
ಶಾಸಕರು, ಸಚಿವರಿಗೆ ತಲಾ ಐದು 5 ಉಚಿತ ಐಪಿಎಲ್ ಟಿಕೆಟ್ ನೀಡುವಂತೆ ಕಾಶಪ್ಪನವರ್ ಡಿಮ್ಯಾಂಡ್!
ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳು ಟಿಕೆಟ್‌ಗಾಗಿ ಪರದಾಡುತ್ತಿರುವಾಗ, ಸಕಲ ಸವಲತ್ತುಗಳನ್ನು ಅನುಭವಿಸುವ ಜನಪ್ರತಿನಿಧಿಗಳಿಗೆ ಉಚಿತ ಟಿಕೆಟ್‌ನ ದರ್ದು ಏಕೆ ಎಂದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 28ರಿಂದ ಐಪಿಎಲ್ ಹಬ್ಬ ಶುರುವಾಗಲಿದ್ದು, ಕ್ರಿಕೆಟ್ ಕಾವು ನಿಧಾನವಾಗಿ ಏರುತ್ತಿದೆ. ಈ ನಡುವೆ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಮುಂದಿಟ್ಟಿರುವ ಹೊಸ ಬೇಡಿಕೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ. ರಾಜ್ಯದ ಎಲ್ಲಾ ಶಾಸಕರು ಹಾಗೂ ಸಚಿವರಿಗೆ ತಲಾ ಐದು ಐಪಿಎಲ್ ಟಿಕೆಟ್‌ಗಳನ್ನು ಉಚಿತವಾಗಿ ನೀಡಬೇಕು ಮತ್ತು ಅವರಿಗಾಗಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ. ಶಾಸಕರ ಈ ವಿಐಪಿ ಸಂಸ್ಕೃತಿಯ ಬೇಡಿಕೆಯು ಕ್ರೀಡಾಭಿಮಾನಿಗಳ ತೀವ್ರ ಅಸಮಾಧಾನಕ್ಕೆ ಗುರಿಯಾಗಿದೆ.
ಕಾಳಸಂತೆಯ ನೆಪವೊಡ್ಡಿ ವಿಐಪಿ ಪಾಸ್ ಬೇಡಿಕೆ
ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಿಂದಾಗಿ ಐಪಿಎಲ್ ಟಿಕೆಟ್‌ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ ಎಂಬುದು ಶಾಸಕರ ಪ್ರಮುಖ ಆರೋಪ. 5,000 ರೂಪಾಯಿ ಮುಖಬೆಲೆಯ ಟಿಕೆಟ್‌ಗಳು 35,000 ರೂಪಾಯಿಗಳವರೆಗೆ ಬ್ಲಾಕ್‌ನಲ್ಲಿ ಮಾರಾಟವಾಗುತ್ತಿವೆ ಎಂದು ಕಿಡಿಕಾರಿರುವ ಅವರು, ಈ ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ. ಆದರೆ, ಆನ್‌ಲೈನ್ ಟಿಕೆಟ್ ದಂಧೆಯ ಬಗ್ಗೆ ಮಾತನಾಡುತ್ತಲೇ, ಜನಪ್ರತಿನಿಧಿಗಳಿಗೆ ಉಚಿತ ಪಾಸ್ ಮತ್ತು ಪ್ರತ್ಯೇಕ ವಿಐಪಿ ಗ್ಯಾಲರಿಯ ಸೌಲಭ್ಯ ಒದಗಿಸಬೇಕು ಎಂದು ಅವರು ಹೇಳಿದ್ದಾರೆ.
'ಉಚಿತ' ಪ್ರವೃತ್ತಿಗೆ ನೆಟ್ಟಿಗರ ತರಾಟೆ
ಕಾಶಪ್ಪನವರ್ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಪಂದ್ಯ ವೀಕ್ಷಿಸಲು ಟಿಕೆಟ್‌ಗಾಗಿ ಪರದಾಡುತ್ತಿರುವಾಗ, ಜನರ ತೆರಿಗೆ ಹಣದಲ್ಲಿ ಸಕಲ ಸವಲತ್ತುಗಳನ್ನು ಅನುಭವಿಸುವ ಜನಪ್ರತಿನಿಧಿಗಳಿಗೆ ಉಚಿತ ಟಿಕೆಟ್‌ನ ದರ್ದು ಏಕೆ ಎಂದು ಬಳಕೆದಾರರು ಕಟುವಾಗಿ ಪ್ರಶ್ನಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣವು ಕೇವಲ 35,000 ಆಸನ ಸಾಮರ್ಥ್ಯ ಹೊಂದಿದ್ದು, ಸಾಮಾನ್ಯ ಜನರಿಗೆ ಟಿಕೆಟ್ ಸಿಗುವುದೇ ದುಸ್ತರವಾಗಿರುವಾಗ ಶಾಸಕರ ಈ ಹಕ್ಕುಚಲಾವಣೆಯ ಪ್ರವೃತ್ತಿ ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ತಲೆನೋವಾದ ರಾಜಕಾರಣಿಗಳ ಒತ್ತಡ
ಕರ್ನಾಟಕದ ರಾಜಕಾರಣಿಗಳು ಮತ್ತು ಕೆಎಸ್‌ಸಿಎ ನಡುವೆ ಐಪಿಎಲ್ ಟಿಕೆಟ್‌ಗಳಿಗಾಗಿ ನಡೆಯುವ ಈ ಹಗ್ಗಜಗ್ಗಾಟ ಹೊಸದೇನಲ್ಲ. ರಾಜ್ಯದಲ್ಲಿ 224 ಶಾಸಕರಿದ್ದು, ಪ್ರತಿಯೊಬ್ಬರಿಗೂ ತಲಾ ಐದು ಉಚಿತ ಟಿಕೆಟ್ ನೀಡಿದರೆ ಕನಿಷ್ಠ 1,120 ಟಿಕೆಟ್‌ಗಳನ್ನು ಕೇವಲ ಶಾಸಕರಿಗಾಗಿಯೇ ಮೀಸಲಿಡಬೇಕಾಗುತ್ತದೆ. ಜೊತೆಗೆ ಸಚಿವರು, ವಿಧಾನಪರಿಷತ್ ಸದಸ್ಯರು ಮತ್ತು ಅವರ ಬೆಂಬಲಿಗರ ಪಾಸ್‌ಗಳ ಲೆಕ್ಕಾಚಾರ ಬೇರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ತವರಿನ ಪಂದ್ಯಗಳಿಗೆ ಮೊದಲೇ ಭಾರಿ ಬೇಡಿಕೆಯಿದ್ದು, ಜನಪ್ರತಿನಿಧಿಗಳ ಈ ಉಚಿತ ಟಿಕೆಟ್ ಬೇಡಿಕೆಯು ಟಿಕೆಟ್ ಅಭಾವದ ಸಮಸ್ಯೆ ಸೃಷ್ಟಿಸಬಹುದು.

