ನಟಿ, ಮಾಜಿ ಸಂಸದೆ ಜಯಪ್ರದಾ ಬಂಧನಕ್ಕೆ ಯುಪಿ ಕೋರ್ಟ್ ಸೂಚನೆ
ನಟಿ ಮತ್ತು ಮಾಜಿ ಸಂಸದೆ ಜಯಪ್ರದಾ ಅವರನ್ನು "ಪರಾರಿ" ಎಂದು ಘೋಷಿಸಿದ್ದು, ಅವರನ್ನು ಬಂಧಿಸಿ ಮಾರ್ಚ್ 6 ರಂದು ನ್ಯಾಯಾಲಯಕ್ಕೆ ಮುಂದೆ ಹಾಜರುಪಡಿಸುವಂತೆ ಯುಪಿ ಕೋರ್ಟ್ ಹೇಳಿದೆ.
ಉತ್ತರ ಪ್ರದೇಶದ ರಾಂಪುರದ ನ್ಯಾಯಾಲಯವು ನಟಿ ಮತ್ತು ಮಾಜಿ ಸಂಸದೆ ಜಯಪ್ರದಾ ಅವರನ್ನು "ಪರಾರಿ" ಎಂದು ಘೋಷಿಸಿದ್ದು, ಅವರನ್ನು ಬಂಧಿಸಿ ಮಾರ್ಚ್ 6 ರಂದು ತನ್ನ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯವು ರಾಜ್ಯ ಪೊಲೀಸರಿಗೆ ಮಂಗಳವಾರ (ಫೆಬ್ರವರಿ 27) ಸೂಚಿಸಿದೆ.
2019 ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ರಾಂಪುರದ ಮಾಜಿ ಸಂಸದೆ ಜಯಪ್ರದಾ ಅವರ ವಿರುದ್ಧ ಕೆಮಾರಿ ಮತ್ತು ಸ್ವರ್ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಅಮರನಾಥ್ ತಿವಾರಿ ಹೇಳಿದ್ದಾರೆ.
ನಟಿ 2019 ರ ಚುನಾವಣೆಯಲ್ಲಿ ರಾಂಪುರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದರು. ಸಮಾಜವಾದಿ ಪಕ್ಷದ ಅಜಂ ಖಾನ್ ನಟಿಯನ್ನು ಸೋಲಿಸಿದರು. ಜಯಪ್ರದಾ ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ 2004 ಮತ್ತು 2009 ರಲ್ಲಿ ರಾಮ್‌ಪುರದಿಂದ ಲೋಕಸಭೆಗೆ ಆಯ್ಕೆಯಾದರು. ನಂತರ ಎಸ್ಪಿ ಆಕೆಯನ್ನು ಹೊರಹಾಕಿತ್ತು.
ಈ ಪ್ರಕರಣಗಳಲ್ಲಿ ವಿಶೇಷ ಸಂಸದ-ಶಾಸಕ ನ್ಯಾಯಾಲಯ ಹಲವು ಬಾರಿ ಸಮನ್ಸ್ ಜಾರಿ ಮಾಡಿದ್ದರೂ ಜಯಪ್ರದಾ ವಿಚಾರಣೆಗೆ ಹಾಜರಾಗಿರಲಿಲ್ಲ. ಆಕೆಯ ವಿರುದ್ಧ ಏಳು ಬಾರಿ ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಲಾಯಿತು. ಆದರೆ ಪೊಲೀಸರು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಾಧ್ಯವಾಗಲಿಲ್ಲ.
ಬಂಧನದಿಂದ ತಪ್ಪಿಸಿಕೊಳ್ಳುತ್ತಿರುವ ಜಯಪ್ರದಾ
ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಜಯಪ್ರದಾ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಮತ್ತು ಮೊಬೈಲ್ ಸಂಖ್ಯೆಗಳನ್ನು ಸ್ವಿಚ್ ಆಫ್ ಮಾಡಲಾಗಿದೆ ಎಂದು ಹೇಳಿದರು.
ಈ ಬಗ್ಗೆ ನ್ಯಾಯಾಧೀಶ ಶೋಭಿತ್ ಬನ್ಸಾಲ್ ಕಠಿಣ ನಿಲುವು ತಳೆದು ಜಯಪ್ರದಾ ಅವರನ್ನು ಪರಾರಿಯಾಗಿದ್ದಾರೆ ಎಂದು ತಿವಾರಿ ಹೇಳಿದ್ದಾರೆ.
ಸರ್ಕಲ್ ಆಫೀಸರ್ ನೇತೃತ್ವದಲ್ಲಿ ತಂಡವನ್ನು ರಚಿಸಿ ಜಯಪ್ರದಾ ಅವರನ್ನು ಬಂಧಿಸಿ ಮಾರ್ಚ್ 6 ರಂದು ಮುಂದಿನ ವಿಚಾರಣೆಯ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ರಾಂಪುರದ ಪೊಲೀಸ್ ಅಧೀಕ್ಷಕರಿಗೆ ನ್ಯಾಯಾಲಯವು ಆದೇಶಿಸಿದೆ.