ಬಿಜೆಪಿಗೆ ಬಿಗ್‌ ಶಾಕ್: ಪಕ್ಷಕ್ಕೆ ಗುಡ್‌ ಬೈ ಹೇಳಿ, ಕಾಂಗ್ರೆಸ್‌ನತ್ತ ಮುಖ ಮಾಡಿದ ಇಬ್ಬರು ಶಾಸಕರು?
x

ಬಿಜೆಪಿಗೆ ಬಿಗ್‌ ಶಾಕ್: ಪಕ್ಷಕ್ಕೆ ಗುಡ್‌ ಬೈ ಹೇಳಿ, ಕಾಂಗ್ರೆಸ್‌ನತ್ತ ಮುಖ ಮಾಡಿದ ಇಬ್ಬರು ಶಾಸಕರು?

ಇಬ್ಬರು ಶಾಸಕರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಉದ್ದೇಶದಿಂದ ಸ್ಪೀಕರ್ ಭೇಟಿಗೆ ಅವಕಾಶ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿರುವಾಗಲೇ ರಾಜ್ಯದಲ್ಲಿ ಬಿಜೆಪಿಗೆ ಬಿಗ್ ಶಾಕ್‌ ಎದುರಾಗಿದೆ. ಇಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಓರ್ವ ಬಿಜೆಪಿ ಶಾಸಕ ಕಾಂಗ್ರೆಸ್‌ ಪರ ಮತ ಚಲಾಯಿಸಿದ್ದು, ಮತ್ತೋರ್ವ ಶಾಸಕ ಚುನಾವಣೆಗೆ ಗೈರಾಗುವ ಮೂಲಕ ಬಿಜೆಪಿಗೆ ಗುಡ್‌ ಬೈ ಹೇಳಿ ಕಾಂಗ್ರೆಸ್‌ ಕೈ ಹಿಡಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ್‌ ಹಾಗೂ ಯಲ್ಲಾಪುರ ಶಾಸಕ ಶಿವರಾಮ್‌ ಹೆಬ್ಬಾರ್‌ ಅವರು ಈಗಾಗಲೇ ಬಿಜೆಪಿಯಿಂದ ಮಾನಸಿಕವಾಗಿ ದೂರ ಆಗಿದ್ದರು. ಈಗ ರಾಜ್ಯಸಭಾ ಚುನಾವಣೆಯಲ್ಲಿ ಎಸ್‌ಟಿ ಸೋಮಶೇಖರ್‌ ಅವರು ಅಡ್ಡ ಮತದಾನ ಮಾಡಿರುವುದು ಬಹಿರಂಗವಾಗಿದೆ. ಇನ್ನು ಶಿವರಾಮ್‌ ಹೆಬ್ಬಾರ ಅವರು ಚುನಾವಣೆಗೆ ಗೈರಾಗಿದ್ದಾರೆ. ಇಬ್ಬರು ಶಾಸಕರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಉದ್ದೇಶದಿಂದ ಇಂದು ಸ್ಪೀಕರ್ ಅವರನ್ನು ಭೇಟಿ ಮಾಡಲು ಅವಕಾಶ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಅಡ್ಡ ಮತದಾನ ಮಾಡಿರುವ ಎಸ್‌.ಟಿ ಸೋಮಶೇಖರ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ಬಿಜೆಪಿ ನಾಯಕರು ನಾಳೆ ಸ್ಪೀಕರ್‌ಗೆ ದೂರು ನೀಡಲು ಸಿದ್ದತೆ ನಡೆಡಸಿದೆ. ಸ್ಪೀಕರ್‌ಗೆ ಬಿಜೆಪಿ ನಾಯಕರು ದೂರು ನೀಡಿದರೆ ಶಾಸಕರನ್ನು ಅನರ್ಹಗೊಳಿಸುವ ಸಾಧ್ಯತೆಯೂ ಇದೆ..

ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರವೇ ಶಾಸಕ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಉಚ್ಛಾಟನೆಯ ತೂಗುಗತ್ತಿಯಿಂದ ಪಾರಾಗುವ ಪ್ರಯತ್ನವನ್ನು ಶಾಸಕರು ನಡೆಸಿದ್ದಾರೆ.

ರಾಜೀನಾಮೆ ಬಳಿಕ ಇಬ್ಬರು ನಾಯಕರ ಲೆಕ್ಕಾಚಾರ ಏನು?

ಎಸ್‌ ಟಿ ಸೋಮಶೇಖರ್‌ ಅವರು ಇದೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದು, ಇನ್ನು ಅವರ ರಾಜೀನಾಮೆಯಿಂದ ತೆರವಾಗುವ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಅವರ ಪುತ್ರ ನಿಶಾಂತ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡಿಸುವ ಮೂಲಕ ರಾಜಕೀಯ ಭವಿಷ್ಯ ರೂಪಿಸುವ ಚಿಂತನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಹೆಬ್ಬಾರ್ ಅವರು ಕೂಡ ತಮ್ಮ ರಾಜೀನಾಮೆಯಿಂದ ತೆರವಾಗುವ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಪುತ್ರ ವಿವೇಕ್ ಹೆಬ್ಬಾರ್ ಅವರಿಗೆ ಬಿಟ್ಟುಕೊಡುವ ಮೂಲಕ ಕಾಂಗ್ರೆಸ್ ಟಿಕೆಟ್ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Read More
Next Story