ಎಐ ರಚಿತ ಚಿತ್ರ.
x

ಜಾತಿ ಗಣತಿ ವರದಿ ಅನುಷ್ಠಾನ; ಸಿಎಂ ಸಿದ್ದರಾಮಯ್ಯ ರಾಜಕೀಯ ಚಾಣಾಕ್ಷತೆಗೆ ಪರೀಕ್ಷೆ

ಕರ್ನಾಟಕ ರಾಜ್ಯ ರಾಜಕೀಯದ ಅಧಿಕಾರ ಕೇಂದ್ರಿಕರಣದ ನಕಾಶೆಯನ್ನೇ ಬದಲಾಯಿಸುವ ಈ ವರದಿಯ ಬಗ್ಗೆ ಲಿಂಗಾಯತರು, ಒಕ್ಕಲಿಗರು ವಿರೋಧಿಸುವುದು ಸಹಜ. ಅದನ್ನು ಎದುರಿಸಲು, ಅವರಿಗೆ ಮನವರಿಕೆ ಮಾಡಲು, ಈ ಸಮುದಾಯದ ನಾಯಕರಿಗೆ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಥಾ ರಾಜಕೀಯ ಮುತ್ಸದ್ದಿತನ, ಜಾಣತನ ತೋರುತ್ತಾರೆ ಎನ್ನುವುದು ಇನ್ನೂ ಅರ್ಥ ಆಗಿಲ್ಲ.


ಗುರುವಾರ (ಏಪ್ರಿಲ್​ 17ರಂದು) ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇದೇ ಮೊದಲ ಬಾರಿಗೆ ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಚಿವರ ಜೊತೆ ಮುಖಾಮುಖಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದರ ವಿರುದ್ಧದ ಪ್ರತಿಭಟನೆಯ ಅಂದಾಜು ಸಿಗತೊಡಗಿದೆ.

ಬಹಿರಂಗವಾಗಿ ತಮ್ಮ ತಮ್ಮ ಸಮುದಾಯಗಳ ಕಿವಿಗೆ ಕೇಳುವಂತೆ, ಅವರ ಕೃಪೆಗೆ ಪಾತ್ರರಾಗಲು ಅಬ್ಬರಿಸುವುದು ಬೇರೆ. ಆದರೆ ಸಂಬಂಧಪಟ್ಟ ವಿಷಯದ ಚರ್ಚೆಗೆ ಅಧಿಕೃತ ಮತ್ತು ನಿರ್ಣಾಯಕ ವೇದಿಕೆ ಸಿಕ್ಕಾಗ ಅದರ ಒಳಗೆ ಅಷ್ಟೇ ಜೋರಾಗಿ ಮಾತಾಡುವಷ್ಟು ಗಟ್ಟಿತನ ಉಳಿಸಿಕೊಳ್ಳುವುದು ಬೇರೆ. ಇಂಥ ಸ್ಪಷ್ಟ ವ್ಯತ್ಯಾಸ ವಿಶೇಷ ಸಚಿವ ಸಂಪುಟ ಸಭೆಯ ಚರ್ಚೆಯಲ್ಲಿ ಸ್ಪಷ್ಟವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಾಗಿ ಹೋಯಿತು.

ಕರ್ನಾಟಕ ರಾಜ್ಯ ರಾಜಕೀಯದ ಅಧಿಕಾರ ಕೇಂದ್ರಿಕರಣದ ನಕಾಶೆಯನ್ನೇ ಬದಲಾಯಿಸುವ ಈ ವರದಿಯ ಬಗ್ಗೆ ಲಿಂಗಾಯತರು, ಒಕ್ಕಲಿಗರು ವಿರೋಧಿಸುವುದು ಸಹಜ. ಅದನ್ನು ಎದುರಿಸಲು, ಅವರಿಗೆ ಮನವರಿಕೆ ಮಾಡಲು, ಈ ಸಮುದಾಯದ ನಾಯಕರಿಗೆ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಥಾ ರಾಜಕೀಯ ಮುತ್ಸದ್ದಿತನ, ಜಾಣತನ ತೋರುತ್ತಾರೆ ಎನ್ನುವುದು ಇನ್ನೂ ಅರ್ಥ ಆಗಿಲ್ಲ.

ಸಚಿವ ಸಂಪುಟದ ಒಳಗೆಯೇ ಇರುವ ಗುಂಪುಗಾರಿಕೆ ರಾಜಕಾರಣ ಮತ್ತೊಂದೆಡೆ ಆದರೆ, ಇದನ್ನು ಖಡಕ್ ಆಗಿ ವಿರೋಧಿಸುತ್ತಿರುವ ಪ್ರತಿಪಕ್ಷ ರಾಜಕಾರಣಕ್ಕೆ ಎದಿರೇಟು ಕೊಡುವ ತಾಕತ್ತು ಅಷ್ಟೇ ಮುಖ್ಯ. ಈ ತಾಕತ್ತಿನ ಪ್ರದರ್ಶನವನ್ನು ಸಿಎಂ ಹೇಗೆ ಮಾಡುತ್ತಾರೆ? ಎನ್ನುವುದು ಇಲ್ಲಿಯ ಪ್ರಶ್ನೆ.

ತಮ್ಮ ಹತ್ತಿರದವರ ಬಳಿ ಸಿದ್ದರಾಮಯ್ಯ ಈ ಬಗ್ಗೆ ದೀರ್ಘ ಸಮಾಲೋಚನೆ ಮಾಡಿದ್ದಾರೆ. ಈ ವರದಿಯನ್ನು ಕರ್ನಾಟಕದ ದಿಕ್ಕು, ದಿಸೆ, ರಾಜಕೀಯ ಹೆಜ್ಜೆ ಗುರುತುಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿ ಬಳಸಬಹುದು. ಇಲ್ಲವೇ ಕರ್ನಾಟಕವನ್ನು ಒಡೆಯುವ ಶಕ್ತಿಯೂ ಇದಕ್ಕಿದೆ. ಆದ್ದರಿಂದ ಇಲ್ಲಿ ಯಾವ ತಂತ್ರಕ್ಕೆ, ಯಾವ ಶಕ್ತಿಗೆ ಮೇಲುಗೈ ಆಗುತ್ತದೆ ಎನ್ನುವುದು ಮುಖ್ಯವಾಗಿದೆ. ಅವರು ಇದನ್ನು ವಿರೋಧಿಸುವವರ ಶಕ್ತಿಯನ್ನು ಸಿಎಂ ಅಳೆದು ತೂಗಿ ನೋಡುತ್ತಿದ್ದಾರೆ ಎನ್ನುವುದಕ್ಕೆ ನಿನ್ನೆಯ ಸಚಿವ ಸಂಪುಟ ಸಭೆ ಸಾಕ್ಷಿಯಾಗಿದೆ.

ಇಲ್ಲಿ ಲಿಂಗಾಯತ, ಒಕ್ಕಲಿಗರ ಆಕ್ರೋಶದ ಹೇಳಿಕೆ, ಕರ್ನಾಟಕ ಬಂದ್ ಬೆದರಿಕೆಯ ಮಾತುಗಳ ಆಚೆಗೂ, ಒಂದು ವೇಳೆ ಇದನ್ನು ಜಾರಿಗೆ ತರದಿದ್ದರೆ ಹಿಂದುಳಿದ ವರ್ಗಗಳು, ಎಸ್ಸಿ, ಎಸ್ಟಿ ಸಮುದಾಯಗಳು ಮತ್ತು ಅಲ್ಪಸಂಖ್ಯಾತರ ಪ್ರತಿಕ್ರಿಯೆ ಏನಿರುತ್ತದೆ ಎಂಬ ಬಗ್ಗೆಯೂ ಸಿಎಂ ಭಾರಿ ತಲೆಕೆಡಿಸಿಕೊಂಡಿದ್ದಾರೆ. ಬರೀ ಒಕ್ಕಲಿಗರು, ಲಿಂಗಾಯಿತರು ಎಂದು ಅಬ್ಬರ ಸೃಷ್ಟಿಯಾಗಿದೆಯೇ ಹೊರತು ಅಹಿಂದ ವರ್ಗ ಏನು ಹೇಳುತ್ತೆ ಎನ್ನುವ ಬಗ್ಗೆ ಈವರೆಗೆ ಚರ್ಚೆ ನಡೆದಿಲ್ಲ. ಲಿಂಗಾಯಿತ, ಒಕ್ಕಲಿಗರ ಪ್ರತಿಭಟನೆಗಿಂತ ಸಿದ್ದರಾಮಯ್ಯ ಅವರಿಗೆ ಇದು ಹೆಚ್ಚು ಮುಖ್ಯ.

ಈ ಸಮುದಾಯಗಳು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್. ಅವರಿಗೆ ಹೆಚ್ಚಿನ ಮೀಸಲಾತಿ, ರಾಜಕೀಯ ಅಧಿಕಾರ ಕಲ್ಪಿಸುವ ಈ ವರದಿಯನ್ನು ಜಾರಿಗೆ ತರಲಿಲ್ಲ ಎನ್ನುವುದಕ್ಕಾಗಿ, ಈ ಸಮುದಾಯಗಳು ತಿರುಗಿಬಿದ್ದರೆ, ಕಾಂಗ್ರೆಸ್ ಪಕ್ಷದ ನಿಂತ ನೆಲವೇ ಕುಸಿಯುತ್ತದೆ. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರದೇ ವಚನ ಭಂಗ ಆಗುತ್ತದೆ. ಅಂತಹ ಸಂದರ್ಭದಲ್ಲಿಈ ಸಮುದಾಯಗಳಿಗೆ ಏನು ಉತ್ತರ ನೀಡಬೇಕು ಎನ್ನುವುದು ಕೂಡ ಸಿಎಂ ಚಿಂತನೆ ಆಗಿದೆ.

ಇವೆಲ್ಲಕ್ಕೂ ಮುಖ್ಯವಾಗಿ ಲಿಂಗಾಯಿತರ, ಒಕ್ಕಲಿಗರ ಪ್ರತಿಭಟನೆ, ಶಕ್ತಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ಅಂದಾಜು ಸಿಗುತ್ತಿದೆ. ಆದರೂ, ಈ ಸಮುದಾಯಗಳು ತಮ್ಮ ಸರಕಾರದ ವಿರುದ್ಧ ಒಂದು ವೇಳೆ ಸೆಟೆದು ನಿಂತರೆ ಅದನ್ನು ಎದುರಿಸುವಷ್ಟು ಬೆಂಬಲ ಹಿಂದುಳಿದ ವರ್ಗ, ದಲಿತರು, ಮುಸ್ಲಿಮರಿಂದ ಸಾರಾಸಗಟಾಗಿ ಕಾಂಗ್ರೆಸ್ ಪಕ್ಷಕ್ಕೆ ಸಿಗುವ ಬಗ್ಗೆ ಇನ್ನೂ ಖಚಿತ ಉತ್ತರ, ಭರವಸೆಯ ಅಂದಾಜು ಸಿಎಂಗೆ ಇನ್ನೂ ಸಿಗುತ್ತಿಲ್ಲ. ಆದ್ದರಿಂದ ಈ ವರದಿ ಮಂಡನೆ ಅಷ್ಟೇ ಸಾಲದು. ಅದರ ಆಧಾರದ ಮೇಲೆ ಒಂದು ದೊಡ್ಡ ಅಭಿಯಾನವನ್ನು ಕಾಂಗ್ರೆಸ್ ಪಕ್ಷ ನಡೆಸಬೇಕು. ರಾಜ್ಯದ ಮೂಲೆ ಮೂಲೆಗೆ ಈ ಅಭಿಯಾನ ತಲುಪಬೇಕು. ವಿರೋಧಿಗಳ ಪ್ರತಿಭಟನೆ ತೀವ್ರ ಆದಷ್ಟೂ ಅಹಿಂದ ಒಗ್ಗಟ್ಟು ಹೆಚ್ಚಾಗಬಹುದು ಎನ್ನುವ ಅಭಿಪ್ರಾಯದ ಒಂದು ವರದಿ ಅವರ ಕೈ ಸೇರಿದೆ.ಇದು ಸಿಎಂ ಸಿದ್ದರಾಮಯ್ಯ ಸುತ್ತ ಇರುವ ಲೆಕ್ಕಾಚಾರ.

ಇನ್ನು ಇದರ ವಿರೋಧಿಗಳಿಗೂ ಎಲ್ಲವೂ ಸಲೀಸಲ್ಲ. ಚುನಾವಣೆಯಲ್ಲಿ ಗೆಲ್ಲಲು ಒಕ್ಕಲಿಗ ಅಥವಾ ಲಿಂಗಾಯತ ಮತಗಳು ಅಷ್ಟೇ ಸಾಲದು. ಇದನ್ನು ಹೊರತುಪಡಿಸಿ ಪ್ರತಿ ಕ್ಷೇತ್ರದಲ್ಲೂ ಮುಸ್ಲಿಮರು, ದಲಿತರು,ಹಿಂದುಳಿದವರು ಇದ್ದಾರೆ. ಈ ವರದಿ ವಿರೋಧಿಸಿದ ಕಾರಣಕ್ಕೆ ಈ ಅಹಿಂದ ಸಮುದಾಯವನ್ನು ಈ ನಾಯಕರು ಎದುರು ಹಾಕಿಕೊಂಡರೆ ವಿರೋಧಿಸುವವರ ರಾಜಕೀಯ ಭವಿಷ್ಯವೂ ಡೋಲಾಯಮಾನ ಆಗುತ್ತದೆ. ಆದ್ದರಿಂದ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷದ ನಾಯಕರು ವರದಿಯನ್ನು ಬಹಿರಂಗವಾಗಿ ವಿರೋಧಿಸುವ, ಬೆಂಬಲಿಸುವ ಹೇಳಿಕೆಗಳಿಗೆ ಹಲವು ಆಯಾಮಗಳೇ ಇವೆ.

ಗುರುವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗೆ ಗೊತ್ತಾದ ಮತ್ತೊಂದು ಮಹತ್ವದ ವಿಚಾರ ಅಂದರೆ ಈ ವರದಿಯ ದತ್ತಾಂಶದ ಬಗ್ಗೆ ಸ್ಪಷ್ಟತೆ ಬರಬೇಕು. ಸಾರ್ವಜನಿಕವಾಗಿ ಜನರಿಗೆ ಮನವರಿಕೆ ಆಗುವ ನಿಟ್ಟಿನಲ್ಲಿ ಅಂಕಿ ಅಂಶ ಸಹಿತ ಅಭಿಯಾನ ಆಗಬೇಕು. ಈ ದತ್ತಾಂಶಗಳನ್ನು ಕಾನೂನು ಚೌಕಟ್ಟಿನಲ್ಲಿ ಇಟ್ಟು ಇದನ್ನು ಹೊಸ ಮೀಸಲಾತಿ ನೀತಿಯನ್ನಾಗಿ ಪರಿವರ್ತಿಸುವ ಸಾಹಸ ಅಂತಿಂಥದ್ದಲ್ಲ. ಯಾಕಂದ್ರೆ ಹೊಸ ವರದಿ ಪ್ರಕಾರ ಕರ್ನಾಟಕದಲ್ಲಿ ಸುಮಾರು ಶೇ.70 ಕ್ಕೂ ಹೆಚ್ಚು ಮೀಸಲಾತಿಯ ಬೇಡಿಕೆ ಬರುತ್ತದೆ. ಇದರಲ್ಲಿ ಒಕ್ಕಲಿಗರು , ಲಿಂಗಾಯಿತರ ಮೀಸಲಾತಿಯ ಹೆಚ್ಚಳವೂ ಸೇರಿದೆ.ಯಾರಾದ್ರೂ ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋದರೆ ಇದನ್ನು ಸಮರ್ಥಿಸಿಕೊಳ್ಳುವ ಕುಲಶಾಸ್ತ್ರೀಯ ಅಂಕಿ ಅಂಶ ಅಷ್ಟೇ ನಿಖರವಾಗಿ ಇರಬೇಕು. ಇಲ್ಲದಿದ್ದರೆ ಇಡೀ ಕಸರತ್ತು ವ್ಯರ್ಥ ಆಗುವ ಅಪಾಯವೂ ಇರುತ್ತದೆ.

ಇವೆಲ್ಲ ಸಿಎಂ ಸಿದ್ದರಾಮಯ್ಯ ಚಿಂತನೆಯ ಚೌಕಟ್ಟಿನಲ್ಲಿರುವ ಸಂಗತಿಗಳು. ಮುಂದಿನ ಸಚಿವ ಸಂಪುಟ ಸಭೆಯ ಹೊತ್ತಿಗೆ ಈ ಎಲ್ಲ ಸಂಗತಿಗಳಿಗೆ ಒಂದು ಸ್ಪಷ್ಟತೆ ಬಂದಿರುತ್ತದೆ ಎನ್ನುವುದು ಒಂದು ಲೆಕ್ಕಾಚಾರ.

Read More
Next Story