ರಾಜ್ಯಪಾಲ vs ಸರ್ಕಾರ : ಮತ್ತೆ ಮುಂದುವರಿದ ಜಿದ್ದು; ಮಾತುಕತೆ ತಂತ್ರ
x

ರಾಜ್ಯಪಾಲ vs ಸರ್ಕಾರ : ಮತ್ತೆ ಮುಂದುವರಿದ ಜಿದ್ದು; ಮಾತುಕತೆ ತಂತ್ರ

ರಾಜ್ಯದ ಕಲ್ಯಾಣದ ದೃಷ್ಟಿಯಿಂದ ಹಲವು ಅಂಶಗಳನ್ನು ಸೇರಿಸಿದ್ದೇವೆ. ರಾಜ್ಯಪಾಲರು ಕೆಲ ವಿಷಯಗಳನ್ನು ಮಾರ್ಪಾಡು ಮಾಡಲು ಸೂಚಿಸಿದ್ದಾರೆ. ಸರ್ಕಾರ ಆ ನಿಟ್ಟಿನಲ್ಲಿ ಗಮನ ಹರಿಸಲಿದೆ. ಕೆಲವು ಪ್ಯಾರಾಗಳನ್ನು ಕೈಬಿಡಲು ಸೂಚಿಸಿದ್ದಾರೆ ಎಂದು ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ.


Click the Play button to hear this message in audio format

ವಿಬಿ ಜಿ ರಾಮ್ ಜಿ ಕಾಯ್ದೆ ವಿಚಾರದಲ್ಲಿ ತಲೆದೋರಿದ್ದ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಸಂಘರ್ಷ ಮುಂದುವರಿದಿದೆ.

ವಿಧಾನ ಮಂಡಲ ಜಂಟಿ ಅಧಿವೇಶನಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಿದ್ದ ಕೇಂದ್ರ ಸರ್ಕಾರದ ವಿರುದ್ಧದ ಅಂಶಗಳನ್ನು ತೆಗೆದು ಹಾಕಲು ಸರ್ಕಾರ ಒಪ್ಪಿಗೆ ಸೂಚಿಸಿದ ನಂತರ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್​​ ಅವರು ಭಾಷಣ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾದರೂ ಸರ್ಕಾರ ಅದಕ್ಕೆ ಒಪ್ಪಿಗೆ ಕೊಟ್ಟಿಲ್ಲ ಎನ್ನಲಾಗಿದೆ.

ಕಾರ್ಮಿಕರ ಕೆಲಸವನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಇದರ ವಿರುದ್ಧ ನಿರ್ಣಯ ತೆಗೆದುಕೊಳ್ಳಬೇಕಾಗಿದೆ ಎಂಬ ಸಾಲುಗಳು ಭಾಷಣದಲ್ಲಿ ಇದ್ದವು. ಕೇಂದ್ರದ ವಿರುದ್ಧ ಅಂಶಗಳನ್ನು ಒಳಗೊಂಡಿದ್ದ ಒಟ್ಟು 11 ಪ್ಯಾರಾಗಳನ್ನು ಭಾಷಣದ ಕೈಪಿಡಿಯಿಂದ ಕೈ ಬಿಡಲು ಸರ್ಕಾರ ಒಪ್ಪಿಕೊಂಡಿದೆ ಎಂದು ಆರಂಭದಲ್ಲಿ ಹೇಳಲಾದರೂ ಸಿಎಂ ಸಿದ್ದರಾಮಯ್ಯ ಅದಕ್ಕೆ ಸಮ್ಮತಿ ಸೂಚಿಸುತ್ತಿಲ್ಲ ಎಂದು ಹೇಳಲಾಗಿದೆ.

ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರು ನಿರಾಕರಿಸಿದ ಬೆನ್ನಲ್ಲೇ ಬುಧವಾರ ಸಂಜೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಸಚಿವರ ನಿಯೋಗ ಲೋಕಭವನಕ್ಕೆ ಭೇಟಿ ನೀಡಿ ರಾಜ್ಯಪಾಲರ ಮನವೊಲಿಕೆ ಪ್ರಯತ್ನ ನಡೆಸಿತು. ನಿಯೋಗದಲ್ಲಿ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ ಸೇರಿ ಹಿರಿಯ ಅಧಿಕಾರಿಗಳು ಇದ್ದರು. ಅವರು ಆರಂಭದಲ್ಲಿ ರಾಜ್ಯಪಾಲರ ಹೇಳಿಕೆಗೆ ಸಮ್ಮತಿ ಕೊಟ್ಟರೂ, ನಂತರದಲ್ಲಿ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಸಂವಿಧಾನದ ವಿಧಿ 176 ಪ್ರಕಾರ ಸದನಕ್ಕೆ ಆಗಮಿಸಿ ರಾಜ್ಯಪಾಲರು ಭಾಷಣ ಮಾಡಬೇಕು. ಈ ಕುರಿತು ನಾವು ಮನವಿ ಮಾಡಿದ್ದೇವೆ. ಕೇಂದ್ರದ ವಿರುದ್ಧದ 11 ಪ್ಯಾರಾಗಳನ್ನು ಕೈಬಿಡುವಂತೆ ಸಲಹೆ ನೀಡಿದ್ದಾರೆ. ಅದಕ್ಕೆ ಸರ್ಕಾರ ಒಪ್ಪಿಕೊಂಡಿದೆ ಎಂದು ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.

ಎಚ್.ಕೆ. ಪಾಟೀಲ್ ಹೇಳಿದ್ದೇನು?

ರಾಜ್ಯಪಾಲರು ಸರ್ಕಾರದ ಭಾಷಣ ಓದಬೇಕು ಎಂಬುದನ್ನು ಸಂವಿಧಾನದ 176 ವಿಧಿ ಹೇಳುತ್ತದೆ. ಇದು ರಾಷ್ಟಪತಿ, ರಾಜ್ಯಪಾಲರಿಗೂ ಅನ್ವಯವಾಗಲಿದೆ. ನಾವು ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್‌ಗೆ ಹೋಗಬೇಕಿದೆ. 15 ನೇ ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ತಿಳಿಸಲಾಗಿದೆ. ಇವೆಲ್ಲವನ್ನೂ ಭಾಷಣದಲ್ಲಿ ಪ್ರಸ್ತಾಪ ಮಾಡಲಾಗಿತ್ತು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.

ರಾಜ್ಯದ ಕಲ್ಯಾಣದ ದೃಷ್ಟಿಯಿಂದ ಹಲವು ಅಂಶಗಳನ್ನು ಸೇರಿಸಿದ್ದೇವೆ. ರಾಜ್ಯಪಾಲರು ಕೆಲ ವಿಷಯಗಳನ್ನು ಮಾರ್ಪಾಡು ಮಾಡಲು ಸೂಚಿಸಿದ್ದಾರೆ. ಸರ್ಕಾರ ಆ ನಿಟ್ಟಿನಲ್ಲಿ ಗಮನ ಹರಿಸಲಿದೆ. ಕೆಲವು ಪ್ಯಾರಾಗಳನ್ನು ಕೈಬಿಡಲು ಸೂಚಿಸಿದ್ದಾರೆ. ಅದು ಅಷ್ಟು ಸಮಂಜಸ ಅಲ್ಲ, ರೈತರು, ಕೃಷಿ ಕಾರ್ಮಿಕರ ಹಕ್ಕನ್ನು ಕೇಂದ್ರ ಸರ್ಕಾರ ಕಸಿದಿದೆ, ಇದರ ಬಗ್ಗೆ ಧ್ವನಿ ಎತ್ತಬಾರದೆ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ಅಧಿಕಾರ ಕೇಂದ್ರೀಕರಣ ಮಾಡಲು ಹೊರಟಿದೆ. ಈ ಬಗ್ಗೆ ಜಂಟಿ ಸದನದಲ್ಲಿ ತಿಳಿಸಬಾರದು ಅಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಕೆಲವು ಬದಲಾವಣೆಗಳಿಗೆ ನಾವು ಸಿದ್ದರಿದ್ದೇವೆ. 11ಪ್ಯಾರಾಗಳನ್ನು ಬದಲಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ರಾಜ್ಯದ ಬೆಳವಣಿಗೆ, ಮುಂದಿನ ಕೆಲಸ ಕಾರ್ಯಗಳು ಬಗ್ಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.

ಜಂಟಿ ಅಧಿವೇಶನಕ್ಕೆ ರಾಜ್ಯಪಾಲರು ಬರುವುದಿಲಕ್ಲ ಎಂದು ಹೇಳಿಲ್ಲ. ಕೆಲ ಮಾರ್ಪಾಡಿಗೆ ಸೂಚಿಸಿದ್ದಾರೆ. ಇಂದು ರಾತ್ರಿಯೇ ರಾಜ್ಯಪಾಲರಿಗೆ ಪರಿಷ್ಕೃತ ಭಾಷಣದ ಪ್ರತಿ ಸಲ್ಲಿಸಲಾಗುವುದು ಎಂದು ಎಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ತುರ್ತು ಸಭೆ

ತಮಿಳುನಾಡು ಹಾಗೂ ಕೇರಳದಂತೆ ಕರ್ನಾಟಕದಲ್ಲಿಯೂ ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ಸಂಘರ್ಷ ಏರ್ಪಟ್ಟಿದೆ. ರಾಜ್ಯಪಾಲರು ಸದನಕ್ಕೆ ಆಗಮಿಸಿ ಸರ್ಕಾರದ ಭಾಷಣ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ತುರ್ತು ಸಭೆ ನಡೆಸಲಾಯಿತು.

ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಎಚ್.ಕೆ. ಪಾಟೀಲ್ ನಿಯೋಗ ಭೇಟಿ ನೀಡಿ, ರಾಜ್ಯಪಾಲರು ಸದನಕ್ಕೆ ಆಗಮಿಸದಿರುವ ಬಗ್ಗೆ ಮಾಹಿತಿ ನೀಡಿದ್ದರು. ಆಗ ಸಿಎಂ ಸಿದ್ದರಾಮಯ್ಯ ಅವರು ಕಾನೂನು ಸಚಿವರು ಹಾಗೂ ಕಾನೂನು ಸಲಹೆಗಾರರಿಗೆ ಕೂಡಲೇ ಲೋಕಭವನಕ್ಕೆ ತೆರಳಿ ರಾಜ್ಯ ರಾಜ್ಯಪಾಲರೊಂದಿಗೆ ಮಾತನಾಡುವಂತೆ ಸೂಚಿಸಿದ್ದರು.

ಸಂವಿಧಾನದ 176ನೇ ವಿಧಿ ಹೇಳುವುದೇನು ?

ಪ್ರತಿ ಸಾರ್ವತ್ರಿಕ ಚುನಾವಣೆಯ ನಂತರದ ಮೊದಲ ಅಧಿವೇಶನದಲ್ಲಿ ಮತ್ತು ಪ್ರತಿ ವರ್ಷದ ಮೊದಲ ಅಧಿವೇಶನದ ಆರಂಭದಲ್ಲಿ, ರಾಜ್ಯಪಾಲರು ವಿಧಾನಮಂಡಲದ ಸದನಗಳನ್ನು (ವಿಧಾನಸಭೆ ಮತ್ತು ವಿಧಾನ ಪರಿಷತ್ತು ಇರುವ ಕಡೆ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡಬೇಕು.

ರಾಜ್ಯಪಾಲರು ಶಾಸಕಾಂಗವನ್ನು ಕರೆದಿರುವ ಉದ್ದೇಶವನ್ನೂ (Causes of its Summons) ಈ ಭಾಷಣದಲ್ಲಿ ವಿವರಿಸಬೇಕು. ರಾಜ್ಯಪಾಲರ ಭಾಷಣದ ನಂತರ, ಆ ಭಾಷಣದಲ್ಲಿ ಪ್ರಸ್ತಾಪಿಸಲಾದ ವಿಷಯಗಳ ಬಗ್ಗೆ ಚರ್ಚಿಸಲು ಸದನದ ನಿಯಮಾವಳಿಗಳು ಸಮಯವನ್ನು ನಿಗದಿಪಡಿಸಬೇಕು ಎಂದು ಈ ವಿಧಿ ಹೇಳುತ್ತದೆ.

ಇದು ವರ್ಷದ ಆರಂಭದಲ್ಲಿ ರಾಜ್ಯ ಸರ್ಕಾರವು ತನ್ನ ನೀತಿಗಳು, ಸಾಧನೆಗಳು ಮತ್ತು ಮುಂದಿನ ಯೋಜನೆಗಳನ್ನು ಶಾಸಕಾಂಗದ ಮುಂದೆ ಮಂಡಿಸುವ ಸಾಂವಿಧಾನಿಕ ಪ್ರಕ್ರಿಯೆಯಾಗಿದೆ. ರಾಜ್ಯಪಾಲರು ಸರ್ಕಾರದ ಮುಖ್ಯಸ್ಥರಾಗಿ (Head of the State) ಈ ಭಾಷಣವನ್ನು ಮಾಡುತ್ತಾರೆ, ಆದರೆ ಭಾಷಣದ ಪಠ್ಯವನ್ನು (Text) ಚುನಾಯಿತ ಸರ್ಕಾರ (ಸಚಿವ ಸಂಪುಟ) ಸಿದ್ಧಪಡಿಸುತ್ತದೆ. ಈ ವಿಧಿಯ ಪ್ರಕಾರ, ರಾಜ್ಯಪಾಲರು ಈ ಕರ್ತವ್ಯವನ್ನು ನಿರ್ವಹಿಸುವುದು ಸಾಂವಿಧಾನಿಕವಾಗಿ ಕಡ್ಡಾಯವಾಗಿದೆ ಎಂದು ಪರಿಗಣಿಸಲಾಗುತ್ತದೆ.

Read More
Next Story