ಮತಯಾಚನೆಗೆ ಹೋದ ಪಿಸಿ ಮೋಹನ್‌ಗೆ ಮಹಿಳೆಯಿಂದ ತರಾಟೆ: ತಬ್ಬಿಬ್ಬಾದ ಬಿಜೆಪಿ ಸಂಸದ
x

ಮತಯಾಚನೆಗೆ ಹೋದ ಪಿಸಿ ಮೋಹನ್‌ಗೆ ಮಹಿಳೆಯಿಂದ ತರಾಟೆ: ತಬ್ಬಿಬ್ಬಾದ ಬಿಜೆಪಿ ಸಂಸದ

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸಭೆಯಿಂದ ನಿರ್ಗಮಿಸಿದ ಘಟನೆ ಬೆಳಕಿಗೆ ಬಂದಲ್ಲೇ, ಸಂಸದ ಪಿಸಿ ಮೋಹನ್‌ ಗೂ ಅದೇ ಅನುಭವ ಎದುರಾಗಿದೆ


ಚುನಾವಣಾ ಮತ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗಳು, ಸಂಸದರು ಮತದಾರರಿಂದ ಪ್ರಶ್ನೆಗಳನ್ನು ಎದುರಿಸಿ ಕಾಲ್ಕೀಳುತ್ತಿರುವ ಹಲವು ಘಟನೆಗಳು ವರದಿಯಾಗುತ್ತಿವೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು, ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮಿತಕ್ಕೆ ಸಂಬಂಧಿಸಿದ ಬಹುಕೋಟಿ ಹಗರಣದಲ್ಲಿ ಹಣ ಕಳೆದುಕೊಂಡ ಠೇವಣಿದಾರರ ಪ್ರಶ್ನೆಗಳಿಂದ ತಪ್ಪಿಸಲು ಕಾರ್ಯಕ್ರಮದಿಂದ ಅರ್ಧದಿಂದ ನಿರ್ಗಮಿಸಿದ ಘಟನೆ ಬೆಳಕಿಗೆ ಬಂದಲ್ಲೇ, ಬಿಜೆಪಿಯ ಮತ್ತೋರ್ವ ಸಂಸದ ಸಾಮಾನ್ಯ ಮಹಿಳೆಯೊಬ್ಬರ ಪ್ರಶ್ನೆಗೆ ಉತ್ತರಿಸಲಾಗದೆ ತಬ್ಬಿಬ್ಬಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ಪಿ.ಸಿ ಮೋಹನ್‌ ಅವರಿಗೆ ಮಹಿಳೆಯೊಬ್ಬರು ಸಾರ್ವಜನಿಕವಾಗಿ ಪ್ರಶ್ನೆಗಳ ಸುರಿಮಳೆ ಸುರಿಸಿದ್ದು, ಮಹಿಳೆಯ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ಪಿಸಿ ಮೋಹನ್‌ ಅವರು ತಡವರಿಸಿದ್ದಾರೆ. ಮಹಿಳೆಯೊಂದಿಗೆ ವಾಗ್ವಾದಕ್ಕಿಳಿದ ಪಿಸಿ ಮೋಹನ್‌, ಕೊನೆಗೆ ವಿಡಿಯೋ ಚಿತ್ರೀಕರಣ ಮಾಡುತ್ತಿರುವುದನ್ನು ಕಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ.

ಈ ಬಗ್ಗೆ ಮಾತನಾಡಿದ ಮಹಿಳೆ, “ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ಸಂಸದ ಪಿಸಿ ಮೋಹನ್‌ ಅವರು ಎಷ್ಟು ಬಾರಿ ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ? ಹಲಸೂರು ಲೇಕ್‌, ಶಿವಾಜಿನಗರಕ್ಕೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ? ಏನೆಲ್ಲಾ ಅಭಿವೃದ್ಧಿ ಈ ಕ್ಷೇತ್ರಕ್ಕೆ ಮಾಡಿದ್ದಾರೆ? ಕೋವಿಡ್‌ ಸಮಯದಲ್ಲಿ ಏನು ಕೆಲಸ ಮಾಡಿದ್ದಾರೆ? ಇಂತಹ ಸಂಸದರನ್ನು ಆಯ್ಕೆ ಮಾಡಬಾರದು” ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ತಮ್ಮ ಪ್ರಚಾರದ ವೇಳೆ ಕೋವಿಡ್‌ ಸಂದರ್ಭದಲ್ಲಿ 20 ಸಾವಿರಕ್ಕೂ ಅಧಿಕ ಕರೆ ಸ್ವೀಕರಿಸಿದ್ದೇನೆ, 40 ಸಾವಿರಕ್ಕೂ ಅಧಿಕ ಫುಡ್‌ ಕಿಟ್‌ ವಿತರಿಸಿದ್ದೇನೆ ಎಂದೆಲ್ಲಾ ಪಿಸಿ ಮೋಹನ್‌ ಅವರು ಹೇಳುತ್ತಾ ತಿರುಗುತ್ತಿದ್ದಾರೆ. ಆದರೆ, ಇದನ್ನು ಯಾವ ಭಾಗದಲ್ಲಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಜನರಿಗೆ ಯಾರಿಗೂ ಪಿಸಿ ಮೋಹನ್‌ ಅಂದ್ರೆ ಯಾರು ಅನ್ನೋದು ಗೊತ್ತಿಲ್ಲ ಎಂದು ಮಹಿಳೆ ದೂರಿದ್ದಾರೆ.

Read More
Next Story