Loksabha Election| ಕರಂದ್ಲಾಜೆಗೆ ಮೋದಿ ವರ್ಚಸ್ಸು ಅಸ್ತ್ರ: ಕಾಂಗ್ರೆಸ್ ಬತ್ತಳಿಕೆಯಲ್ಲಿದೆಯೇ ಪ್ರತ್ಯಸ್ತ್ರ?
x

Loksabha Election| ಕರಂದ್ಲಾಜೆಗೆ ಮೋದಿ ವರ್ಚಸ್ಸು ಅಸ್ತ್ರ: ಕಾಂಗ್ರೆಸ್ ಬತ್ತಳಿಕೆಯಲ್ಲಿದೆಯೇ ಪ್ರತ್ಯಸ್ತ್ರ?

ಈ ಬಾರಿ ಒಕ್ಕಲಿಗ ಸಮುದಾಯದ ʼಸ್ಕಾಲರ್‌ʼ ಆಗಿರುವ, ರಾಜ್ಯಸಭೆಯಲ್ಲಿ ಕಾರ್ಯನಿರ್ವಹಣೆ ಮಾಡಿರುವ ಆಧಾರದಡಿಯಲ್ಲಿ ಕಾಂಗ್ರೆಸ್ ಪ್ರೋ. ರಾಜೀವ್ ಗೌಡರನ್ನು ಕಣಕ್ಕಿಳಿಸಿದರೆ, ಇತ್ತ ಬಿಜೆಪಿ ಲೇಡಿ ಫೈರ್ ಬ್ರ್ಯಾಂಡ್ ಶೋಭಾ ಕರಂದ್ಲಾಜೆ ಅವರನ್ನು ಆಖಾಡಕ್ಕೆ ಇಳಿಸಿ ಪೈಪೋಟಿ ಒಡ್ಡಿದೆ. ಇಬ್ಬರು ಅಭ್ಯರ್ಥಿಗಳು ಕೂಡ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಅಖಾಡ ರಂಗೇರಿದೆ.


ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ, ನಗರದ ಪ್ರತಿಷ್ಠಿತ ಕ್ಷೇತ್ರಗಳ ಪೈಕಿ ಒಂದು. ಅತ್ಯಂತ ವಿಸ್ತಾರ ಹಾಗೂ ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಚುನಾವಣೆ ಘೋಷಣೆಗೂ ಮೊದಲೇ ಅಭ್ಯರ್ಥಿಗಳು ಯಾರಾಗುತ್ತಾರೆ ಎಂಬ ಚರ್ಚೆಯಿಂದಲೇ ಕುತೂಹಲ ಕೆರಳಿಸಿದ್ದ ಕ್ಷೇತ್ರವಿದು. ಇದೀಗ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಈ ಕ್ಷೇತ್ರದಲ್ಲಿ ಒಕ್ಕಲಿಗ (ಅಂದಾಜು 13.5 ಲಕ್ಷ), ಎಸ್‌ಸಿ / ಎಸ್‌ಟಿ ( 6.5 ಲಕ್ಷ), ಮುಸ್ಲಿಂ ( 7 ಲಕ್ಷ,), ಕುರುಬ ( 5.5 ಲಕ್ಷ), ಲಿಂಗಾಯತ (5 ಲಕ್ಷ) ಮತ್ತು ಇತರ 2 ಲಕ್ಷ ಅಂದಾಜು ಮತದಾರರಿದ್ದಾರೆ. ಒಕ್ಕಲಿಗ ಸಮುದಾಯದವರು ಅತಿ ಹೆಚ್ಚಿರುವ ಕಾರಣಕ್ಕಾಗಿಯೇ ಇಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಒಕ್ಕಲಿಗರನ್ನೇ ಅಭ್ಯರ್ಥಿಯನ್ನಾಗಿ ಮಾಡಿದೆ.

ಕೆ.ಆರ್.ಪುರಂ, ಪುಲಿಕೇಶಿನಗರ, ಬ್ಯಾಟರಾಯನಪುರ, ಹೆಬ್ಬಾಳ, ಮಲ್ಲೇಶ್ವರಂ, ದಾಸರಹಳ್ಳಿ, ಮಹಾಲಕ್ಷ್ಮಿಲೇಔಟ್ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳು ಈ ವ್ಯಾಪ್ತಿಯಲ್ಲಿ ಬರುತ್ತದೆ. ಈ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 5 ರಲ್ಲಿ ಬಿಜೆಪಿ ಶಾಸಕರುಗಳು ಪ್ರತಿನಿಧಿಸುತ್ತಿದ್ದರೆ, 3 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಶಾಸಕರಿದ್ದಾರೆ.

ಈ ಬಾರಿ ಒಕ್ಕಲಿಗ ಸಮುದಾಯದ ʼಸ್ಕಾಲರ್‌ʼ ಆಗಿರುವ, ರಾಜ್ಯಸಭೆಯಲ್ಲಿ ಕಾರ್ಯನಿರ್ವಹಣೆ ಮಾಡಿರುವ ಆಧಾರದಡಿಯಲ್ಲಿ ಕಾಂಗ್ರೆಸ್ ಪ್ರೋ. ರಾಜೀವ್ ಗೌಡರನ್ನು ಕಣಕ್ಕಿಳಿಸಿದರೆ, ಇತ್ತ ಬಿಜೆಪಿ ಲೇಡಿ ಫೈರ್ ಬ್ರ್ಯಾಂಡ್ ಶೋಭಾ ಕರಂದ್ಲಾಜೆ ಅವರನ್ನು ಆಖಾಡಕ್ಕೆ ಇಳಿಸಿ ಪೈಪೋಟಿ ಒಡ್ಡಿದೆ. ಇಬ್ಬರು ಅಭ್ಯರ್ಥಿಗಳು ಕೂಡ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಅಖಾಡ ರಂಗೇರಿದೆ.

ಕೇಂದ್ರದಲ್ಲಿ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ನರೇಂದ್ರ ಮೋದಿ ಸರ್ಕಾರದ ಸಾಧನೆ, ಯಡಿಯೂರಪ್ಪರ ಮಾರ್ಗದರ್ಶನದಂತೆ ಅಖಾಡಕ್ಕೆ ಇಳಿದಿದ್ದಾರೆ. ಒಟ್ಟಾರೆ ದೇಶದಲ್ಲಿ ಬಿಜೆಪಿಯು 400 ಸ್ಥಾನಗಳಲ್ಲಿ ಗೆಲ್ಲುವ ಮಹತ್ತರವಾದ ಗುರಿ ಹೊಂದಿದೆ. ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಇದು ಮೈಸೂರು, ಬೆಂಗಳೂರು ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಹೆಚ್ಚಿನ ಅನಕೂಲ ಆಗಲಿದೆ ಎಂದು ಹೇಳಲಾಗುತ್ತಿದೆ. ಮೋದಿ ಅವರ ಅಬ್ಬರದ ಪ್ರಚಾರ ಹಾಗೂ ಜನಪ್ರಿಯತೆಯನ್ನು ಎದುರಿಸಲು ಕಾಂಗ್ರೆಸ್ ಹಿಂದೆ ಬಿದ್ದಿಲ್ಲ.

ಪ್ರೋ. ರಾಜೀವ್ ಗೌಡ, ಗ್ಯಾರೆಂಟಿಗಳ ಭಾಗ್ಯಗಳ ಮೇಲೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋಬ್ಯಾಕ್ ಎಂದಿದ್ದ ಅಭ್ಯರ್ಥಿಗೆ ಮತ ನೀಡುತ್ತೀರಾ? ಎಂದು ಪ್ರಶ್ನಿಸುತ್ತಾ ಆಖಾಡಕ್ಕೆ ಧುಮುಕಿದ್ದಾರೆ.

ಕೇಂದ್ರದಿಂದ 'ಬರʼದ ಪರಿಹಾರ ಹಾಗೂ ಅನುದಾನದಲ್ಲಿ ಅನ್ಯಾಯ ಆಗಿದೆ ಎಂದು ರಾಜ್ಯ ಕಾಂಗ್ರೆಸ್ ದೊಡ್ಡ ಕೂಗು ಎತ್ತಿದೆ. ಕೇಂದ್ರ ಸರ್ಕಾರದಿಂದ ಮಹಾಮೋಸ, ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿರುವವರಲ್ಲಿ ಸಚಿವ ಕೃಷ್ಣಬೈರೇಗೌಡ ಹೆಸರು ಮುನ್ನಲೆಗೆ ಬರುತ್ತದೆ. ಕೃಷ್ಣಬೈರೇಗೌಡ ಅವರು ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬಹಿರಂಗ ಚರ್ಚೆಯ ಸವಾಲು ಒಡ್ಡಿದ್ದರು. ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಾಸಕರಾಗಿರುವುದರಿಂದ ಮೋದಿ ಜನಪ್ರಿಯತೆಯನ್ನು ಪ್ರಬಲವಾಗಿ ಎದುರಿಸುವ ನಾಯಕರಾಗಿದ್ದಾರೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿ ಪ್ರೋ. ರಾಜೀವ್ ಗೌಡ ಅವರು ಇದೇ ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ಪ್ರವೇಶ ಮಾಡಿದ್ದಾರೆ. ಕ್ಷೇತ್ರದ ಜನರಿಗೆ ಅಪರಿಚಿತರಾಗಿರುವುದರಿಂದ, ಕಡಿಮೆ ಅವಧಿಯಲ್ಲಿ ಜನರನ್ನು ಹೇಗೆ ತಲುಪುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ. ಆದರೆ ಸಧ್ಯ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎನ್ನುವ ಆರೋಪವನ್ನೇ ಅಸ್ತ್ರವಾಗಿಸಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ.

ಶೋಭಾ ಕರಂದ್ಲಾಜೆಗೆ ಭಿನ್ನಮತದ ಬಿಸಿ

ಶೋಭಾ ಕರಂದ್ಲಾಜೆ ಉಡುಪಿ - ಚಿಕ್ಕಮಗಳೂರು ಸಂಸದೆಯಾಗಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಅವರ ವಿರುದ್ಧ ಗೋಬ್ಯಾಕ್ ಹೋರಾಟ ನಡೆದಿತ್ತು. ಸ್ವತಃ ಬಿಜೆಪಿ ಕಾರ್ಯಕರ್ತರೇ ಅವರ ವಿರುದ್ಧ ಅಭಿಯಾನ ನಡೆಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ದೊಡ್ಡ ಮಟ್ಟಿನಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಈ ಹಿನ್ನೆಲೆಯಲ್ಲಿ ಅವರಿಗೆ ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಬದಲಾಗಿ ಬೆಂಗಳೂರು ಉತ್ತರದಲ್ಲಿ ಟಿಕೆಟ್ ನೀಡಲಾಗಿತ್ತು. ಬೆಂಗಳೂರು ಉತ್ತರದ ಹಾಲಿ ಸಂಸದರಾಗಿದ್ದ ಡಿವಿ ಸದಾನಂದ ಗೌಡ ಬದಲಾಗಿ ಶೋಭಾಗೆ ಟಿಕೆಟ್ ನೀಡಲಾಗಿತ್ತು. ಆದರೆ ಶೋಭಾ ಕರಂದ್ಲಾಜೆಗೆ ಆರಂಭದಲ್ಲೇ ಇಲ್ಲಿ ವಿರೋಧ ಎದುರಾಗಿತ್ತು. ಬೆಂಗಳೂರು ಉತ್ತರದಲ್ಲೂ ಗೋಬ್ಯಾಕ್ ಶೋಭಾ ಎಂಬ ಅಭಿಯಾನ ನಡೆಸಲಾಗಿತ್ತು

ಇದೀಗ ಶೋಭಾ ಕರಂದ್ಲಾಜೆ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಶೋಭಾಗೆ ಕ್ಷೇತ್ರದಲ್ಲಿ ಭಿನ್ನಮತದ ಬಿಸಿಯೂ ತಟ್ಟತೊಡಗಿದೆ. ಒಂದು ಕಡೆಯಲ್ಲಿ ಎಸ್ಟಿ ಸೋಮಶೇಖರ್ ಅವರು ಬಿಜೆಪಿ ಶಾಸಕರಾಗಿಯೂ ಕಾಂಗ್ರೆಸ್ಗೆ ಬೆಂಬಲವನ್ನು ಸೂಚಿಸಿದ್ದಾರೆ. ಮತ್ತೊಂದು ಕಡೆಯಲ್ಲಿ ಡಿವಿ ಸದಾನಂದ ಗೌಡ ಕ್ಷೇತ್ರದಲ್ಲಿ ಸಕ್ರಿಯವಾಗಿರದೆ ಮೌನಕ್ಕೆ ಶರಣಾಗಿದ್ದಾರೆ.

ಲಿಂಗಾಯತರ ಸಿಟ್ಟು?

ಈ ನಡುವೆ ಕ್ಷೇತ್ರದಲ್ಲಿ ಲಿಂಗಾಯತ ಮುಖಂಡರನ್ನು ವಿಶ್ವಾಸಕ್ಕೆ ಪಡೆದಿಲ್ಲ ಎಂಬ ಅಸಮಾಧಾನವೂ ಭುಗಿಲೆದ್ದಿದೆ.

ಕ್ಷೇತ್ರದ ಲಿಂಗಾಯತ ಮುಖಂಡರನ್ನು ವಿಶ್ವಾಸಕ್ಕೆ ಪಡೆದಿಲ್ಲ ಮತ್ತು ಪ್ರಚಾರಕ್ಕೆ ಕರೆದಿಲ್ಲ ಎಂದು ಈ ಸಮುದಾಯದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಆಪ್ತರಿಂದಲೇ ಶೋಭಾ ಕರಂದ್ಲಾಜೆ ವಿರುದ್ದ ಅಸಮಾಧಾನ ವ್ಯಕ್ತವಾಗಿದೆ ಎಂಬುವುದು ಗಮನಾರ್ಹ ಸಂಗತಿಯಾಗಿದೆ. ಇದರ ಬೆನ್ನಲ್ಲೇ ಲಿಂಗಾಯತ ಸಮುದಾಯದ ನಾಯಕರ ಅಸಮಾಧಾನವೂ ಶೋಭಾ ಕರಂದ್ಲಾಜೆಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ ಅವರನ್ನು ವಿಶ್ವಾಸಕ್ಕೆ ಪಡೆದಕೊಂಡಿಲ್ಲ ಎಂಬುದು ಸಮುದಾಯದ ನಾಯಕರ ಆರೋಪವಾಗಿದೆ.

ಶೋಭಾ ಕರಂದ್ಲಾಜೆ ಅವರು ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆಗೆ ತೆರಳಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಕೆ ಮಾಡಿದರು. ಆದರೆ ಈ ಸಂದರ್ಭದಲ್ಲಿ ಮಾಜಿ ಸಿಎಂ ಡಿವಿ ಸದಾನಂದ ಗೌಡರು ಗೈರಾಗಿರುವುದು ಗಮನ ಸೆಳೆಯಿತು.

ಸದಾನಂದಗೌಡ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರು ಉತ್ತರದಿಂದ ಎರಡು ಬಾರಿ ಗೆಲುವು ಕಂಡು, ಮೋದಿ ಅವರ ಕ್ಯಾಬಿನೆಟ್ನಲ್ಲಿ ಪ್ರಬಲ ಖಾತೆ ನಿರ್ವಹಿಸಿದ್ದಾರೆ. ಆದರೆ ಈ ಬಾರಿ ಬಿಜೆಪಿ ಅವರಿಗೆ ಟಿಕೆಟ್ ನೀಡಲಿಲ್ಲ. ಇದರಿಂದ ಬೇಸಗೊಂಡಿದ್ದ ಸದಾನಂದ ಗೌಡರು ಬಹಿರಂಗವಾಗಿಯೇ ಅಸಮಧಾನ ಹೊರಹಾಕಿದ್ದರು. ಇನ್ನೇನು ಕಾಂಗ್ರೆಸ್ಗೆ ಹೋಗಿಯೇ ಬಿಡುತ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಅಂತಿಮವಾಗಿ ಅವರ ಮನವೊಲಿಸಿ, ಪಕ್ಷದಲ್ಲಿ ಉಳಿಸುಕೊಳ್ಳುವಲ್ಲಿಹೈಕಮಾಂಡ್ ಸಕ್ಸಸ್ ಆಯಿತು.

ಬಿಜೆಪಿಯಲ್ಲಿ ಉಳಿದಿದ್ದರೂ ಕೂಡ ಸದಾನಂದಗೌಡ ಅವರು ತಮ್ಮದೇ ಕ್ಷೇತ್ರದ ಅಭ್ಯರ್ಥಿಯ ಪ್ರಚಾರಕ್ಕೆ ಹೋಗದೆ ದೂರವೇ ಉಳಿದಿದ್ದಾರೆ. ಇದರಿಂದ ಕ್ಷೇತ್ರದಲ್ಲಿನ ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತಿದೆ.

ಕ್ಷೇತ್ರದ ಬಲಾಬಲ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಅದರಲ್ಲಿ 5 ಕ್ಷೇತ್ರಗಳು ಬಿಜೆಪಿ, 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಈ ಶಾಸಕರ ಬಲಾಬಲ ನೋಡಿದರೆ ಬಿಜೆಪಿಗೆ ಹೆಚ್ಚಿನ ಅನುಕೂಲ ಆಗುತ್ತದೆ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ ಐವರು ಬಿಜೆಪಿ ಶಾಸಕರಲ್ಲಿ ಈಗಾಗಲೇ ಒಬ್ಬ ಶಾಸಕ ಬಹಿರಂಗವಾಗಿಯೇ ಕಾಂಗ್ರೆಸ್ಗೆ ಬೆಂಬಲ ಘೋಷಿಸಿ, ಪ್ರಚಾರದಲ್ಲೂ ತೊಡಗಿಕೊಂಡಿದ್ದಾರೆ.

ಅತಿ ದೊಡ್ಡ ವಿಧಾನಸಭಾ ಕ್ಷೇತ್ರವಾಗಿರುವ ಯಶವಂತಪುರ ಕ್ಷೇತ್ರದ ಶಾಸಕ ಎಸ್ಟಿ ಸೋಮಶೇಖರ್ ಅವರು ಬಿಜೆಪಿ ಶಾಸಕರಾಗಿದ್ದರೂ ಕೂಡ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಇದೀಗ ಪಕ್ಷದ ಬಲಾಬಲದ ಲೆಕ್ಕಾಚಾರದಲ್ಲಿ ಬಿಜೆಪಿ-ಕಾಂಗ್ರೆಸ್ 4-4 ಎಂದಾಯಿತು.

ಇನ್ನು ಕೆಆರ್ ಪುರಂನಲ್ಲಿ ಬೈರತಿ ಬಸವರಾಜ್ ಅವರು ಬಿಜೆಪಿ ಟಿಕೆಟ್ನಲ್ಲಿ ಗೆದ್ದಿದ್ದಾರೆ. ಸೋದರ ಸಂಬಂಧಿ ಬೈರತಿ ಸುರೇಶ್ ಸಚಿವರಾಗಿರುವ ಹಿನ್ನೆಲೆಯಲ್ಲಿ ಅವರನ್ನು ತಮ್ಮ ಪರವಾಗಿ ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.

ಮತ್ತೊಂದೆಡೆ, ಬಾಂಬೆ ಬಾಯ್ಸ್ ಕುರಿತು ಆರ್ ಅಶೋಕ್ ಅವರು ಹೇಳಿಕೆಯೊಂದನ್ನು ನೀಡಿದ್ದರು. ಅವರನ್ನೆಲ್ಲಾ ಸಿದ್ದರಾಮಯ್ಯ ಅವರೇ ಬಾಂಬೆಗೆ ಕಳುಹಿಸಿ, ಸರ್ಕಾರವನ್ನು ಬೀಳಿಸಿದರು ಎಂದು ಆರೋಪ ಮಾಡಿದ್ದರು. ಬಾಂಬೆ ಬಾಯ್ಸ್ ತಂಡದ ಸದಸ್ಯರಲ್ಲಿ ಒಬ್ಬರಾಗಿರುವ ಬೈರತಿ ಬಸವರಾಜ್ ಅವರು ಇದೀಗ ಸಿದ್ದರಾಮಯ್ಯ ಅವರ ಆದೇಶದಂತೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಾರಾ ಎನ್ನುವ ಪ್ರಶ್ನೆಗಳು ಮೂಡಿವೆ. ಸಧ್ಯ ಅವರು ತಟಸ್ಥರಾಗಿದ್ದು, ಕೊನೆಯ ಕ್ಷಣದಲ್ಲಿ ಏನಾಗುತ್ತದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಇನ್ನುಳಿದಂತೆ ದಾಸರಹಳ್ಳಿ, ಮಹಾಲಕ್ಸ್ಮಿ ಲೇಔಟ್, ಮಲ್ಲೇಶ್ವರಂನಲ್ಲಿ ಬಿಜೆಪಿ ಶಾಸಕರಿದ್ದಾರೆ. ಪುಲಕೇಶಿನಗರ, ಹೆಬ್ಬಾಳ, ಬ್ಯಾಟರಾಯನಪುರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇದು ಈ ಲೋಕಸಭಾ ಚುನಾವಣೆಯ ಗೆಲುವಿಗೆ ಇಬ್ಬರೂ ಅಭ್ಯರ್ಥಿಗಳಿಗೆ ಬಲ ತಂದುಕೊಡಬಲ್ಲದು.

ಕ್ಷೇತ್ರದಲ್ಲಿ ಒಟ್ಟು 31,74,098 ಮತದಾರರಿದ್ದು, ಪುರುಷರು 16,29,089 ಹಾಗೂ ಮಹಿಳೆಯರು 15,44,415 ಮತದಾರರಿದ್ದಾರೆ.

Read More
Next Story