![Anna Hazare : ಆಪ್ ಸೋಲಿಗೆ ಕೇಜ್ರಿವಾಲ್ ಕಾರಣ: ಅಣ್ಣಾ ಹಜಾರೆ ಆರೋಪ Anna Hazare : ಆಪ್ ಸೋಲಿಗೆ ಕೇಜ್ರಿವಾಲ್ ಕಾರಣ: ಅಣ್ಣಾ ಹಜಾರೆ ಆರೋಪ](https://karnataka.thefederal.com/h-upload/2025/02/08/511431-arvind-kejriwal-1.webp)
Anna Hazare : ಆಪ್ ಸೋಲಿಗೆ ಕೇಜ್ರಿವಾಲ್ ಕಾರಣ: ಅಣ್ಣಾ ಹಜಾರೆ ಆರೋಪ
Anna Hazare : ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಕೇಜ್ರಿವಾಲ್‌ಗೆ ಗುರುವಾಗಿದ್ದ ಹೋರಾಟಗಾರ ಅಣ್ಣಾ ಹಜಾರೆ ಶನಿವಾರ (ಫೆಬ್ರವರಿ 8) ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಕ್ಷದ ಸೋಲಿನ ಬಳಿಕ ವಾಗ್ದಾಳಿ ನಡೆಸಿದ್ದಾರೆ.
2011ರಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಹೋರಾಟದ ಮುಖಂಡ ಅಣ್ಣಾ ಹಜಾರೆ, ಆಮ್ ಆದ್ಮಿ ಪಕ್ಷದ (AAP) ಉದಯಕ್ಕೆ ಕಾರಣರಾದವರು. ಅವರು ಈಗ ಪಕ್ಷದ ಜತೆಗಿಲ್ಲ. ಆದರೆ, ಅವರ ಶಿಷ್ಯ ಅರವಿಂದ್ ಕೇಜ್ರಿವಾಲ್ ಅದೇ ಪಕ್ಷದ ಮೂಲಕ ಸಿಎಂ ಆಗಿ, ಜೈಲು ಸೇರಿ ಈ ಬಾರಿಯ ಚುನಾವಣೆಯಲ್ಲೂ ಸೋತಿದ್ದಾರೆ. ಇದರೊಂದಿಗೆ ಆಪ್ ತನ್ನ ಭದ್ರಕೋಟೆ ಡೆಲ್ಲಿಯನ್ನು ಕಳೆದುಕೊಂಡಿದೆ. ಈ ಬೆಳವಣಿಗೆ ಬಳಿಕ ಮಾತನಾಡಿದ ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಶೇಷವಾಗಿ ಈಗ ರದ್ದುಗೊಂಡಿರುವ ದೆಹಲಿ ಆಬಕಾರಿ ನೀತಿ (excise policy) ಅಕ್ರಮದಿಂದಾಗಿ ಈ ಸೋಲು ಉಂಟಾಗಿದೆ ಎಂದು ಅವರು ಟೀಕಿಸಿದ್ದಾರೆ.
"ನಾನು ಹಿಂದೆಯೂ ಹೇಳಿದ್ದೆ. ರಾಜಕೀಯ ನಾಯಕರ ನಡೆ, ಚಿಂತನೆಗಳು ಪರಿಶುದ್ಧವಾಗಿರಬೇಕು. ವೈಯಕ್ತಿಕ ಜೀವನದಲ್ಲಿ ದೋಷವಿಲ್ಲದೆ ತ್ಯಾಗಭಾವನೆ ಹೊಂದಿರಬೇಕು. ಇಂತಹ ಗುಣಗಳಿದ್ದಾಗ ಮಾತ್ರ ಮತದಾರರಿಗೆ ವಿಶ್ವಾಸ ಮೂಡುತ್ತದೆ" ಎಂದು ಹಜಾರೆ ಸಂದರ್ಶನದಲ್ಲಿ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಸಂಕಷ್ಟಗಳು
"ನಾನು ಕೇಜ್ರಿವಾಲ್‌ಗೆ ಮೊದಲೇ ಎಚ್ಚರಿಕೆ ಕೊಟ್ಟಿದೆ. ಆದರೆ ಅವರು ಕೇಳಲಿಲ್ಲ. ಅವರು ಮದ್ಯ ನೀತಿಯ ಲಾಭದ ಕಡೆಗೆ ಗಮನ ಹರಿಸಿದರು. ಹಣದ ಕಡೆಗಿನ ಒಲವಿನಿಂದಾಗಿ ಪರಿಸ್ಥಿತಿ ಹೀಗಾಗಿದೆ" ಎಂದು ಹಜಾರೆ ಕಿಡಿಕಾರಿದರು.
2021-22ರ ದೆಹಲಿ ಮದ್ಯ ನೀತಿಯನ್ನು, ಖಾಸಗಿ ವಿತರಕರ ಮತ್ತು ಮಾರಾಟಗಾರರಿಗೆ ಅನುಕೂಲವಾಗುವಂತೆ ರೂಪಿಸಲಾಯಿತು ಎಂಬ ಆರೋಪ ಆಪ್ ಮೇಲಿದೆ. ಇದು ಆಪ್ ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬರುವಂತೆ ಮಾಡಿದ್ದವು.
ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ 2013-14ರಲ್ಲಿ 49 ದಿನಗಳ ಕಾಲ ಆಡಳಿತ ನಡೆಸಿತ್ತು. ನಂತರ 2015ರಿಂದ ನಿರಂತರವಾಗಿ ಒಂದು ದಶಕದವರೆಗೆ ದೆಹಲಿಯ ಮೇಲೆ ಅಧಿಕಾರ ನಡೆಸಿತು. ಆದರೆ ಈಗ ಬಿಜೆಪಿ ದೆಹಲಿಯಲ್ಲಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದೆ. ಕೇಜ್ರಿವಾಲ್ ಸ್ವತಃ ಈ ಚುನಾವಣೆಯಲ್ಲಿ ಭಾರಿ ಸೋಲನುಭವಿಸಿದ್ದಾರೆ.