ರಾಜ್ಯಸಭಾ ಚುನಾವಣೆ | ಅಭ್ಯರ್ಥಿ ಆಯ್ಕೆ ಕಸರತ್ತು, ಇಂದು ಕಾಂಗ್ರೆಸ್ ಮಹತ್ವದ ಸಭೆ
x

ರಾಜ್ಯಸಭಾ ಚುನಾವಣೆ | ಅಭ್ಯರ್ಥಿ ಆಯ್ಕೆ ಕಸರತ್ತು, ಇಂದು ಕಾಂಗ್ರೆಸ್ ಮಹತ್ವದ ಸಭೆ

ನಾಮಪತ್ರ ಸಲ್ಲಿಕೆಗೆ ಫೆ.15 ಕೊನೆಯ ದಿನವಾಗಿರುವುದರಿಂದ ಇನ್ನು ಒಂದೆರಡು ದಿನದಲ್ಲಿ ಮೂರೂ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ಶನಿವಾರ(ಫೆ.10) ಬೆಳಿಗ್ಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯಲಿದೆ.


ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿ ಎರಡು ದಿನಗಳಾದರೂ ರಾಜ್ಯದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಮೈತ್ರಿ ಪಾಳೆಯದಲ್ಲಿ ಯಾರನ್ನು ಚುನಾವಣಾ ಕಣಕ್ಕಿಳಿಸುವುದು ಎಂಬ ಬಗ್ಗೆ ಈವರೆಗೆ ಅಂತಿಮ ತೀರ್ಮಾನವಾಗದೇ ಇರುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಆರಂಭವಾಗಿಲ್ಲ.

ಆದರೆ, ನಾಮಪತ್ರ ಸಲ್ಲಿಕೆಗೆ ಫೆ.15 ಕೊನೆಯ ದಿನವಾಗಿರುವುದರಿಂದ ಇನ್ನು ಒಂದೆರಡು ದಿನದಲ್ಲಿ ಮೂರೂ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ಶನಿವಾರ(ಫೆ.10) ಬೆಳಿಗ್ಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯಲಿದೆ. ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಈಗಾಗಲೇ ದೆಹಲಿಗೆ ಹೋಗಿ ವರಿಷ್ಠರೊಂದಿಗೆ ಅಭ್ಯರ್ಥಿ ಆಯ್ಕೆಯ ಕುರಿತು ಚರ್ಚೆ ನಡೆಸಿ ಬಂದಿದ್ದಾರೆ.

ನಾಲ್ಕು ಸ್ಥಾನ ಅಬಾಧಿತ, ಐದನೆಯದಕ್ಕೆ ಪೈಪೋಟಿ

ರಾಜ್ಯ ವಿಧಾನಸಭಾ ಸದಸ್ಯರು ಪ್ರಾಶಸ್ತ್ಯದ ಮತದಾನದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಈ ಚುನಾವಣೆಯಲ್ಲಿ ಪಕ್ಷಗಳ ಸದ್ಯದ ಸಂಖ್ಯಾಬಲದ ಮೇಲೆ ಕಾಂಗ್ರೆಸ್ ಮೂರು ಮತ್ತು ಬಿಜೆಪಿ ಮೈತ್ರಿಯ ಒಂದು ಸ್ಥಾನ ಗೆಲ್ಲುವುದು ಖಾತರಿ. ಆದರೆ, ಕಾಂಗ್ರೆಸ್ ಪ್ರತಿಪಕ್ಷ ಮೈತ್ರಿಯಿಂದ ಕೆಲವು ಮತಗಳ ಮೇಲೆ ಕಣ್ಣಿಟ್ಟು ನಾಲ್ಕನೇ ಸ್ಥಾನವನ್ನು ತನ್ನದಾಗಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆದರೆ, ಜೆಡಿಎಸ್ ಬಿಜೆಪಿ ಬಲ ಮತ್ತು ಅಡ್ಡ ಮತದಾನದ ಲಾಭ ಪಡೆದು ಐದನೇ ಅಭ್ಯರ್ಥಿಯಾಗಿ ತನ್ನ ಪಕ್ಷದವರೊಬ್ಬರನ್ನು ಆಯ್ಕೆ ಮಾಡುವ ಲೆಕ್ಕಾಚಾರದಲ್ಲಿದೆ. ಈ ನಡುವೆ ಐದನೇ ಅಭ್ಯರ್ಥಿಯಾಗಿ ತನ್ನ ಸದಸ್ಯರನ್ನೇ ಒಬ್ಬರನ್ನು ಕಣಕ್ಕಿಳಿಸಿ ಎರಡೂ ಸ್ಥಾನಗಳನ್ನು ತಾನೇ ಪಡೆದುಕೊಳ್ಳುವ ತಂತ್ರಗಾರಿಕೆ ಬಿಜೆಪಿಯದ್ದು.

ಹೀಗಾಗಿ ಕಾಂಗ್ರೆಸ್ ನ ಮೂರು ಮತ್ತು ಬಿಜೆಪಿಯ ಒಂದು ಸ್ಥಾನ ಗೆಲ್ಲುವುದು ಸರಳ. ಆದರೆ, ಆಯ್ಕೆಯ ಸಾಧ್ಯತೆ ಇರುವ ಐದನೇ ಸ್ಥಾನ ಕಬಳಿಸಲು ಮೂರೂ ಪಕ್ಷಗಳ ನಡುವೆ ಪೈಪೋಟಿ ಇದೆ.

ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳು

ಈ ನಡುವೆ, ಕಾಂಗ್ರೆಸ್ ನಲ್ಲಿ ಹಾಲಿ ನಿವೃತ್ತರಾಗುತ್ತಿರುವ ಎಲ್ ಹನುಮಂತಯ್ಯ, ಜಿ ಸಿ ಚಂದ್ರ ಶೇಖರ್, ಸಯ್ಯದ್ ನಾಸೀರ್ ಹುಸೇನ್ ಪೈಕಿ ಯಾರು ಮತ್ತೊಂದು ಅವಕಾಶ ಪಡೆಯಲಿದ್ದಾರೆ? ಎಂಬುದು ನಿಗೂಢವಾಗಿದೆ. ಮೂರೂ ಅಭ್ಯರ್ಥಿಗಳ ಮತ್ತೊಂದು ಅವಕಾಶಕ್ಕಾಗಿ ತೀವ್ರ ಲಾಬಿ ನಡೆಸಿದ್ದು, ಮೂವರ ಪರವೂ ಒಬ್ಬೊಬ್ಬ ನಾಯಕರು ನಿಂತಿದ್ದಾರೆ. ಆದರೆ, ಪಕ್ಷದ ಹೈಕಮಾಂಡ್ ಲೆಕ್ಕಾಚಾರ ಬೇರೆ ಇದೆ. ಕರ್ನಾಟಕದಿಂದ ಸುಲಭವಾಗಿ ಗೆಲ್ಲಲಿರುವ ಮೂರು ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಪಕ್ಷದ ರಾಷ್ಟ್ರಮಟ್ಟದ ನಾಯಕರೊಬ್ಬರಿಗೆ ಬಿಟ್ಟುಕೊಡುವ ಮೂಲಕ ರಾಜ್ಯಸಭೆಯಲ್ಲಿ ಪ್ರಭಾವಿ ನಾಯಕರ ಪಡೆ ಹೆಚ್ಚಿಸುವ ಲೆಕ್ಕಾಚಾರ ಹೈಕಮಾಂಡಿನದ್ದು. ಹಾಗಾಗಿ ಆರ್ ಬಿ ಐ ಗವರ್ನರ್ ರಘುರಾಂ ರಾಜನ್, ಅಭಿಷೇಕ್ ಮನು ಸಿಂಘ್ವಿ ಮತ್ತು ಸೋನಿಯಾ ಗಾಂಧಿಯವರ ಹೆಸರು ಆ ಸ್ಥಾನಕ್ಕೆ ಕೇಳಿಬರುತ್ತಿವೆ.

ಈ ನಡುವೆ, ಬಿ ಎಲ್ ಶಂಕರ್, ಬಿ ಆರ್ ಪಾಟೀಲ್ ಮತ್ತು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಅವರ ಹೆಸರುಗಳೂ ಚರ್ಚೆಯಲ್ಲಿವೆ.

ಪ್ರಬಲ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮತ್ತು ಪಕ್ಷಕ್ಕೆ ನಾಲ್ಕನೇ ಸ್ಥಾನವನ್ನು ಗೆಲ್ಲಿಸಿಕೊಂಡು ಬರುವ ತಂತ್ರಗಾರಿಕೆಗಳನ್ನು ಹೆಣೆಯುವ ಉದ್ದೇಶದಿಂದ ಶನಿವಾರದ ಸಭೆ ಮಹತ್ವ ಪಡೆದುಕೊಂಡಿದೆ.

ಬಿಜೆಪಿಯಲ್ಲಿಯೂ ಪ್ರಬಲ ಪೈಪೋಟಿ

ಬಲಾಬಲದ ಲೆಕ್ಕಾಚಾರದಲ್ಲಿ ಬಿಜೆಪಿ ಒಂದು ಸ್ಥಾನವನ್ನು ಸುಲಭವಾಗಿ ತನ್ನದಾಗಿಸಿಕೊಳ್ಳಲಿದೆ. ಹಾಗಾಗಿ ಆ ಸ್ಥಾನಕ್ಕೆ ಆಕಾಂಕ್ಷಿಗಳಾಗಿ ಇದೀಗ ನಿವೃತ್ತರಾಗುತ್ತಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನೇ ಮರು ಆಯ್ಕೆ ಮಾಡುವುದೇ? ಅಥವಾ ಅವರನ್ನು ಕೇರಳಕ್ಕೆ ಕಳಿಸಿ ಪ್ರಬಲ ಆಕಾಂಕ್ಷಿಯಾಗಿರುವ ಸೋಮಣ್ಣ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತಕ್ಕೆ ಅವಕಾಶ ಮಾಡಿಕೊಡುವುದೇ? ಎಂಬುದು ಬಿಜೆಪಿ ಹೈಕಮಾಂಡ್ ಮುಂದಿರುವ ಗೊಂದಲ. ಈ ನಡುವೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ತಮ್ಮನ್ನು ಉದ್ದೇಶಪೂರ್ವಕವಾಗಿ ಹರಕೆ ಕುರಿ ಮಾಡಿತು ಎಂಬ ಅಸಮಾಧಾನದಲ್ಲಿರುವ ವಿ ಸೋಮಣ್ಣ ಅವರಿಗೆ ಅವಕಾಶ ನೀಡುವ ಮೂಲಕ ಅವರನ್ನು ಸಮಾಧಾನಪಡಿಸುವ ಸಾಧ್ಯತೆಯೂ ಇದೆ.

ಬಿಜೆಪಿಯಲ್ಲಿ ತೇಜಸ್ವಿನಿ ಅನಂತಕುಮಾರ್ ಅವರ ಹೆಸರು ಕೂಡ ಅಚ್ಚರಿಯ ಆಯ್ಕೆಯಾಗಿ ಹೊರಬೀಳುವ ಸಾಧ್ಯತೆಯೂ ಇದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಪಕ್ಷದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೂಡ ತಮಗೆ ಟಿಕೆಟ್ ವಂಚಿಸಲಾಗಿದೆ ಮತ್ತು ಆ ಬಳಿಕ ಕೂಡ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಸಮಾಧಾನದಲ್ಲಿರುವ ತೇಜಸ್ವಿನಿ ಅವರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಅವಕಾಶವನ್ನೇ ಬಳಸಿಕೊಂಡು ಅವರನ್ನು ಪಕ್ಷಕ್ಕೆ ಸೆಳೆದು ಲೋಕಸಭಾ ಕಣಕ್ಕಿಳಿಸುವ ಪ್ರಯತ್ನ ಕಾಂಗ್ರೆಸ್ ನಾಯಕರಿಂದ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರು ವಲಯದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಲೆಕ್ಕಾಚಾರವಾಗಿ ಬಿಜೆಪಿ ಅವರಿಗೆ ಈ ಬಾರಿ ರಾಜ್ಯಸಭೆಯ ಅವಕಾಶ ನೀಡಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಈ ನಡುವೆ, ಜೆಡಿಎಸ್ ಹೆಚ್ಚುವರಿಯಾಗಿ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕಿಳಿಸುವ ಮೂಲಕ ತನ್ನ ೧೯ ಮತಗಳ ಹಕ್ಕು ಮಂಡಿಸಿ ಒಂದು ಸ್ಥಾನಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಅಡ್ಡಮತಗಳ ಲಾಭ ಪಡೆಯಲು ಲೆಕ್ಕಾಚಾರ ಮಾಡಿದೆ. ಆದರೆ, ವಿಪ್ ಉಲ್ಲಂಘಿಸಿ ಮತದಾನ ಮಾಡಿದಲ್ಲಿ ಸದಸ್ಯತ್ವಕ್ಕೇ ಬರುವ ಕಂಟಕವನ್ನು ಮೈಮೇಲೆ ಎಳೆದುಕೊಂಡು ಅಡ್ಡಮತದಾನ ದುಃಸ್ಸಾಹಸಕ್ಕೆ ಕಾಂಗ್ರೆಸ್ ಶಾಸಕರು ಮುಂದಾಗುವರೇ ಎಂಬುದು ಪ್ರಶ್ನೆ.

ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರು ತೆಗೆದುಕೊಳ್ಳುವ ನಿರ್ಧಾರ ಅಂತಿಮವಾಗಿ ಕಣದಲ್ಲಿ ಐದನೇ ಅಭ್ಯರ್ಥಿಗಾಗಿ ಪೈಪೋಟಿ ರಂಗೇರುವುದೇ ಅಥವಾ ಸುಲಲಿತ ಆಯ್ಕೆಯ ಅವಕಾಶವಿರುವ ನಾಲ್ಕು ಅಭ್ಯರ್ಥಿಗಳಿಗೇ ಚುನಾವಣಾ ಕಣ ಸೀಮಿತವಾಗುವುದೇ ಎಂಬುದು ಇನ್ನು ಒಂದೆರಡು ದಿನಗಳಲ್ಲಿ ನಿರ್ಧಾರವಾಗಲಿದೆ. ಅಭ್ಯರ್ಥಿಗಳ ಪಟ್ಟಿ ಕೂಡ ಅಷ್ಟರಲ್ಲಿ ನಿಖರವಾಗಲಿದೆ.

Read More
Next Story