
ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ ಪ್ರಕಟ: ಯಾರಿಗೆಲ್ಲ ‘ಎ’ ಗ್ರೇಡ್? ಕೊಹ್ಲಿ, ರೋಹಿತ್‌ಗೆ ಯಾವ ಸ್ಥಾನ?
ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ‘ಗ್ರೇಡ್ ಸಿ’ ಪಟ್ಟಿಯನ್ನು ವಿಸ್ತರಿಸಲಾಗಿದೆ. ಅಕ್ಷರ್ ಪಟೇಲ್, ತಿಲಕ್ ವರ್ಮಾ ಮತ್ತಿತರರು ಅವಕಾಶ ಪಡೆದಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2025-26ನೇ ಸಾಲಿನ ಟೀಮ್ ಇಂಡಿಯಾ ಪುರುಷ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದು, ಈ ಬಾರಿಯ ಪಟ್ಟಿಯಲ್ಲಿ ಮಹತ್ವದ ಮತ್ತು ಅಚ್ಚರಿಯ ಬದಲಾವಣೆಗಳು ಕಂಡುಬಂದಿವೆ.
ತಂಡದ ಆಧಾರಸ್ತಂಭಗಳಂತಿದ್ದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಈ ಬಾರಿ ‘ಗ್ರೇಡ್ ಬಿ’ ಪಟ್ಟಿಗೆ ಕುಸಿದಿದ್ದರೆ, ಯುವ ಪ್ರತಿಭೆ ಶುಭಮನ್ ಗಿಲ್, ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ಪ್ರತಿಷ್ಠಿತ ‘ಗ್ರೇಡ್ ಎ’ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಮುಂಚೂಣಿಗೆ ಬಂದಿದ್ದಾರೆ.
ಬಿಸಿಸಿಐ ಬಿಡುಗಡೆ ಮಾಡಿರುವ ನೂತನ ಪಟ್ಟಿಯ ಪ್ರಕಾರ, ಕೇವಲ ಮೂವರು ಆಟಗಾರರಾದ ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರು ಮಾತ್ರ ಅತ್ಯುನ್ನತ ‘ಗ್ರೇಡ್ ಎ’ ಶ್ರೇಣಿಯಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಈ ಆಟಗಾರರ ಪ್ರದರ್ಶನವನ್ನು ಪರಿಗಣಿಸಿ ಬಿಸಿಸಿಐ ಅವರಿಗೆ ಈ ಗೌರವ ನೀಡಿದೆ. ವಿಶೇಷವಾಗಿ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಗಿಲ್ ಅವರ ಏಳಿಗೆಗೆ ಇದು ಸಾಕ್ಷಿಯಾಗಿದೆ.
ಕೊಹ್ಲಿ, ರೋಹಿತ್‌ಗೆ ಹಿಂಬಡ್ತಿ
ಮತ್ತೊಂದೆಡೆ, ಭಾರತೀಯ ಕ್ರಿಕೆಟ್‌ನ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ‘ಗ್ರೇಡ್ ಬಿ’ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ದಿನಗಳಲ್ಲಿ ಇವರು ಸೀಮಿತ ಓವರ್‌ಗಳ ಕ್ರಿಕೆಟ್ ಅಥವಾ ಟೆಸ್ಟ್ ಪಂದ್ಯಗಳಿಂದ ಹಂತ ಹಂತವಾಗಿ ಹಿಂದೆ ಸರಿಯುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇವರೊಂದಿಗೆ ವಾಷಿಂಗ್ಟನ್ ಸುಂದರ್, ಕೆ.ಎಲ್. ರಾಹುಲ್, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಕೂಡ ‘ಗ್ರೇಡ್ ಬಿ’ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಸಿಗ್ರೇಡ್ನಲ್ಲಿ ಯಾರೆಲ್ಲ?
ಇನ್ನುಳಿದಂತೆ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ‘ಗ್ರೇಡ್ ಸಿ’ ಪಟ್ಟಿಯನ್ನು ವಿಸ್ತರಿಸಲಾಗಿದೆ. ಅಕ್ಷರ್ ಪಟೇಲ್, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ಸಂಜು ಸ್ಯಾಮ್ಸನ್, ಅರ್ಶ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಧ್ರುವ್ ಜುರೆಲ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಸಾಯಿ ಸುದರ್ಶನ್, ರವಿ ಬಿಷ್ನೋಯ್ ಹಾಗೂ ಋತುರಾಜ್ ಗಾಯಕ್ವಾಡ್ ಅವರನ್ನು ಈ ಶ್ರೇಣಿಗೆ ಸೇರ್ಪಡೆಗೊಳಿಸಲಾಗಿದೆ. ಒಟ್ಟಾರೆಯಾಗಿ ಈ ಬಾರಿಯ ಗುತ್ತಿಗೆ ಪಟ್ಟಿಯು ಭಾರತೀಯ ಕ್ರಿಕೆಟ್‌ನಲ್ಲಿ ತಲೆಮಾರುಗಳ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿರುವುದನ್ನು ಸೂಚಿಸುವಂತಿದೆ.

