ಅರಿಶಿನಕ್ಕೆ ಸೀಸದ ಬೆರಕೆ: ಜಾಗೃತಿ ಅಗತ್ಯ
x

ಅರಿಶಿನಕ್ಕೆ ಸೀಸದ ಬೆರಕೆ: ಜಾಗೃತಿ ಅಗತ್ಯ

ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಐಸಿಎಂಆರ್‌)ಯ ಸಂಶೋಧಕರ ಪ್ರಕಾರ, ಭಾರತೀಯ ಮಕ್ಕಳ ರಕ್ತದಲ್ಲಿ ಹೆಚ್ಚಿನ ಮಟ್ಟದ ಸೀಸ ಇದೆ. ಇದು ಗಂಭೀರ ಸಮಸ್ಯೆಯಾಗಿದ್ದು, ಶೀಘ್ರವಾಗಿ ಪರಿಹರಿಸುವ ಅಗತ್ಯವಿದೆ.


ಅರಿಶಿನಕ್ಕೆ ಸೀಸದ ಬೆರಕೆ: ಜಾಗೃತಿ ಅಗತ್ಯ

-ವಿವಿಯನ್ ಫರ್ನಾಂಡಿಸ್

.................................

ಅರಿಶಿನಕ್ಕೆ ಸೀಸದ ಕ್ರೋಮೇಟ್ ಸೇರಿಸಿ ಕಲಬೆರಕೆ ಮಾಡಲಾಗುತ್ತಿದೆ. ಲಂಡನ್ ಮೂಲದ ನಿಯತಕಾಲಿಕೆ ʻದಿ ಎಕನಾಮಿಸ್ಟ್‌ʼ ಲೇಖನದ ಪ್ರಕಾರ, ದಕ್ಷಿಣ ಏಷ್ಯದಲ್ಲಿ ಕ್ರೋಮೇಟ್‌ ಸೇರ್ಪಡೆ ಹೆಚ್ಚು ಇದೆ. ಈ ಸಂಬಂಧ ಬಾಂಗ್ಲಾದೇಶದಿಂದ ಭಾರತ ಕಲಿಯಬೇಕಿದೆ.

2019ರಲ್ಲಿ ಬಾಂಗ್ಲಾ ಅರಿಶಿನಕ್ಕೆ ರಾಸಾಯನಿಕ ಸಂಯುಕ್ತಗಳನ್ನು ಸೇರಿಸುವುದರ ವಿರುದ್ಧ ಅಭಿಯಾನ ಆರಂಭಿಸಿತು. ಕಟ್ಟುನಿಟ್ಟು ನಿಯಮಗಳನ್ನು ಜಾರಿಗೊಳಿಸಲಾಯಿತು. ಅರಿಶಿನಕ್ಕೆ ಇತರ ಪದಾರ್ಥ ಬೆರೆಸಿ ಮಾರಾಟ ಮಾಡುತ್ತಿದ್ದವರನ್ನು ವಿಡಿಯೋಗಳಲ್ಲಿ ಸೆರೆಹಿಡಿಯಲಾಯಿತು ಮತ್ತು ಭಾರೀ ದಂಡ ವಿಧಿಸಲಾಯಿತು. ಪ್ರಧಾನಿ ಶೇಖ್ ಹಸೀನಾ ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ಮುಂದಾದರು. ವರದಿ ಪ್ರಕಾರ, ದೇಶ ಕೇವಲ ಎರಡು ವರ್ಷಗಳಲ್ಲಿ ನಕಲಿ ಅರಿಶಿನದ ಮಾರಾಟವನ್ನು ಯಶಸ್ವಿಯಾಗಿ ನಿಲ್ಲಿಸಿದೆ. ಹೆಚ್ಚುವರಿಯಾಗಿ, ಅರಿಶಿನ ಗಿರಣಿ ಕಾರ್ಮಿಕರ ರಕ್ತದಲ್ಲಿನ ಸೀಸದ ಪ್ರಮಾಣವು ಶೇ.33 ರಷ್ಟು ಕಡಿಮೆಯಾಗಿದೆ.

2019 ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯ ಮತ್ತು ಬಾಂಗ್ಲಾದೇಶದ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಡಯೇರಿಯಲ್‌ ಡಿಸೀಸಸ್ ರಿಸರ್ಚ್(ಐಸಿಡಿಡಿಆರ್‌) ದೇಶದಲ್ಲಿ ಅರಿಶಿನ ಉತ್ಪಾದನೆ ಬಗ್ಗೆ ಅಧ್ಯಯನ ನಡೆಸಿತು. ವಿಜ್ಞಾನಿಗಳು ದೇಶದ ವಿವಿಧೆಡೆ ರೈತರು ಮತ್ತು ಮಸಾಲೆ ಸಂಸ್ಕರಣೆದಾರರೊಂದಿಗೆ ಮಾತನಾಡಿದರು. ಅರಿಶಿನಕ್ಕೆ ಸೀಸದ ಕ್ರೋಮೇಟ್‌ ಮಿಶ್ರ ಮಾಡುವಿಕೆ 1980ರ ದಶಕದಲ್ಲಿ ಪ್ರಾರಂಭವಾಯಿತು ಎಂದು ಅಧ್ಯಯನ ಹೇಳಿತು. ಆಗ ಪ್ರವಾಹದಿಂದ ಅರಿಶಿನ ಬೆಳೆ ನಾಶವಾಗಿತ್ತು. ಇದರಿಂದ ಗೆಡ್ಡೆಗಳು ತಮ್ಮ ನೈಸರ್ಗಿಕ ಬಣ್ಣವನ್ನು ಕಳೆದುಕೊಂಡಿದ್ದವು.

ತಿನಿಸುಗಳಿಗೆ ಹಾಗೂ ಆಟಿಕೆಗಳು-ಪೀಠೋಪಕರಣಗಳ ಬಣ್ಣಕ್ಕೆ ಸೀಸದ ಕ್ರೋಮೇಟ್ಅನ್ನು ಸೇರಿಸಲಾಯಿತು. ಸೀಸದ ಕ್ರೋಮೇಟ್ ನರಮಂಡಲಕ್ಕೆ ಹಾನಿಯುಂಟು ಮಾಡುತ್ತದೆ. ವಯಸ್ಕರಲ್ಲಿ ಮೆದುಳು ಮತ್ತು ಹೃದ್ರೋಗಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ತಮ್ಮ ರಕ್ತದಲ್ಲಿ ಸೀಸವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಶೇ.90ರಷ್ಟು ಮಕ್ಕಳು ಕಡಿಮೆ ಆದಾಯದ ದೇಶಗಳಲ್ಲಿ ಇದ್ದಾರೆ. ನರಮಂಡಲಕ್ಕೆ ಹಾನಿಯುಂಟು ಮಾಡುವುದರಿಂದ ಕಡಿಮೆ ಪ್ರಮಾಣದಲ್ಲಿದ್ದರೂ, ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ ಎಂದು ಲೇಖಕರು ಹೇಳಿದ್ದಾರೆ.

ಸೀಸವಿರುವ ಪೆಟ್ರೋಲ್, ಬಣ್ಣಗಳು, ಬ್ಯಾಟರಿಗಳು ಮತ್ತು ಸೌಂದರ್ಯವರ್ಧಕಗಳು ಸೀಸಕ್ಕೆ ಒಡ್ಡಿಕೊಳ್ಳಲು ಕಾರಣವಾಗಬಹುದು. ಸೀಸ ಎಲ್ಲಿಂದ ಬರುತ್ತದೆ ಎಂಬುದನ್ನು ಆಧರಿಸಿ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ಐಸಿಡಿಡಿಆರ್‌ ತಂಡ ಅರಿಶಿನದಲ್ಲಿ ಸೀಸದ ಕ್ರೋಮೇಟ್ ಇರುವುದು ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ಕಂಡುಹಿಡಿದರು. ಬಾಂಗ್ಲಾ ಹೊರತುಪಡಿಸಿ ಬೇರೆ ದೇಶಗಳಲ್ಲಿ ಅರಿಶಿನಕ್ಕೆ ಸೀಸದ ಕ್ರೋಮೇಟ್ ಅನ್ನು ಸೇರಿಸಲಾಗಿದೆ ಎಂಬುದಕ್ಕೆ ಸ್ಪಷ್ಟ ಪುರಾವೆ ಲಭ್ಯವಾಗಿಲ್ಲ.

ಕಟ್ಟುನಿಟ್ಟಾದ ಆಹಾರ ಸುರಕ್ಷತೆ ಪರೀಕ್ಷೆ ನಡೆಸುವ ಮೂಲಕ ಹೊರದೇಶಗಳು ತಮ್ಮ ಉತ್ಪನ್ನಗಳು ತಿರಸ್ಕೃತವಾಗದಂತೆ ನೋಡಿಕೊಂಡಿರಬಹುದು. 2011 ಮತ್ತು 2019 ರ ಅವಧಿಯಲ್ಲಿ ಯುಎಸ್‌ನಂತಹ ದೇಶಗಳಿಂದ 15 ಅರಿಶಿನ ಬ್ರಾಂಡ್‌ಗಳನ್ನು ಹಿಂಪಡೆಯಲಾಗಿದೆ. ಈ ಬ್ರ್ಯಾಂಡ್‌ಗಳು ಹೆಚ್ಚಿನ ಮಟ್ಟದ ಸೀಸವನ್ನು ಹೊಂದಿದ್ದವು. ಇಂಡಿಯ ಆಹಾರ ಸುರಕ್ಷತೆ ನಿಯಮಗಳನ್ನು ಜಾರಿಗೊಳಿ ಸಿದೆ. ಅರಿಶಿನದಲ್ಲಿ ಸೀಸದ ಕ್ರೋಮೇಟ್ ಇರಬಾರದು ಎಂದು ಈ ನಿಯಮಗಳು ಹೇಳುತ್ತವೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಜನವರಿ 2019ರಿಂದ ಡಿಸೆಂಬರ್ 2021 ರ ಅವಧಿಯಲ್ಲಿ 57 ಪ್ರಯೋಗಾಲಯಗಳಿಂದ 1,69,319 ಮಾದರಿಗಳ ಮಾಹಿತಿಯನ್ನು ಸಂಗ್ರಹಿಸಿತು. ಇದರಲ್ಲಿ 1,389 ಮಾದರಿಗಳು ಅನುಮತಿಸಿದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಸೀಸ, ಆರ್ಸೆನಿಕ್ ಮತ್ತು ಕ್ಯಾಡ್ಮಿಯಂನಂಥ ಭಾರ ಲೋಹಗಳನ್ನು ಹೊಂದಿದ್ದವು. ಬಾಟಲಿ ನೀರಿನಲ್ಲಿ ಭಾರವಾದ ಲೋಹಗಳಿದ್ದವು. ಸರ್ಕಾರ ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಆಹಾರ ಸುರಕ್ಷತಾ ಆಯುಕ್ತರಿಂದ ಪ್ರತಿಕ್ರಿಯೆ ಕೇಳಿದ್ದು, ಕೇರಳದ ಆಹಾರ ಸುರಕ್ಷತಾ ಆಯುಕ್ತೆ ಮಾತ್ರ ಪ್ರತಿಕ್ರಿಯಿಸಿದ್ದಾರೆ. ಕೇರಳದಲ್ಲಿ ಅರಿಶಿನದಲ್ಲಿ ಸೀಸದ ಕಲಬೆರಕೆ ಇಲ್ಲ ಎಂದು ಉಪ ನಿರ್ದೇಶಕಿ ಮಂಜುದೇವಿ ತಿಳಿಸಿದ್ದಾರೆ.

ಇಲಾಖೆ ಜನವರಿ 2022ರಿಂದ ವೆಬ್‌ಸೈಟ್‌ನಲ್ಲಿ 16 ಮಾಸಿಕ ಪರೀಕ್ಷಾ ವರದಿಗಳನ್ನು ಅಳವಡಿಸಿದೆ. 197 ಮಾದರಿಗಳಲ್ಲಿ ತವರ, ಕ್ಯಾಡ್ಮಿಯಮ್ ಮತ್ತು ತಾಮ್ರ ಪತ್ತೆಯಾಯಿತು; ಸೀಸ ಕಂಡುಬಂದಿಲ್ಲ. ಏಪ್ರಿಲ್‌ ೨೦೨೨ರಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್‌) ಬಿಡುಗಡೆಗೊಳಿಸಿದ ಅಧ್ಯಯನದಲ್ಲಿ 14 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ರಕ್ತದಲ್ಲಿ ಸೀಸದ ಪ್ರಮಾಣ ಹೆಚ್ಚು ಇರುವುದು ಕಂಡುಬಂದಿದೆ.

1996ರಲ್ಲಿ ಪೆಟ್ರೋಲಿನಲ್ಲಿ ಸೀಸದ ಬಳಕೆಯನ್ನು ನಿಲ್ಲಿಸಲಾಯಿತು ಮತ್ತು 2000ರಲ್ಲಿ ಸಂಪೂರ್ಣ ನಿಷೇಧಿಸಲಾಯಿತು. 2016ರಿಂದ ದಶಲಕ್ಷದಲ್ಲಿ 90 ಭಾಗ(ಪಿಪಿಎಂ)ಕ್ಕಿಂತ ಹೆಚ್ಚು ಸೀಸ ಹೊಂದಿರುವ ಬಣ್ಣಗಳ ಉತ್ಪಾದನೆ ಮತ್ತು ಮಾರಾಟ ಕಾನೂನುಬಾಹಿರ. ಆದರೆ, ರಕ್ತದಲ್ಲಿ ಬೆರೆತುಹೋದ ಸೀಸ ಕಾಲಕ್ರಮೇಣ ಕಡಿಮೆಯಾಗುವುದಿಲ್ಲ ಎಂದು ಅಧ್ಯಯನ ಹೇಳಿದೆ. ಈ ಹಿನ್ನೆಲೆಯಲ್ಲಿ ಸೀಸದ ಪ್ರಮಾಣದ ಲೆಕ್ಕ ಮತ್ತು ಅದರ ಮೂಲ ಯಾವುದು ಎಂಬುದನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

---------

Read More
Next Story