ಲೋಕ ಸ್ವಾರಸ್ಯ | ತಾರಕ್ಕೇರಿದ ಪ್ರಚಾರ ಪೈಪೋಟಿ: ʼಚೊಂಬಿಗೆʼ ಈಗ ʼಚಿಪ್ಪಿʼನ ತಿರುಗೇಟು
x

ಲೋಕ ಸ್ವಾರಸ್ಯ | ತಾರಕ್ಕೇರಿದ ಪ್ರಚಾರ ಪೈಪೋಟಿ: ʼಚೊಂಬಿಗೆʼ ಈಗ ʼಚಿಪ್ಪಿʼನ ತಿರುಗೇಟು

ಲೋಕಸಭೆ ಚುನಾವಣೆ ಪ್ರಚಾರದ ಅಖಾಡದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಕುತೂಹಲಕಾರಿ ವರಸೆಯಲ್ಲಿ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದು, ಚೊಂಬು, ಚಿಪ್ಪುಗಳನ್ನು ಬಳಸಿ ಮತದಾರರಿಗೆ ಭರ್ಜರಿ ಮನರಂಜನೆ ನೀಡುತ್ತಿವೆ


ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ್ದ ʼಚೊಂಬುʼ ಪ್ರಚಾರಕ್ಕೆ ಪ್ರತಿಯಾಗಿ ಬಿಜೆಪಿ‌ ಇದೀಗ ʼಚಿಪ್ಪುʼ ಪ್ರಚಾರಕ್ಕೆ ಇಳಿದಿದೆ. ಕನ್ನಡಿಗರ ಕೈಗೆ ಕಾಂಗ್ರೆಸ್‌ ಚಿಪ್ಪು ನೀಡಿದೆ ಎಂದು ಕೇಸರಿ ಪಕ್ಷ ಪ್ರಚಾರ ಆರಂಭಿಸಿದೆ.

ನರೇಂದ್ರ ಮೋದಿ ಸರ್ಕಾರ ರಾಜ್ಯಕ್ಕೆ ಚೊಂಬು ನೀಡಿದೆ ಎಂದು ಕಾಂಗ್ರೆಸ್‌ ಮಾಡಿದ ಪ್ರಚಾರ ವ್ಯಾಪಕ ಗಮನ ಸೆಳೆಯುತ್ತಿದ್ದಂತೆ, ಬಿಜೆಪಿ ಈ ಪ್ರತಿ ದಾಳಿ ಆರಂಭಿಸಿದೆ.

ಕಾಂಗ್ರೆಸ್‌ ಆಡಳಿತದಲ್ಲಿ ಕರ್ನಾಟಕ ಜನತೆಗೆ, ರೈತರಿಗೆ, ದಲಿತರಿಗೆ, ಹಿಂದೂಗಳಿಗೆ, ವಿದ್ಯಾರ್ಥಿಗಳಿಗೆ ಕಾರ್ಮಿಕರ ಕೈಗೆ ಚಿಪ್ಪು ನೀಡಲಾಗಿದೆ ಎಂದು ಬಿಜೆಪಿ ತನ್ನ ಪೋಸ್ಟರ್‌ ನಲ್ಲಿ ಹೇಳಿದೆ.

ಕಾಂಗ್ರೆಸ್‌ ವಿರುದ್ಧ ಬಿಜೆಪಿ ಮಾಡಿದ ಪೋಸ್ಟರ್‌ ನಲ್ಲಿ ಏನಿದೆ?

ತೆಂಗಿನಕಾಯಿಯ ಚಿಪ್ಪಿನ ಫೋಟೋ ಹಾಕಿರುವ ಬಿಜೆಪಿ ಅದರ ಕೆಳಗೆ-

  • ಕಾಂಗ್ರೆಸ್‌ ಆಡಳಿತದಲ್ಲಿ ಕರ್ನಾಟಕ ಜನತೆ ಕೈಗೆ ಚಿಪ್ಪು
  • ಬರದಿಂದ ತತ್ತರಿಸಿದ ರೈತರ ಕೈಗೆ ಚಿಪ್ಪು
  • ಕಾವೇರಿ ನೀರು ತಮಿಳುನಾಡಿಗೆ ಬಿಟ್ಟು ಬೆಂಗಳೂರಿಗರ ಕೈಗೆ ಚಿಪ್ಪು
  • ದಲಿತರ 11 ಸಾವಿರ ಕೋಟಿ ರೂ. ದುರ್ಬಳಕೆ ಮಾಡಿ ತಳ ಸಮುದಾಯದ ಕೈಗೆ ಚಿಪ್ಪು
  • ಅಲ್ಪಸಂಖ್ಯಾತರ ಓಲೈಕೆಯಿಂದ ಹಿಂದೂಗಳ ಕೈಗೆ ಚಿಪ್ಪು
  • ಕಿಸಾನ್‌ ಸಮ್ಮಾನ್‌ ನ 4000 ಕೋಟಿ ರೂ. ಸ್ಥಗಿತಗೊಳಿಸಿ ರೈತರ ಕೈಗೆ ಚಿಪ್ಪು
  • ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಕೈಗೆ ಚಿಪ್ಪು
  • ವಿದ್ಯಾನಿಧಿ ನೀಡದೆ ವಿದ್ಯಾರ್ಥಿಗಳ ಕೈಗೆ ಚಿಪ್ಪು
  • ಪ್ರತಿದಿನ ಪ್ರಯಾಣ ಮಾಡುವ ಕಾರ್ಮಿಕರ ಕೈಗೆ ಚಿಪ್ಪು
  • ಆಟೋ ಮತ್ತು ಕ್ಯಾಬ್‌ ಚಾಲಕರಿಗೆ ಚಿಪ್ಪು ಎಂದು ಬರೆದಿದೆ.

ಮೋದಿ ಸರ್ಕಾರದ ವಿರುದ್ಧ ಚೊಂಬು ಜಾಹೀರಾತು ನೀಡಿದ್ದ ಕಾಂಗ್ರೆಸ್‌

ಇತ್ತೀಚೆಗೆ ಪ್ರಮುಖ ದಿನಪತ್ರಿಕೆಗಳ ಮುಖಪುಟದಲ್ಲಿ ಕೇಂದ್ರ ಸರಕಾರದ ವಿರುದ್ಧ ಜಾಹೀರಾತು ನೀಡಿದ್ದ ಕಾಂಗ್ರೆಸ್‌, ಮೋದಿ ಸರ್ಕಾರ ಕನ್ನಡಿಗರಿಗೆ ಚೊಂಬು ನೀಡಿದೆ ಎಂದು ಹೇಳಿತ್ತು. ಮೋದಿ ವೇದಿಕೆಯಲ್ಲಿರುವಾಗಲೇ ಈ ಜಾಹೀರಾತಿರುವ ಪತ್ರಿಕೆಯನ್ನು ಪಕ್ಕದಲ್ಲಿ ಕುಳಿತಿದ್ದ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಅವರು ಓದುತ್ತಿರುವ ಚಿತ್ರ ವ್ಯಾಪಕ ಟ್ರೋಲ್‌ ಗೆ ಗುರಿಯಾಗಿತ್ತು. ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಖಾಲಿ ಚೊಂಬುಗಳನ್ನು ಪ್ರದರ್ಶಿಸಿ ಕಾಂಗ್ರೆಸ್‌ ಪ್ರತಿಭಟನೆ ಕೂಡಾ ನಡೆಸಿತ್ತು.

ಇದಕ್ಕೆ ತಿರುಗೇಟು ನೀಡಿದ್ದ, ಬಿಜೆಪಿ 2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚೊಂಬು ಹಿಡಿದುಕೊಂಡು ಬಯಲು ಶೌಚಕ್ಕೆ ಹೋಗುತ್ತಿರುವ ಮತ್ತು 2023ರಲ್ಲಿ ಚೊಂಬು ಹಿಡಿದುಕೊಂಡು ಕೇಂದ್ರ ಸರ್ಕಾರ ನಿರ್ಮಿಸಿದ ಶೌಚಾಲಯಕ್ಕೆ ಹೋಗುತ್ತಿರುವಂತೆ ಪೋಸ್ಟರ್‌ ಹರಿಬಿಟ್ಟಿತ್ತು.

ಒಟ್ಟಾರೆ, ಮತದಾನದ ದಿನ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಚುನಾವಣಾ ಪ್ರಚಾರದ ಕಾವು ಏರಿದ್ದು, ಪ್ರಮುಖ ಪಕ್ಷಗಳೆರಡು ಪರಸ್ಪರ ʼಚೊಂಬುʼ ಮತ್ತು ʼಚಿಪ್ಪುʼ ತೋರಿಸಿಕೊಂಡು ಕಾಲೆಳೆದುಕೊಳ್ಳುತ್ತಿವೆ. ಮತದಾರರು ಮಾತ್ರ ಎರಡೂ ಪಕ್ಷಗಳ ನಡುವಿನ ಈ ಚೊಂಬು-ಚಿಪ್ಪಿನ ಹಾವು ಏಣಿ ಆಟವನ್ನು ನೋಡಿ ಮುಸಿನಗುತ್ತಲೇ ಇವಿಎಂ ಮಷೀನಿನ ಬಟನ್‌ ಒತ್ತುವ ಕ್ಷಣಕ್ಕಾಗಿ ಕಾದಿದ್ದಾನೆ. ಒಮ್ಮೆ ಆತ ಬಟನ್‌ ಒತ್ತಿದ ಬಳಿಕ ನಿಜವಾಗಿಯೂ ಯಾರ ಕೈಗೆ ಚಿಪ್ಪು, ಯಾರಿಗೆ ಚೊಂಬು ಎಂಬುದು ನಿರ್ಧಾರವಾಗಲಿದೆ. ಅದಕ್ಕಾಗಿ ಜೂನ್‌ 4 ರ ಮತ ಎಣಿಕೆಯವರೆಗೆ ಕಾಯಬೇಕಿದೆ.

Read More
Next Story