
ಒಪಿಎಸ್ ಮರುಜಾರಿಗೆ ಸರ್ಕಾರಿ ನೌಕರರ ಪಟ್ಟು; ಸರ್ಕಾರಕ್ಕೆ ಆರ್ಥಿಕ ಹೊರೆಯ ಇಕ್ಕಟ್ಟು
2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಒಪಿಎಸ್ ಮರು ಜಾರಿಯ ಭರವಸೆ ನೀಡಿತ್ತು. ಈಗ ಸರ್ಕಾರ ಎರಡೂವರೆ ವರ್ಷ ಪೂರೈಸಿದರೂ ಒಪಿಎಸ್ ಮರು ಜಾರಿ ಮಾಡದಿರುವುದು ನೌಕರರ ತಾಳ್ಮೆಯ ಕಟ್ಟೆಯೊಡೆಯುವಂತೆ ಮಾಡಿದೆ.
ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗಾಗಿ ರಾಜ್ಯ ಸರ್ಕಾರಿ ನೌಕರರು ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಅಣಿಯಾಗುತ್ತಿರುವುದು ರಾಜ್ಯ ಸರ್ಕಾರಕ್ಕೆ ತಲೆನೋವು ತಂದೊಡ್ಡಿದೆ.
ಒಪಿಎಸ್ ಮರು ಜಾರಿ ಕುರಿತು ವಿವಿಧ ರಾಜ್ಯಗಳಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಹೆಚ್ಚುವರಿ ಕಾರ್ಯದರ್ಶಿ ಉಮಾ ಮಹಾದೇವನ್ ನೇತೃತ್ವದ ಸಮಿತಿ ರಚಿಸಲಾಗಿತ್ತು. ಸಮಿತಿ ರಚನೆಯಾಗಿ ಬರೋಬ್ಬರಿ ಮೂರು ವರ್ಷ ಕಳೆದರೂ ವರದಿ ಸಲ್ಲಿಕೆಯಾಗದ ಕಾರಣ ಅಸಮಾಧಾನಗೊಂಡಿರುವ ನೌಕರರು, ತಿಂಗಳೊಳಗೆ ವರದಿ ನೀಡುವಂತೆ ಸಮಿತಿಗೆ ಗಡುವು ನೀಡಿದ್ದಾರೆ. ಒಂದು ವೇಳೆ ವರದಿ ಬಿಡುಗಡೆ ಮಾಡದಿದ್ದರೆ ಕೆಲಸ ಬಹಿಷ್ಕರಿಸುವ ಎಚ್ಚರಿಕೆ ನೀಡಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಒಪಿಎಸ್ ಮರು ಜಾರಿಯ ಭರವಸೆ ನೀಡಿತ್ತು. ಈಗ ಸರ್ಕಾರ ಎರಡೂವರೆ ವರ್ಷ ಪೂರೈಸಿದರೂ ಒಪಿಎಸ್ ಮರು ಜಾರಿ ಮಾಡದಿರುವುದು ನೌಕರರ ತಾಳ್ಮೆಯ ಕಟ್ಟೆಯೊಡೆಯುವಂತೆ ಮಾಡಿದೆ. ಈ ಮಧ್ಯೆ, ಒಪಿಎಸ್ ಮರು ಜಾರಿಯಿಂದ ಆಗುವ ಸಾಧಕ-ಭಾದಕಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಒಪಿಎಸ್ ಮರು ಜಾರಿಯಿಂದ ರಾಜ್ಯಗಳ ಆರ್ಥಿಕತೆ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಎನ್ಪಿಎಸ್ಗೆ ಹೋಲಿಕೆ ಮಾಡಿದರೆ ಒಪಿಎಸ್ನಿಂದ ಶೇ 4.5 ಪಟ್ಟು ಆರ್ಥಿಕ ಹೊರೆಯಾಗಲಿದೆ. 2060ರ ವೇಳೆಗೆ ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ(ಜಿಡಿಪಿ) ಪಿಂಚಣಿಗಾಗಿಯೇ ಶೇ 0.9 ರಷ್ಟು ಹೆಚ್ಚುವರಿ ಪಾಲು ತೆಗೆದಿರಿಸಬೇಕಾಗಿದೆ ಎಂದು ಆರ್‌ಬಿಐ ಅಂದಾಜಿಸಿದೆ.
ಒಪಿಎಸ್‌ನಿಂದ ಹೆಚ್ಚುವರಿ ಹೊರೆ
ಕೇಂದ್ರ ಸರ್ಕಾರ ತನ್ನ ನೌಕರರ ವೇತನ ಪರಿಷ್ಕರಣೆಗಾಗಿ ಎಂಟನೇ ವೇತನ ಆಯೋಗ ರಚಿಸಿದೆ. ಕರ್ನಾಟಕದಲ್ಲಿ ಏಳನೇ ವೇತನ ಆಯೋಗದ ವರದಿಯನ್ನು ಭಾಗಶಃ ಜಾರಿ ಮಾಡಲಾಗಿದೆ.
ಇನ್ನೂ ಹಲವು ಶಿಫಾರಸುಗಳ ಜಾರಿ ಬಾಕಿ ಉಳಿದಿದೆ. ಈಗ ಕೇಂದ್ರ ಸರ್ಕಾರವು ಎಂಟನೇ ವೇತನ ಆಯೋಗ ರಚಿಸಿರುವುದರಿಂದ ಅನಿವಾರ್ಯವಾಗಿ ರಾಜ್ಯ ಸರ್ಕಾರ ಕೂಡ ಹೊಸ ವೇತನ ಆಯೋಗ ರಚಿಸಬೇಕಾಗಿದೆ.
ರಾಜ್ಯದಲ್ಲಿ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಗಳನ್ನು ಸರ್ಕಾರ ಪರಿಷ್ಕರಿಸಿದೆ. ಮೂಲ ವೇತನ ಮತ್ತು ಪಿಂಚಣಿಗಳಲ್ಲಿ ಶೇ.58.5 ರಷ್ಟು ಹೆಚ್ಚಳವಾಗಿದೆ. 2025-26ರಲ್ಲಿ ಸರ್ಕಾರಿ ನೌಕರರ ವೇತನಕ್ಕಾಗಿ ಸುಮಾರು 85,860 ಕೋಟಿ ರೂ. ವ್ಯಯಿಸಲಾಗುತ್ತಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.19ರಷ್ಟು ಹೆಚ್ಚಳವಾಗಿದೆ. ನಿವೃತ್ತ ನೌಕರರ ಪಿಂಚಣಿಗಾಗಿ ಸುಮಾರು 37,655 ಕೋಟಿ ರೂ. ಮೀಸಲಿಡಲಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.25ರಷ್ಟು ಅಧಿಕವಾಗಿದೆ.
ವೇತನ, ಪಿಂಚಣಿ ಮತ್ತು ಬಡ್ಡಿ ಪಾವತಿ ಸೇರಿದಂತೆ ಒಟ್ಟು ವೆಚ್ಚವು 1,69,115 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈಗ ರಾಜ್ಯದಲ್ಲಿರುವ 5.70 ಲಕ್ಷ ಸರ್ಕಾರಿ ನೌಕರರ ಪೈಕಿ ಬಹುತೇಕರು ಹಳೆ ಪಿಂಚಣಿ ವ್ಯವಸ್ಥೆಗೆ ಪಟ್ಟು ಹಿಡಿದಿದ್ದಾರೆ. ಇದರಿಂದ ವೇತನ, ಪಿಂಚಣಿ ಮೊತ್ತ ಹೆಚ್ಚಲಿದ್ದು, ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲಿದೆ.
ಗ್ಯಾರೆಂಟಿಗಳಿಗೆ ಹಣ ಒದಗಿಸಲು ತಿಣುಕಾಟ
ರಾಜ್ಯ ಸರ್ಕಾರ ಘೋಷಿಸಿರುವ ಪಂಚ ಗ್ಯಾರೆಂಟಿ ಯೋಜನೆಗಳಿಗೆ ಹಣ ಒದಗಿಸಲು ತಿಣುಕಾಡುತ್ತಿದೆ. ಗ್ಯಾರೆಂಟಿ ಯೋಜನೆಗಳಿಗಾಗಿ ವಾರ್ಷಿಕ 60 ಸಾವಿರ ಕೋಟಿ ವ್ಯಯಿಸುತ್ತಿದೆ. ಹಲವು ನಿಗಮ, ಯೋಜನೆಗಳ ಅನುದಾನವನ್ನು ಈ ಯೋಜನೆಗಳಿಗಾಗಿ ವಿನಿಯೋಗಿಸುತ್ತಿದೆ. ಹೀಗಿರುವಾಗ ಒಪಿಎಸ್ ಮರು ಜಾರಿ ಮಾಡಿದರೆ ಪಿಂಚಣಿ ಹಣಕ್ಕಾಗಿ ಪರದಾಡಬೇಕಾಗುತ್ತದೆ.
ಹಳೆಯ ಪಿಂಚಣಿ ಯೋಜನೆ ಜಾರಿಗೆ ತಂದರೆ 2030ರ ವೇಳೆಗೆ ಹೆಚ್ಚಿನ ರಾಜ್ಯಗಳಲ್ಲಿ ಪಿಂಚಣಿ ಹೊರೆಯು ಅಧಿಕವಾಗಲಿದೆ. 2060ರ ವೇಳೆಗೆ ಹೆಚ್ಚುವರಿ ಒಪಿಎಸ್ ಹೊರೆಯು ವಾರ್ಷಿಕ ಜಿಡಿಪಿಯ ಶೇ 0.9 ರಷ್ಟಕ್ಕೆ ಏರಿಕೆಯಾಗಲಿದೆ ಎನ್ನಲಾಗಿದೆ.
“2018 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಒಪಿಎಸ್ ಮರು ಪರಿಶೀಲನಾ ಸಮಿತಿ ರಚಿಸಲಾಗಿತ್ತು. ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಯಂತೆ ನಾವು ಬೇಡಿಕೆ ಇಟ್ಟಿದ್ದೇವೆ. ಈಗ ವೃಥಾ ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಉಮಾ ಮಹಾದೇವನ್ ಅವರಿಗೆ ಮನವಿ ಮಾಡಿದ್ದೇವೆ” ಎಂದು ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ್ ತೇಜಾ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಕೇರಳ, ತಮಿಳುನಾಡಿನಲ್ಲಿ ಒಪಿಎಸ್ ಸಮಿತಿಗಳು ಎನ್‌ಪಿಎಸ್ ಯೋಜನೆ ಪರಿಷ್ಕರಿಸಿವೆ. ಆದರೆ, ಒಪಿಎಸ್ ಮರು ಜಾರಿ ಮಾಡಿಲ್ಲ. ಹಾಗಾಗಿ ನಾವು ಸಮಿತಿ ನೇಮಕವನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದೇವೆ. 2006 ಏಪ್ರಿಲ್ ಗಿಂತ ಹಿಂದೆ ಚಾಲ್ತಿಯಲ್ಲಿದ್ದ ಹಳೆ ಪಿಂಚಣಿ ಯೋಜನೆಯನ್ನೇ ಮರು ಜಾರಿ ಮಾಡಬೇಕು. ನಿವೃತ್ತಿಯ ನಂತರ ನೌಕರರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸಬೇಕು ಎಂಬುದು ಸಂಘದ ಏಕಮಾತ್ರ ಬೇಡಿಕೆಯಾಗಿದೆ ಎಂದು ತಿಳಿಸಿದರು.
2006 ಏಪ್ರಿಲ್ ಗಿಂತ ಹಿಂದೆ ನೇಮಕಾತಿ ಅಧಿಸೂಚನೆಗಳು ಪ್ರಕಟವಾಗಿ 2006 ರ ನಂತರ ನೇಮಕಗೊಂಡ ಸುಮಾರು 13 ಸಾವಿರ ಸರ್ಕಾರಿ ನೌಕರರನ್ನು ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ 2024 ಜನವರಿ ಸರ್ಕಾರ ಆದೇಶಿಸಿತ್ತು. ಇದರಿಂದ ಒಪಿಎಸ್ ವ್ಯಾಪ್ತಿಗೆ ಒಳಪಡಲಿರುವ ನೌಕರರ ಸಂಖ್ಯೆ ಹೆಚ್ಚಾಗಿದೆ. ಈ ಎಲ್ಲಾ ನೌಕರರಿಗೂ ನಿವೃತ್ತಿ ನಂತರ ಪಾವತಿಸಬೇಕಾದ ಭತ್ಯೆಗಳು, ಆರ್ಥಿಕ ಮಿತಿಗಳ ಕುರಿತು ಒಪಿಎಸ್ ಪರಿಶೀಲನಾ ಸಮಿತಿ ಅಧ್ಯಯನ ನಡೆಸಿದೆ.
ಎಲ್ಲೆಲ್ಲಿ ಒಪಿಎಸ್ ಮರು ಜಾರಿ?
ಒಪಿಎಸ್ ಅಥವಾ ಎನ್‌ಪಿಎಸ್ ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ರಾಜ್ಯಗಳಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಜಸ್ಥಾನ, ಪಂಜಾಬ್, ಛತ್ತೀಸಗಢ ಹಾಗೂ ಹಿಮಾಚಲ ಪ್ರದೇಶ ಎನ್‌ಪಿಎಸ್ ವ್ಯವಸ್ಥೆಯಿಂದ ಒಪಿಎಸ್‌ಗೆ ಮರಳಿವೆ.
2004 ಜನವರಿ 1 ರಂದು ಕೇಂದ್ರ ಸರ್ಕಾರ ಒಪಿಎಸ್ ವ್ಯವಸ್ಥೆ ರದ್ದುಪಡಿಸಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಜಾರಿಗೆ ತಂದಿತ್ತು. ಇದರನ್ವಯ ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಎನ್‌ಪಿಎಸ್‌ಗೆ ಒಳಪಟ್ಟಿದ್ದರು. ಎನ್‌ಪಿಎಸ್ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಏಕೀಕೃತ ಪಿಂಚಣಿ ಯೋಜನೆಯನ್ನು (ಯುಪಿಎಸ್) ಕೇಂದ್ರ ಸರ್ಕಾರ ಘೋಷಿಸಿತ್ತು. 2025 ಏಪ್ರಿಲ್ 1ರಿಂದ ನೌಕರರು ಎನ್‌ಪಿಎಸ್ ಅಥವಾ ಯುಪಿಎಸ್ ನಲ್ಲಿ ಮುಂದುವರಿಯುವ ಕುರಿತು ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ.
ಇನ್ನು ರಾಜ್ಯದಲ್ಲಿ ಏಪ್ರಿಲ್ 2006ರಿಂದ ಎನ್‌ಪಿಎಸ್ ಜಾರಿಗೊಳಿಸಿದ್ದು, 2006 ಏಪ್ರಿಲ್ ನಂತರ ಸರ್ಕಾರಿ ನೌಕರಿಗೆ ಸೇರಿದವರು ಎನ್‌ಪಿಎಸ್ ಒಳಪಡುತ್ತಾರೆ. 2006ಕ್ಕೂ ಹಿಂದೆ ಸರ್ಕಾರಿ ನೌಕರಿಗೆ ಸೇರಿದವರು ಒಪಿಎಸ್‌ಗೆ ಒಳಪಟ್ಟಿದ್ದಾರೆ. ಪ್ರಸ್ತುತ, ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆಗೆ ಒಳಪಟ್ಟವರ ಸಂಖ್ಯೆ ಸುಮಾರು 2,29,497 ಮಂದಿ ನೌಕರರಿದ್ದಾರೆ. ಎನ್‌ಪಿಎಸ್‌ಗೆ ಒಳಪಟ್ಟವರ ಸಂಖ್ಯೆ ಸುಮಾರು 2,82,536 ಇದೆ.
ಒಪಿಎಸ್-ಎನ್‌ಪಿಎಸ್ ವ್ಯತ್ಯಾಸವೇನು?
ಹಳೆ ಪಿಂಚಣಿ ಯೋಜನೆಯಡಿ ನಿವೃತ್ತ ನೌಕರರು ತಾವು ಪಡೆದ ಅಂತಿಮ ವೇತನದ ಶೇ 50ರಷ್ಟನ್ನು ಮಾಸಿಕ ಪಿಂಚಣಿಯಾಗಿ ಪಡೆಯಲಿದ್ದಾರೆ. ತುಟ್ಟಿ ಭತ್ಯೆ ಹೆಚ್ಚಳವಾದಂತೆ ಪಿಂಚಣಿ ಮೊತ್ತವೂ ಹೆಚ್ಚಾಗಲಿದೆ.
ಹೊಸ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್) ನೌಕರರು ವಂತಿಗೆ ನೀಡಬೇಕು. ಉದ್ಯೋಗದಲ್ಲಿರುವಾಗಲೇ ನೌಕರರು ತಮ್ಮ ವೇತನದ ಒಂದಿಷ್ಟು ಪ್ರಮಾಣವನ್ನು ವಂತಿಗೆ ರೂಪದಲ್ಲಿ ನೀಡಬೇಕು. ಈ ಹಣವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹಾಗೂ ಉಳಿತಾಯದ ರೂಪದಲ್ಲಿ ಇರಲಿದೆ.
ಉದಾಹರಣೆಗೆ ಎನ್ಪಿಎಸ್ ಯೋಜನೆಯಲ್ಲಿ ಸರ್ಕಾರಿ ನೌಕರರು ಪಿಂಚಣಿ ನಿಧಿಗೆ ವೇತನದ ಶೇ 10ರಷ್ಟು ಕೊಡುಗೆ ನೀಡಿದರೆ, ಉದ್ಯೋಗಿಯ ಎನ್ಪಿಎಸ್ ಖಾತೆಗೆ ಸರ್ಕಾರವು ಶೇ 14ರಷ್ಟು ವಂತಿಗೆ ಪಾವತಿಸಲಿದೆ. ನೌಕರರ ನಿವೃತ್ತಿಯ ನಂತರ ಷೇರು ಮಾರುಕಟ್ಟೆ ಆಧರಿಸಿ ಪಿಂಚಣಿ ನಿರ್ಧಾರವಾಗಲಿದೆ.
ಸರ್ಕಾರಿ ನೌಕರರ ಸಂಘದ ವಾದವೇನು?
ರಾಜ್ಯ ಸರ್ಕಾರ ವಾರ್ಷಿಕ 2,500 ಕೋಟಿ ರೂ. ಎನ್‌ಪಿಎಸ್ ನಿಧಿಗೆ ವಂತಿಗೆ ನೀಡುತ್ತಿದೆ. 2006ರಲ್ಲಿ ಎನ್‌ಪಿಎಸ್ ಜಾರಿಯಾದ ಬಳಿಕ ಸುಮಾರು 30 ಸಾವಿರ ಕೋಟಿ ರೂ. ಸಂಚಿತ ನಿಧಿ ಹೊಂದಿದೆ. ಇದರಲ್ಲಿ ಶೇ 60 ರಷ್ಟು ಹಣವನ್ನು ನೌಕರರು ವಿತ್ ಡ್ರಾ ಮಾಡಬಹುದು. ಉಳಿದ ಶೇ 40 ರಷ್ಟು ಹಣವು ಷೇರು ಮಾರುಕಟ್ಟೆಯಲ್ಲೇ ಇರಲಿದೆ.
ರಾಜ್ಯದಲ್ಲಿ ಖಾಲಿ ಇರುವ 2,76,386 ಹುದ್ದೆಗಳಿಂದ ವಾರ್ಷಿಕ 1,914.68 ಕೋಟಿ ರೂ. ಎನ್‌ಪಿಎಸ್ ವಂತಿಗೆ ಉಳಿತಾಯವಾಗುತ್ತಿದೆ. ಅದೇ ರೀತಿ ಪ್ರತಿ ತಿಂಗಳ ವೇತನ ಮತ್ತು ಭತ್ಯೆಗಳ ಮೊತ್ತ ಅಂದಾಜು 15,590 ಕೋಟಿ ಉಳಿತಾಯ ಆಗುತ್ತಿದೆ. ವೆಚ್ಚಗಳು ಸೇರಿ ಎಲ್ಲ ಖರ್ಚುಗಳಿಂದ ವಾರ್ಷಿಕ ಸರ್ಕಾರಕ್ಕೆ 1,87,080 ಕೋಟಿ ಉಳಿಯುತ್ತಿದೆ. ಪ್ರಸ್ತುತ, ಕಾರ್ಯನಿರ್ವಹಿಸುತ್ತಿರುವ ಎನ್‌ಪಿಎಸ್ ನೌಕರರಲ್ಲಿ ಬಹುತೇಕರು 15 ರಿಂದ 20 ವರ್ಷಗಳಲ್ಲಿ ನಿವೃತ್ತಿ ಆಗಲಿದ್ದಾರೆ. ಹಳೆ ಪಿಂಚಣಿ ಯೋಜನೆ ಜಾರಿಯಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆ ಆಗುವುದಿಲ್ಲ ಎಂಬುದು ಸರ್ಕಾರಿ ನೌಕರರ ಸಂಘದ ಅಭಿಪ್ರಾಯವಾಗಿದೆ.

