
ತಮ್ಮ ನಿವೃತ್ತಿಯ ನಿರ್ಧಾರಕ್ಕೆ ಸ್ಪಷ್ಟ ಕಾರಣ ನೀಡಿರುವ ಅಲಿಸ್ಸಾ ಹೀಲಿ, ಕಳೆದ ಕೆಲವು ತಿಂಗಳುಗಳಿಂದ ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾರೆ.
ಕ್ರಿಕೆಟ್ ಜಗತ್ತಿಗೆ ಶಾಕ್ ಕೊಟ್ಟ ಆಸ್ಟ್ರೇಲಿಯಾ ನಾಯಕಿ ಅಲಿಸ್ಸಾ ಹೀಲಿ: ದಿಢೀರ್ ನಿವೃತ್ತಿ ಘೋಷಣೆ
ತಮ್ಮ ನಿವೃತ್ತಿಯ ನಿರ್ಧಾರಕ್ಕೆ ಸ್ಪಷ್ಟ ಕಾರಣ ನೀಡಿರುವ ಅಲಿಸ್ಸಾ ಹೀಲಿ, ಕಳೆದ ಕೆಲವು ತಿಂಗಳುಗಳಿಂದ ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾರೆ.
ಮಹಿಳಾ ಕ್ರಿಕೆಟ್ ಲೋಕದ ದಿಗ್ಗಜ ಆಟಗಾರ್ತಿ, ಆಸ್ಟ್ರೇಲಿಯಾ ತಂಡದ ನಾಯಕಿ ಅಲಿಸ್ಸಾ ಹೀಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಹರಾಜಿನಲ್ಲಿ ಫ್ರಾಂಚೈಸಿಗಳಿಂದ ಕಡೆಗಣನೆಗೆ ಒಳಗಾಗಿದ್ದ ಅವರು, ಇದೀಗ ತಮ್ಮ 16 ವರ್ಷಗಳ ಸುದೀರ್ಘ ಹಾಗೂ ಯಶಸ್ವಿ ವೃತ್ತಿಜೀವನಕ್ಕೆ ಅಂತ್ಯಹಾಡಲು ಮುಂದಾಗಿದ್ದಾರೆ .
ಆಸ್ಟ್ರೇಲಿಯಾ ತಂಡದ ಬೆನ್ನೆಲುಬಾಗಿದ್ದ ಹೀಲಿ ಅವರು ಮುಂಬರುವ ಭಾರತದ ವಿರುದ್ಧದ ಸರಣಿಯ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ನಿವೃತ್ತರಾಗಲಿದ್ದಾರೆ. 'ವಿಲ್ಲೋ ಟಾಕ್' ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುತ್ತಾ ಭಾವುಕರಾದ ಅವರು ಈ ಮಹತ್ವದ ನಿರ್ಧಾರವನ್ನು ಜಗತ್ತಿಗೆ ತಿಳಿಸಿದ್ದಾರೆ. ತವರಿನಲ್ಲಿ ನಡೆಯಲಿರುವ ಈ ಸರಣಿಯು ಭಾವನಾತ್ಮಕವಾಗಿರಲಿದ್ದು, ಮಾರ್ಚ್ 6 ರಂದು ಪರ್ತ್‌ನಲ್ಲಿ ಆರಂಭವಾಗಲಿರುವ ಭಾರತದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದೊಂದಿಗೆ ಅವರು ತಮ್ಮ ಗ್ಲವ್ಸ್ ಕಳಚಲಿದ್ದಾರೆ. ತಾಯ್ನಾಡಿನಲ್ಲಿಯೇ ವಿದಾಯ ಹೇಳುತ್ತಿರುವುದಕ್ಕೆ ಅವರು ಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಪರ್ಧಾತ್ಮಕ ಕಿಚ್ಚು ಕಡಿಮೆಯಾಯಿತೇ?
ತಮ್ಮ ನಿವೃತ್ತಿಯ ನಿರ್ಧಾರಕ್ಕೆ ಸ್ಪಷ್ಟ ಕಾರಣ ನೀಡಿರುವ ಅಲಿಸ್ಸಾ ಹೀಲಿ, ಕಳೆದ ಕೆಲವು ತಿಂಗಳುಗಳಿಂದ ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಆಸ್ಟ್ರೇಲಿಯಾ ಜೆರ್ಸಿ ಧರಿಸಿ ಆಡುವ ಉತ್ಸಾಹ ಇನ್ನೂ ತಮ್ಮಲ್ಲಿದ್ದರೂ, ವೃತ್ತಿಜೀವನದ ಆರಂಭದಿಂದಲೂ ತಮ್ಮನ್ನು ಮುನ್ನಡೆಸುತ್ತಿದ್ದ ಆ ತೀವ್ರವಾದ ಸ್ಪರ್ಧಾತ್ಮಕ ಮನೋಭಾವ ಅಥವಾ ಹಸಿವು ಕಡಿಮೆಯಾಗುತ್ತಿದೆ ಎನಿಸುತ್ತಿದೆ ಎಂದಿದ್ದಾರೆ. ಕಳೆದ ಕೆಲವು ವರ್ಷಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ಸುಸ್ತಾಗುವಂತೆ ಮಾಡಿದ್ದು, ಗಾಯದ ಸಮಸ್ಯೆಗಳು ಕೂಡ ಕಾಡಿವೆ. ಹೀಗಾಗಿ ಆಟದಿಂದ ದೂರ ಸರಿಯಲು ಮತ್ತು ಹೊಸಬರಿಗೆ ದಾರಿ ಮಾಡಿಕೊಡಲು ಇದು ಸೂಕ್ತ ಸಮಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ .
ಡಬ್ಲ್ಯುಪಿಎಲ್ ಹರಾಜಿನ ಆಘಾತ ಮತ್ತು ನಿರ್ಧಾರ
ಈ ದಿಢೀರ್ ನಿವೃತ್ತಿಯ ನಿರ್ಧಾರದ ಹಿಂದೆ ಇತ್ತೀಚಿನ ಡಬ್ಲ್ಯುಪಿಎಲ್ ಹರಾಜಿನ ನಿರಾಸೆಯೂ ಪ್ರಮುಖ ಪಾತ್ರ ವಹಿಸಿದಂತಿದೆ. 2026ರ ಸಾಲಿನ ಡಬ್ಲ್ಯುಪಿಎಲ್ ಹರಾಜಿನಲ್ಲಿ ಹೀಲಿ ಅವರ ಹೆಸರು ಪಟ್ಟಿಯಲ್ಲಿ ಮೊದಲಿಗೆ ಬಂದರೂ, ಯಾವೊಂದು ತಂಡವೂ ಅವರನ್ನು ಖರೀದಿಸಲು ಆಸಕ್ತಿ ತೋರಿಸಿರಲಿಲ್ಲ. ವಿಶ್ವಕಪ್ ವಿಜೇತ ನಾಯಕಿ ಮತ್ತು ಶ್ರೇಷ್ಠ ಆಟಗಾರ್ತಿಯೊಬ್ಬರು ಹೀಗೆ 'ಅನ್-ಸೋಲ್ಡ್' ಆಗಿ ಉಳಿದಿದ್ದು ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹಿಂದೆ ಯುಪಿ ವಾರಿಯರ್ಸ್ ಪರ ಆಡಿದ್ದ ಅವರು, ಕಳೆದ ಬಾರಿ ಗಾಯದ ಕಾರಣ ಟೂರ್ನಿ ತಪ್ಪಿಸಿಕೊಂಡಿದ್ದರು. ಈ ಅವಮಾನದ ಘಟನೆ ನಡೆದ ಕೆಲವೇ ವಾರಗಳಲ್ಲಿ ಅವರು ನಿವೃತ್ತಿಯ ನಿರ್ಧಾರ ಪ್ರಕಟಿಸಿರುವುದು ಕಾಕತಾಳೀಯವೆನಿಸಿದೆ.
ಮರೆಯಲಾಗದ ಐತಿಹಾಸಿಕ ಸಾಧನೆ
2010ರಲ್ಲಿ ಹದಿಹರೆಯದ ವಯಸ್ಸಿನಲ್ಲಿಯೇ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಹೀಲಿ, ಸುಮಾರು 300ಕ್ಕೂ ಹೆಚ್ಚು ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದಾರೆ. ಬರೋಬ್ಬರಿ ಎಂಟು ಐಸಿಸಿ ವಿಶ್ವಕಪ್‌ಗಳನ್ನು ಗೆದ್ದ ಐತಿಹಾಸಿಕ ತಂಡದ ಭಾಗವಾಗಿದ್ದ ಅವರು, ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಎರಡರಲ್ಲೂ ಅದ್ಭುತ ದಾಖಲೆ ಬರೆದಿದ್ದಾರೆ. ಏಳು ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ಅವರು, ವಿಕೆಟ್ ಹಿಂದೆ ನಿಂತು 275ಕ್ಕೂ ಹೆಚ್ಚು ಬಲಿ ಪಡೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ಡಿಸ್ಮಿಸಲ್ ಮಾಡಿದ ವಿಶ್ವದಾಖಲೆ ಹಾಗೂ ವಿಶ್ವಕಪ್ ಫೈನಲ್‌ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಮೆಗ್ ಲ್ಯಾನಿಂಗ್ ಬಳಿಕ ನಾಯಕತ್ವ ವಹಿಸಿಕೊಂಡಿದ್ದ ಅವರು, ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು .

