ಯುಪಿಯಲ್ಲಿ ಕಾಂಗ್ರೆಸ್-ಎಸ್ಪಿ ಮೈತ್ರಿ?
ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಶೀಘ್ರದಲ್ಲಿ ಯುಪಿಯಲ್ಲಿ ಕಾಂಗ್ರೆಸ್-ಎಸ್ಪಿ ಮೈತ್ರಿ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಹೊಸದಿಲ್ಲಿ: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರೊಂದಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ದೂರವಾಣಿ ಮೂಲಕ ಮಾತನಾಡಿದ್ದಾರೆ.
ದೂರವಾಣಿ ಸಂಭಾಷಣೆಯಲ್ಲಿ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ಕುರಿತು ಚರ್ಚಿಸಿ, ಶೀಘ್ರದಲ್ಲಿ ಯುಪಿಯಲ್ಲಿ ಕಾಂಗ್ರೆಸ್-ಎಸ ಮೈತ್ರಿ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ 16-18 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.
ಪ್ರಿಯಾಂಕಾ ಗಾಂಧಿ ಮತ್ತು ಯಾದವ್ ನಡುವಿನ ದೂರವಾಣಿ ಸಂಭಾಷಣೆಯ ಬಳಿಕ ನಡೆದ ಒಪ್ಪಂದದ ಪ್ರಕಾರ, ಕಾಂಗ್ರೆಸ್ಗೆ ಈಗ ಸೀತಾಪುರ ಮತ್ತು ಬಾರಾಬಂಕಿ ಸ್ಥಾನಗಳು ಸಿಕ್ಕಿವೆ ಎನ್ನಲಾಗಿದೆ.
ಈ ಸ್ಥಾನಗಳಲ್ಲದೆ ಕಾಂಗ್ರೇಸ್ ಕಾನ್ಪುರ, ವಾರಣಾಸಿ, ಸಹರಾನ್ಪುರ, ಅಮ್ರೋಹಾ, ಫತೇಪುರ್ ಸಿಕ್ರಿ ಮತ್ತು ಝಾನ್ಸಿ ಇತರ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.
ಮೊರಾದಾಬಾದ್ ವಿಭಾಗದಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಕೇಳುತ್ತಿದೆ ಆದರೆ ಅಮ್ರೋಹಾಗೆ ಮಾತ್ರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಯಾದವ್ ಬುಧವಾರ ಹೇಳಿದ್ದಾರೆ.
ಚುನಾವಣೆಗೆ ಸೀಟು ಹಂಚಿಕೆ ಪ್ರಸ್ತಾಪವನ್ನು ಅಂಗೀಕರಿಸಿದರೆ ಮಾತ್ರ ಅವರು ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಸೇರುತ್ತಾರೆ ಎಂದು ಅವರ ಪಕ್ಷವು ಈ ಹಿಂದೆ ಹೇಳಿತ್ತು. ಮಂಗಳವಾರ ರಾಯ್ಬರೇಲಿಯಲ್ಲಿ ನಡೆದ ಯಾತ್ರೆಯಲ್ಲಿ ಯಾದವ್ ಪಾಲ್ಗೊಂಡಿರಲಿಲ್ಲ.
ಸೀಟು ಹಂಚಿಕೆ ಒಪ್ಪಂದ ಪ್ರಕಟವಾದ ನಂತರ ಯಾದವ್ ಆಗ್ರಾದಲ್ಲಿ ನಡೆಯುವ ಯಾತ್ರೆಗೆ ಸೇರಬಹುದು ಎನ್ನಲಾಗಿದೆ.
ಉತ್ತರ ಪ್ರದೇಶದಲ್ಲಿ 17 ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ಗೆ ನೀಡುವುದಾಗಿ ಎಸ್ಪಿ ಸೋಮವಾರ ಹೇಳಿತ್ತು. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳು ರಚಿಸಿರುವ ಇಂಡಿಯಾ ಬ್ಲಾಕ್ನಲ್ಲಿ ಎಸ್ಪಿ ಮತ್ತು ಕಾಂಗ್ರೆಸ್ ಪಾಲುದಾರರಾಗಿದ್ದಾರೆ.