
ಜನಗಳ ಪ್ರತಿನಿಧಿಯಾಗಿ ಮಾತನಾಡದಿದ್ದರೆ ಲೋಕಸಭೆಗೆ ಯಾಕೆ ಹೋಗಬೇಕು?: ಸಿದ್ದರಾಮಯ್ಯ
ಜನಗಳ ಪ್ರತಿನಿಧಿಯಾಗಿ ಲೊಕಸಭೆಯಲ್ಲಿ ಮಾತನಾಡದಿದ್ದರೆ ಯಾಕೆ ಹೋಗಬೇಕು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಹಾಸನ: ಜಂತರ್ ಮಂತರ್ ಬಳಿ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಪ್ರತಿಭಟನೆಯಾದಾಗ ಪ್ರಜ್ವಲ್ ರೇವಣ್ಣ, ದೇವೇಗೌಡ ಬಾಯಿ ಬಿಟ್ಟರೇ? ಜನಗಳ ಪ್ರತಿನಿಧಿಯಾಗಿ ಲೋಕಸಭೆಯಲ್ಲಿ ಮಾತನಾಡದಿದ್ದರೆ ಯಾಕೆ ಹೋಗಬೇಕು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಅವರು ಶನಿವಾರ( ಏಪ್ರಿಲ್ 20) ಹಾಸನ ಲೋಕಸಭಾ ಕ್ಷೇತ್ರದ ಸಕಲೇಶಪುರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಪರವಾಗಿ ಪ್ರಜಾಧ್ವನಿ-02 ಲೋಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಜ್ವಲ್ ರೇವಣ್ಣ 5 ವರ್ಷ ಸಂಸದರಾಗಿ ಏನಾದರೂ ಮಾಡಿದ್ದಾರೆಯೇ? ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಪಾಲು ನೀಡದೆ ಅನ್ಯಾಯ ಮಾಡಿದಾಗಲೂ ಏನೂ ಮಾತನಾಡಲಿಲ್ಲ. ಕರ್ನಾಟಕದಿಂದ ಕೇಂದ್ರಕ್ಕೆ ಕೊಡುವ ತೆರಿಗೆ 4.30 ಲಕ್ಷ ಕೋಟಿ ರೂ.ಗಳು. ನಮಗೆ ವಾಪಸ್ಸು ಬರುವುದು 55 ಕೋಟಿ ರೂ.ಗಳು ಮಾತ್ರ. ಇದು ಅನ್ಯಾಯವಲ್ಲವೇ? ಎಂದರು.
ಬಿಜೆಪಿಯಿಂದ 25 ಜನ ಸಂಸದರಾಗಿದ್ದರು. ಈಗ 27 ಜನರಾಗಿದ್ದಾರೆ. ಇವರು ಯಾರು ಬಾಯಿ ಬಿಡಲಿಲ್ಲ. ನೀರಾವರಿ, ಬರಗಾಲಕ್ಕೆ ಹಣ ಬಿಡುಗಡೆ ಮಾಡಲಿಲ್ಲ. ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಕೊಟ್ಟು ಆರು ತಿಂಗಳಾದರೂ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ನರೇಂದ್ರ ಮೋದಿಯವರಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಬಂದಾಗ ಮಾತ್ರ. ಬರಗಾಲ, ಪ್ರವಾಹ ಬಂದಾಗ ಬರಲಿಲ್ಲ. ರಾಜ್ಯದ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಈ ಬಗ್ಗೆ ನಿಮಗೆ ಕೋಪ ಬಂದಿದ್ದರೆ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಲೋಕಸಭೆಗೆ ಕಳುಹಿಸುವ ತೀರ್ಮಾನ ಮಾಡಲೇಬೇಕು ಎಂದರು.