
ಮೂರನೇ ಬಾರಿ ಕರ್ನಾಟಕಕ್ಕೆ ಮೋದಿ: ಬಿಜೆಪಿಯಲ್ಲಿ ಚಿಗುರಿದ ಉತ್ಸಾಹ
ಪ್ರಧಾನಿ ಮೋದಿ ತಮ್ಮ ಮಂಗಳೂರು ಮತ್ತು ಮೈಸೂರಿನ ಪ್ರಚಾರದ ಸಂದರ್ಭದಲ್ಲಿ ಮತದಾರರಿಗೆ ಮಾಡಬಹುದಾದ ʼಮೋಡಿʼ ಬಗ್ಗೆ ಬಿಜೆಪಿ-ಜೆಡಿಎಸ್‌ಗೆ ನಿರೀಕ್ಷೆ, ಆಡಳಿತರೂಢ ಕಾಂಗ್ರೆಸ್ ಗೆ ಆತಂಕವಿದೆ.
ಕರ್ನಾಟಕ ತನ್ನ ಮೊದಲ ಹಂತದ ಚುನಾವಣೆಗೆ ಸಜ್ಜಾಗುತ್ತಿರುವಾಗಲೇ ದೇಶದ ಪ್ರಧಾನಿ ಹಾಗೂ ಬಿಜೆಪಿಯ ಸರ್ವೋಚ್ಛ ನಾಯಕ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ದೇಶಕ್ಕೆ ಸಾರ್ವತ್ರಿಕ ಚುನಾವಣಾ ಪ್ರಕಟವಾದ ದಿನ ಅಂದರೆ ಮಾರ್ಚ್ ೧೬ ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರವಾದ ಕಲಬುರಗಿಯಲ್ಲಿ ಎನ್ ಡಿ ಎ ಪರವಾಗಿ ಚುನಾವಣಾ ಪ್ರಚಾರ ಆರಂಭಿಸಿದ ನರೇಂದ್ರ ಮೋದಿ. ನಂತರ ಶಿವಮೊಗ್ಗದಲ್ಲಿಯೂ ಚುನಾವಣಾ ಪ್ರಚಾರ ಮಾಡಿದ್ದರು. ಚುನಾವಣೆ ಘೋಷಣೆಯಾದ ನಂತರ ಮೂರನೇ ಬಾರಿಗೆ ಮೋದಿ ಮತ್ತೆ ಕರ್ನಾಟಕಕ್ಕೆ ಬರುತ್ತಿದ್ದಾರೆ.
ಜೆಡಿಎಸ್ ಗೆ ಆಮ್ಲಜನಕ
ಸದ್ಯದ ಪರಿಸ್ಥಿತಿಯಲ್ಲಿ ಮೋದಿ ಕರ್ನಾಟಕಕ್ಕೆ ಬರುತ್ತಿರುವುದು ಸಂಕಷ್ಟದಲ್ಲಿರುವ ಪಕ್ಷಕ್ಕೆ ಆಮ್ಲಜನಕ ನೀಡಿದಂತೆ ಎಂಬ ಮಾತು ಬಿಜೆಪಿ ವಲಯದಲ್ಲಿಯೇ ಕೇಳಿ ಬರುತ್ತಿದೆ. ಅಷ್ಟೇ ಅಲ್ಲ ಬಿಜೆಪಿ-ಜೆಡಿಎಸ್ ನ ಸಮನ್ವಯ ಕೊರತೆಯಿಂದ ಆಗಬಹುದಾದ ನಷ್ಟದ ಹಿನ್ನೆಲೆಯಲ್ಲಿ ಅತಂಕದಲ್ಲಿರುವ ಜೆಡಿಎಸ್ ಗೆ ಮೋದಿ ಆಗಮನದ ಹಿನ್ನೆಲೆಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಮೋದಿ ಮೈಸೂರಿನಲ್ಲಿ ಬೃಹದ್ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಗೆಯೇ ಮಂಗಳೂರಿನಲ್ಲಿ ರೋಡ್ ಷೋ ನಡೆಸಲಿದ್ದಾರೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಬಿಜೆಪಿಯ ರಾಜ್ಯ ಲೋಕಸಭಾ ಚುನಾವಣಾ ನಿರ್ವಹಣೆಯ ನಿರ್ವಾಹಕ ಸುನಿಲ್ ಕುಮಾರ್ ಅವರ ಪ್ರಕಾರ; ಮೈಸೂರಿನ ಮಹಾರಾಜಾ ಕಾಲೇಜಿನ ವಿಶಾಲವಾದ ಮೈದಾನದಲ್ಲಿ ಚುನಾವಣಾ ಸಮಾವೇಶವನ್ನು ಸಂಘಟಿಸಲಾಗಿದ್ದು, ಈ ಸಮಾವೇಶದಲ್ಲಿ, ಹಾಸನ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಕ್ಷೇತ್ರಗಳ ನಾಯಕರು, ಕಾರ್ಯಕರ್ತರು, ಹಾಗೆಯೇ ಜೆಡಿಎಸ್ ಪಕ್ಷದ ನಾಯಕರು, ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. “ಈ ಮೂಲಕ ಬಿಜೆಪಿ ಮತ್ತು ಮೋದಿ ನಾಲ್ಕು ಕ್ಷೇತ್ರಗಳ ಗೆಲುವಿಗೆ ಮುನ್ನುಡಿ ಬರೆಯಲಿದ್ದಾರೆ” ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ.
ಗೌಡರ ಭೀಷ್ಮ ಪ್ರತಿಜ್ಞೆಗೆ ಬೆಂಬಲವೇ?
ಮಾಜಿ ಪ್ರಧಾನಿ ದೇವೇಗೌಡರು, ಸಿದ್ದರಾಮಯ್ಯನವರ ನೆಲದಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಿ, ಸಿದ್ದರಾಮಯ್ಯನವರ ಗರ್ವಭಂಗ ಮಾಡುವುದಾಗಿ ಭೀಷ್ಮ ಪ್ರತಿಜ್ಞೆ ಮಾಡಿರುವ ಹಿನ್ನೆಲೆಯಲ್ಲಿ, ಬೆಂಗಳೂರಿಗೆ ಬರಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಬರುತ್ತಿದ್ದಾರೆ. ತಮ್ಮನ್ನು ಒಂದು ಕಾಲದಲ್ಲಿ ಕಟುವಾಗಿ ಟೀಕಿಸಿದರೂ, ಈಗ ಮೈತ್ರಿ ಪಕ್ಷವಾಗಿ, “ಈ ಬಾರಿ ಮೋದಿ ಮತ್ತೆ ಪ್ರಧಾನಿಯಾಗುವುದನ್ನು ಯಾರೂ ತಪ್ಪಿಸಲಾರರು” ಎನ್ನುವುದರ ಮೂಲಕ ಮೋದಿ ಅವರ ವಿಶ್ವಾಸವನ್ನು ಗಳಿಸಿರುವ ಹಿರಿಯ ನಾಯಕ ದೇವೇಗೌಡರ ನೆರವಿಗಾಗಿ ಮೋದಿ ಮೈಸೂರಿಗೆ ಬರುತ್ತಿದ್ದಾರೆ ಎನ್ನುವುದು ಜೆಡಿಎಸ್ ನಾಯಕರ ನಂಬಿಕೆ. ಮೋದಿ ಛತ್ರಛಾಯೆಯಡಿಯಲ್ಲಿ ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಕ್ಷೇತ್ರಗಳನ್ನು ಗೆದ್ದು, ಸಿದ್ದರಾಮಯ್ಯನವರ ಗರ್ವಭಂಗ ಮಾಡಿ ತಮ್ಮ ಪ್ರತಿಜ್ಞೆಯನ್ನು ಈಡೇರಿಸಿಕೊಳ್ಳುವ ಲೆಕ್ಕಾಚಾರ ದೇವೇಗೌಡರದು.
ಬಿಜೆಪಿಗೆ ಒಳೇಟು ಬೀಳದಂಥ ತಂತ್ರ ಮಂತ್ರ
ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಇನ್ನು ಕೇವಲ ಹತ್ತು ದಿನಗಳಷ್ಟೇ ಬಾಕಿ ಉಳಿದಿದ್ದು, ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರ ಬಂಡಾಯದ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿದೆ. ಈ ಬಂಡಾಯ ಉಳಿದ ಇಪ್ಪತ್ತೆಂಟು ಸ್ಥಾನಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ಬಿಜೆಪಿ ನಾಯಕರೇನೂ ಅಲ್ಲಗೆಳೆಯುತ್ತಿಲ್ಲ. ಕಳೆದ ಬಾರಿ ಇಪ್ಪತ್ತಾರು ಸ್ಥಾನಗಳನ್ನು ಗೆದ್ದು, ಮೋದಿ ಅವರನ್ನು ಪ್ರಧಾನಿಯಾಗಸಲು ಪ್ರಮುಖ ಪಾತ್ರ ವಹಿಸಿದ ಕರ್ನಾಟಕ ಈ ಬಾರಿ ಇಪ್ಪತ್ತೆಂಟು ಸ್ಥಾನಗಳನ್ನು ಗೆಲ್ಲುವ ಹುಮ್ಮಸ್ಸಿನಲ್ಲಿರುವಾಗಲೇ ಬಂಡಾಯದ ಬಿಸಿ ಕೇವಲ ಕರ್ನಾಟಕದ ಬಿಜೆಪಿಗಷ್ಟೇ ಅಲ್ಲ. ಬಿಜೆಪಿ ಹೈಕಮಾಂಡ್ ಗೆ ಕೂಡ ತಾಗಿದ್ದು, ಈಗ ಸುಟ್ಟ ಗಾಯಕ್ಕೆ ಮುಲಾಮು ಹಚ್ಚಲು ಮೋದೀಜಿ ಅವರು ಕರ್ನಾಟಕಕ್ಕೆ ಬರುತ್ತಿದ್ದಾರೆ. ಮೋದಿ ಪ್ರಚಾರದ ಸಂದರ್ಭದಲ್ಲಿ ಪಕ್ಷಕ್ಕೆ ಮುಜುಗರವಾಗದಂತೆ ನೋಡಿಕೊಳ್ಳುವುದು ಕರ್ನಾಟಕದ ಬಿಜೆಪಿಗೆ ಅದರಲ್ಲೂ ನಾಯಕರಾದ ಬಿ ಎಸ್ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಸವಾಲಾಗಿದೆ.
“ಚುನಾವಣೆಯ ಸಂದರ್ಭದಲ್ಲಿ ಮೋದಿ ಅವರು ದೇಶದ ಯಾವುದೇ ಭಾಗಕ್ಕೆ ಪ್ರಚಾರಕ್ಕೆ ಹೋದರೂ, ಅವರು ತಮ್ಮೊಂದಿಗೆ ʼಮಂತ್ರದಂಡʼ ಒಂದನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತಾರೆ. ಆ ಮಂತ್ರದಂಡದಿಂದ ಚುನಾವಣೆಯ ಗತಿಯನ್ನೇ ಬದಲಾಯಿಸುತ್ತಾರೆ ಎಂಬ ನಂಬಿಕೆ ರಾಜಕೀಯ ವಾತಾವರಣದಲ್ಲಿದೆ. ಸದ್ಯಕ್ಕೆ, ಇಪ್ಪತ್ತೆಂಟು ಸ್ಥಾನಗೆಲ್ಲುವುದು ಕಠಿಣ ಎಂಬ ನಂಬಿಕೆಯಲ್ಲಿರುವ ರಾಜ್ಯ ಬಿಜೆಪಿ ಮೋದಿ ಅವರ ಆಗಮನಕ್ಕಾಗಿ ಎದುರು ನೋಡುತ್ತಿದೆ. ಅವರು ಮೈಸೂರು ಮತ್ತು ಮಂಗಳೂರಿನಲ್ಲಿ ಯಾವ ರೀತಿಯ ʼಇಂದ್ರಜಾಲʼ ಮಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಕಾಯುತ್ತಿದೆ” ಎನ್ನುವುದು ರಾಜ್ಯ ಬಿಜೆಪಿಯ ಹಿರಿಯ ವಾಕ್ತಾರರೊಬ್ಬರ ಅನಿಸಿಕೆ.
ಪಿಕ್ಚರ್ ಅಭೀ ಬಾಕಿ ಹೈ
ಅವರ ಅನಿಸಿಕೆ ತಪ್ಪೆನ್ನಿಸುವುದಿಲ್ಲ. ಕಳೆದ ಗುರುವಾರ ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಮೊದಲ ಬಾರಿಗೆ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಆರ್ಟಿಕಲ್ ೩೭೦ ರದ್ದುಗೊಳಿಸಿದ್ದು ಕಣಿವೆ ರಾಜ್ಯದ ಅಭಿವೃದ್ಧಿಗೆ ಕಾರಣವಾಯಿತು ಎಂದು ಹೇಳುತ್ತಲೇ, “ಇದುವರೆಗಿನದು ಕೇವಲ ಸಿನಿಮಾದ ಟ್ರೇಲರ್ ಮಾತ್ರ. ಸಿನಿಮಾ ಇನ್ನೂ ಬಾಕಿ ಇದೆ (ಪಿಕ್ಚರ್ ಅಭೀ ಬಾಕಿ ಹೈ) ಎಂದು ಹೇಳುವ ಮೂಲಕ ಹೊಸ ಬೆಳವಣಿಗೆಯ ಸೂಚನೆ ನೀಡಿದ್ದಾರೆ. ಬಹುಮಂದಿ ರಾಜಕೀಯ ವಿಶ್ಲೇಷಕರ ಪ್ರಕಾರ, ಮೋದಿ ಅವರು ಪಾಕ್ ಆಕ್ರಮಿತ ಕಾಶ್ಮೀರ (ಪಾಕ್ ಆಕ್ಯುಪೈಡ್ ಕಾಶ್ಮೀರ್) ಕುರಿತಾದ ತಮ್ಮ ಮುಂದಿನ ತಂತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಮಾತುಗಳನ್ನು ಹೇಳಿದ್ಧರೆ. ಅದು ನಿಜವೇ ಆದಲ್ಲಿ, ಕಾಶ್ಮೀರದಲ್ಲಿ ಸದ್ಯ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಹಾಗೂ ದೇಶದ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಮೇಲೆ ಈ ಭರವಸೆ, ಬೇರೆಯದೇ ಪರಿಣಾಮ ಬೀರಬಹುದು.
ಅಬ್ಬಕ್ಕ-ಓಬವ್ವ ಕಥನ
ಮೋದಿ ಕರ್ನಾಟಕಕ್ಕೆ ಬಂದಾಗಲೆಲ್ಲ ಇಂಥಹುದೇ ಕೆಲವು ಚಮತ್ಕಾರಗಳಾಗಿವೆ. ಮತದಾರರ ಭಾವನಾತ್ಮಕ ವಿಷಯಗಳನ್ನು ತಟ್ಟಿ ಅವರ ಮನಸ್ಸನ್ನು ತಮ್ಮೆಡೆಗೆ ಅಂದರೆ ಬಿಜೆಪಿಯತ್ತ ಅವರು ತಿರುಗಿಸಿಕೊಳ್ಳಬಲ್ಲರು ಎಂಬುದು ಬಿಜೆಪಿಯವರ ನಂಬಿಕೆ. ಹಾಗೆ ಆಗಿತ್ತು ಕೂಡ. ಹಿಂದಿನ ಅಂದರೆ ೨೦೧೮ರ ವಿಧಾನ ಸಭಾ ಚುನಾವಣೆಯ ವೇಳೆ ಮಂಗಳೂರಿನಲ್ಲಿ ರಾಣಿ ಅಬ್ಬಕ್ಕ ದೇವಿ ಹಾಗೂ ಚಿತ್ರದುರ್ಗದಲ್ಲಿ ಓನಕೆ ಓಬವ್ಬ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿ, ಮತದಾರರ ಮನಸ್ಸನ್ನು ಬಿಜೆಪಿಯತ್ತ ಸೆಳೆದದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇದರಿಂದ ಕಾಂಗ್ರೆಸ್ ಆದ ನಷ್ಟವಂತೂ ಕಣ್ಣ ಮುಂದೆ ಇದೆ.
ಕರಾವಳಿ ತೀರಕ್ಕೆ ಅಭಯ?
ಕರಾವಳಿ ತೀರದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇಳಿಕೊಳ್ಳುವಂಥ ಕಷ್ಟ ಬಿಜೆಪಿಗೆ ಇರುವಂತಿಲ್ಲ. ಆದರೆ, ಬಿಲ್ಲವರ ಬಂಟರ ನಡುವಿನ ಗದ್ದಲದಲ್ಲಿ ಏನೂ ಆಗಿಬಿಡಬಹುದು. ಊತ್ತರ ಕನ್ನಡ ಜಿಲ್ಲೆಯಲ್ಲಿ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅನಂತಕುಮಾರ ಹೆಗ್ಡೆ ಮತ್ತು ಶಿವರಾಮ ಹೆಬ್ಬಾರರ ಪ್ರತಿರೋಧ ಯಾವ ಪರಿಣಾಮ ಬೀರುತ್ತದೆ ಎಂಬ ಆತಂಕವಂತೂ ಪಕ್ಷಕ್ಕಿದೆ. ಮೋದಿ ಮಂಗಳೂರಿನ ಪ್ರಚಾರದ ಸಂದರ್ಭದಲ್ಲಿ ಈ ಆತಂಕವನ್ನು ದೂರಮಾಡಬಹುದೆಂಬ ನಂಬಿಕೆ ನಮ್ಮದು, ಎಂದು ಕರಾವಳಿಯ ಹಿರಿಯ ಬಿಜೆಪಿ ನಾಯಕರು ಹೇಳುತ್ತಾರೆ.
ಹಳೇ ಮೈಸೂರು ಪ್ರಾಂತದ ಮೇಲೆ ಬಿಜೆಪಿ ತನ್ನ ಹಿಡಿತ ಸಾಧಿಸಿಕೊಳ್ಳಲು ಮೋದಿ ನೆರವಂತೂ ಅನಿವಾರ್ಯ. ಹಳೇ ಮೈಸೂರು ಪ್ರಾಂತದ ಮೇಲೆ ಹಿಡಿತವಿರುವ ಜೆಡಿಎಸ್ ಕೂಡ ಆತಂಕದ ಸ್ಥಿತಿಯಲ್ಲಿರುವುದರಿಂದ. ಮೋದಿ ಇಲ್ಲಿ ಯಾವ ʼಮೋಡಿʼ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ ಎನ್ನುವುದು ಮೈಸೂರಿನ ಬಿಜೆಪಿ ನಾಯಕರ ನಿರೀಕ್ಷೆ.
ಪ್ರಧಾನಿ ಮೋದಿ ತಮ್ಮ ಮಂಗಳೂರು ಮತ್ತು ಮೈಸೂರಿನ ಪ್ರಚಾರದ ಸಂದರ್ಭದಲ್ಲಿ ಮತದಾರರಿಗೆ ಮಾಡಬಹುದಾದ ʼಮೋಡಿʼ ಬಗ್ಗೆ ಬಿಜೆಪಿ-ಜೆಡಿಎಸ್‌ಗೆ ನಿರೀಕ್ಷೆ, ಆಡಳಿತರೂಢ ಕಾಂಗ್ರೆಸ್ ಗೆ ಆತಂಕವಿದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಭಾನುವಾರ ಚಾಮರಾಜನಗರದಲ್ಲಿ ಬೀಡುಬಿಡಲಿದ್ದಾರೆ.