Film Chamber Election: Shaka Muniratna to B.K. Hariprasad call; Is the Jayamala road smooth?
x

ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌, ನಟಿ ಜಯಮಾಲ ಹಾಗೂ ಶಾಸಕ ಮುನಿರತ್ನ 

ಫಿಲ್ಮ್ ಚೇಂಬರ್ ಚುನಾವಣೆ: ಶಾಸಕ ಮುನಿರತ್ನಗೆ ಬಿ.ಕೆ. ಹರಿಪ್ರಸಾದ್ ಕರೆ; ಜಯಮಾಲ ಹಾದಿ ಸುಗಮ?

ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ತಮ್ಮ ಶಿಷ್ಯ, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರಿಗೆ ಕರೆಮಾಡಿ ನಾಮಪತ್ರ ವಾಪಸ್‌ ಪಡೆಯುವಂತೆ ಸಲಹೆ ನೀಡಿದ್ದಾರೆ. ಇದರಿಂದ ನಟಿ ಜಯಮಾಲ ಅಧ್ಯಕ್ಷೆಯಾಗುವುದು ಬಹುತೇಕ ಖಚಿತವಾಗಿದೆ.


Click the Play button to hear this message in audio format

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನದ ಚುನಾವಣೆ ದಿನೇ ದಿನೇ ರಂಗೇರುತ್ತಿದೆ. ಚುನಾವಣೆಗೆ ಮುನ್ನ ಕಾಂಗ್ರೆಸ್​ ಹಿರಿಯ ನಾಯಕ ಬಿ .ಕೆ ಹರಿಪ್ರಸಾದ್ ಅವರು ಮುನಿರತ್ನ ಅವರಿಗೆ ನಾಮಪತ್ರ ವಾಪಸ್ ಪಡೆಯುವಂತೆ ಕರೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟಿ ಜಯಮಾಲ ಅರ್ಜಿ ಸಲ್ಲಿಸಿದ್ದು, ಅವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹರಿಪ್ರಸಾದ್‌ ತಮ್ಮ ಶಿಷ್ಯ, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರಿಗೆ ಕರೆಮಾಡಿ ನಾಮಪತ್ರ ವಾಪಸ್‌ ಪಡೆಯುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ನಟಿ ಜಯಮಾಲ ಅಧ್ಯಕ್ಷೆಯಾಗುವುದು ಬಹುತೇಕ ಖಚಿತ ಎನಿಸಿದೆ.

ನಾಮಪತ್ರ ವಾಪಸ್ ಪಡೆಯಲು ಶುಕ್ರವಾರ(ಜ.23) ಕೊನೆಯ ದಿನವಾಗಿದ್ದು, ಜ.31ರಂದು ಚುನಾವಣೆ ನಡೆಯಲಿದೆ. ಹಾಲಿ ಶಾಸಕರಾಗಿ ರಾಜಕೀಯದಲ್ಲಿರುವ ಕಾರಣ ನಾಮಪತ್ರ ವಾಪಸ್ ಪಡೆಯುವಂತೆ ದೆಹಲಿಯಿಂದಲೇ ದೂರವಾಣಿ ಮೂಲಕ ಮುನಿರತ್ನ ಅವರಿಗೆ ಬಿ.ಕೆ. ಹರಿಪ್ರಸಾದ್‌ ಸಲಹೆ ನೀಡಿದ್ದು, ಶಾಸಕರೂ ಸಕಾರಾತ್ಮಕವಾಗಿ ಸ್ಪಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ನಿರ್ಮಾಪಕರ ವಲಯಕ್ಕೆ ಮೀಸಲಾಗಿದ್ದ ಕಾರಣ ಶಾಸಕ ಮುನಿರತ್ನ, ಭಾ.ಮಾ ಹರೀಶ್, ನಟಿ ಜಯಮಾಲಾ ಹಾಗೂ ಚಿಂಗಾರಿ ಮಹಾದೇವ್ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. 2024ರಲ್ಲಿ ಪ್ರದರ್ಶಕ ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದಾಗ ಎಂ. ನರಸಿಂಹಲು ಅಧ್ಯಕ್ಷರಾಗಿದ್ದರು.

ಮಂಡಳಿ ಇತಿಹಾಸ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಕನ್ನಡ ಚಿತ್ರರಂಗದ ಏಳಿಗೆ, ನಿರ್ವಹಣೆ ಮತ್ತು ಹಿತರಕ್ಷಣೆಗಾಗಿ ಶ್ರಮಿಸುತ್ತಿರುವ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಸಂಸ್ಥೆಯಾಗಿದೆ. ಇದನ್ನು ಮೊದಲು 1944 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಪ್ರಾರಂಭದಲ್ಲಿ ಇದನ್ನು "ಮೈಸೂರು ಸ್ಟೇಟ್ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್" ಎಂದು ಕರೆಯಲಾಗುತ್ತಿತ್ತು. ಇದು ಚೆನ್ನೈನಲ್ಲಿರುವ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ (SIFCC) ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಮಂಡಳಿಯ ಪ್ರಮುಖ ವಲಯಗಳು

ವಾಣಿಜ್ಯ ಮಂಡಳಿಯ ಕಾರ್ಯವೈಖರಿಯನ್ನು ಸುಗಮಗೊಳಿಸಲು ಮೂರು ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಿನಿಮಾ ತಯಾರಿಸುವವರ ಹಿತರಕ್ಷಣೆಗಾಗಿ ನಿರ್ಮಾಪಕರ ವಲಯ, ಸಿನಿಮಾವನ್ನು ಮಾರುಕಟ್ಟೆಗೆ ತಲುಪಿಸುವವರ ಜವಾಬ್ದಾರಿಗಾಗಿ ವಿತರಕರ ವಲಯ ಹಾಗೂ ಚಿತ್ರಮಂದಿರಗಳ ಮಾಲೀಕರ ಸಮಸ್ಯೆಯನ್ನು ಆಲಿಸಲು ಪ್ರದರ್ಶಕರ ವಲಯ ಮಾಡಲಾಗಿದೆ.

ಪ್ರಮುಖ ಚಳುವಳಿಗಳು

1980ರ ದಶಕದಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಮುಖ ಪಾತ್ರ ವಹಿಸಿತ್ತು. ವರನಟ ಡಾ. ರಾಜ್‌ಕುಮಾರ್ ಅವರ ನೇತೃತ್ವದಲ್ಲಿ ಇಡೀ ಚಿತ್ರರಂಗವೇ ಬೀದಿಗಿಳಿದು ಕನ್ನಡ ಭಾಷೆಗಾಗಿ ಹೋರಾಡಲು ಈ ವೇದಿಕೆ ಕಾರಣವಾಗಿತ್ತು.

ಅದೃಷ್ಟ ಪರೀಕ್ಷೆಗಿಳಿದ ಜಯಮಾಲ, ಭಾ.ಮಾ. ಹರೀಶ್‌

2008ರಲ್ಲಿ ಹಿರಿಯ ನಟಿ ಜಯಮಾಲ ಅವರು ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಭಾರತದ ಯಾವುದೇ ಫಿಲ್ಮ್ ಚೇಂಬರ್‌ನ ಅಧ್ಯಕ್ಷರಾದ ಮೊದಲ ಮಹಿಳೆ ಎಂಬ ದಾಖಲೆ ನಿರ್ಮಿಸಿದ್ದರು. ಭಾ ಮಾ. ಹರೀಶ್‌ ಅವರೂ 2022ರಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಇದೀಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

Read More
Next Story