ಏಳನೇ ಸುತ್ತಿನ ಸೋಲು ಚೈತನ್ಯ ತುಂಬಿತು: ಗ್ರ್ಯಾಂಡ್ ಮಾಸ್ಟರ್ ಗುಕೇಶ್
ಅತ್ಯಂತ ಕಿರಿಯ ವಯಸ್ಸಿನ ಚಾಂಪಿಯನ್ ಅಭ್ಯರ್ಥಿ
ಹೊಸದಿಲ್ಲಿ, ಎಪ್ರಿಲ್ 22 - ಬಹುತೇಕ ಅಥ್ಲೆಟ್‌ಗಳಿಗೆ ಗೆಲುವು ಸಾಮಾನ್ಯವಾಗಿ ದೊಡ್ಡ ಪ್ರೇರಕವಾಗಿರುತ್ತದೆ. ಆದರೆ, ಗ್ರ್ಯಾಂಡ್ ಮಾಸ್ಟರ್ ಗುಕೇಶ್ ವಿಷಯದಲ್ಲಿ ಇದು ತದ್ವಿರುದ್ಧ. ʻಏಳನೇ ಸುತ್ತಿನಲ್ಲಿ ಇರಾನಿನ ಫಿರೋಜ್ಜಾ ಅಲಿರೆಜಾಗೆ ಸೋಲುವ ಮೂಲಕ ಸ್ಪೂರ್ತಿ ಪಡೆದೆʼ ಎಂದು ಅವರು ಹೇಳಿದ್ದಾರೆ.
ಅವರು ಅತ್ಯಂತ ಕಿರಿಯ ಚಾಂಪಿಯನ್ ಅಭ್ಯರ್ಥಿ. ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ನಂತರ ಅಭ್ಯರ್ಥಿ ಸ್ಥಾನ ಗೆದ್ದ ಎರಡನೇ ಭಾರತೀಯ. ಈ ಪ್ರಕ್ರಿಯೆ ಯಲ್ಲಿ ಅವರು 1984 ರಲ್ಲಿ ತಮ್ಮ 22 ನೇ ವಯಸ್ಸಿನಲ್ಲಿ ವಿಶ್ವ ಪ್ರಶಸ್ತಿಗೆ ಸವಾಲೆಸೆದ ಶ್ರೇಷ್ಠ ಆಟಗಾರ ಗ್ಯಾರಿ ಕಾಸ್ಪರೋವ್ ಅವರ 40 ವರ್ಷಗಳ ಹಳೆಯ ದಾಖಲೆಯನ್ನು ಉತ್ತಮಗೊಳಿಸಿದರು.
ಇಎನ್‌ಟಿ ಶಸ್ತ್ರಚಿಕಿತ್ಸಕ ತಂದೆ ಮತ್ತು ಮೈಕ್ರೋಬಯಾಲಜಿಸ್ಟ್ ತಾಯಿ ಇರುವ ಚೆನ್ನೈನ 17 ವರ್ಷದ ಗುಕೇಶ್, ಅಮೆರಿಕದ ಹಿಕರು ನಕ ಮುರಾ ವಿರುದ್ಧ ತಮ್ಮ 14 ನೇ ಮತ್ತು ಅಂತಿಮ ಸುತ್ತಿನ ಪಂದ್ಯವನ್ನು ಡ್ರಾ ಮಾಡಿಕೊಂಡರು. ಈ ವರ್ಷ ನಡೆಯಲಿರುವ ಪಂದ್ಯದಲ್ಲಿ ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ.
ʻಆರಂಭದಿಂದಲೂ ಉತ್ತಮ ಮನಸ್ಥಿತಿ ಹೊಂದಿದ್ದೆ. ಆದರೆ, ಅಲಿರೆಜಾ ವಿರುದ್ಧದ ಏಳನೇ ಸುತ್ತಿನ ಸೋಲಿನ ನಂತರ, ಅಸಮಾಧಾನವಾಯಿತು. ಇದು ನೋವಿನ ಸೋಲು. ಆದರೆ, ಮರುದಿನ ವಿಶ್ರಾಂತಿ ದಿನವಾಗಿತ್ತು ಹಾಗೂ ಆನಂತರ ಉತ್ತಮ ಮನಸ್ಥಿತಿ ಪಡೆದುಕೊಂಡೆʼ ಎಂದು ಗುಕೇಶ್ ಟೊರೊಂಟೋದಿಂದ ಜೂಮ್ ಸಂದರ್ಶನದಲ್ಲಿ ಹೇಳಿದರು.
ʻಸೋಲು ನನಗೆ ಶಕ್ತಿ ಮತ್ತು ಪ್ರೇರಣೆ ನೀಡಿತು. ಕೆಲಸ ಅರಿಯಾಗಿ ಮಾಡುವುದನ್ನು ಮುಂದುವರಿಸಿದರೆ ಮತ್ತು ಸರಿಯಾದ ಮಾನಸಿಕ ಸ್ಥಿತಿಯಲ್ಲಿದ್ದರೆ, ಗೆಲ್ಲಬಹುದು ಎಂದು ಭಾವಿಸಿದೆʼ ಎಂದು ಅವರು ಹೇಳಿದರು. ವಿಶ್ವದ ಮೂರನೇ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಪಂದ್ಯಾವಳಿ ಹೇಗೆ ಮುಂದುವರಿಯಿತು ಎಂಬ ಬಗ್ಗೆ ಪ್ರತಿಕ್ರಿಯಿಸಿ , ʻಆರಂಭದಿಂದಲೂ ಗುರಿ ಇದ್ದುದು ಪ್ರಕ್ರಿಯೆ ಮೇಲೆ ನಂಬಿಕೆ, ಸರಿಯಾದ ಮನಸ್ಥಿತಿ ಕಾಯ್ದುಕೊಳ್ಳುವುದು ಮತ್ತು ಉತ್ತಮ ಆಟ ಆಡುವುದರ ಮೇಲೆʼ.
ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಗೆ ಕಿರಿಯ ಚಾಲೆಂಜರ್ ಆದ ಬಗ್ಗೆ ಕೇಳಿದ ಪ್ರಶ್ನೆಗೆ, ʻಇದೊಂದು ಸುಂದರ ಕ್ಷಣ. ಅಧಿಕೃತವಾಗಿ ಆ ಸಾಧನೆ ಮಾಡಿದ್ದರಿಂದ ಬಹಳ ಸಂತೋಷ ಮತ್ತು ಸಮಾಧಾನ ಆಯಿತು. ತುಂಬ ಸಂತೋಷವಾಗಿದ್ದೇನೆ.ʼ ಗುಕೇಶ್‌ಗೆ ರಷ್ಯಾದ ಇಯಾನ್ ನೆಪೊಮ್ನಿಯಾಚ್ಚಿ ಮತ್ತು ಅಗ್ರ ಶ್ರೇಯಾಂಕದ ಅಮೆರಿಕದ ಫ್ಯಾಬಿಯಾನೊ ಕರುವಾನಾ ನಡುವಿನ ಕೊನೆಯ ಪಂದ್ಯ ಡ್ರಾದಲ್ಲಿ ಕೊನೆಗೊಳ್ಳ ಬೇಕಿತ್ತು. ಈ ಇಬ್ಬರಲ್ಲಿ ಯಾರಾದರೂ ಗೆದ್ದಿದ್ದರೆ, ಪಂದ್ಯಾವಳಿಗೆ ಟೈ ಬ್ರೇಕ್ ಅಗತ್ಯವಿತ್ತು. ಗುಕೇಶ್ ಮತ್ತು ವಿಜೇತರು ಜಂಟಿ ಮುನ್ನಡೆ ಗಳಿಸುತ್ತಿದ್ದರು.
ʻವಿಶ್ವ ಪ್ರಶಸ್ತಿ ಪಂದ್ಯಕ್ಕೆ ಯೋಜನೆ, ದಿನಾಂಕ ಮತ್ತು ಸ್ಥಳ ಇನ್ನೂ ನಿರ್ಧರಿಸಿಲ್ಲ. ಪಂದ್ಯಾವಳಿಯನ್ನು ಗೆದ್ದ ನಂತರ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಬಗ್ಗೆ ಯೋಚಿಸಲು ಹೆಚ್ಚು ಸಮಯವಿರುವುದಿಲ್ಲ. ಪಂದ್ಯವನ್ನು ಎದುರು ನೋಡುತ್ತಿದ್ದೇನೆʼ ಎಂದು ಹೇಳಿದರು. ವಿಶ್ವನಾಥನ್ ಆನಂದ್ ಅವರಿಂದ ಅಭಿನಂದನೆ ಸಂದೇಶ ಪಡೆದ ಬಗ್ಗೆ ಪ್ರತಿಕ್ರಿಯಿಸಿ,ʻ ಅವರು ನನ್ನನ್ನು ಅಭಿನಂದಿಸಿದರು. ಅವರೊಂದಿಗೆ ಮಾತನಾಡಲು ನನಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಆದರೆ, ಶೀಘ್ರದಲ್ಲೇ ಅವರನ್ನು ಭೇಟಿಯಾಗುತ್ತೇನೆ ಎಂದು ಆಶಿಸುತ್ತೇನೆ,ʼ ಎಂದು ಹೇಳಿದರು.
ʻ ಪೋಷಕರೊಂದಿಗೆ ಮಾತನಾಡಿದ್ದೇನೆ. ಅವರು ನಿಜವಾಗಿಯೂ ಸಂತೋಷಗೊಂಡಿದ್ದಾರೆ. ನನ್ನ ತರಬೇತುದಾರ, ಪ್ರಾಯೋಜಕರು ಮತ್ತು ಕೆಲವು ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆದಿದ್ದೇನೆ. ಕೆಲವು ದಿನ ವಿಶ್ರಾಂತಿ ಪಡೆಯಲಿದ್ದೇನೆ. ಕಳೆದ ಮೂರು ವಾರಗಳಿಂದ ತೀವ್ರ ಒತ್ತಡದಲ್ಲಿದ್ದೇನೆ. ಉತ್ತಮವಾಗಿ ಆಡುವುದರ ಮೇಲೆ ಗಮನ ಕೇಂದ್ರೀಕರಿಸುತ್ತೇನೆ ಮತ್ತು ಸಂಪೂರ್ಣ ಅತ್ಯುತ್ತಮವಾಗಿರಲು ಪ್ರಯತ್ನಿಸುತ್ತೇನೆʼ ಎಂದರು.