
ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಕುಂಬ್ಳೆ, ದ್ರಾವಿಡ್, ಶಾಂತಾ ಹೆಸರು
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಶಾಂತಾ ರಂಗಸ್ವಾಮಿ ಅವರ ಹೆಸರನ್ನು ನಾಮಕರಣ ಮಾಡಲು ಕೆಎಸ್‌ಸಿಎ ನಿರ್ಧರಿಸಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಐತಿಹಾಸಿಕ ತೀರ್ಮಾನವೊಂದನ್ನು ಪ್ರಕಟಿಸಿದ್ದು, ರಾಜ್ಯದ ಹೆಮ್ಮೆಯ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಶಾಂತಾ ರಂಗಸ್ವಾಮಿ ಅವರಿಗೆ ವಿಶಿಷ್ಟ ಗೌರವ ಸಲ್ಲಿಸಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗಳಿಗೆ (ಸ್ಟ್ಯಾಂಡ್) ಈ ಮೂವರು ದಿಗ್ಗಜರ ಹೆಸರನ್ನು ಇಡುವ ಮೂಲಕ, ಅವರು ಭಾರತೀಯ ಮತ್ತು ಕರ್ನಾಟಕ ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಅಜರಾಮರವಾಗಿಸಿದೆ .
ವೆಂಕಟೇಶ್ ಪ್ರಸಾದ್ ನೇತೃತ್ವದ ಕೆಎಸ್‌ಸಿಎ ಆಡಳಿತ ಮಂಡಳಿ, ಈ ಮೂವರು ಸಾಧಕರ ಹೆಸರನ್ನು ಕ್ರೀಡಾಂಗಣದಲ್ಲಿ ಶಾಶ್ವತವಾಗಿ ಅಚ್ಚೊತ್ತಲು ನಿರ್ಧರಿಸಿದೆ.
ಜಂಬೋ ಮತ್ತು ದ್ರಾವಿಡ್
ಅನಿಲ್ ಕುಂಬ್ಳೆ ಅವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, 401 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬರೋಬ್ಬರಿ 953 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು, 'ಭಾರತೀಯ ಕ್ರಿಕೆಟ್‌ನ ಗೋಡೆ' ಖ್ಯಾತಿಯ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಆಗಿದ್ದಾರೆ. 504 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 48 ಶತಕಗಳ ಸಹಿತ 24,064 ರನ್ ಗಳಿಸಿದ ಹೆಗ್ಗಳಿಕೆ ಇವರದ್ದು. ಇಬ್ಬರೂ ದಿಗ್ಗಜರು ಭಾರತ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಲ್ಲದೆ, ಕರ್ನಾಟಕಕ್ಕೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ .
ಮಹಿಳಾ ಕ್ರಿಕೆಟ್‌ನ ಹರಿಕಾರ ಶಾಂತಾ ರಂಗಸ್ವಾಮಿ
ಪುರುಷ ಆಟಗಾರರಷ್ಟೇ ಅಲ್ಲದೆ, ಮಹಿಳಾ ಕ್ರಿಕೆಟ್‌ನ ದಿಗ್ಗಜರಾದ ಶಾಂತಾ ರಂಗಸ್ವಾಮಿ ಅವರಿಗೂ ಈ ಗೌರವ ಸಂದಿದೆ. ಭಾರತದ ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ದಾಖಲಿಸಿದ ಮೊದಲ ಆಟಗಾರ್ತಿ ಎಂಬ ಕೀರ್ತಿ ಇವರದ್ದು. 1976 ರಿಂದ 1991 ರವರೆಗೆ 16 ಟೆಸ್ಟ್ ಮತ್ತು 19 ಏಕದಿನ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿರುವ ಇವರು, ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ನೀಡಿದ ಕೊಡುಗೆ ಅಪಾರ. ಕಳೆದ ಅಕ್ಟೋಬರ್‌ನಲ್ಲಿ ಅವರು ಭಾರತೀಯ ಕ್ರಿಕೆಟಿಗರ ಸಂಘದ (ಐಸಿಎ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ .
ಕುಂಬ್ಳೆ ಪ್ರತಿಕ್ರಿಯೆ ಏನು?
ಈ ಗೌರವದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅನಿಲ್ ಕುಂಬ್ಳೆ, "ನಮ್ಮೆಲ್ಲರ ಕೊಡುಗೆಗಳು ಕರ್ನಾಟಕ ಕ್ರಿಕೆಟ್ ಅನ್ನು ರೂಪಿಸಿವೆ ಮತ್ತು ಕರ್ನಾಟಕ ಕ್ರಿಕೆಟ್ ನಮ್ಮನ್ನು ರೂಪಿಸಿದೆ. ಯಾರ ಹೆಸರು ಯಾವ ಸ್ಟ್ಯಾಂಡ್ ಮೇಲಿದೆ ಎಂಬುದು ಮುಖ್ಯವಲ್ಲ, ನಮ್ಮ ಕೊಡುಗೆಗಳನ್ನು ಗುರುತಿಸಿ ಕ್ರೀಡಾಂಗಣದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿರುವುದು ನಿಜಕ್ಕೂ ವಿಶೇಷ," ಎಂದು ಹೇಳಿದ್ದಾರೆ. ದ್ರಾವಿಡ್ ಮತ್ತು ಶಾಂತಾ ರಂಗಸ್ವಾಮಿ ಅವರಿಗೆ ಈ ಗೌರವ ಸಿಕ್ಕಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ .

