
ಖರ್ಗೆ ಕರ್ನಾಟಕ ಬಿಡದಿದ್ದರೆ ಬಿಜೆಪಿ ಸೇರುವುದಾಗಿ ಸಿದ್ದರಾಮಯ್ಯ ಬೆದರಿಸಿದ್ದರು: ಹೆಚ್‌ಡಿಕೆ
ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣ ಬಿಡಲು ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ
ಕಾಂಗ್ರೆಸ್ ವಿರುದ್ಧ ಮತ್ತೆ ಬಿರುಸಿನ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣದಿಂದ ದೂರ ಸರಿಯಲು ಸಿದ್ಧರಾಮಯ್ಯ ಅವರೇ ಕಾರಣ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಸಿದ್ದರಾಮಯ್ಯರವರು ಯಾವ ನಾಯಕರು ಬೆಳೆಯುವುದನ್ನು ಸಹಿಸುವುದಿಲ್ಲ ಎಂದು ಹೇಳಿರುವ ಅವರು, “ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದಿಂದ ಜಾಗ ಖಾಲಿ ಮಾಡದೇ ಇದ್ದರೆ ಬಿಜೆಪಿಗೆ ಹೋಗುವುದಾಗಿ ಸಿದ್ದರಾಮಯ್ಯರವರು ಕಾಂಗ್ರೆಸ್ ಹೈಕಮಾಂಡಿಗೆ ಬೆದರಿಕೆ ಹಾಕಿದ್ದರು” ಎಂದು ಹೇಳಿದ್ದಾರೆ.
ಒಕ್ಕಲಿಗ ಸಮಾಜದ ಏಳಿಗೆಯನ್ನೂ ಸಿದ್ದರಾಮಯ್ಯ ಅವರು ಸಹಿಸುತ್ತಿಲ್ಲ ಎಂದ ಕುಮಾರಸ್ವಾಮಿ, “ತಮಗೆ ಮುಖ್ಯಮಂತ್ರಿಯಾಗಲು ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕಾಗಿ ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು” ಎಂದು ಪ್ರಶ್ನಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧವೂ ಹರಿಹಾಯ್ದ ಕುಮಾರಸ್ವಾಮಿ, “ಮಂಡ್ಯದ ಮತದಾರರ ಮುಂದೆ ಡಿಕೆ ಶಿವಕುಮಾರ್ ಥೈಲಿ ಕೆಲಸ ಮಾಡಲ್ಲ, ಹಣದ ಮದದಿಂದ ಅವರು ನನ್ನನ್ನು ಸೋಲಿಸಬಹುದು ಅಂದುಕೊಂಡಿದ್ದಾರೆ. ಆದರೆ, ನನ್ನ ಸೋಲು ಗೆಲುವು ಮತದಾರರ ಕೈಯಲ್ಲಿದೆ, ಶಿವಕುಮಾರ್ ಅದನ್ನು ನಿರ್ಧರಿಸಲಾಗುವುದಿಲ್ಲ” ಎಂದು ಹೇಳಿದ್ದಾರೆ.
ಶಿವಕುಮಾರ್ ತಾನು ಒಕ್ಕಲಿಗರ ರಕ್ಷಣೆಗೆ ನಿಂತಿದ್ದೇನೆ, ಒಕ್ಕಲಿಗರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುತ್ತೇನೆ ಎಂದು ಹೇಳುತ್ತಾರೆ. ಅಂದರೆ ಅವರ ಮಾತಿನ ಅರ್ಥವೇನು? ಸಿದ್ದರಾಮಯ್ಯ ಸರ್ಕಾರದಿಂದ ಒಕ್ಕಲಿಗರಿಗೆ ಅನ್ಯಾಯವಾಗುತ್ತಿದೆ ಎಂದು ಅವರೇ ಒಪ್ಪಿಕೊಂಡಂತಾಗಿದೆ. ಒಕ್ಕಲಿಗರಿಗೆ ಸಿದ್ದರಾಮಯ್ಯರವರಿಂದ ರಕ್ಷಣೆ ಸಿಕ್ಕಿಲ್ಲ. ಅವರಿಂದ ಅನ್ಯಾಯವಾಗಿದೆ ಎಂಬುದನ್ನು ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಮುಖ್ಯಮಂತ್ರಿಗಳಿಂದಲೇ ಅನ್ಯಾಯವಾಗಿದೆ ಎಂಬುದು ಶಿವಕುಮಾರ್ ಅವರ ಮಾತಿನ ಅರ್ಥ. ಅವರ ಸರ್ಕಾರ ಅಧಿಕಾರದಲ್ಲಿರುವಾಗಲೇ ಒಕ್ಕಲಿಗರ ಸುರಕ್ಷತೆ ಬಗ್ಗೆ ಅವರು ಮಾತಾಡುತ್ತಾರೆ ಅಂದರೆ, ಅವರಿಂದ ಹೇಗೆ ರಕ್ಷಣೆಯಾದೀತು ಅನ್ನೋದನ್ನು ಒಕ್ಕಲಿಗರು ಯೋಚಿಸುತ್ತಾರೆ. ಈ ಬಾರಿ 80-85 ಶೇಕಡಾ ಒಕ್ಕಲಿಗರು ಮೈತ್ರಿ ಪರವಾಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ರಚನೆಯಾದ ಆರಂಭದಲ್ಲೇ ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ ಶಿವಕುಮಾರ್ ನಡುವೆ ಕಲಹ ಯಾವ ವಿಷಯಕ್ಕೆ ನಡೆಯಿತು ಎಂದು ಸ್ಪಷ್ಟಪಡಿಸಬೇಕು ಎಂದು ಹೇಳಿದ ಅವರು, “1996 ರಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ಸಿಂಧ್ಯಾ ಅವರಿಗೆ ತಾವು ಕಪಾಳಮೋಕ್ಷ ಮಾಡಿದ್ದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಇಂತಹ ರಾಜಕಾರಣ ಶಿವಕುಮಾರ್‌ರವರಿಗೆ ರಕ್ತಗತವಾಗಿದೆ. ಸುಳ್ಳು ಹೇಳಿಕೊಂಡೇ ರಾಜಕಾರಣ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.