ಮೋದಿ ಈ ದೇಶಕ್ಕೆ ಹಿಡಿದಿರುವ ಶನಿ: ರಮೇಶ್‌ ಕುಮಾರ್
x

ಮೋದಿ ಈ ದೇಶಕ್ಕೆ ಹಿಡಿದಿರುವ ಶನಿ: ರಮೇಶ್‌ ಕುಮಾರ್

ಜೂನ್ 4ಕ್ಕೆ ಕಾಯುತ್ತಿದ್ದೇವೆ. ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು ದೇವರಲ್ಲಿ ಕೈಮುಗಿದು ಬೇಡಿಕೊಂಡಿದ್ದೇವೆ ಎಂದು ರಮೇಶ್‌ ಕುಮಾರ್‌ ಹೇಳಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಶನಿಗೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ.

ಕೋಲಾರದ ಶ್ರೀನಿವಾಸಪುರ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿರುವ ರಮೇಶ್‌ ಕುಮಾರ್‌ ಅವರು, “ಜೂನ್ 4ಕ್ಕೆ ಕಾಯುತ್ತಿದ್ದೇವೆ. ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು ದೇವರಲ್ಲಿ ಕೈಮುಗಿದು ಬೇಡಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.

ಇಂದಿರಾಗಾಂಧಿ ಕುಳಿತಿದ್ದ ಸ್ಥಾನದಲ್ಲಿ ಬಂದು (ನರೇಂದ್ರ ಮೋದಿ) ಕೂತುಬಿಟ್ಟಿದ್ದಾರೆ. ಇಂದಿರಾ ಗಾಂಧಿ ಅವರು ಎಲ್ಲಾ ಜಾತಿ ಜನಾಂಗದವರಿಗೆ ಆತ್ಮಸ್ಥೈರ್ಯ ತುಂಬಿದ್ದರು. ಆದರೆ, ಎಂತಹವರು ಕೂತ ಜಾಗಕ್ಕೆ ಎಂತಹವನು ಬಂದು ಕೂತಿದ್ದಾನೆ ಎಂದು ಏಕವಚನದಲ್ಲೇ ರಮೇಶ್‌ ಕುಮಾರ್‌ ಅವರು ಟೀಕಿಸಿದ್ದಾರೆ.

ಭಾಷಣದ ವೇಳೆ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ದೇಶಕ್ಕೆ ಹಿಡಿದಿರುವ ಶನಿ ಅಂದರೆ ಅದು ಮೋದಿ. ಸಂತೆಯಲ್ಲಿ ಹಾವಾಡಿಗ ಸುಳ್ಳು ಹೇಳೋದು ಕೇಳಿದ್ದೇವೆ. ಆದರೆ ಪ್ರಧಾನಿ ಸುಳ್ಳು ಹೇಳೋದು ಈ ಪ್ರಪಂಚದಲ್ಲಿಯೇ ಕೇಳಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಕೋಲಾರದ ಕಾಂಗ್ರೆಸ್‌ ಅಭ್ಯರ್ಥಿ ಕೆವಿ ಗೌತಮ್‌ ಪರ ಪ್ರಚಾರ ಮಾಡಿರುವ ರಮೇಶ್‌ ಕುಮಾರ್‌, ಕೋಲಾರದಲ್ಲಿ ಗೌತಮ್‌ ಗೆಲುವು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ನಾಯಕರ ಆಕ್ರೋಶ

ರಮೇಶ್‌ ಕುಮಾರ್‌ ಹೇಳಿಕೆಗೆ ಬಿಜೆಪಿ ರಾಜ್ಯ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಈ ಬಗ್ಗೆ ಪ್ರಸ್ತಾಪಿಸಿ, "ರಮೇಶ್ ಕುಮಾರ್ ಅವರಂಥವರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಚುನಾವಣೆ ಫಲಿತಾಂಶವೇ ಅವರಿಗೆ ಉತ್ತರ ಕೊಡುತ್ತದೆ. ಮತ್ತೊಮ್ಮೆ ಮೋದಿ ಪ್ರಧಾನಿ ಆಗುವುದನ್ನು ಅವರು ನೋಡಲಿದ್ದಾರೆ" ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಮೋದಿ ದೇಶಕ್ಕಲ್ಲ, ಕಾಂಗ್ರೆಸ್‌ ಗೆ ಶನಿ ಎಂದು ಹೇಳಿದ್ದಾರೆ.

"ಶನಿದೇವ ಒಳ್ಳೆಯವರಿಗೆ ಒಳ್ಳೆಯದು, ಕೆಟ್ಟವರಿಗೆ ಕೆಟ್ಟದು ಮಾಡುತ್ತಾನೆ. ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಹಾಗೂ ರಮೇಶ್‌ ಕುಮಾರ್‌ ಅವರಿಗೆ ಶನಿ. ರಮೇಶ್‌ ಕುಮಾರ್‌ ಎಷ್ಟು ಸತ್ಯವಂತರು ಎಂಬುದು ಎಲ್ಲರಿಗೂ ಗೊತ್ತಿದೆ" ಎಂದು ತಿರುಗೇಟು ನೀಡಿದ್ದಾರೆ.

Read More
Next Story