
ಸಾಂದರ್ಭಿಕ ಚಿತ್ರ
IPL ಕ್ರೇಜ್: ಕೇವಲ 50 ನಿಮಿಷಗಳಲ್ಲಿ ನಮ್ಮ ಮೆಟ್ರೊದಲ್ಲಿ 22 ಸಾವಿರ ಮಂದಿ ಪ್ರಯಾಣ
Namma Metro| ಪಂದ್ಯ ವೀಕ್ಷಿಸಲು ತೆರಳುವ ಹಾಗೂ ಹಿಂತಿರುಗುವ ಪ್ರೇಕ್ಷಕರಿಗೆ ಅನುಕೂಲವಾಗುವಂತೆ ಯಾವುದೇ ಮೆಟ್ರೊ ನಿಲ್ದಾಣದಿಂದ ಕಬ್ಬನ್ ಪಾರ್ಕ್ ಹಾಗೂ ಎಂ.ಜಿ. ರಸ್ತೆ ನಿಲ್ದಾಣದವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಕ್ರೀಡಾಭಿಮಾನಿಗಳು ನಮ್ಮ ಮೆಟ್ರೊ ಸೇವೆಗೆ ಭಾರಿ ಸ್ಪಂದನೆ ನೀಡಿದ್ದಾರೆ. ಕೇವಲ 50 ನಿಮಿಷಗಳ ಅಂತರದಲ್ಲಿ ಬರೋಬ್ಬರಿ 22 ಸಾವಿರ ಮಂದಿ ಪ್ರೇಕ್ಷಕರು ಮೆಟ್ರೊ ರೈಲುಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ ಎಂದು ಬಿಎಂಆರ್‌ಸಿಎಲ್ (BMRCL) ಹರ್ಷ ವ್ಯಕ್ತಪಡಿಸಿದೆ. ಐಪಿಎಲ್ ಟಿಕೆಟ್‌ಗಳಲ್ಲೇ ಮೆಟ್ರೊ ಕ್ಯೂಆರ್ ಕೋಡ್ ಅಳವಡಿಸಿದ್ದರಿಂದ ಪ್ರಯಾಣಿಕರಿಗೆ ಈ ಉಚಿತ ಸೇವೆ ಸುಲಭವಾಗಿ ಲಭ್ಯವಾಗಿದೆ.
ಪಂದ್ಯ ವೀಕ್ಷಿಸಲು ತೆರಳುವ ಹಾಗೂ ಹಿಂತಿರುಗುವ ಪ್ರೇಕ್ಷಕರಿಗೆ ಅನುಕೂಲವಾಗುವಂತೆ ಯಾವುದೇ ಮೆಟ್ರೊ ನಿಲ್ದಾಣದಿಂದ ಕಬ್ಬನ್ ಪಾರ್ಕ್ ಹಾಗೂ ಎಂ.ಜಿ. ರಸ್ತೆ ನಿಲ್ದಾಣದವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು. ಶನಿವಾರ ರಾತ್ರಿ 11.05ರ ಸುಮಾರಿಗೆ ಪಂದ್ಯ ಮುಗಿಯುವ ಮುನ್ನವೇ ಎರಡೂ ದಿಕ್ಕುಗಳಲ್ಲಿ ರೈಲುಗಳನ್ನು ಸಜ್ಜುಗೊಳಿಸಲಾಗಿತ್ತು. ಕೇವಲ 3 ನಿಮಿಷಗಳ ಅಂತರದಲ್ಲಿ ನಿರಂತರವಾಗಿ ರೈಲುಗಳ ಸಂಚಾರ ಒದಗಿಸುವ ಮೂಲಕ ಒಟ್ಟು 50 ನಿಮಿಷಗಳಲ್ಲಿ 22 ಸಾವಿರಕ್ಕೂ ಅಧಿಕ ಅಭಿಮಾನಿಗಳು ಯಾವುದೇ ದಟ್ಟಣೆಯಿಲ್ಲದೆ ತಮ್ಮ ಮನೆಗಳತ್ತ ಸುರಕ್ಷಿತವಾಗಿ ತೆರಳಲು ವ್ಯವಸ್ಥೆ ಮಾಡಲಾಗಿತ್ತು.
ಮೂರು ಮಾರ್ಗಗಳಲ್ಲಿ 39 ರೌಂಡ್ ಟ್ರಿಪ್ ಕಾರ್ಯಾಚರಣೆ
ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದಿಂದ ಮೆಜೆಸ್ಟಿಕ್ ಕಡೆಗೆ 13 ರೈಲುಗಳು ಹಾಗೂ ವೈಟ್‌ಫೀಲ್ಡ್ ಕಡೆಗೆ 9 ರೈಲುಗಳು ಕಾರ್ಯಾಚರಣೆ ನಡೆಸಿವೆ. ಈ ಅವಧಿಯಲ್ಲಿ ಒಟ್ಟಾರೆಯಾಗಿ 39 ರೌಂಡ್ ಟ್ರಿಪ್‌ಗಳನ್ನು ಮಾಡಲಾಗಿದ್ದು, ನೇರಳೆ ಮಾರ್ಗದಲ್ಲಿ 18, ಹಸಿರು ಮಾರ್ಗದಲ್ಲಿ 15 ಹಾಗೂ ಹಳದಿ ಮಾರ್ಗದಲ್ಲಿ 6 ಟ್ರಿಪ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಬಿಎಂಆರ್‌ಸಿಎಲ್ ಹಾಗೂ ಬೆಂಗಳೂರು ನಗರ ಪೊಲೀಸರ ಸಮನ್ವಯದೊಂದಿಗೆ ಈ ಬೃಹತ್ ಕಾರ್ಯಾಚರಣೆ ಅತ್ಯಂತ ಸುಗಮವಾಗಿ ಜರುಗಿದೆ.
ಸಾರ್ವಜನಿಕ ಸಾರಿಗೆ ಬಳಕೆಗೆ ಬಿಎಂಆರ್‌ಸಿಎಲ್ ಮನವಿ
ಶನಿವಾರದ ಕಾರ್ಯಾಚರಣೆಯ ಯಶಸ್ಸಿನ ಬಳಿಕ, ಮುಂಬರುವ ಪಂದ್ಯಗಳಿಗೂ ಮತ್ತಷ್ಟು ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಹಾಗೂ ಭದ್ರತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಐಪಿಎಲ್ ಪಂದ್ಯಗಳು ಮಾತ್ರವಲ್ಲದೆ, ಬಿಐಇಸಿ, ಕೆಟಿಪಿಒ, ವೈಟ್‌ಫೀಲ್ಡ್ ಸೇರಿದಂತೆ ನಗರದ ವಿವಿಧೆಡೆ ನಡೆಯುವ ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳಿಗೆ ತೆರಳುವವರು ಕಡ್ಡಾಯವಾಗಿ ಮೆಟ್ರೊ ಬಳಸುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಸಮೀಪದ ಮೆಟ್ರೊ ನಿಲ್ದಾಣಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಿ, ಸುಗಮ ಹಾಗೂ ಟ್ರಾಫಿಕ್ ಮುಕ್ತ ಪ್ರಯಾಣವನ್ನು ಆಯ್ದುಕೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

