ಮತ-ಮ್ಯಾಪಿಂಗ್ Part-2|ಮತದಾರರಿಗೆ ʼಎಸ್‌ಐಆರ್ ಆತಂಕʼ ತಂದ ಚುನಾವಣಾ ಸುಧಾರಣೆ
'ಮತದಾರರ ಮ್ಯಾಪಿಂಗ್' ಕುರಿತು ರಾಜ್ಯದ ಜನತೆಯಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಆತಂಕವನ್ನು ನಿವಾರಣೆ ಮಾಡುವ ಕಾರ್ಯಕ್ಕೆ ಮುಂದಾಗಿದೆ.

ಭಾರತೀಯ ಚುನಾವಣಾ ಆಯೋಗವು ದೇಶಾದ್ಯಂತ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ಕೈಗೊಂಡಿದೆ. ಕರ್ನಾಟಕದಲ್ಲಿಯೂ ಈ ಪ್ರಕ್ರಿಯೆಗೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಸಿದ್ಧತೆ ಕೈಗೊಂಡಿದ್ದು, ಪೂರ್ವಭಾವಿಯಾಗಿ 'ಮತದಾರರ ಮ್ಯಾಪಿಂಗ್' ಕಾರ್ಯ ಕೈಗೊಂಡಿದೆ. ಇದು ರಾಜ್ಯದ ಜನತೆಯಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಆತಂಕವನ್ನು ನಿವಾರಣೆ ಮಾಡುವ ಕಾರ್ಯಕ್ಕೆ ಮುಂದಾಗಿದೆ.
ಎಸ್‌ಐಆರ್‌ಗೂ ಮುನ್ನ ಕೈಗೊಂಡಿರುವ ಮ್ಯಾಪಿಂಗ್ ಕಾರ್ಯದ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಜಂಟಿ ಚುನಾವಣಾಧಿಕಾರಿ ಯೋಗೇಶ್ವರ್, ಭಾರತೀಯ ಚುನಾವಣಾ ಆಯೋಗವು ದೇಶಾದ್ಯಂತ ಚುನಾವಣಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಮತ್ತು ಸಬಲಗೊಳಿಸಲು ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನವನ್ನು ಹಮ್ಮಿಕೊಂಡಿದೆ. ರಾಜ್ಯದಲ್ಲಿಯೂ ಈ ಪ್ರಕ್ರಿಯೆಯು ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನ ಮತದಾರರ ಮ್ಯಾಪಿಂಗ್ ಕಾರ್ಯ ಕೈಗೊಳ್ಳಲಾಗಿದೆ. ಈಗ ನಡೆಯುತ್ತಿರುವ ಪ್ರಕ್ರಿಯೆಯು ಕೇವಲ ಹೊಸ ಮತದಾರರನ್ನು ಸೇರಿಸುವ ಅಥವಾ ತಿದ್ದುಪಡಿ ಮಾಡುವ ಸಾಮಾನ್ಯ ಕಾರ್ಯವಲ್ಲ. ಬದಲಾಗಿ, ಪ್ರತಿಯೊಬ್ಬ ಮತದಾರನ ಭೌಗೋಳಿಕ ನೆಲೆ ಮತ್ತು ಅವರ ಕೌಟುಂಬಿಕ ಹಿನ್ನೆಲೆಯನ್ನು ಡಿಜಿಟಲ್ ರೂಪದಲ್ಲಿ ಜೋಡಿಸುವ ಬೃಹತ್ ಕಾರ್ಯಾಚರಣೆಯಾಗಿದೆ. ಕುಟುಂಬದ ಎಲ್ಲ ಮತದಾರರನ್ನು ಒಂದೇ ಕಡೆ ವ್ಯವಸ್ಥಿತವಾಗಿ ಗುರುತಿಸುವುದು ಇದರ ಮುಖ್ಯ ಉದ್ದೇಶ ಎಂದು ಹೇಳಿದರು.
ಪೋಷಕರ ದಾಖಲೆ ಕಡ್ಡಾಯ
2002ರ ನಂತರ ಮೊದಲ ಬಾರಿಗೆ ವಿಸ್ತೃತವಾಗಿ ತಪಾಸಣೆಯನ್ನು ಕೈಗೊಂಡಿದ್ದೇವೆ. 2002ರ ಮತದಾರರ ಪಟ್ಟಿಯಲ್ಲಿರುವ ಮಾಹಿತಿಯನ್ನು ಇಂದಿನ ಆಧುನಿಕ ಡಿಜಿಟಲ್ ವ್ಯವಸ್ಥೆಗೆ ನಾವು ಹೊಂದಾಣಿಕೆ ಮಾಡುತ್ತಿದ್ದೇವೆ. ಅಂದು ದಾಖಲಾಗಿದ್ದ ವಿವರಗಳಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಅಥವಾ ಮಾಹಿತಿಯ ಕೊರತೆಯಿದ್ದರೆ, ಅದನ್ನು ಈಗ ಸರಿಪಡಿಸಿ ದಾಖಲೆಗಳನ್ನು ಭದ್ರಪಡಿಸಲಾಗುವುದು. ರಾಜ್ಯದಲ್ಲಿ ಆರಂಭಗೊಂಡಿರುವ ಮ್ಯಾಪಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪೋಷಕರ ದಾಖಲೆಗಳನ್ನು ನೀಡುವುದು ಕಡ್ಡಾಯವಾಗಿದೆ. ಒಂದು ವೇಳೆ ತಂದೆಯ ದಾಖಲೆಗಳು ಲಭ್ಯವಿಲ್ಲದಿದ್ದರೆ, ಮತದಾರರು ಆತಂಕಪಡುವ ಅಗತ್ಯ ಇಲ್ಲ. ಕುಟುಂಬದ ಇತರ ಹಿರಿಯರಾದ ದೊಡ್ಡಪ್ಪ ಅಥವಾ ಚಿಕ್ಕಪ್ಪನ ಹೆಸರು ಮತ್ತು ವಿವರಗಳನ್ನು ನೀಡಿ ಮ್ಯಾಪಿಂಗ್ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೆಣ್ಣುಮಕ್ಕಳು ಸಹ ತಂದೆ ಅಥವಾ ಪಿತೃವಂಶದ ಹಿರಿಯರ ಮಾಹಿತಿಯೊಂದಿಗೆ ತಮ್ಮ ಹೆಸರನ್ನು ಮ್ಯಾಪ್ ಮಾಡಿಕೊಳ್ಳಬಹುದು. ಇದು ಕುಟುಂಬದ "ವಂಶವೃಕ್ಷ"ವನ್ನು ಮತದಾರರ ಪಟ್ಟಿಯೊಂದಿಗೆ ಜೋಡಿಸುವ ಪ್ರಯತ್ನ ಎಂದು ಮಾಹಿತಿ ನೀಡಿದರು.
ಆ್ಯಪ್ ಮೂಲಕ ಮ್ಯಾಪಿಂಗ್‌ಗೆ ಅವಕಾಶ
ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಕುಟುಂಬದ ವಂಶವೃಕ್ಷವನ್ನು ಜೋಡಿಸಲು ಪೋಷಕರ ದಾಖಲೆಗಳು ಸಹಕಾರಿಯಾಗಿವೆ. ಮತದಾರರ ಪಟ್ಟಿಯ ಸುಧಾರಣೆಗಾಗಿ ಆಯೋಗವು ಇಸಿಐ ನೆಟ್ ಆಪ್ (ECI Net App) ಅನ್ನು ಬಳಸಲು ಸಾರ್ವಜನಿಕರಿಗೆ ಹೇಳಿದೆ. ಪ್ರತಿಯೊಬ್ಬ ಮತದಾರನು ತನ್ನ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ಆ್ಯಪ್ ಅಥವಾ ಬಿಎಲ್‌ಓ ಮೂಲಕ ಮ್ಯಾಪಿಂಗ್ ಮಾಡಿಕೊಳ್ಳಬಹುದಾಗಿದೆ. ಹಳೆಯ ಕಾಗದದ ಪಟ್ಟಿಯನ್ನು ಹೊಸ ಡಿಜಿಟಲ್ ನಕ್ಷೆಯೊಂದಿಗೆ ಹೊಂದಿಸುವ ಈ ಕಾರ್ಯವನ್ನು ಪ್ರಾರಂಭಿಸಲಾಗಿದೆ ಎಂದರು.
ಜನರು ಮಾಡಬೇಕಾಗಿದ್ದೇನು?
ನಾಗರಿಕರು ತಮ್ಮ ದಾಖಲೆಗಳಲ್ಲಿ ತಂದೆಯ ಹೆಸರು ಇರುವ ದಾಖಲೆಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು. ವೋಟರ್ ಹೆಲ್ಪ್‌ಲೈನ್ (Voter Helpline App) ಡೌನ್‌ಲೋಡ್ ಮಾಡಿ ಎಪಿಕ್ ಸಂಖ್ಯೆಯನ್ನು ನಮೂದಿಸಿ ಮ್ಯಾಪಿಂಗ್ ಸ್ಟೇಟಸ್ ನೋಡಬೇಕು. ಒಂದು ವೇಳೆ ಮ್ಯಾಪಿಂಗ್ ಆಗದಿದ್ದರೆ ತಕ್ಷಣವೇ ಸಂಬಂಧಪಟ್ಟ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ದಾಖಲೆ ಸಲ್ಲಿಸಿ ಮ್ಯಾಪಿಂಗ್ ಮಾಡಿಕೊಳ್ಳಬೇಕು. ಬಿಎಲ್‌ಓಗಳು ಬಂದಾಗ ಅವರಿಗೆ ಸಹಕರಿಸಬೇಕು. ಮಾಹಿತಿ ಸರಿಯಾಗಿ ದಾಖಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದರು.
ದೇಶದಲ್ಲಿ ಎಸ್‌ಐಆರ್ ಮಾಡಲು ಕೇಂದ್ರ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಕರ್ನಾಟಕದಲ್ಲಿಯೂ ಎಸ್‌ಐಆರ್ ನಡೆಯುವುದರಿಂದ ಮುಖ್ಯ ಚುನಾವಣಾಧಿಕಾರಿ ಕಚೇರಿ ಸಿದ್ದತೆ ಕೈಗೊಂಡಿದೆ. ಎಸ್‌ಐಆರ್‌ಗೂ ಮುನ್ನ ಮ್ಯಾಪಿಂಗ್ ಕೆಲಸ ಪ್ರಾರಂಭಿಸಲಾಗಿದೆ. ಪೋಷಕರ ದಾಖಲೆಗಳನ್ನು ನೀಡಿ ಮ್ಯಾಪಿಂಗ್ ಮಾಡಿಕೊಳ್ಳಬೇಕು. ಆಪ್ ಮೂಲಕವು ಮ್ಯಾಪಿಂಗ್ ಮಾಡಿಕೊಳ್ಳಬಹುದು. ಮ್ಯಾಪಿಂಗ್ ಬಗ್ಗೆ ಸಾಕಷ್ಟು ಗೊಂದಲಗಳನ್ನು ಸೃಷ್ಟಿಯಾಗಿವೆ. ಆದರೆ ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ವದಂತಿಗಳಿಗೆ ಕಿವಿಗೊಡದೆ ತಮ್ಮ ಹೆಸರುಗಳನ್ನು ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಸಾರ್ವಜನಿಕರ ಅಭಿಪ್ರಾಯ
ಮುಖ್ಯ ಚುನಾವಣಾಧಿಕಾರಿ ಕಚೇರಿ ಕೈಗೊಂಡಿರುವ ಮತದಾರರ ಮ್ಯಾಪಿಂಗ್ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ವಕೀಲ ನಾಗೇಶ್, ಬೆಂಗಳೂರಲ್ಲಿ ಮ್ಯಾಪಿಂಗ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಅರಿವಿನ ಕೊರತೆ ಇದೆ. ಮುಖ್ಯ ಚುನಾವಣಾಧಿಕಾರಿ ಕಚೇರಿಯು ಸರಿಯಾಗಿ ಪ್ರಚಾರ ಕೈಗೊಂಡಿಲ್ಲ. ಬಹುಶಃ ಇದೇ ಕಾರಣಕ್ಕಾಗಿ ಮ್ಯಾಪಿಂಗ್ ಬಗ್ಗೆ ಜನರಿಗೆ ಅರಿವಿಲ್ಲದಿರಬಹುದು. ಮ್ಯಾಪಿಂಗ್ ಕಾರ್ಯದ ಸಾಧಕ-ಬಾಧಕ ಕುರಿತು ಜನರಿಗೆ ಮಾಹಿತಿ ಇಲ್ಲ. ಮೊದಲು ಈ ಬಗ್ಗೆ ತಿಳಿಸಿಕೊಡಬೇಕಾದ ಅಗತ್ಯ ಇದೆ. ಮ್ಯಾಪಿಂಗ್‌ನಲ್ಲಿ ಹೊಂದಾಣಿಕೆಯಾಗದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗುತ್ತದೆ ಎಂಬ ವದಂತಿಗಳು ಕೇಳಿಬರುತ್ತಿವೆ. ಜನತೆಯಲ್ಲಿನ ಗೊಂದಲಗಳನ್ನು ನಿವಾರಣೆ ಮಾಡುವುದು ಆಯೋಗದ ಜವಾಬ್ದಾರಿಯಾಗಿದೆ. ಅನಗತ್ಯವಾಗಿ ಜನರು ಸಹ ಆತಂಕಕ್ಕೊಳಗಾಗುವ ಅಗತ್ಯ ಇಲ್ಲ. ಸರಿಯಾದ ಮಾಹಿತಿಗಳನ್ನು ಆಯೋಗಕ್ಕೆ ಸಲ್ಲಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದರು.
ಬೆಂಗಳೂರಿನ ನಿವಾಸಿ ರಜಿಯಾ ಮಾತನಾಡಿ, ಎಸ್‌ಐಆರ್ ಮೂಲಕ ಮುಸ್ಲಿಂ ಸಮುದಾಯದ ಹೆಸರನ್ನು ತೆಗೆದು ಹಾಕುವ ರಾಜಕೀಯ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ವದಂತಿಯ ಸತ್ಯಾಸತ್ಯತೆ ಬಗ್ಗೆ ಆಯೋಗವು ಸ್ಪಷ್ಟಪಡಿಸಬೇಕು ಮತ್ತು ಜನರು ಸಹ ಜಾಗೃತರಾಗಬೇಕು. ಎಸ್‌ಐಆರ್ ಮುನ್ನ ಮ್ಯಾಪಿಂಗ್ ಮಾಡಲಾಗುತ್ತಿದೆ ಎಂಬ ಮಾಹಿತಿ ಗೊತ್ತಾಗಿದೆ. ಈಗಾಗಲೇ ಎಸ್‌ಐಆರ್ ಮಾಡಿರುವ ರಾಜ್ಯಗಳಲ್ಲಿ ಕೈಬಿಟ್ಟ ಮತದಾರರಲ್ಲಿ ಮುಸ್ಲಿಮರು ಹೆಚ್ಚಾಗಿ ಎಂದು ಹೇಳಲಾಗಿದೆ. ಒಂದು ವೇಳೆ ಮುಸ್ಲಿಮರೇ ಗುರಿಯಾಗಿದ್ದರೆ ಇಂತಹ ರಾಜಕಾರಣ ಆತಂಕಕಾರಿಯಾಗಿದೆ ಎಂದು ತಿಳಿಸಿದರು.

