
ನನಗೆ ಗುಂಡು ಹಾರಿಸಲು ತಯಾರಾಗಿ: ಈಶ್ವರಪ್ಪಗೆ ಡಿಕೆ ಸುರೇಶ್ ಸವಾಲು
ದೇಶ ವಿಭಜನೆ ಹೇಳಿಕೆ ಕೊಡುತ್ತಿರುವ ಡಿಕೆ ಸುರೇಶ್‌ರಿಗೆ ಗುಂಡು ಹಾರಿಸಲು ಅವಕಾಶ ಕೊಡುವ ಕಾನೂನು ತರಬೇಕು ಎಂದು ಕರೆ ಕೊಟ್ಟಿದ್ದ ಕೆಎಸ್ ಈಶ್ವರಪ್ಪರಿಗೆ ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ,
ಬೆಂಗಳೂರು: ತನ್ನ ಮೇಲೆ ಗುಂಡು ಹಾರಿಸಲು ಇನ್ನೊಬ್ಬರಿಗೆ ಕಾಯುವ ಬದಲು ನೀವೇ ನನ್ನ ಮೇಲೆ ಗುಂಡು ಹಾರಿಸಿ ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರಿಗೆ ಸವಾಲು ಹಾಕಿದ್ದಾರೆ.
ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರವಾಗಬೇಕು ಎಂದು ಆಗ್ರಹಿಸುತ್ತಿರುವ ಡಿಕೆ ಸುರೇಶ್ ಹಾಗೂ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಂತಹ ದೇಶದ್ರೋಹಿಗಳನ್ನು ಹೊಡೆದುರುಳಿಸಲು ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು ಎಂದು ಈಶ್ವರಪ್ಪ ಅವರು ಗುರುವಾರ ದಾವಣಗೆರೆಯಲ್ಲಿ ಹೇಳಿದ್ದರು.
ಈಶ್ವರಪ್ಪ ಹೇಳಿಕೆಗೆ ದಾವಣಗೆರೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ನೋಟಿಸ್ ಜಾರಿ ಮಾಡಲಾಗಿದೆ.
ಬೇರೆಯವರು ಯಾಕೆ ನನ್ನ ಮೇಲೆ ಗುಂಡು ಹಾರಿಸಬೇಕು, ನೀವು (ಈಶ್ವರಪ್ಪ) ನನಗೆ ಸಮಯ ನೀಡಿದರೆ, ನಾನು ಕರ್ನಾಟಕ, ಅದರ ನೆಲ ಮತ್ತು ಕನ್ನಡಿಗರಿಗಾಗಿ ನಿಮ್ಮ ಮುಂದೆ ನಿಲ್ಲುತ್ತೇನೆ, ನೀವೇ ಗುಂಡು ಹಾರಿಸಿ ಎಂದು ಡಿಕೆ ಸುರೇಶ್ ಹೇಳಿದ್ದಾರೆ.
"ನಿಮ್ಮ ನಾಯಕರು ನಿಮ್ಮನ್ನು ಪ್ರಶಂಸಿಸಬೇಕೆಂದು ನೀವು ಬಯಸುತ್ತೀರಿ. (ಕೊಲೆಗಾರರನ್ನು) ಹುಡುಕಿಕೊಂಡು ಅಲ್ಲಿ ಇಲ್ಲಿಗೆ ಏಕೆ ಹೋಗುತ್ತೀರಿ? ನಾನೇ ನಿಮ್ಮ ಮನೆಗೆ ಬರುತ್ತೇನೆ. ನಾನು ಶೀಘ್ರದಲ್ಲೇ ಸಮಯವನ್ನು ನಿಗದಿಪಡಿಸಿ ಒಂದು ವಾರದೊಳಗೆ ನಿಮ್ಮನ್ನು ಭೇಟಿ ಮಾಡುತ್ತೇನೆ. ನೀವು ನನ್ನನ್ನು ಶೂಟ್ ಮಾಡಲು ಅಥವಾ ಚೂರಿ ಹಾಕಲು ಸಿದ್ಧರಾಗಿ'' ಎಂದು ಸುರೇಶ್ ಹೇಳಿದ್ದಾರೆ.
ಈಶ್ವರಪ್ಪ ಬೆದರಿಕೆ ಕುರಿತು ಪ್ರತಿಕ್ರಿಯಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್, “ಇಂತಹ ಬೆದರಿಕೆಗಳನ್ನು ಹೇಗೆ ನಿಭಾಯಿಸಬೇಕು ಎಂಬುದು ನನ್ನ ಸಹೋದರ ಸುರೇಶ್‌ಗೆ ಗೊತ್ತಿದೆ” ಎಂದು ಹೇಳಿದ್ದಾರೆ.
"ಸುರೇಶ್ ಅವರು ಬೆದರಿಕೆಗೆ ಹೆದರುವ ವ್ಯಕ್ತಿಯಲ್ಲ, ಅದನ್ನು ಹೇಗೆ ಎದುರಿಸಬೇಕೆಂದು ನಮಗೆ ತಿಳಿದಿದೆ. ನಾವು ಈ ಹಿಂದೆ ಇಂತಹ ಅನೇಕ ಬೆದರಿಕೆಗಳನ್ನು ಇತ್ಯರ್ಥಪಡಿಸಿದ್ದೇವೆ. ಈಶ್ವರಪ್ಪ ಒಮ್ಮೆ ವಿಧಾನಸಭೆಯಲ್ಲಿ ನನ್ನ ತಂದೆಯ ಬಗ್ಗೆ ಮಾತನಾಡಿದ್ದರು, ನಂತರ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಈಶ್ವರಪ್ಪ ಇಂದು ಎಲ್ಲಿದ್ದಾರೆ?" ಅವರು ಪ್ರಶ್ನಿಸಿದ್ದಾರೆ.