
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣ
ಭಾರತದಲ್ಲೇ ಬಿಗ್ ಬ್ಯಾಷ್ ಲೀಗ್ ಹಬ್ಬ: ಚೆಪಾಕ್ ಅಖಾಡದಲ್ಲಿ ಮೆಲ್ಬೋರ್ನ್-ಪರ್ತ್ ಫೈಟ್
ವಿಶೇಷವಾಗಿ 2030 ರಲ್ಲಿ ಭಾರತದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ 2032 ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಆಯೋಜನೆಗೊಳ್ಳಲಿರುವ ಒಲಿಂಪಿಕ್‌ಗೆ ಮುಂಚಿತವಾಗಿ ಈ ಸಹಕಾರ ಉಭಯ ದೇಶಗಳಿಗೆ ಮೈಲಿಗಲ್ಲಾಗಲಿದೆ.
ಆಸ್ಟ್ರೇಲಿಯಾದ ಪ್ರತಿಷ್ಠಿತ ಟಿ20 ಕ್ರಿಕೆಟ್ ಟೂರ್ನಿ 'ಬಿಗ್ ಬ್ಯಾಷ್ ಲೀಗ್' (ಬಿಬಿಎಲ್) ಇತಿಹಾಸದಲ್ಲೇ ಮೊದಲ ಬಾರಿಗೆ ಹೊರದೇಶದಲ್ಲಿ ಆಯೋಜನೆಗೊಳ್ಳುತ್ತಿದ್ದು, ಭಾರತ ಇದಕ್ಕೆ ಆತಿಥ್ಯ ವಹಿಸಲಿದೆ. 2026-27ರ ಸಾಲಿನ ಬಿಬಿಎಲ್ ಸರಣಿಯ ಉದ್ಘಾಟನಾ ಪಂದ್ಯವು ಡಿ. 12 ರಂದು ಚೆನ್ನೈನ ಐತಿಹಾಸಿಕ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಜರುಗಲಿದೆ.
ಶುಕ್ರವಾರ(ಜು.10) ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಈ ಐತಿಹಾಸಿಕ ಜಂಟಿ ಘೋಷಣೆ ಮಾಡಿದರು.
ಕ್ರೀಡಾ ಸಹಕಾರಕ್ಕೆ ಜಂಟಿ ಮಾರ್ಗಸೂಚಿ
ಉಭಯ ದೇಶಗಳ ಪ್ರಧಾನ ಮಂತ್ರಿಗಳು ಕ್ರೀಡಾ ವಲಯದಲ್ಲಿ ಪರಸ್ಪರ ಬಾಂಧವ್ಯ ವೃದ್ಧಿಸಲು 'ದಿ ಕೊಲ್ಯಾಬರೇಷನ್ ರೋಡ್‌ಮ್ಯಾಪ್' ಅನ್ನು ಬಿಡುಗಡೆ ಮಾಡಿದರು. ವಿದೇಶಾಂಗ ಸಚಿವಾಲಯದ ಪ್ರಕಾರ, ಈ ನೀಲನಕ್ಷೆಯು ಕ್ರೀಡಾ ತರಬೇತಿ, ಸಾಮರ್ಥ್ಯ ವೃದ್ಧಿ, ಕ್ರೀಡಾ ವಿಜ್ಞಾನ, ತಂತ್ರಜ್ಞಾನ ಮತ್ತು ಕ್ರೀಡಾ ಉದ್ಯಮದಲ್ಲಿ ಹೂಡಿಕೆಗೆ ಹೆಚ್ಚಿನ ಉತ್ತೇಜನ ನೀಡಲಿದೆ.
ವಿಶೇಷವಾಗಿ 2030 ರಲ್ಲಿ ಭಾರತದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ 2032 ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಆಯೋಜನೆಗೊಳ್ಳಲಿರುವ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಿಗೆ ಮುಂಚಿತವಾಗಿ ಈ ಸಹಕಾರ ಉಭಯ ದೇಶಗಳಿಗೆ ಮೈಲಿಗಲ್ಲಾಗಲಿದೆ. ಈ ಮಾರ್ಗಸೂಚಿಯ ಅಡಿಯಲ್ಲಿ 'ಭಾರತ-ಆಸ್ಟ್ರೇಲಿಯಾ ಯುವ ಕ್ರೀಡಾಕೂಟ'ವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಚೆನ್ನೈನಲ್ಲಿ ಮೆಲ್ಬೋರ್ನ್-ಪರ್ತ್ ಮುಖಾಮುಖಿ
ಡಿ. 12 ರಂದು ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದು ರೆನೆಗೇಡ್ಸ್ ತಂಡದ ತವರು ಪಂದ್ಯವಾಗಿರಲಿದ್ದು, ಪಂದ್ಯದ ನಂತರ ಎರಡೂ ತಂಡಗಳಿಗೆ ಆಸ್ಟ್ರೇಲಿಯಾಕ್ಕೆ ಮರಳಲು ಸೂಕ್ತ ಸಮಯಾವಕಾಶ ನೀಡಲಾಗುತ್ತದೆ. ಭಾರತದಲ್ಲಿ ಆಯೋಜನೆಗೊಳ್ಳುತ್ತಿರುವ ಮೊದಲ ವಿದೇಶಿ ಕ್ರಿಕೆಟ್ ಲೀಗ್ ಪಂದ್ಯ ಇದಾಗಿದೆ.
"ಭಾರತದಲ್ಲಿ, ವಿಶೇಷವಾಗಿ ಚೆನ್ನೈನಲ್ಲಿ ನಂಬಲಾಗದಷ್ಟು ಉತ್ಸಾಹಭರಿತ ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಚೆಪಾಕ್ ಮೈದಾನದಲ್ಲಿ ಬಿಬಿಎಲ್ ಪಂದ್ಯ ನೋಡಲು ಭಾರಿ ಜನಸಂದಣಿ ಸೇರುವ ನಿರೀಕ್ಷೆಯಿದೆ. ಐಪಿಎಲ್‌ನಷ್ಟು ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ, ಭಾರತದಲ್ಲಿ ಬಿಬಿಎಲ್‌ಗೆ ಉತ್ತಮ ಗೌರವವಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ಹಳದಿ ಧ್ವಜಗಳ ನಡುವೆ ನಮ್ಮ ಪಂದ್ಯ ನಡೆಯುವುದನ್ನು ನೋಡಲು ಕಾಯುತ್ತಿದ್ದೇವೆ." ಎಂದು ಬಿಗ್ ಬ್ಯಾಷ್ ಲೀಗ್ ಎಕ್ಸಿಕ್ಯೂಟಿವ್ ಜನರಲ್ ಮ್ಯಾನೇಜರ್ ಅಲಿಸ್ಟೈರ್ ಡಾಬ್ಸನ್ ತಿಳಿಸಿದ್ದಾರೆ.
'ಜಿ' ಡೇ ನಮಸ್ತೆ ಉತ್ಸವ
ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮಾತನಾಡಿ, "ಡಿಸೆಂಬರ್‌ನಲ್ಲಿ ಭಾರತದಾದ್ಯಂತ ನಡೆಯಲಿರುವ 'ಜಿ' ಡೇ ನಮಸ್ತೆ ಉತ್ಸವ'ದ ಪ್ರಮುಖ ಆಕರ್ಷಣೆಯೇ ಈ ಕ್ರಿಕೆಟ್ ಪಂದ್ಯವಾಗಿರುತ್ತದೆ. ಇದು ಆಸ್ಟ್ರೇಲಿಯಾದ ಸಾಂಸ್ಕೃತಿಕ, ವ್ಯವಹಾರ ಮತ್ತು ಕ್ರೀಡಾ ಸಾಮರ್ಥ್ಯವನ್ನು ಭಾರತಕ್ಕೆ ಪರಿಚಯಿಸಲಿದೆ" ಎಂದರು. ಮೆಲ್ಬೋರ್ನ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಕ್ಟೋರಿಯಾ ಪ್ರೀಮಿಯರ್ ಜಸಿಂತಾ ಅಲನ್, ಮಾಜಿ ದಿಗ್ಗಜ ಕ್ರಿಕೆಟಿಗರಾದ ಸ್ಟೀವ್ ವಾ ಮತ್ತು ಲಿಸಾ ಸ್ಥಾಲೇಕರ್ ಉಪಸ್ಥಿತರಿದ್ದರು.
ಆಸಿಸ್ ಮಹಿಳಾ ತಂಡಕ್ಕೆ ಅಭಿನಂದನೆ
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇತ್ತೀಚೆಗೆ ಮಹಿಳಾ ಕ್ರಿಕೆಟ್ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡವನ್ನು ಅಭಿನಂದಿಸಿದರು. "ಭಾರತ ಮತ್ತು ಆಸ್ಟ್ರೇಲಿಯಾ ಅಂತರರಾಷ್ಟ್ರೀಯ ಕ್ರೀಡಾ ರಂಗದಲ್ಲಿ ಅತ್ಯಂತ ಮಹತ್ವದ ದಶಕವನ್ನು ಪ್ರವೇಶಿಸುತ್ತಿವೆ. ಕ್ರಿಕೆಟ್ ಮತ್ತು ಕ್ರೀಡೆಗಳು ಉಭಯ ದೇಶಗಳ ಜನರನ್ನು ಒಗ್ಗೂಡಿಸುವಲ್ಲಿ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ನೈಸರ್ಗಿಕ ಕೊಂಡಿಯಾಗಿ ಕೆಲಸ ಮಾಡುತ್ತಿವೆ" ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು.

