Kannadigas are once again the leaders of the Indian boxing team: C.A. Kuttappa appointed as the head coach for the third time
x

 ಸಿ.ಎ. ಕುಟ್ಟಪ್ಪ

ಭಾರತ ಬಾಕ್ಸಿಂಗ್ ತಂಡಕ್ಕೆ ಕನ್ನಡಿಗನೇ ಸಾರಥಿ: ಮುಖ್ಯ ಕೋಚ್ ಆಗಿ ಸಿ.ಎ. ಕುಟ್ಟಪ್ಪ

ಕಳೆದ ವರ್ಷ ನೇಮಕಗೊಂಡಿದ್ದ ಧರ್ಮೇಂದರ್‌ ಯಾದವ್‌ ಬದಲಿಗೆ ಸರ್ವೀಸಸ್‌ ಆಟಗಾರ ಸಿ.ಎ. ಕುಟ್ಟಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಭಾರತೀಯ ಬಾಕ್ಸಿಂಗ್‌ ಫೆಡರೇಷನ್‌ ಪ್ರಕಟಣೆಯಲ್ಲಿ ತಿಳಿಸಿದೆ.


Click the Play button to hear this message in audio format

ಭಾರತ ಪುರುಷರ ಬಾಕ್ಸಿಂಗ್‌ ತಂಡದ ಮುಖ್ಯ ಕೋಚ್‌ ಆಗಿ ಕನ್ನಡಿಗ, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಸಿ.ಎ. ಕುಟ್ಟಪ್ಪನವರನ್ನು ಮೂರನೇ ಬಾರಿಗೆ ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ಬಾಕ್ಸಿಂಗ್‌ ಫೆಡರೇಷನ್‌ ದೃಢಪಡಿಸಿದೆ. ಈ ಕುರಿತು ಮಂಗಳವಾರ(ಜ.13) ಪ್ರಕಟಣೆಯಲ್ಲಿ ತಿಳಿಸಿರುವ ಬಾಕ್ಸಿಂಗ್‌ ಫೆಡರೇಷನ್‌, ಕಳೆದ ವರ್ಷ ನೇಮಕಗೊಂಡಿದ್ದ ಧರ್ಮೇಂದರ್‌ ಯಾದವ್‌ ಬದಲಿಗೆ ಸರ್ವೀಸಸ್‌ ಆಟಗಾರ ಸಿ.ಎ. ಕುಟ್ಟಪ್ಪ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಕೋಚ್‌ ಆಗಿದ್ದ ಯಾದವ್‌ ಪುರುಷರ ತರಬೇತುದಾರರ ತಂಡದ ಭಾಗವಾಗಿ ಮುಂದುವರಿಯಲಿದ್ದಾರೆ ಎಂದು ಬಿಎಫ್‌ಐ ಕಾರ್ಯನಿರ್ವಾಹಕ ನಿರ್ದೇಶಕ ಕರ್ನಲ್‌ ಅರುಣ್‌ ಮಲ್ಲಿಕ್‌ ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಭಾರತ ಪುರುಷರ ತಂಡ ಬಾಕ್ಸಿಂಗ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. 2024ರ ಪ್ಯಾರಿಸ್‌ ಒಲಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಇದಲ್ಲದೆ ಲಿವರ್‌ ಪೂಲ್‌ನಲ್ಲಿ ನಡೆದ 2025ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಬಾಕ್ಸಿಂಗ್‌ ತಂಡ ವಿಫಲವಾಗಿತ್ತು.

ಸಿ.ಎ. ಕುಟ್ಟಪ್ಪ ಅವರ ಮುಂದಿರುವ ಸವಾಲುಗಳು

2026ರಲ್ಲಿ ಭಾರತೀಯ ಪುರುಷ ಬಾಕ್ಸಿಂಗ್ ತಂಡವು ಸಾಲು ಸಾಲು ಪ್ರಮುಖ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಲಿದೆ. ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ ಮಂಗೋಲಿಯಾದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್, ಜುಲೈ 23 ರಿಂದ ಆಗಸ್ಟ್ 2 ರವರೆಗೆ ಗ್ಲ್ಯಾಸ್ಗೋದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್, ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4ರವರೆಗೆ ಜಪಾನ್‌ನಲ್ಲಿ ನಡೆಯಲಿರುವ ವಿಶ್ವ ಬಾಕ್ಸಿಂಗ್ ಕಪ್ ಫೈನಲ್ಸ್, ನವೆಂಬರ್‌ನಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆಯಲಿರುವ ಬೊಕ್ಸಾಮ್ ಟೂರ್ನಮೆಂಟ್, ಡಿಸೆಂಬರ್‌ನಲ್ಲಿ ಯುವ ಬಾಕ್ಸರ್‌ಗಳಿಗಾಗಿ ತಂಡವನ್ನು ತಯಾರು ಮಾಡಬೇಕಿದೆ.

ಏಷ್ಯನ್ ಬಾಕ್ಸಿಂಗ್ U19 ಮತ್ತು U23 ಚಾಂಪಿಯನ್‌ಶಿಪ್, ಯೂತ್ ಒಲಿಂಪಿಕ್ ಗೇಮ್ಸ್‌ಗಳು ಮುಂದಿವೆ. ಈ ಪಂದ್ಯಾವಳಿಗಳಿಗೂ ಮುನ್ನ ಭಾರತೀಯ ಬಾಕ್ಸರ್‌ಗಳಿಗಾಗಿ ಮಂಗೋಲಿಯಾ, ಯುಕೆ ಮತ್ತು ಜಪಾನ್‌ಗಳಲ್ಲಿ ವಿಶೇಷ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ.

ಒಲಂಪಿಕ್‌ ಪದಕ ಗೆಲ್ಲಿಸಿದ್ದ ಕುಟ್ಟಪ್ಪ

ಭಾರತೀಯ ಬಾಕ್ಸಿಂಗ್ ಲೋಕದ "ದ್ರೋಣಾಚಾರ್ಯ" ಎಂದೇ ಗುರುತಿಸಲ್ಪಡುವ ಸಿ.ಎ. ಕುಟ್ಟಪ್ಪ (ಚೆನ್ನಂಡ ಅಚ್ಚಯ್ಯ ಕುಟ್ಟಪ್ಪ) ಈ ಹಿಂದೆ ಭಾರತೀಯ ಪುರುಷ ಬಾಕ್ಸಿಂಗ್ ತಂಡದ ಕೋಚ್ ಆಗಿ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ವಿಜೇಂದರ್ ಸಿಂಗ್ ಅವರು ಭಾರತಕ್ಕೆ ಬಾಕ್ಸಿಂಗ್‌ನಲ್ಲಿ ಮೊದಲ ಕಂಚಿನ ಪದಕ ತಂದುಕೊಟ್ಟಾಗ, ಅವರ ತರಬೇತುದಾರರ ತಂಡದಲ್ಲಿ ಕುಟ್ಟಪ್ಪ ಪ್ರಮುಖರಾಗಿದ್ದರು. ವಿಜೇಂದರ್ ಸಿಂಗ್ ಅವರು ತಮ್ಮ ಯಶಸ್ಸಿನ ಶ್ರೇಯಸ್ಸನ್ನು ಕುಟ್ಟಪ್ಪ ಅವರಿಗೆ ಅರ್ಪಿಸಿದ್ದರು.

2019ರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಮಿತ್ ಪಂಘಲ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಪುರುಷ ಬಾಕ್ಸರ್ ಎಂಬ ದಾಖಲೆ ಬರೆದಿದ್ದರು.ಶಿವ ಥಾಪ ಅವರು, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಸತತ ಪದಕಗಳನ್ನು ಗೆಲ್ಲುವಂತೆ ಮಾಡುವಲ್ಲಿ ಕುಟ್ಟಪ್ಪ ಅವರ ತಂತ್ರಗಾರಿಕೆ ಕೆಲಸ ಮಾಡಿತ್ತು. ಇದೀಗ ಮೂರನೇ ಬಾರಿಗೆ ನೇಮಕವಾಗುವ ಮೂಲಕ ಮತ್ತೊಮ್ಮೆ ಪದಕಗಳನ್ನು ಗೆಲ್ಲಿಸುವ ನಿರೀಕ್ಷೆ ಇದೆ.

ಪ್ರಮುಖ ಪ್ರಶಸ್ತಿ ಮತ್ತು ಗೌರವಗಳು

ಸಿ.ಎ. ಕುಟ್ಟಪ್ಪನವರ ತರಬೇತಿಯನ್ನು ಗುರುತಿಸಿ ಕೇಂದ್ರ ಸರ್ಕಾರ ಕ್ರೀಡಾ ತರಬೇತುದಾರರಿಗೆ ನೀಡಲಾಗುವ ಭಾರತದ ಅತ್ಯುನ್ನತ ಗೌರವವಾದ ದ್ರೋಣಾಚಾರ್ಯ ಪ್ರಶಸ್ತಿಯನ್ನು 2018 ರಲ್ಲಿ ನೀಡಿ ಗೌರವಿಸಿತ್ತು. ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಗೂ 2019ರಲ್ಲಿ ಭಾಜನರಾಗಿದ್ದರು.

ಗರಡಿಯಲ್ಲಿ ಪಳಗಿದ ದಿಗ್ಗಜರು

ಬೀಜಿಂಗ್ ಒಲಿಂಪಿಕ್ಸ್‌ ಪದಕ ವಿಜೇತ ವಿಜೇಂದರ್ ಸಿಂಗ್, ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಲ್, ಏಷ್ಯನ್ ಚಾಂಪಿಯನ್‌ಶಿಪ್‌ ವಿಜೇತ ಶಿವ ಥಾಪ, ಸತತ ಎಂಟು ಅಂತರಾಷ್ಟ್ರೀಯ ಚಿನ್ನದ ಪದಕ ವಿಜೇತ ಎಂ. ಸುರಂಜೋಯ್ ಸಿಂಗ್ ಹಾಗೂ ವಿಕಾಸ್ ಕೃಷ್ಣನ್‌ಗೆ ತರಬೇತಿ ನೀಡಿದ್ದಾರೆ.

ಸೇನಾ ಹಿನ್ನೆಲೆ

ಇವರು ಮೂಲತಃ ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿದ್ದರು. ಸೇನೆಯಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮವನ್ನು ಮೈಗೂಡಿಸಿಕೊಂಡಿದ್ದ ಇವರು, ಅದೇ ಶಿಸ್ತನ್ನು ಭಾರತೀಯ ಬಾಕ್ಸಿಂಗ್ ಕ್ಯಾಂಪ್‌ಗಳಲ್ಲಿ ಅಳವಡಿಸಿದ್ದಾರೆ. ಪ್ರಸ್ತುತ 2026ರ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಬಾಕ್ಸಿಂಗ್ ಫೆಡರೇಶನ್ ಅವರನ್ನು ಪುನಃ ಮುಖ್ಯ ಕೋಚ್ ಆಗಿ ನೇಮಿಸಿದೆ.

Read More
Next Story