
ಲೋಕಸಭಾ ಚುನಾವಣೆಯಲ್ಲಿ ನಿರ್ಮಲಾ ಸೀತಾರಾಮನ್, ಜೈಶಂಕರ್ ಸ್ಪರ್ಧಿಸಲಿದ್ದಾರೆ: ಪ್ರಹ್ಲಾದ್ ಜೋಶಿ
ಈ ಇಬ್ಬರು ನಾಯಕರು ಕರ್ನಾಟಕದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿವೆ..
ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸ್ಪರ್ಧಿಸಲಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಕೇಂದ್ರ ಪ್ರಲ್ಹಾದ್ ಜೋಶಿ ಸೋಮವಾರ (ಫೆಬ್ರವರಿ 26) ಹೇಳಿದ್ದಾರೆ.
“ಕರ್ನಾಟಕದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ನಿರ್ಮಲಾ ಮತ್ತು ಜೈಶಂಕರ್ ಕರ್ನಾಟಕದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿವೆ. ಜೈ ಶಂಕರ್ ಕೂಡ ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಈ ಊಹಾಪೋಹಗಳಿಗೆ ಇಂಬು ನೀಡಿದೆ.
ಈ ನಡುವೆ ಮಾಧ್ಯಮ ವರದಿಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ ಅವರು, ಪ್ರಭಾವಿ ಸಚಿವರು ಚುನಾವಣೆಗೆ ಸ್ಪರ್ಧಿಸುವುದು ಖಚಿತ, ಆದರೆ ಎಲ್ಲಿಂದ ಎಂದು ಇನ್ನೂ ನಿರ್ಧಾರವಾಗಿಲ್ಲ. ಇಬ್ಬರೂ ಕರ್ನಾಟಕ ಅಥವಾ ಇತರ ರಾಜ್ಯಗಳಿಂದ ಸ್ಪರ್ಧಿಸಬಹುದು ಎಂದು ಹೇಳಿದರು.
ಜೈಶಂಕರ್ ಅವರು ಬುಧವಾರ ಹುಬ್ಬಳ್ಳಿಗೆ ಭೇಟಿ ನೀಡಲಿದ್ದು, ಭೇಟಿ ವೇಳೆ ನರೇಂದ್ರ ಮೋದಿ ಸರ್ಕಾರದ 10 ವರ್ಷಗಳ ಸಾಧನೆ ಕುರಿತು ಕೈಗಾರಿಕೋದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಪ್ರಮುಖ ವ್ಯಕ್ತಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಇದೇ ವೇಳೆ ಧಾರವಾಡದಿಂದ ನಾಲ್ಕು ಬಾರಿ ಸಂಸದರಾಗಿರುವ ಜೋಶಿ ಅವರ ಸಾಧನೆಗಳ ಕುರಿತ ಕಿರುಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿ, ಕೇಂದ್ರ ನಾಯಕತ್ವ ಶೀಘ್ರದಲ್ಲಿಯೇ ಎಲ್ಲ ಗೊಂದಲಗಳನ್ನು ನಿವಾರಿಸಲಿದೆ ಎಂದರು. ಇದೇ ವೇಳೆ ಜೆಡಿಎಸ್ ಜೊತೆಗಿನ ಮನಸ್ತಾಪ ಕುರಿತ ವರದಿಗಳನ್ನು ತಳ್ಳಿಹಾಕಿದರು. ಪಕ್ಷ ದೊಡ್ಡದಾದಗಿದ್ದು, ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸಾಮಾನ್ಯ. ಆದರೆ ಆ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ ಎಂದು ಹೇಳಿದರು.