ಹಾಸನ | ಪ್ರೀತಂ ಗೌಡ ಬೆಂಬಲಿಗರಿಂದ ದಾಂಧಲೆ: ಬಿಜೆಪಿ ಮುಖಂಡನ ಮೇಲೆ ಹಲ್ಲೆ
x

ಹಾಸನ | ಪ್ರೀತಂ ಗೌಡ ಬೆಂಬಲಿಗರಿಂದ ದಾಂಧಲೆ: ಬಿಜೆಪಿ ಮುಖಂಡನ ಮೇಲೆ ಹಲ್ಲೆ

ಮಾಜಿ ಶಾಸಕ ಪ್ರೀತಂ ಗೌಡ ಅವರನ್ನು ಟೀಕಿಸಿದ್ದಾರೆ ಎಂದು ಆರೋಪಿಸಿ ದುಷ್ಕರ್ಮಿಗಳ ತಂಡವೊಂದು ಹಾಸನದ ಬಿಜೆಪಿ ಮುಖಂಡ ವಿಜಯ್‌ ಕುಮಾರ್‌ ಎಂಬವರ ಮೇಲೆ ಹಲ್ಲೆ ನಡೆಸಿದೆ


ಹಾಸನದಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಹಾಗೂ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರ ನಡುವಿನ ಮುಸುಕಿನ ಗುದ್ದಾಟ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ನಡೆಸುವಷ್ಟು ತೀವ್ರಗೊಂಡಿದೆ. ಪ್ರಜ್ವಲ್‌ ರೇವಣ್ಣ ಪರವಾಗಿ ಮಾತನಾಡುತ್ತಾ, ಪ್ರೀತಂ ಗೌಡರನ್ನು ಟೀಕಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರಿಗೆ ಗುಂಪೊಂದು ಹಿಗ್ಗಾಮುಗ್ಗ ಥಳಿಸಿದೆ. ಈ ಹಲ್ಲೆಯನ್ನು ಪ್ರೀತಂ ಗೌಡ ಬೆಂಬಲಿಗರು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಾಸನದ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ವಿಜಯಕುಮಾರ್ ಎಂಬವರ ಒಡೆತನದ ಐನೆಟ್ ಇಂಟರ್‌ನೆಟ್ ಪಾರ್ಲರ್‌ಗೆ ನುಗ್ಗಿದ ದುಷ್ಕರ್ಮಿಗಳ ತಂಡ, ಪೀಠೋಪಕರಣಗಳನ್ನು ಒಡೆದು ಹಾಕಿ, ವಿಜಯ್‌ ಕುಮಾರ್‌ ಮೇಲೆ ಹಲ್ಲೆ ನಡೆಸಿದೆ.

ಗುಂಪಿನ ದಾಳಿಯಿಂದ ವಿಜಯಕುಮಾರ್ ಅವರನ್ನು ರಕ್ಷಿಸಲು ಬಂದ ಪ್ರಮೋದ್ ಮತ್ತು ಸಂದೇಶ್ ಅವರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ದುಷ್ಕರ್ಮಿಗಳ ಗುಂಪು ನಡೆಸುತ್ತಿರುವ ದಾಂಧಲೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಘಟನೆ ಹಿನ್ನೆಲೆ:

ಹಾಸನದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಕಣಕ್ಕಿಳಿಸಲಾಗಿದೆ. ಆದರೆ, ಬಿಜೆಪಿ ಮಾಜಿ ಶಾಸಕ ಜೆ. ಪ್ರೀತಂ ಗೌಡ ಹಾಗೂ ಪ್ರಜ್ವಲ್‌ ನಡುವೆ ಮನಸ್ತಾಪ ಇದ್ದು, ಅಭ್ಯರ್ಥಿ ಪರವಾಗಿ ಪ್ರೀತಂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಎನ್‌ಡಿಎ ಅಭ್ಯರ್ಥಿಯನ್ನು ಸೋಲಿಸಲು ಪ್ರೀತಂ ಗೌಡ ಅವರು ಪ್ರಯತ್ನ ಪಡುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿತ್ತು. ಇದಕ್ಕೆ ಪೂರಕವಾಗಿ, ಪ್ರೀತಂ ಗೌಡ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಉದ್ದೂರ್ ಪುರುಷೋತ್ತಮ್ ಎಂಬವರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಭೇಟಿಯಾಗಿದ್ದರು. ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಒಂದು ಗುಂಪು ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರಚಾರ ಮಾಡಲು ನಿರ್ಧರಿಸಿದ್ದರು. ಇದರ ಹಿಂದೆ, ಪ್ರೀತಂ ಗೌಡ ಹುನ್ನಾರ ಇದೆ ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದರು.

ಈ ಬಗ್ಗೆ ಖಾಸಗಿ ಮಾಧ್ಯಮವೊಂದು, ಸ್ಥಳೀಯ ಆರ್‌ಎಸ್‌ಎಸ್‌-ಬಿಜೆಪಿ ಮುಖಂಡ ಐನೆಟ್‌ ವಿಜಯ್‌ ಕುಮಾರ್‌ ಅವರನ್ನು ಸಂಪರ್ಕಿಸಿ ಪ್ರತಿಕ್ರಿಯೆ ಕೇಳಿದಾಗ, ವಿಜಯ್‌ ಕುಮಾರ್‌ ಅವರು ಪ್ರೀತಂ ಗೌಡ ವಿರುದ್ಧ ಮಾತನಾಡಿದ್ದಾರೆ ಎನ್ನಲಾಗಿದೆ.

ʼನರೇಂದ್ರ ಮೋದಿ ಅವರ ಬಲವರ್ಧನೆಗೆ ಹಾಸನದಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸುತ್ತೇವೆ. ಎಲ್ಲರಿಗೂ ಇರುವುದು ಒಂದು ವೋಟ್‌, ನನಗೂ ಅದೇ ಒಂದು ವೋಟ್‌, ಪ್ರೀತಂ ಗೌಡ ಅವರಿಗೂ ಒಂದೇ ಓಟ್. ಯಾರಿಗೂ ಯಾರನ್ನೂ ಸೋಲಿಸಲು ಆಗುವುದಿಲ್ಲʼ ಎಂಬರ್ಥದಲ್ಲಿ ವಿಜಯ್‌ ಕುಮಾರ್‌ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದರು. ಇದರಿಂದ ರೊಚ್ಚಿಗೆದ್ದ ಪ್ರೀತಂ ಗೌಡ ಬೆಂಬಲಿಗರು ವಿಜಯಕುಮಾರ್‌ ಅವರ ಇಂಟರ್‌ ನೆಟ್‌ ಪಾರ್ಲರ್‌ ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಸದ್ಯ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಬೇಲೂರು ಶಾಸಕ ಎಚ್.ಕೆ.ಸುರೇಶ್, ಭವಾನಿ ರೇವಣ್ಣ ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿ ವಿಜಯಕುಮಾರ್ ಆರೋಗ್ಯ ವಿಚಾರಿಸಿದ್ದು, ಹಲ್ಲೆ ನಡೆಸಿದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

Read More
Next Story