ಇಂಡಿಯಾ ಮೈತ್ರಿಕೂಟ: ಮಹಾರಾಷ್ಟ್ರದಲ್ಲಿ ಆ ಎಂಟು ಲೋಕಸಭಾ ಕ್ಷೇತ್ರಗಳೇ ಕಗ್ಗಂಟು
x
ರಾಹುಲ್‌ ಗಾಂಧಿ

ಇಂಡಿಯಾ ಮೈತ್ರಿಕೂಟ: ಮಹಾರಾಷ್ಟ್ರದಲ್ಲಿ ಆ ಎಂಟು ಲೋಕಸಭಾ ಕ್ಷೇತ್ರಗಳೇ ಕಗ್ಗಂಟು

ಕಾಂಗ್ರೆಸ್‌ ನಾಯಕರ ಪಕ್ಷಾಂತರ ತಂದ ಸಂಕಷ್ಟ | ಇಂಡಿಯಾ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು


ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇದರ ನಡುವೆ ಮಹಾರಾಷ್ಟ್ರದಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿ ಲೋಕಸಭಾ ಸೀಟು ಹಂಚಿಕೆ ಕಗ್ಗಂಟಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಈ ಬಗ್ಗೆ ಚರ್ಚೆ ಮಾಡಿದ್ದಾರೆ.

ಮುಂಬೈನ ಆರು ಲೋಕಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಸ್ಪರ್ಧಿಸಲು ಉತ್ಸುಕವಾಗಿದೆ ಎನ್ನಲಾಗಿದೆ. ಇದರಲ್ಲಿ ಮುಂಬೈ ಸೌತ್ ಸೆಂಟ್ರಲ್, ಮುಂಬೈ ನಾರ್ತ್ ಸೆಂಟ್ರಲ್ ಮತ್ತು ಮುಂಬೈ ನಾರ್ತ್ ವೆಸ್ಟ್ ಲೋಕಸಭಾ ಕ್ಷೇತ್ರಗಳು ಸೇರಿವೆ.

ಮತ್ತೊಂದೆಡೆ, ಶಿವಸೇನೆಯು ಮುಂಬೈನ ನಾಲ್ಕು ಕ್ಷೇತ್ರಗಳಾದ - ಮುಂಬೈ ದಕ್ಷಿಣ, ಮುಂಬೈ ವಾಯುವ್ಯ, ಮುಂಬೈ ಈಶಾನ್ಯ ಮತ್ತು ಮುಂಬೈ ದಕ್ಷಿಣ ಸೆಂಟ್ರಲ್ ಸೇರಿದಂತೆ ರಾಜ್ಯದ 18 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದೆ.

ಮಹಾರಾಷ್ಟ್ರದಲ್ಲಿ 40 ಕ್ಷೇತ್ರಗಳಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್, ಶಿವಸೇನೆ ಮತ್ತು ಎನ್‌ಸಿಪಿಯ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯು ಒಮ್ಮತಕ್ಕೆ ಬಂದಿವೆ. ಆದರೆ, ಇನ್ನೂ 8 ಲೋಕಸಭಾ ಕ್ಷೇತ್ರಗಳಲ್ಲಿ ಯಾರು ಸ್ಪರ್ಧಿಸಬೇಕು ಎನ್ನುವುದು ಕಗ್ಗಂಟಾಗಿದೆ.

ಈಚೆಗೆ ಕಾಂಗ್ರೆಸ್‌ನ ಮಾಜಿ ಸಿ.ಎಂ ಅಶೋಕ್ ಚವಾಣ್ ಮತ್ತು ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಅವರಂತಹ ಘಟಾನುಘಟಿ ನಾಯಕರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ ಆಗಿರುವುದು ಸೀಟು ಹಂಚಿಕೆ ಕಗ್ಗಂಟಾಗಲು ಕಾರಣವಾಗಿದೆ.

ಕಾಂಗ್ರೆಸ್ ನಾಯಕರ ಪಕ್ಷಾಂತರದ ನಂತರ ಮುಂಬೈನ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನವನ್ನು ಬಿಟ್ಟು ಕೊಡುವಂತೆ ಶಿವಸೇನೆ (ಯುಬಿಟಿ) ಒತ್ತಡ ತಂತ್ರ ಅನುಸರಿಸುತ್ತಿದೆ.

ಎಲ್ಲ ಪಕ್ಷಗಳಿಗೂ ಈ ಬಾರಿಯ ಲೋಕಸಭೆ ಚುನಾವಣೆ ನಿರ್ಣಾಯಕವಾಗಿದೆ. ಈ ಎಲ್ಲ ಪಕ್ಷಗಳೂ ಮಹಾರಾಷ್ಟ್ರದಲ್ಲಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ರಣತಂತ್ರ ರೂಪಿಸುತ್ತಿದೆ.

ಅವಿಭಜಿತ ಶಿವಸೇನೆ 2019ರ ಲೋಕಸಭೆ ಚುನಾವಣೆಯಲ್ಲಿ 48 ಸ್ಥಾನಗಳಲ್ಲಿ 22ರಲ್ಲಿ ಸ್ಪರ್ಧಿಸಿತ್ತು. ಅದರಲ್ಲಿ ಮುಂಬೈನ ಮೂರು ಲೋಕಸಭಾ ಕ್ಷೇತ್ರ ಸೇರಿದಂತೆ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

Read More
Next Story