
ಐಪಿಎಲ್ 2026: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತಾ ಪರಿಶೀಲನೆ ನಡೆಸಿದ ಬೆಂಗಳೂರು ಪೊಲೀಸರು
ಕ್ರೀಡಾಂಗಣದ ಭದ್ರತೆ, ವಾಹನ ನಿಲುಗಡೆ, ಅಭಿಮಾನಿಗಳ ಆಗಮನ ಮತ್ತು ನಿರ್ಗಮನ ವ್ಯವಸ್ಥೆ, ಟ್ರಾಫಿಕ್ ನಿರ್ವಹಣೆ ಹಾಗೂ ಸ್ಟ್ಯಾಂಡ್‌ಗಳ ಸ್ಥಿತಿಗತಿಗಳ ಬಗ್ಗೆ ಪೊಲೀಸರು ಖುದ್ದು ಮಾಹಿತಿ ಪಡೆದುಕೊಂಡಿದ್ದಾರೆ.
ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತಾ ಪರಿಶೀಲನೆ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಪೊಲೀಸರು, ಕೆಎಸ್‌ಸಿಎ ಮತ್ತು ಆರ್‌ಸಿಬಿ ಅಧಿಕಾರಿಗಳೊಂದಿಗೆ ಜಂಟಿಯಾಗಿ ಕ್ರೀಡಾಂಗಣದ ಸೌಲಭ್ಯಗಳನ್ನು ವೀಕ್ಷಿಸಿದ್ದಾರೆ.
ಪ್ರಮುಖವಾಗಿ ಕ್ರೀಡಾಂಗಣದ ಭದ್ರತೆ, ವಾಹನ ನಿಲುಗಡೆ, ಅಭಿಮಾನಿಗಳ ಆಗಮನ ಮತ್ತು ನಿರ್ಗಮನ ವ್ಯವಸ್ಥೆ, ಟ್ರಾಫಿಕ್ ನಿರ್ವಹಣೆ ಹಾಗೂ ಸ್ಟ್ಯಾಂಡ್‌ಗಳ ಸ್ಥಿತಿಗತಿಗಳ ಬಗ್ಗೆ ಪೊಲೀಸರು ಖುದ್ದು ಮಾಹಿತಿ ಪಡೆದುಕೊಂಡಿದ್ದಾರೆ. ಈ ಪರಿಶೀಲನಾ ಕಾರ್ಯದ ವಿಡಿಯೊವನ್ನು ಬೆಂಗಳೂರು ಪೊಲೀಸರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕ್ರೀಡಾಭಿಮಾನಿಗಳಿಗೆ ಸುರಕ್ಷತೆಯ ಭರವಸೆ
ಪಂದ್ಯ ವೀಕ್ಷಿಸಲು ಬರುವ ಕ್ರಿಕೆಟ್ ಅಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ಸುಗಮ ಪ್ರವೇಶ ಕಲ್ಪಿಸಲು ಮತ್ತು ಜನಸಂದಣಿಯನ್ನು ಸಮರ್ಪಕವಾಗಿ ನಿಯಂತ್ರಿಸಲು ಅಗತ್ಯವಿರುವ ಎಲ್ಲ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಕ್ರೀಡಾಂಗಣದ ಪರಿಶೀಲನೆಯ ನಂತರ ಮಾತನಾಡಿದ ಪೊಲೀಸರು, ಅಭಿಮಾನಿಗಳಿಗೆ ಸುರಕ್ಷಿತ ಹಾಗೂ ಸುಗಮ ಅನುಭವವನ್ನು ಖಚಿತಪಡಿಸಿದ್ದು, ಭದ್ರತೆಯೊಂದಿಗೆ ಐಪಿಎಲ್ ಪಂದ್ಯಗಳನ್ನು ಆನಂದಿಸುವಂತೆ ಸಲಹೆ ನೀಡಿದ್ದಾರೆ. ಹಾಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ತನ್ನ ತವರಿನ ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು ಐದು ಪಂದ್ಯಗಳನ್ನು ಆಡಲಿದ್ದು, ಉಳಿದೆರಡು ಪಂದ್ಯಗಳನ್ನು ಛತ್ತೀಸಗಡದ ರಾಯಪುರದಲ್ಲಿ ಆಡಲಿದೆ.
ಕಳೆದ ವರ್ಷದ ಕರಾಳ ಘಟನೆಯ ಹಿನ್ನೆಲೆ
ಕಳೆದ ವರ್ಷ ಆರ್‌ಸಿಬಿ ತಂಡವು ಹದಿನೆಂಟು ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಆದರೆ ಈ ವಿಜಯೋತ್ಸವದ ಭಾರಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಲ್ಲಿ ಹನ್ನೊಂದು ಮಂದಿ ಅಭಿಮಾನಿಗಳು ದುರಂತ ಅಂತ್ಯ ಕಂಡಿದ್ದರು. ಆ ಕರಾಳ ಘಟನೆ ಮತ್ತೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈ ಬಾರಿ ಪೊಲೀಸ್ ಇಲಾಖೆ ಹಾಗೂ ಆಯೋಜಕರು ಕ್ರೀಡಾಂಗಣದ ಭದ್ರತೆ ಮತ್ತು ಜನದಟ್ಟಣೆ ನಿರ್ವಹಣೆಯ ಬಗ್ಗೆ ಅತಿ ಹೆಚ್ಚು ನಿಗಾ ವಹಿಸಿ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.

