ಹರಿಯಾಣ ಚುನಾವಣೆ ಕುರಿತ ಆಯೋಗದ ಪ್ರತಿಕ್ರಿಯೆಗೆ ಕಾಂಗ್ರೆಸ್ ಕೆಂಡಾಮಂಡಲ; ಕಾನೂನು ಕ್ರಮದ ಎಚ್ಚರಿಕೆ
ಚುನಾವಣಾ ಆಯೋಗದ ಉತ್ತರವನ್ನು ಬೆದರಿಕೆಯ ಧ್ವನಿಯಲ್ಲಿ ಬರೆಯಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ "ಅಕ್ರಮಗಳ" ಬಗ್ಗೆ ತನ್ನ ದೂರುಗಳಿಗೆ ಚುನಾವಣಾ ಆಯೋಗ ನೀಡಿರುವ ಉತ್ತರಕ್ಕೆ ಕಾಂಗ್ರೆಸ್ ಕಠಿಣ ಪ್ರತಿಕ್ರಿಯೆ ನೀಡಿದೆ.ಚುನಾವಣಾ ಆಯೋಗವು ಕಾಂಗ್ರೆಸ್ ಮತ್ತು ಅದರ ನಾಯಕರ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದೆ.
ಚುನಾವಣಾ ಆಯೋಗದ ಉತ್ತರವನ್ನು ಬೆದರಿಕೆಯ ಧ್ವನಿಯಲ್ಲಿ ಬರೆಯಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಚುನಾವಣಾ ಆಯೋಗವು ಅಂತಹ ಭಾಷೆಯನ್ನು ಮುಂದುವರಿಸಿದರೆ ಕಾನೂನು ನೆರವು ಪಡೆಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿದೆ. ನಿಷ್ಪಕ್ಷಪಾತವೆಂಬ ನೀತಿಯನ್ನು ಅಳಿಸಿ ಹಾಕುವುದೇ ಚುನಾವಣಾ ಆಯೋಗದ ಗುರಿಯಾಗಿದ್ದರೆ ಅಂತಹ ಭಾವನೆ ಸೃಷ್ಟಿಸುವಲ್ಲಿ ಅದು ಗಮನಾರ್ಹ ಕ್ರಮಗಳನ್ನು ನಡೆಗಳನ್ನು ಇಡುತ್ತಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಇತ್ತೀಚೆಗೆ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿನ ಅಕ್ರಮಗಳು ನಡೆದಿವೆ. ಅದರಿಂದ ಫಲಿತಾಂಶಗಳ ಮೇಲೆ ಪರಿಣಾಮ ಬೀರಿದೆ ಎಂದು ಕಾಂಗ್ರೆಸ್ ಮಾಡಿದ ಆರೋಪಗಳಿಗೆ ಪ್ರತಿಯಾಗಿ ಚುನಾವಣಾ ಆಯೋಗವು ಉತ್ತರ ನೀಡಿತ್ತು.ಅಲ್ಲದೆ, ಕಾಂಗ್ರೆಸ್ ಆರೋಪಗಳನ್ನು ಸಾರಾಸಗಟುಯ ತಿರಸ್ಕರಿಸಿತ್ತು. ಇದಾದ ಕೆಲವು ದಿನಗಳ ನಂತರ ಕಾಂಗ್ರೆಸ್ ತನ್ನ ಪ್ರತಿಕ್ರಿಯೆ ನೀಡಿದೆ. ಈ ಹಿಂದೆ ಮಾಡಿದಂತೆಯೇ ಇಡೀ ಚುನಾವಣಾ ಫಲಿತಾಂಶದ ವಿಶ್ವಾಸಾರ್ಹತೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತಾಗಿದೆ ಎಂದು ಹೇಳಿದೆ.
ಸ್ವಯಂ ಕ್ಲೀನ್ ಚಿಟ್ ನೀಡಿದೆ
ಸಂವಹನ ಕಾರ್ಯದರ್ಶಿ ಜೈರಾಮ್ ರಮೇಶ್ ಸೇರಿದಂತೆ 9 ಹಿರಿಯ ಕಾಂಗ್ರೆಸ್ ನಾಯಕರು ಸಹಿ ಮಾಡಿದ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ,"ನಮ್ಮ ದೂರುಗಳಿಗೆ ನೀವು ಕೊಟ್ಟಿರುವ ಪ್ರತಿಕ್ರಿಯೆಗಳನ್ನು ನಾವು ಎಚ್ಚರಿಕೆಯಿಂದ ಅಧ್ಯಯನ ಮಾಡಿದ್ದೇವೆ. ಚುನಾವಣಾ ಆಯೋಗವು ತನಗೆ ತಾನೇ ಕ್ಲೀನ್ ಚಿಟ್ ನೀಡಿರುವುದು ಅಚ್ಚರಿ ಎನಿಸಿಲ್ಲ.ನಾವು ಈ ಪ್ರತಿಕ್ರಿಯೆಯನ್ನು ಹಾಗೆಯೇ ಬಿಡುತ್ತಿದ್ದೆವು. ಆದಾಗ್ಯೂ, ಚುನಾವಣಾ ಆಯೋಗದ ಪ್ರತಿಕ್ರಿಯೆಯ ಧ್ವನಿ ಮತ್ತು ಅವಧಿ, ಬಳಸಿದ ಭಾಷೆ ಮತ್ತು ಕಾಂಗ್ರೆಸ್ ವಿರುದ್ಧ ಮಾಡಿದ ಆರೋಪಗಳ ರೀತಿಯಿಂದಾಗಿ ನಾವು ಪ್ರತಿಕ್ರಿಯೆ ನೀಡುವಂತಾಯಿತು ಎಂದ ಬರೆಯಲಾಗಿದೆ.
ಗೌರವಾನ್ವಿತ ಆಯೋಗಕ್ಕೆ ಯಾರು ಸಲಹೆ ನೀಡುತ್ತಿದ್ದಾರೆ ಅಥವಾ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ನಮಗೆ ತಿಳಿದಿಲ್ಲ. ಆದರೆ ಆಯೋಗವು ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾದ ಸಂಸ್ಥೆ ಮತ್ತು ಆಡಳಿತಾತ್ಮಕ ಮತ್ತು ಅರೆ-ನ್ಯಾಯಾಂಗ ಎರಡೂ ನಿರ್ಣಾಯಕ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿದೆ ಎಂಬುದನ್ನು ಮರೆತಿದೆ" ಎಂದು ಕಾಂಗ್ರೆಸ್ ನಾಯಕರು ಪ್ರತಕ್ರಿಯಿಸಿದ್ದಾರೆ.
ಹರಿಯಾಣದ 20 ವಿಧಾನಸಭಾ ಕ್ಷೇತ್ರಗಳಲ್ಲಿ ಫಲಿತಾಂಶದ ಕುರಿತು ಕಾಂಗ್ರೆಸ್ ಸಲ್ಲಿಸಿರುವ ನಿರ್ದಿಷ್ಟ ದೂರುಗಳಿಗೆ ಚುನಾವಣಾ ಆಯೋಗ ಉತ್ತರಿಸಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ್ ಹೇಳಿದ್ದಾರೆ.
ಚುನಾವಣಾ ಆಯೋಗವು ಕೇವಲ ಕರ್ತವ್ಯವನ್ನು ನಿರ್ವಹಿಸುತ್ತಿದೆ
ಚುನಾವಣಾ ಆಯೋಗವು ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿದರೆ ಅಥವಾ ಪಕ್ಷ ಎತ್ತಿದ ಸಮಸ್ಯೆಗಳನ್ನು ಸದ್ಭಾವನೆಯಿಂದ ಕಂಡರೆ ಅದು "ಅಪವಾದ" ಎನಿಸುವುದಿಲ್ಲ. ಅದು ಮಾಡಬೇಕಾದ ಕರ್ತವ್ಯ ಎಂದು ಕಾಂಗ್ರೆಸ್ ಪತ್ರದಲ್ಲಿ ತಿಳಿಸಿದೆ.
ಆಯೋಗವು ನಮಗೆ ಉತ್ತರ ನೀಡಲು ನಿರಾಕರಿಸಿದರೆ ಅಥವಾ ಕೆಲವು ದೂರುಗಳ ಬಗ್ಗೆ ಪರಿಶೀಲನೆ ನಡೆಸಲು ನಿರಾಕರಿಸುತ್ತಿದ್ದರೆ (ಅದು ಈ ಹಿಂದೆಯೂ ಮಾಡಿದೆ) ಅದಕ್ಕೆ ನಿರ್ದೇಶ ನೀಡಲು ಉನ್ನತ ನ್ಯಾಯಾಲಯಗಳ ನ್ಯಾಯವ್ಯಾಪ್ತಿಯನ್ನು ಆಶ್ರಯಿಸಬೇಕಾಗುತ್ತದೆ ಎಂದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದ ಕಾಂಗ್ರೆಸ್ ನಾಯಕರು, ಚುನಾವಣಾ ಆಯೋಗದ ಪ್ರತಿಯೊಂದು ಉತ್ತರವು ಈಗ ನಾಯಕರ ಮೇಲಿನ ವೈಯಕ್ತಿಕ ದಾಳಿ ಎಂದು ಹೇಳಿದೆ.
ಪಕ್ಷದ ಗಮನವು ಸಮಸ್ಯೆಗಳಿಗೆ ಸೀಮಿತವಾಗಿದೆ
ತೀರ್ಪು ಬರೆಯುವ ನ್ಯಾಯಾಧೀಶರು ಸಮಸ್ಯೆಗಳನ್ನು ಪ್ರಶ್ನಿಸುವವರ ಮೇಲೆ ದಾಳಿ ಮಾಡುವುದಿಲ್ಲ. ಆದಾಗ್ಯೂ, ಚುನಾವಣಾ ಆಯೋಗವು ಇದೇ ವಾದ ಮುಂದುವರಿಸಿದರೆ ಅಂತಹ ಹೇಳಿಕೆಗಳ ವಿರುದ್ಧ ಕಾನೂನು ನೆರವು ಪಡೆಯುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಯಿಲ್ಲ ಎಂದು ರಮೇಶ್, ಕೆ.ಸಿ.ವೇಣುಗೋಪಾಲ್, ಅಶೋಕ್ ಗೆಹ್ಲೋಟ್ ಸಹಿ ಮಾಡಿದ ಪತ್ರದಲ್ಲಿ ತಿಳಿಸಲಾಗಿದೆ. ಭೂಪಿಂದರ್ ಹೂಡಾ, ಅಜಯ್ ಮಾಕೆನ್, ಅಭಿಷೇಕ್ ಸಿಂಘ್ವಿ, ಉದಯ್ ಭಾನ್, ಪ್ರತಾಪ್ ಬಜ್ವಾ ಮತ್ತು ಪವನ್ ಖೇರಾ ಅವರೂ ಈ ಪತ್ರಕ್ಕೆ ಸಹಿ ಮಾಡಿದ್ದರು.