Sea Rowing | ಅಟ್ಲಾಂಟಿಕ್‌ ಮಹಾಸಾಗರದಲ್ಲಿ 3000 ಕಿ.ಮೀ ಏಕಾಂಗಿ ಯಾನ; ರಾಷ್ಟ್ರಕವಿ ಜಿಎಸ್‌ಎಸ್‌ ಮೊಮ್ಮಗಳ ವಿಶ್ವದಾಖಲೆ
x
ರೋವಿಂಗ್‌ನಲ್ಲಿ ಭಾಗವಹಿಸಿರುವ ಅನನ್ಯ ಪ್ರಸಾದ್‌

Sea Rowing | ಅಟ್ಲಾಂಟಿಕ್‌ ಮಹಾಸಾಗರದಲ್ಲಿ 3000 ಕಿ.ಮೀ ಏಕಾಂಗಿ ಯಾನ; ರಾಷ್ಟ್ರಕವಿ ಜಿಎಸ್‌ಎಸ್‌ ಮೊಮ್ಮಗಳ ವಿಶ್ವದಾಖಲೆ

"ಕಾಣದ ಕಡಲಿಗೇ.. ಹಂಬಲಿಸಿದೆ ಮನ" ಎಂಬ ಅಜ್ಜನ (ಜಿ.ಎಸ್‌. ಶಿವರುದ್ರಪ್ಪ) ಹಾಡಿನ ಗುಂಗಿನಲ್ಲೇ ಏಕಾಂಗಿ ಯಾನ ಕೈಗೊಂಡ ಅನನ್ಯ ಪ್ರಸಾದ್ ಅವರು ಕೇವಲ 52 ದಿನ 5 ಗಂಟೆ 44 ನಿಮಿಷಗಳಲ್ಲಿ 3000 ಕಿ.ಮೀ ಸಮುದ್ರ ರೋಯಿಂಗ್ ಮಾಡಿದ್ದಾರೆ.


ಬಾನಂಗಳದಲ್ಲಿ ಮಿನುಗುವ ನಕ್ಷತ್ರಗಳು, ಕುಂಚದಲ್ಲಿ ಬಿಡಿಸಿದಂತೆ ಕಂಗೊಳಿಸುವ ಕ್ಷೀರಪಥ (milky way) ನಕ್ಷತ್ರ ಪುಂಜ, ಸಮುದ್ರದ ಅಲೆಗಳಲ್ಲಿ ಪ್ರತಿಫಲಿಸುವ ತಾರೆಗಳ ಬೆಳಕು, ಆಕಾಶ -ಸಮುದ್ರದ ಮಧ್ಯೆ ನಿರ್ವಾತ ಸೃಷ್ಟಿಸುವ ಅಸೀಮ ಏಕಾಂತ...!

ಇದು ಸಮುದ್ರಯಾನ ಕೈಗೊಳ್ಳುವ ಪ್ರತಿಯೊಬ್ಬರಲ್ಲಿಯೂ ಮೂಡುವ ಭಾವ. ಆದರೆ, ಅಲೆಗಳ ಬೋರ್ಗೆರೆತ ಎಂಥ ಏಕಾಂತವನ್ನೂ ಮುರಿದು ಭೀತಿ ಹುಟ್ಟಿಸುವಂತಹುದು. ಸಮುದ್ರ ಸೃಷ್ಟಿಸುವ ಇಂತಹ ಭೀತಿಯಲ್ಲಿ ಸಮುದ್ರಯಾನ ನಡೆಸುವುದೇ ದೊಡ್ಡ ಸವಾಲು. ಆದರೆ, ಇಂತಹ ಸವಾಲು ಮೆಟ್ಟಿ ನಿಂತಿರುವ ಕನ್ನಡತಿ ಅನನ್ಯ ಪ್ರಸಾದ್‌ ಅವರು, ಏಕಾಂಗಿಯಾಗಿ ಅಟ್ಲಾಂಟಿಕ್ ಮಹಾಸಾಗರದಲ್ಲಿ ಯಾನ ಕೈಗೊಂಡು ವಿಶ್ವದಾಖಲೆ ಬರೆದಿದ್ದಾರೆ.

ಅಟ್ಲಾಂಟಿಕ್ ಮಹಾಸಾಗರ ಎರಡನೇ ದೊಡ್ಡ ಮಹಾಸಾಗರವಾಗಿದ್ದು ಭೂಮಿಯ ಐದನೇ ಒಂದು ಭಾಗವನ್ನು ಆವರಿಸಿದೆ. ಅಮೆರಿಕಾ ಭೂಖಂಡ, ಯೂರೋಪ್ ಹಾಗೂ ಆಫ್ರಿಕಾ ಖಂಡಗಳ ನಡುವೆ ಇದು ವಿಸ್ತರಿಸಿಕೊಂಡಿದೆ.

ಏಕಾಂಗಿಯಾಗಿ ರೋಯಿಂಗ್‌ ನಡೆಸಿ ವಿಶ್ವದಾಖಲೆ ಬರೆದ ಅನನ್ಯ ಪ್ರಸಾದ್‌

ಕರ್ನಾಟಕದ ಖ್ಯಾತ ಸಾಹಿತಿ, ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಅವರ ಮೊಮ್ಮಗಳಾಗಿರುವ ಅನನ್ಯ ಪ್ರಸಾದ್‌ ಒಬ್ಬಂಟಿಯಾಗಿ ಸಮುದ್ರ ರೋಯಿಂಗ್ ನಡೆಸಿ ಅಟ್ಲಾಂಟಿಕ್ ಸಮುದ್ರದಲ್ಲಿ 3000ಕಿ.ಮೀ ದೂರವನ್ನು ಯಶಸ್ವಿಯಾಗಿ ಕ್ರಮಿಸಿದ ಮೊದಲ ಏಷಿಯನ್‌ ಮಹಿಳೆ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ

"ಕಾಣದ ಕಡಲಿಗೇ.. ಹಂಬಲಿಸಿದೆ ಮನ" ಎಂಬ ಅಜ್ಜನ(ಜಿ.ಎಸ್‌. ಶಿವರುದ್ರಪ್ಪ) ಹಾಡಿನ ಗುಂಗಿನಲ್ಲೇ ಏಕಾಂಗಿ ಯಾನ ಕೈಗೊಂಡ ಅನನ್ಯ ಪ್ರಸಾದ್ ಅವರು ಕೇವಲ 52 ದಿನ 5 ಗಂಟೆ 44 ನಿಮಿಷಗಳಲ್ಲಿ 3000 ಕಿ.ಮೀ ರೋಯಿಂಗ್ ಮಾಡಿದ್ದಾರೆ. ವಿಶ್ವದ ಅತ್ಯಂತ ಕಠಿಣ ಸಾಹಸಕ್ರೀಡೆಗಳಲ್ಲಿ ಸಮುದ್ರ ರೋಯಿಂಗ್ (Ocean rowing) ಕೂಡ ಒಂದು.

ಡಿ.11ರಂದು ಸ್ಪೇನ್‌ ದೇಶದ ಕ್ಯಾನರಿ ದ್ವೀಪದಲ್ಲಿರುವ ಲಾ ಗೊಮೆರಾದಿಂದ ರೋಯಿಂಗ್ ಆರಂಭಿಸಿದ ಅನನ್ಯಾ ಅವರು ಜ.1 ರಂದು ಕೆರಿಬಿಯನ್‌ ನಾಡಿನ ಆಂಟಿಗುವಾ ದ್ವೀಪದಲ್ಲಿ ಯಶಸ್ವಿಯಾಗಿ ಸಮುದ್ರಯಾನ ಪೂರೈಸಿದರು. (ಸಮುದ್ರಯಾನದಲ್ಲಿ ತಲುಪುವ ಗುರಿ, ಬೋಟು ಚಲಿಸುವ ವೇಗ, ಒಟ್ಟು ಪ್ರಯಾಣದ ಅವಧಿ ಆಧಾರದ ಮೇಲೆ ದಿನ ಪರಿಗಣಿಸಲಾಗುತ್ತದೆ).

ಯಶಸ್ವಿಯಾಗಿ ಸಮುದ್ರ ಯಾನ ಮುಗಿಸಿ ಭಾರತದ ತ್ರಿವರ್ಣಧ್ವಜದೊಂದಿಗೆ ಅನನ್ಯ ಪ್ರಸಾದ್‌

ಚಾರಿಟಿಗಾಗಿ ಸಮುದ್ರಯಾನ

ಅನನ್ಯ ಪ್ರಸಾದ್‌ ಅವರು ರೋಯಿಂಗ್ ಗಾಗಿ ಮೂರು ವರ್ಷ ತರಬೇತಿ ಪಡೆದಿದ್ದರು. ವಿಶ್ವದ ಅತ್ಯಂತ ಕಠಿಣವಾದ ಸೋಲೋ ರೋಯಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಬಡ ಮಕ್ಕಳಿಗಾಗಿ ಎಂಬುದನ್ನು ಸ್ವತಃ ಅನನ್ಯ ಅವರೇ ಬಹಿರಂಗಪಡಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಅನಾಥ ಮಕ್ಕಳಿಗೆ ಶಿಕ್ಷಣ ಒದಗಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ "ದೀನಬಂಧು ಟ್ರಸ್ಟ್‌", "ಅನಂತಾಶ್ರಮ" ಹಾಗೂ ಇಂಗ್ಲೆಂಡಿನಲ್ಲಿ "ಮಾನಸಿಕ ಆರೋಗ್ಯ ಪ್ರತಿಷ್ಠಾನ"ಕ್ಕೆ ಹಣ ಸಂಗ್ರಹಿಸುವ(ಫಂಡ್‌ ರೈಸಿಂಗ್‌) ಸಲುವಾಗಿ ಅತ್ಯಂತ ಕಠಿಣ "ಸೋಲೋ ರೋಯಿಂಗ್" ಆಯ್ಕೆ ಮಾಡಿಕೊಂಡೆ. ಸವಾಲಿನ ಈ ಯಾನವನ್ನು ಯಾವುದೇ ಅಡ್ಡಿ ಆತಂಕವಿಲ್ಲದೇ ಪೂರ್ಣಗೊಳಿಸಿದ್ದು ಖುಷಿ ತಂದಿದೆ ಎಂದಿದ್ದಾರೆ.

ದೈಹಿಕ ಬಲ-ಮಾನಸಿಕ ಸ್ಥೈರ್ಯ ಮುಖ್ಯ

ರೋಯಿಂಗ್ ಸ್ಪರ್ಧಿಗಳು ಸಾಮಾನ್ಯವಾಗಿ ದೈಹಿಕವಾಗಿ ಸದೃಢವಾಗಿರಬೇಕು. ನಿರಂತರ ಹುಟ್ಟು ಹಾಕುವಾಗ ಬೇಗನೆ ದಣಿವಾಗುತ್ತದೆ. ಹಾಗಾಗಿ ವೇಟ್‌ ಲಿಫ್ಟಿಂಗ್‌, ಇತ್ಯಾದಿ ವ್ಯಾಯಾಮಗಳ ಮೂಲಕ ದೇಹವನ್ನು ಸದೃಢವಾಗಿಸಿಕೊಳ್ಳಬೇಕಾಗುತ್ತದೆ. ಇನ್ನು ಸಮುದ್ರದಲ್ಲಿ ಒಬ್ಬಂಟಿಯಾಗಿ ರೋಯಿಂಗ್ ಮಾಡುವವರಿಗೆ ಮಾನಸಿಕ ಸವಾಲುಗಳು ಎದುರಾಗುತ್ತವೆ. ಧೈರ್ಯ ಮುಖ್ಯ. ಇದಕ್ಕಾಗಿ ಅನನ್ಯ ಪ್ರಸಾದ್ ಅವರು ಹೈಕಿಂಗ್, ಟ್ರೆಕ್ಕಿಂಗ್ ಹಾಗೂ ರೋಯಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಾನಸಿಕವಾಗಿ ಸದೃಢತೆ ಕಾಯ್ದುಕೊಂಡಿದ್ದರು. ಈ ಕುರಿತು ಟಿವಿ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಅವರು, ರೋವಿಂಗ್‌ ಸ್ಪರ್ಧೆಯ ಸವಾಲು, ಪಡೆದ ತರಬೇತಿ ಕುರಿತು ವಿವರಿಸಿದ್ದಾರೆ.

ಅನನ್ಯ ಪ್ರಸಾದ್‌ ರೋಯಿಂಗ್‌ ಮಾಡುತ್ತಿರುವುದು

"ನಾನು ಹುಟ್ಟಿದ್ದು ಕರ್ನಾಟಕದಲ್ಲಿ, ಬೆಳೆದಿದ್ದು ಮಾತ್ರ ಬ್ರಿಟನ್‌ನಲ್ಲಿ. ಚಿಕ್ಕಂದಿನಿಂದಲೂ ಪ್ರಕೃತಿಯೊಂದಿಗೆ ಒಡನಾಟ ಇರಿಸಿಕೊಂಡಿದ್ದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ರೋಯಿಂಗ್ ಸ್ಪರ್ಧೆಯಲ್ಲಿ ಭಾರತದ ಮಹಿಳೆಯರು ಪಾಲ್ಗೊಳ್ಳುವಿಕೆ ಕಡಿಮೆ, ಇದನ್ನೇ ಸವಾಲಾಗಿ ಸ್ವೀಕರಿಸಿ ಸಮುದ್ರ ರೋಯಿಂಗ್, ಮೌಂಟೇನ್ ರೋಯಿಂಗ್ ಕಲಿತೆ. ಏಕಾಂಗಿ ರೋಯಿಂಗ್‌ನಲ್ಲಿ ಎಲ್ಲವನ್ನೂ ನಾವೇ ನಿಭಾಯಿಸಬೇಕಾದ ನೈಪುಣ್ಯತೆ ಬೇಕು. ಇದೆಲ್ಲವನ್ನು ಕಲಿತಿದ್ದರಿಂದ ಏಕಾಂಗಿ ಯಾನ ಯಶಸ್ವಿಯಾಯಿತು" ಎಂದು ಅನನ್ಯ ಹೇಳುತ್ತಾರೆ.

ಒಬ್ಬಂಟಿಯಾಗಿ ಪ್ರಯಾಣಿಸುವಾಗ ಸ್ಯಾಟಲೈಟ್‌ ಫೋನ್‌ ಇರುತ್ತದೆ. ನಮ್ಮ ಬೋಟ್‌ ಅನ್ನು ಟ್ರ್ಯಾಕ್‌ ಮಾಡಲಾಗುತ್ತಿರುತ್ತದೆ. ಅಪಾಯ ಒದಗಿ ಬಂದಾಗ ತುರ್ತು ಸಿಬ್ಬಂದಿ ನೆರವಿಗೆ ಧಾವಿಸುತ್ತಾರೆ. ಇನ್ನು ಬೋಟ್‌ನಲ್ಲಿ ರೋಯಿಂಗ್ ಮುಗಿಸಿ, ಕ್ಯಾಬಿನ್‌ನಲ್ಲಿ ಮಲಗುತ್ತಿದ್ದೆ. ದೇಹಕ್ಕೆ ಅಗತ್ಯ ಕ್ಯಾಲೊರಿ, ಪ್ರೋಟಿಸ್‌ ಒದಗಿಸಲು ಆಹಾರ ಸಾಮಾಗ್ರಿಗಳನ್ನು ಜೊತೆಯಲ್ಲೇ ಕೊಂಡೊಯ್ದಿದ್ದೆ ಎಂದು ವಿವರಿಸಿದ್ದಾರೆ.

ವಿಶ್ವದಾಖಲೆಯೊಂದಿಗೆ ರೋಯಿಂಗ್‌ ಸಮುದ್ರಯಾನ ಮುಗಿಸಿದ ಅನನ್ಯ ಪ್ರಸಾದ್‌

ಸಮುದ್ರದಲ್ಲಿ ತೆರಳುವಾಗ ಆಕಾಶ ಹಾಗೂ ನೀರೇ ನಮ್ಮ ಮನೆಯಾಗಿರುತ್ತದೆ. ಜಲಚರಗಳಿಂದ ಯಾವುದೇ ಅಪಾಯ ಇರುವುದಿಲ್ಲ. ಆದರೆ, ಸಮುದ್ರ ಸೃಷ್ಟಿಸುವ 25 ಅಡಿ ಎತ್ತರದ ಅಲೆಗಳೇ ಹೆಚ್ಚು ಅಪಾಯಕಾರಿ, ಅವುಗಳನ್ನು ನಿಭಾಯಿಸಿ ಮುಂದೆ ಹೋಗುವುದು ಸವಾಲು ಎನ್ನುತ್ತಾರೆ ಅನನ್ಯ ಪ್ರಸಾದ್‌.

2018ರಲ್ಲೂ ವಿಶ್ವದ ಕಠಿಣ ರೋಯಿಂಗ್ ರೇಸ್‌ನಲ್ಲಿ ಅನನ್ಯ ಭಾಗವಹಿಸಿದ್ದರು. ಅನನ್ಯ ಅವರ ರೋಯಿಂಗ್ ಸ್ಪರ್ಧೆಗೆ ಬೆಂಗಳೂರಿನ ಸಿ.ಕೃಷ್ಣಯ್ಯ ಚೆಟ್ಟಿ ಜ್ಯುವೆಲ್ಲರ್ಸ್‌, ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಗಳು ಪ್ರಯೋಜಕತ್ವ ವಹಿಸುವ ಮೂಲಕ ನೆರವಾಗಿದ್ದರು.

Read More
Next Story