಡುವ 'ವರ್ಷದ ಮಹಿಳಾ ಕ್ರಿಕೆಟಾರ್' ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ಸದ್ಯ ಸ್ಮೃತಿ ತಮ್ಮ ಸಂಪೂರ್ಣ ಗಮನವನ್ನು ಕ್ರಿಕೆಟ್ ಮೇಲೆ ಕೇಂದ್ರೀಕರಿಸಿದ್ದಾರೆ.

