
ಭಾರತ ಮಹಿಳಾ ಕ್ರಿಕೆಟ್ ತಂಡ
ಏಷ್ಯನ್ ಗೇಮ್ಸ್ 2026| ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರಕಟ- 17ರ ಯುವ ವಿಕೆಟ್‌ಕೀಪರ್‌ಗೆ ಮಣೆ!
ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿದ್ದ ಸ್ಟಾರ್ ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ್ ಅವರನ್ನು ಏಷ್ಯನ್ ಗೇಮ್ಸ್ ತಂಡಕ್ಕೆ ಆಯ್ಕೆ ಮಾಡಲಾಗಿದೆಯಾದರೂ, ಅವರಿಗೆ ಫಿಟ್‌ನೆಸ್ ಕ್ಲಿಯರೆನ್ಸ್ ಕಡ್ಡಾಯಗೊಳಿಸಲಾಗಿದೆ.
ಜಪಾನ್‌ನ ಐಚಿ-ನಗೋಯಾದಲ್ಲಿ ಸೆಪ್ಟೆಂಬರ್‌ನಿಂದ ಆರಂಭವಾಗಲಿರುವ 2026ರ ಬಹುನಿರೀಕ್ಷಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಕ್ರಿಕೆಟ್ ಟೂರ್ನಿಗಾಗಿ ಬಿಸಿಸಿಐ 15 ಸದಸ್ಯರ ಬಲಿಷ್ಠ ಭಾರತ ಮಹಿಳಾ ತಂಡವನ್ನು ಪ್ರಕಟಿಸಿದೆ. ತಂಡವನ್ನು ನಿರೀಕ್ಷೆಯಂತೆ ಅನುಭವಿ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದು, ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಉಪನಾಯಕಿಯಾಗಿ ಜವಾಬ್ದಾರಿ ಹೆಗಲಿಗೇರಿಸಿಕೊಂಡಿದ್ದಾರೆ.
17 ವರ್ಷದ ಯುವ ವಿಕೆಟ್ ಕೀಪರ್‌ಗೆ ಬಂಪರ್ ಚಾನ್ಸ್!
ಈ ಬಾರಿಯ ಆಯ್ಕೆಯಲ್ಲಿ ಬಿಸಿಸಿಐ ಆಯ್ಕೆ ಮಂಡಳಿ ಯುವ ಪ್ರತಿಭೆಗೆ ಮಣೆ ಹಾಕುವ ಮೂಲಕ ಅಚ್ಚರಿಯ ನಿರ್ಧಾರ ಕೈಗೊಂಡಿದೆ. ಟಿ20 ವಿಶ್ವಕಪ್‌ನಲ್ಲಿ ತಂಡದಲ್ಲಿದ್ದ ವಿಕೆಟ್ ಕೀಪರ್-ಬ್ಯಾಟರ್ ಯಾಸ್ತಿಕಾ ಭಾಟಿಯಾ ಅವರಿಗೆ ಈ ಬಾರಿ ಕೋಕ್ ನೀಡಲಾಗಿದ್ದು, ಅವರ ಜಾಗಕ್ಕೆ 17 ವರ್ಷದ ಭರವಸೆಯ ಯುವ ವಿಕೆಟ್ ಕೀಪರ್-ಬ್ಯಾಟರ್ ಜಿ. ಕಮಲಿನಿ ಅವರನ್ನು ಆಯ್ಕೆ ಮಾಡಲಾಗಿದೆ.
ಶ್ರೇಯಾಂಕಾ ಪಾಟೀಲ್‌ಗೆ ಫಿಟ್‌ನೆಸ್ ಅಡ್ಡಿ?
ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿದ್ದ ಕರ್ನಾಟಕದ ಸ್ಟಾರ್ ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ್ ಅವರನ್ನು ಏಷ್ಯನ್ ಗೇಮ್ಸ್ ತಂಡಕ್ಕೆ ಆಯ್ಕೆ ಮಾಡಲಾಗಿದೆಯಾದರೂ, ಅವರಿಗೆ ಫಿಟ್‌ನೆಸ್ ಕ್ಲಿಯರೆನ್ಸ್ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಟೂರ್ನಿ ಆರಂಭಕ್ಕೂ ಮುನ್ನ ಅವರು ಸಂಪೂರ್ಣ ಫಿಟ್ ಆಗದಿದ್ದರೆ, ಅವರ ಬದಲಿಗೆ ಮತ್ತೊಬ್ಬ ಆಟಗಾರ್ತಿಯನ್ನು ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ.
ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾದ ತಂಡ ಹೀಗಿದೆ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಜಿ. ಕಮಲಿನಿ (ವಿಕೆಟ್ ಕೀಪರ್), ಭಾರತಿ ಫುಲ್ಮಾಲಿ, ಶ್ರೀ ಚರಣಿ, ರೇಣುಕಾ ಠಾಕೂರ್, ಕ್ರಾಂತಿ ಗೌಡ್, ಅರುಂಧತಿ ರೆಡ್ಡಿ, ರಾಧಾ ಯಾದವ್, ನಂದಿನಿ ಶರ್ಮಾ ಹಾಗೂ ಶ್ರೇಯಾಂಕಾ ಪಾಟೀಲ್ ಆಯ್ಕೆ ಮಾಡಲಾಗಿದೆ. ಪ್ರವಾಸಕ್ಕೂ ಮುನ್ನ ಶೇಯಾಂಕಾ ಪಾಟೀಲ್ ಫಿಟ್‌ನೆಸ್ ಸಾಬೀತುಪಡಿಸುವುದು ಕಡ್ಡಾಯವಾಗಿದೆ.
ನೇರ ಕ್ವಾರ್ಟರ್ ಫೈನಲ್ ಪ್ರವೇಶಿಸಲಿರುವ ಭಾರತ!
ಜಪಾನ್‌ನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಯು ಸೆ. 17 ರಿಂದ ಅ. 3, 2026 ರವರೆಗೆ ಸಂಪೂರ್ಣವಾಗಿ ಟಿ20 ಸ್ವರೂಪದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 8 ಬಲಿಷ್ಠ ತಂಡಗಳು ಕಣಕ್ಕಿಳಿಯಲಿದ್ದು, ಭಾರತ, ಶ್ರೀಲಂಕಾ, ಪಾಕಿಸ್ತಾನ್, ಬಾಂಗ್ಲಾದೇಶ್ ಹಾಗೂ ಜಪಾನ್ ತಂಡಗಳು ನೇರ ಅರ್ಹತೆ ಪಡೆದುಕೊಂಡಿವೆ. ಇನ್ನು ಚೀನಾ, ಮಲೇಷ್ಯಾ ಮತ್ತು ಥಾಯ್ಲೆಂಡ್ ತಂಡಗಳು ಅರ್ಹತಾ ಸುತ್ತಿನ ಮೂಲಕ ಟೂರ್ನಿಗೆ ಎಂಟ್ರಿ ಕೊಟ್ಟಿವೆ.
ಶ್ರೇಯಾಂಕದ ಆಧಾರದ ಮೇಲೆ ಟೀಮ್ ಇಂಡಿಯಾ ನೇರವಾಗಿ ಕ್ವಾರ್ಟರ್ ಫೈನಲ್ ಹಂತದಿಂದ ತನ್ನ ಅಭಿಯಾನ ಆರಂಭಿಸಲಿದೆ. ಸೆ. 17 ರಂದೇ ಭಾರತ ತನ್ನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಿದ್ದು, ಅರ್ಹತಾ ಸುತ್ತಿನಿಂದ ಬರುವ ಕೆಳ ಶ್ರೇಯಾಂಕದ ತಂಡಗಳಾದ ಥಾಯ್ಲೆಂಡ್, ಮಲೇಷ್ಯಾ ಅಥವಾ ಚೀನಾ ತಂಡಗಳ ಪೈಕಿ ಒಂದು ತಂಡ ಭಾರತಕ್ಕೆ ಎದುರಾಳಿಯಾಗಲಿದೆ.

