ಚೆಪಾಕ್ ಕ್ರೀಡಾಂಗಣದಲ್ಲಿನ ವಿಶ್ವ ಕಪ್​ ಪಂದ್ಯದ ವೇಳೆ ವಿಷಲ್​​ ನಿಷೇಧ; ನಟ ವಿಜಯ್ ಪಕ್ಷದ ಚಿಹ್ನೆ ಕಾರಣವೇ?
x

ಚೆಪಾಕ್ ಕ್ರೀಡಾಂಗಣದಲ್ಲಿನ ವಿಶ್ವ ಕಪ್​ ಪಂದ್ಯದ ವೇಳೆ 'ವಿಷಲ್​​ ನಿಷೇಧ; ನಟ ವಿಜಯ್ ಪಕ್ಷದ ಚಿಹ್ನೆ ಕಾರಣವೇ?

ಫೆಬ್ರವರಿ 8ರಂದು ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ನಡುವೆ ನಡೆದ ಟಿ20 ವಿಶ್ವಕಪ್ ಪಂದ್ಯದ ವೇಳೆ ಈ ವಿಚಿತ್ರ ಬೆಳವಣಿಗೆ ಕಂಡುಬಂದಿದೆ ಎಂಬುದಾಗಿ ಎಕ್ಸ್​​ನಲ್ಲಿ ಪೋಸ್ಟ್​ ಒಂದು ಪ್ರಕಟಗೊಂಡಿದೆ.


Click the Play button to hear this message in audio format

ಕ್ರಿಕೆಟ್ ಪಂದ್ಯದ ವೇಳೆ ಅಭಿಮಾನಿಗಳು ವಿಷಲ್ ಅನ್ನು ಸ್ಟೇಡಿಯಮ್​​ಗೆ ತೆಗೆದುಕೊಂಡು ಹೋಗುವುದು ಸರ್ವೇ ಸಾಮಾನ್ಯ. ಫೋರ್​, ಸಿಕ್ಸರ್ ಬಾರಿಸಿದಾಗ ವಿಷಲ್ ಹಾಕಿ ಸಂಭ್ರಮಿಸುವುದುಂಟು. ಆದರೆ, ಚೆನ್ನೈನ ಎಂ.ಎ. ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ನಡೆಯುವ ವಿಶ್ವ ಕಪ್​ ಪಂದ್ಯದ ವೇಳೆ ಅದಕ್ಕೆ ಅವಕಾಶ ಇಲ್ಲ ಎಂಬುದಾಗಿ ಹೇಳಲಾಗುತ್ತಿದೆ. ಅಲ್ಲಿನ ಕ್ರಿಕೆಟ್​ ಸಂಸ್ಥೆಯು ವಿಷಲ್​ ನಿಷೇಧಿಸಿರುವುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಚೆಪಾಕ್​ ಸ್ಟೇಡಿಯಮ್​ನಲ್ಲಿ ವಿಷಲ್​ಗೆ ಪೊಲೀಸರ ತಡೆ.

ಫೆಬ್ರವರಿ 8ರಂದು ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ನಡುವೆ ನಡೆದ ಟಿ20 ವಿಶ್ವಕಪ್ ಪಂದ್ಯದ ವೇಳೆ ಈ ವಿಚಿತ್ರ ಬೆಳವಣಿಗೆ ಕಂಡುಬಂದಿದೆ ಎಂಬುದಾಗಿ ಎಕ್ಸ್​​ನಲ್ಲಿ ಪೋಸ್ಟ್​ ಒಂದು ಪ್ರಕಟಗೊಂಡಿದೆ.

ಏನಿದು 'ವಿಷಲ್​' ವಿವಾದ?

ಕ್ರಿಕೆಟ್ ಅಭಿಮಾನಿಗಳು ಮೈದಾನಕ್ಕೆ ವಿಷಲ್​ (Whistle) ತೆಗೆದುಕೊಂಡು ಹೋಗುವುದನ್ನು ಪೊಲೀಸರು ತಡೆದಿದ್ದಾರೆ. ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ತಪಾಸಣೆ ನಡೆಸಿ ವಿಷಲ್​ಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲ, ಕ್ರೀಡಾಂಗಣದ ಹೊರಗೆ ವಿಷಲ್​ ಮಾರಾಟವನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ತಮಿಳುನಾಡಿನ ಅಭಿಮಾನಿಗಳು ಕ್ರಿಕೆಟ್​ ಪಂದ್ಯ ವೀಕ್ಷಣಗೆ ಹೋಗುವ ವೇಳೆ ಕತ್ತಿನಲ್ಲಿ ವಿಷಲ್ ನೇತು ಹಾಕಿಕೊಂಡು ಹೋಗುವುದು ಸಾಮಾನ್ಯ. ಅಲ್ಲಿನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ಯಾಗ್​ ಲೈನ್​ 'ವಿಷಲ್ ಪೋಡು'. ಹೀಗಾಗಿ ಅವರು ಹಳದಿ ಬಣ್ಣದ ವಿಷಲ್​ ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ಬಾರಿ ಭದ್ರತಾ ಸಿಬ್ಬಂದಿ ತಡೆದಿದ್ದಾರೆ ಎನ್ನಲಾಗಿದೆ.

ರಾಜಕೀಯ ನಂಟು ಏನು?

ಈ ಹಠಾತ್ ನಿಷೇಧದ ಹಿಂದೆ ರಾಜಕೀಯ ಕಾರಣವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜನವರಿ 2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಗಾಗಿ ಭಾರತೀಯ ಚುನಾವಣಾ ಆಯೋಗವು (ECI), ತಮಿಳು ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷಕ್ಕೆ 'ವಿಷಲ್​'ಯನ್ನು (Whistle) ಚುನಾವಣಾ ಚಿಹ್ನೆಯನ್ನಾಗಿ ಹಂಚಿಕೆ ಮಾಡಿದೆ.

ಕ್ರೀಡಾಂಗಣದಲ್ಲಿ ಅಭಿಮಾನಿಗಳು ವಿಷಲ್​ ಊದಿದರೆ ಅದು ವಿಜಯ್ ಅವರ ಪಕ್ಷಕ್ಕೆ ಪ್ರಚಾರ ನೀಡಿದಂತಾಗುತ್ತದೆ ಎಂಬ ಭೀತಿಯಿಂದ ಆಡಳಿತಾರೂಢ ಪಕ್ಷಗಳು ಈ ನಿಷೇಧ ಹೇರಿದ್ದಾರೆ ಎಂದು ಟಿವಿಕೆ ಬೆಂಬಲಿಗರು ಆರೋಪಿಸುತ್ತಿದ್ದಾರೆ. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ "ವಿಷಲ್ ಪೋಡು" (Whistle Podu) ಎಂಬ ಘೋಷವಾಕ್ಯದಿಂದಾಗಿ ವಿಷಲ್​ ಕ್ರಿಕೆಟ್ ಅಭಿಮಾನಿಗಳ ಅಚ್ಚುಮೆಚ್ಚಿನ ವಸ್ತುವಾಗಿತ್ತು. ಆದರೆ ಈಗ ಅದು ರಾಜಕೀಯ ಚಿಹ್ನೆಯಾಗಿ ಬದಲಾಗಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.

ಅಧಿಕಾರಿಗಳು ಏನಂತಾರೆ?

ದ ಫೆಡರಲ್​ನ ವರದಿಗಾರರು, ತಮಿಳುನಾಡು ಕ್ರಿಕೆಟ್ ಸಂಸ್ಥೆಯನ್ನು (TNCA) ಸಂಪರ್ಕಿಸಿದಾಗ ಯಾವುದೇ ಅಧಿಕೃತ ಆದೇಶಗಳು ಇಲ್ಲ ಎಂದು ಹೇಳಿದೆ. ಈ ವಿಚಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, 2023ರ ವಿಶ್ವಕಪ್ ಮತ್ತು ಐಪಿಎಲ್ ಪಂದ್ಯಗಳ ವೇಳೆ ಚೆಪಾಕ್ ಸುತ್ತಮುತ್ತಲಿನ ನಿವಾಸಿಗಳಿಂದ ಶಬ್ದ ಮಾಲಿನ್ಯದ ದೂರುಗಳು ಬಂದಿದ್ದವು, ಅದನ್ನೇ ನೆಪವಾಗಿಟ್ಟುಕೊಂಡು ಈಗ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ವಾದವೂ ಇದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ:

ಈ ಬೆಳವಣಿಗೆಯಿಂದ ಕೆರಳಿರುವ ವಿಜಯ್ ಅಭಿಮಾನಿಗಳು ಮತ್ತು ಟಿವಿಕೆ ಕಾರ್ಯಕರ್ತರು, "ಇದು ನಮ್ಮ ಪಕ್ಷದ ಬೆಳವಣಿಗೆಯನ್ನು ಕಂಡು ಎದುರಾಳಿಗಳಿಗೆ ಉಂಟಾಗಿರುವ ಭಯ," ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೈದಾನದಲ್ಲಿ ವಿಷಲ್​ ನಿಷೇಧಿಸಿದರೆ ಬೇರೆಡೆ ಅದನ್ನು ಇನ್ನಷ್ಟು ಜೋರಾಗಿ ಮೊಳಗಿಸುತ್ತೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ಒಂದು ಕಡೆ ಅಂತಾರಾಷ್ಟ್ರೀಯ ರಾಜಕೀಯ ವಿಷಯ ವಿಶ್ವ ಕಪ್​ ತಟ್ಟಿದ್ದು, ಬಾಂಗ್ಲಾದೇಶ ಟೂರ್ನಿಯಿಂದ ಹೊರಕ್ಕೆ ಹೋಗಿದ್ದರೆ, ಪಾಕಿಸ್ತಾನ ಭಾರತ ವಿರುದ್ಧ ಆಡುವುದಿಲ್ಲ ಎಂದು ಹೇಳಿದೆ. ಇದೀಗ ದೇಶದೊಳಗಿನ ರಾಜಕೀಯವೂ ಕ್ರಿಕೆಟ್​ನ ಸಂಭ್ರಮವನ್ನು ಕಡಿಮೆ ಮಾಡಿದಂತೆ ತೋರುತ್ತಿದೆ.

Read More
Next Story