
IPL 2026: ಬೆಂಗಳೂರು ಪೊಲೀಸರಿಂದ ಬಿಗಿ ಬಂದೋಬಸ್ತ್
IPL 2026| ಟಿಕೆಟ್ ಇದ್ದರೆ ಮಾತ್ರ ಸ್ಟೇಡಿಯಂಗೆ ಬನ್ನಿ, ಇಲ್ಲದಿದ್ದರೆ ಮನೆಯಲ್ಲೇ ಎಂಜಾಯ್ ಮಾಡಿ; ಕಮಿಷನರ್
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 28 ರಿಂದ ಐಪಿಎಲ್ ಪಂದ್ಯಗಳು ಆರಂಭವಾಗಲಿದ್ದು, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಭದ್ರತಾ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಮಾರ್ಚ್ 28 ರಿಂದ ಆರಂಭವಾಗಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಗಳ ಹಿನ್ನೆಲೆಯಲ್ಲಿ ನಗರ ಪೊಲೀಸ್ ಇಲಾಖೆ ಸರ್ವಸನ್ನದ್ಧವಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಸುಗಮ ಸಂಚಾರಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಗುರುವಾರ (ಮಾರ್ಚ್ 26ರಂದು) ತಿಳಿಸಿದರು.
ಈ ಬಗ್ಗೆ ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ರೀಡಾಂಗಣಕ್ಕೆ ಪ್ರವೇಶಿಸಲು ಈ ಬಾರಿ ಗೇಟುಗಳ ಸಂಖ್ಯೆಯನ್ನು 25 ರಿಂದ 45ಕ್ಕೆ ಹೆಚ್ಚಿಸುವ ಮೂಲಕ 'ಡಬಲ್ ಗೇಟ್' ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು. ಅಭಿಮಾನಿಗಳ ಸುರಕ್ಷತೆಗಾಗಿ ಸುಮಾರು 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪಂದ್ಯದ ಟಿಕೆಟ್ ಹೊಂದಿರುವವರು ಮಾತ್ರ ಕ್ರೀಡಾಂಗಣದ ಬಳಿ ಆಗಮಿಸಬೇಕು. ಟಿಕೆಟ್ ಇಲ್ಲದವರು ಕ್ರೀಡಾಂಗಣದ ಸುತ್ತಮುತ್ತ ಸುಳಿಯಬಾರದು ಎಂದು ವಿನಂತಿಸಿರುವ ಅವರು, ಟಿಕೆಟ್ ರಹಿತ ವ್ಯಕ್ತಿಗಳನ್ನು ಪತ್ತೆಹಚ್ಚಲು ಮತ್ತು ಅನಗತ್ಯ ಜನದಟ್ಟಣೆಯನ್ನು ನಿಯಂತ್ರಿಸಲು ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಟ್ರಾಫಿಕ್ ಸಮಸ್ಯೆ ನಿವಾರಣೆಯ ಬಗ್ಗೆ ಮಾತನಾಡಿದ ಸೀಮಂತ್ ಕುಮಾರ್ ಸಿಂಗ್, ಪ್ರೇಕ್ಷಕರು ತಮ್ಮ ವೈಯಕ್ತಿಕ ವಾಹನಗಳ ಬದಲಾಗಿ ಮೆಟ್ರೋವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಬೇಕು, ಇದರಿಂದ ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಸಲಹೆ ನೀಡಿದ್ದಾರೆ. ಟಿಕೆಟ್ ಸಿಗದ ಅಭಿಮಾನಿಗಳು ಮನೆಯಲ್ಲಿಯೇ ಕುಳಿತು ಪಂದ್ಯವನ್ನು ನೋಡಿ ಆನಂದಿಸಿ ಎಂದು ಅವರು ಇದೇ ವೇಳೆ ತಿಳಿಸಿದರು.
ಕಳೆದ ವರ್ಷ ಆರ್‌ಸಿಬಿ ತಂಡವು ಹದಿನೆಂಟು ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಆದರೆ ಈ ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಲ್ಲಿ ಹನ್ನೊಂದು ಮಂದಿ ಅಭಿಮಾನಿಗಳು ದುರಂತ ಅಂತ್ಯ ಕಂಡಿದ್ದರು. ಆ ಕರಾಳ ಘಟನೆ ಮತ್ತೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈ ಬಾರಿ ಪೊಲೀಸ್ ಇಲಾಖೆ ಹಾಗೂ ಆಯೋಜಕರು ಕ್ರೀಡಾಂಗಣದ ಭದ್ರತೆ ಮತ್ತು ಜನದಟ್ಟಣೆ ನಿರ್ವಹಣೆಯ ಬಗ್ಗೆ ಅತಿ ಹೆಚ್ಚು ನಿಗಾ ವಹಿಸಿ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.
ಭದ್ರತಾ ವ್ಯವಸ್ಥೆಯ ಸಂಪೂರ್ಣ ಮೇಲ್ದರ್ಜೆಗೆ
ಕಳೆದ ವರ್ಷದ ಭೀಕರ ಕಾಲ್ತುಳಿತದ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ಕ್ರೀಡಾಂಗಣದ ಆಡಳಿತ ಮಂಡಳಿಯು, ಈ ಬಾರಿ ಭದ್ರತಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳನ್ನು ತಂದಿದೆ. ವೆಂಕಟೇಶ್ ಪ್ರಸಾದ್ ನೇತೃತ್ವದ ಹೊಸ ಸಮಿತಿಯು 2026ರ ಟೂರ್ನಿಗಾಗಿ ಕ್ರೀಡಾಂಗಣದ ಸುರಕ್ಷತೆಯನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಿದೆ. ಕ್ರೀಡಾಂಗಣದ ಪ್ರವೇಶ ದ್ವಾರಗಳ ಬಳಿ ಯಾವುದೇ ರೀತಿಯ ನೂಕುನುಗ್ಗಲು ಉಂಟಾಗದಂತೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಂ-ಟಿಕೆಟ್ ಹೊಂದಿರುವ ಪ್ರತಿಯೊಬ್ಬ ವೀಕ್ಷಕರಿಗೂ ಕಡ್ಡಾಯವಾಗಿ ಡಿಜಿಟಲ್ ತಪಾಸಣೆ ಮಾಡುವ ಕಟ್ಟುನಿಟ್ಟಿನ ನಿಯಮವನ್ನು ಈ ಬಾರಿ ಜಾರಿಗೆ ತರಲಾಗಿದೆ.

