ಮಾಧ್ಯಮ ರಕ್ಷಣೆ: ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿದ ಪಂಜಾಬ್ ಹೈಕೋರ್ಟ್   -ಮಹೇಶ್ ಸಿ. ಡೋನಿಯಾ
x

ಮಾಧ್ಯಮ ರಕ್ಷಣೆ: ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿದ ಪಂಜಾಬ್ ಹೈಕೋರ್ಟ್ -ಮಹೇಶ್ ಸಿ. ಡೋನಿಯಾ


ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕಳೆದ ವಾರ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ. ಇಂಡಿಯನ್ ಎಕ್ಸ್ಪ್ರೆಸ್ ನ ಕೆಲವು ಹಿರಿಯ ಪತ್ರಕರ್ತರ ವಿರುದ್ಧದ ಕ್ರಿಮಿನಲ್ ಮಾನಹಾನಿ ಪ್ರಕರಣಗಳನ್ನು ವಜಾಗೊಳಿಸಿದೆ. ಹರ್ಯಾಣದ ಐಪಿಎಸ್ ಅಧಿಕಾರಿಯೊಬ್ಬರು ಹೂಡಿದ್ದ ಪ್ರಕರಣವನ್ನು ರದ್ದುಗೊಳಿಸಿದ ನ್ಯಾಯಾಲಯ, ಪತ್ರಿಕಾ ವೃತ್ತಿಯ ಪಾವಿತ್ರ್ಯವನ್ನು ಎತ್ತಿಹಿಡಿದಿರುವುದಲ್ಲದೆ, ʻಪರಿಣಾಮಗಳಿಗೆ ಹೆದರದೆ ಸುದ್ದಿ ಪ್ರಕಟಿಸಬಹುದುʼ ಎಂದು ರಕ್ಷಣೆಯನ್ನು ಖಾತ್ರಿಪಡಿಸಿದೆ.

ಪತ್ರಿಕಾ ವೃತ್ತಿಯು ʻನಾಗರಿಕತೆಯ ಕನ್ನಡಿʼ ಮತ್ತು ಪರಿಶೋಧನ ಪತ್ರಿಕೋದ್ಯಮ ʻನಾಗರಿಕತೆಯ ಎಕ್ಸ್ ರೇʼ ಎಂದಿರುವ ನ್ಯಾಯಾಲಯ, ʻಅಧಿಕೃತ ಮತ್ತು ನಿಖರ ಸುದ್ದಿ- ಘಟನೆಗಳನ್ನು ವರದಿ ಮಾಡುವ ಪತ್ರಕರ್ತರನ್ನು ರಕ್ಷಣೆಯನ್ನು ಖಾತ್ರಿಗೊಳಿಸಲು ನ್ಯಾಯಾಲಯಗಳು ಅವರನ್ನು ಬೆಂಬಲಿಸಬೇಕು. ಪರಿಣಾಮಗಳ ಭಯವಿಲ್ಲದೆ ಸುದ್ದಿಗಳನ್ನು ಪ್ರಕಟಿಸಲು ಸಬಲಗೊಳಿಸಬೇಕು. ಆದ್ದರಿಂದ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಧೈರ್ಯಶಾಲಿಗಳ ಹಿತಾಸಕ್ತಿಗಳನ್ನು ಕಾಪಾಡಲು ನ್ಯಾಯಾಲಯಗಳು ಹೆಚ್ಚು ಜಾಗರೂಕತೆ ಮತ್ತು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕುʼ ಎಂದು ಹೇಳಿದೆ.

ಪ್ರಜಾಪ್ರಭುತ್ವದ 4ನೇ ಸ್ತಂಭ: ಪತ್ರಿಕೋದ್ಯಮವು ʻಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭʼ ಎಂದಿರುವ ನ್ಯಾಯಾಲಯ, ಪತ್ರಕರ್ತರ ಹಕ್ಕನ್ನು ಸಮರ್ಥಿಸಿತು ಮತ್ತು ʻಪತ್ರಕರ್ತ- ವರದಿಗಾರನ ಮೊದಲ ಕರ್ತವ್ಯವೆಂದರೆ ನಾಗರಿಕರಿಗೆ ನಿಷ್ಠೆ. ಅವರು ಅಧಿಕಾರದ ಸ್ವತಂತ್ರ ಪರಾಮರ್ಶಕರಾಗಿ ಕೆಲಸ ಮಾಡುತ್ತಾರೆ,ʼ ಎಂದು ಹೇಳಿದೆ.

ತೀರ್ಪಿಗೆ ಸ್ವಾಗತ: ಖ್ಯಾತ ಪತ್ರಕರ್ತ ಮತ್ತು ಲೇಖಕ ಮನೋಜ್ ಮಿಠ್ಠಾ ಆದೇಶವನ್ನು ಸ್ವಾಗತಿಸಿದ್ದಾರೆ. ಪತ್ರಕರ್ತರನ್ನು ರಾಜ್ಯ ಮಾತ್ರವಲ್ಲದೆ, ಖಾಸಗಿಯವರೂ ಗುರಿಯಾಗಿಸಿಕೊಂಡಿರುವ ಸಂದರ್ಭದಲ್ಲಿ ಇಂಥ ತೀರ್ಪು ಸ್ವಾಗತಾರ್ಹ ಎಂದು ಹೇಳಿದ್ದಾರೆ. ʻಇದು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳ ದುರ್ಬಳಕೆಯನ್ನು ತಡೆಯಬಲ್ಲ ಆದೇಶ. ಪ್ರಸ್ತುತದ ಕಠಿಣ ಪರಿಸ್ಥಿತಿಯಲ್ಲೂ ತನಿಖಾ ಪತ್ರಿಕಾ ವೃತ್ತಿ ಮಾಡುವವರ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ತನಿಖಾ ವರದಿಯೊಂದು ಸತ್ಯದ ಪರವಾಗಿರುವುದು ಮತ್ತು ಸಾರ್ವಜನಿಕ ಹಿತಾಸಕ್ತಿಗಳನ್ನು ರಕ್ಷಿಸುವುದು ಮಾತ್ರವಲ್ಲದೆ, ಯಾರ ವಿರುದ್ಧವಿದೆಯೋ ಅವರಿಗೂ ತಮ್ಮನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡ ಬೇಕು ಎಂಬ ಸಂದೇಶವನ್ನು ಸಾರುತ್ತದೆʼ ಎಂದು ʻಕ್ಯಾಸ್ಟ್ ಪ್ರೈಡ್ʼ ಹಾಗೂ ದೆಹಲಿ ಮತ್ತು ಗುಜರಾತ್ನಲ್ಲಿ ನಡೆದ ಹತ್ಯಾಕಾಂಡಗಳ ಬಗ್ಗೆ ಪುಸ್ತಕ ಬರೆದ ಲೇಖಕ ಹೇಳುತ್ತಾರೆ.

ಸುಪ್ರೀಂ ಕೋರ್ಟ್ ನ್ಯಾಯವಾದಿ ಪ್ರಶಾಂತ್ ಭೂಷಣ್, ʼಸುಪ್ರೀಂ ಕೋರ್ಟ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಸಾಕಷ್ಟು ಕೆಲಸ ಮಾಡುತ್ತಿಲ್ಲʼ ಎನ್ನುತ್ತಾರೆ. ʻಇದೊಂದು ಅತ್ಯುತ್ತಮ ಆದೇಶವಾಗಿದ್ದು, ವಾಕ್ ಮತ್ತು ಪ ತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ. ವರದಿಯೊಂದು ದುರ್ಭಾಷೆ ಬಳಸಿದೆ ಎಂದು ಪತ್ರಕರ್ತರ ವಿರುದ್ಧ ಮಾನನಷ್ಟ ಪ್ರಕರಣ ಹೂಡಬಾರದು. ಇಲ್ಲವಾದಲ್ಲಿ ಪತ್ರಿಕೆಗಳ ಸ್ವಾತಂತ್ರ್ಯ ಉಸಿರುಗಟ್ಟುತ್ತದೆ ಎಂದು ತೀರ್ಪು ಹೇಳಿದೆ. ಆದೇಶ ಖಂಡಿತವಾಗಿಯೂ ಪತ್ರಕರ್ತರಿಗೆ ಸಹಾಯಕ. ಆದರೆ, ವಾಕ್ ಸ್ವಾತಂತ್ರ್ಯವನ್ನು ಕಾಪಾಡಬೇಕಿರುವುದು ಸುಪ್ರೀಂ ಕೋರ್ಟ್. ಆದರೆ, ಅದು ಸಾಕಷ್ಟು ಕೆಲಸ ಮಾಡುತ್ತಿಲ್ಲʼ ಎಂದು ಹೇಳಿದರು.

ನ್ಯಾಯಾಲಯಗಳು ಬಹಳಷ್ಟು ದೂರ ಸಾಗಬೇಕಿದೆ: ಸಂವಿಧಾನವು ಪತ್ರಿಕೆಗಳ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕು ಎಂದು ಗುರುತಿಸುತ್ತದೆ ಮತ್ತು ರಕ್ಷಿಸುತ್ತದೆ. ಹೈಕೋರ್ಟ್ ವಕೀಲ, ಚಂಡೀಗಢದ ಅಮನ್ಪ್ರೀತ್ ಸಿಂಗ್ ಅವರ ಪ್ರಕಾರ, ಹೈಕೋರ್ಟ್ ಇಂಥ ರಕ್ಷಣೆಯನ್ನು ಬಲಪಡಿಸುತ್ತದೆ. ಇದೊಂದು ಮಹತ್ವದ ಆದೇಶ. ʻಈ ಪ್ರಕರಣದಲ್ಲಿ ಕ್ರಿಮಿನಲ್ ಅಪರಾಧ ಪ್ರಕರಣ ದಾಖಲಿಸಿದ್ದು ಪೊಲೀಸರು. ಪತ್ರಕರ್ತರ ವಿರುದ್ಧ ಸರಕಾರ ಅಥವಾ ಪೊಲೀಸರು ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ; ಆಕ್ಷೇಪ ವ್ಯಕ್ತಪಡಿಸಬಹುದು ಅಥವಾ ಪ್ರೆಸ್ ಕೌನ್ಸಿಲ್ ಗೆ ದೂರು ನೀಡ ಬಹುದು. ಪತ್ರಕರ್ತರಿಗೆ ಹೆಚ್ಚಿನ ರಕ್ಷಣೆ ನೀಡಲು ನ್ಯಾಯಾಲಯ ಹೆಚ್ಚು ಪ್ರಯತ್ನ ಮಾಡಬೇಕುʼ ಎಂದು ಪತ್ರಕರ್ತ ಅಭಿಸಾರ್ ಶರ್ಮಾ ಹೇಳಿದರು.

ಆದರೆ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಯಂತಹ ಕಠಿಣ ಕಾನೂನಿನಡಿ ಯಾವುದೇ ಕಾರಣ ನೀಡದೆ, ನಿಮ್ಮನ್ನು ವರ್ಷಗಳ ಕಾಲ ಸೆರೆಯಲ್ಲಿ ಇಡಬಹುದಾಗಿದೆ. 2020 ರಲ್ಲಿ ದಲಿತ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಯನ್ನು ವರದಿ ಮಾಡಲು ಹತ್ರಾಸ್ಗೆ ತೆರಳುತ್ತಿದ್ದ ಕೇರಳದ ಪತ್ರಕರ್ತ ಸಿದ್ಧೀಕ್ ಕಪ್ಪನ್ ಅವರನ್ನು ಯುಎಪಿಎ ಅಡಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿ ದರು. ಕಪ್ಪನ್ ಜಾಮೀನು ಪಡೆದು ಜೈಲಿನಿಂದ ಹೊರಬರಲು ವರ್ಷಗಳೇ ಬೇಕಾದವು. ನ್ಯೂಸ್ಕ್ಲಿಕ್ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರು ಕೂಡ ಯುಎಪಿಎ ಅಡಿ ಜೈಲಿನಲ್ಲಿದ್ದಾರೆʼ ಎಂದು ಶರ್ಮಾ ಹೇಳಿದರು.

ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಕುಸಿತ: ಪತ್ರಕರ್ತರ ಹಕ್ಕುಗಳು ಮತ್ತು ಮಾಹಿತಿ ಸ್ವಾತಂತ್ರ್ಯವನ್ನು ರಕ್ಷಿಸಲು ಕೆಲಸ ಮಾಡುವ ಪ್ಯಾರಿಸ್ ಮೂಲದ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್ಎಸೆಫ್) ಪ್ರಕಾರ, ಭಾರತ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 140 ನೇ ಸ್ಥಾನದಲ್ಲಿದೆ(2014 ರಲ್ಲಿ). 2013ರಲ್ಲಿ ದೇಶದಲ್ಲಿ ಎಂಟು ಪತ್ರಕರ್ತರು ಹತ್ಯೆಯಾದರು ಎಂದು ಆರ್ಎಸ್ಎಫ್ ಹೇಳಿತ್ತು. ಆಗ ದೇಶ 136ನೇ ಸ್ಥಾನ ಪಡೆದುಕೊಂಡಿತ್ತು.

2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ಕುಸಿತ ಕಂಡಿದೆ. 2018 ರಲ್ಲಿ ಗೌರಿ ಲಂಕೇಶ್ ಮತ್ತು ಶಶಿಕಾಂತ್ ವರಿಶೆ ಹತ್ಯೆಗೀಡಾದರು. ರೈಟ್ಸ್ ಅಂಡ್ ರಿಸ್ಕ್ ಅನಾಲಿಸಿಸ್ ಗ್ರೂಪ್ (ಆರ್ಆರ್ಎಜಿ) ವರದಿ ಪ್ರಕಾರ, 2022 ರಲ್ಲಿ ಏಳು ಪತ್ರಕರ್ತೆಯರು ಸೇರಿಂದತೆ 194 ಪತ್ರಕರ್ತರನ್ನು ಗುರಿಯಾಗಿಸಿಕೊಳ್ಳಲಾಗಿತ್ತು. 2021ರಲ್ಲಿ ಐವರು ಪತ್ರಕರ್ತರ ಹತ್ಯೆ ನಡೆದಿತ್ತು.

ಕರ್ತವ್ಯ ನಿರ್ವಹಣೆಗೆ ಅಡೆತಡೆ: ಕಮಿಟಿ ಅಗೇನ್ಸ್ಟ್ ಅಸಾಲ್ಟ್ ಆನ್ ಜರ್ನಲಿಸ್ಸ್ಟ್ ಪ್ರಕಾರ, 2017 ರಲ್ಲಿ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ ನಂತರ ಪತ್ರಿಕಾ ಸ್ವಾತಂತ್ರ್ಯದ ಹತ್ತಿಕ್ಕುವಿಕೆ ಹೆಚ್ಚಿತು. ಈ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ 12 ಪತ್ರಕರ್ತರ ಹತ್ಯೆ ಮತ್ತು 48 ಪತ್ರಕರ್ತರ ದೈಹಿಕ ಹಲ್ಲೆ ಮತ್ತು 66 ಪತ್ರಕರ್ತರನ್ನು ಪೊಲೀಸರು ಬಂಧಿಸಿದರು.

ಬಂಧನಕ್ಕೆ ಏನಾದರೂ ಕಾರಣವಿರಬಹುದು. 2019 ರಲ್ಲಿ ಯುಪಿ ಪೊಲೀಸರು ಮಿರ್ಜಾಪುರದ ಪತ್ರಕರ್ತ ಪವನ್ ಜೈಸ್ವಾಲ್ ʻ ಮಧ್ಯಾಹ್ನದ ಊಟಕ್ಕೆ ರೊಟ್ಟಿ ಮತ್ತು ಉಪ್ಪು ನೀಡುತ್ತಿದ್ದಾರೆʼ ಎಂದು ವರದಿ ಮಾಡಿದ್ದಕ್ಕೆ ಬಂಧಿಸಿದರು. ಫೆಬ್ರವರಿ 2022 ರಲ್ಲಿ ಇಬ್ಬರು ದಲಿತ ಬಾಲಕಿಯರ ಮೇಲೆ ಕೋಮುವಾದಿ ಹಲ್ಲೆ ಬಗ್ಗೆ ವರದಿ ಮಾಡಿದ ದಲಿತ ಪತ್ರಕರ್ತ ಕಿಶೋರ್ ರಾಮ್ ಅವರನ್ನು ಉತ್ತರಾಖಂಡದ ಪೊಲೀಸರು ಬಂಧಿಸಿದರು.


ಎಡಿಟರ್ಸ್ ಗಿಲ್ಡ್ ಕೂಡ ಸುರಕ್ಷಿತವಲ್ಲ: ಪತ್ರಕರ್ತರ ಅತ್ಯುನ್ನತ ಸಂಸ್ಥೆಯಾದ ಎಡಿಟರ್ಸ್ ಗಿಲ್ಡ್ (ಇಜಿಐ) ಕೂಡ ಸೆನ್ಸಾರ್ಶಿಪ್ ಎದುರಿಸ ಬಹುದು. ಗಿಲ್ಡ್ ಮಣಿಪುರಕ್ಕೆ ಕಳುಹಿಸಿದ ಸತ್ಯಶೋಧನಾ ತಂಡ ತನ್ನ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿತು. ಆನಂತರ ಮಣಿಪುರ ಪೊಲೀಸರು ತಂಡದ ಸದಸ್ಯರು ಮತ್ತು ಗಿಲ್ಡ್ ವಿರುದ್ಧ ಎಫ್ಐಆರ್ ದಾಖಲಿಸಿದರು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸದೆ ಇದ್ದರೆ, ಎಲ್ಲರೂ ಸೆರೆವಾಸ ಅನುಭವಿಸಬೇಕಾಗಿ ಬರುತ್ತಿತ್ತು. ಬಿಬಿಸಿಯ ಪತ್ರಕರ್ತ ವಿನೋದ್ ವರ್ಮಾ ಅವರನ್ನು ಮಧ್ಯರಾತ್ರಿ ಬಂಧಿಸಲಾಯಿತು ಮತ್ತು ಕಚೇರಿಯ ಶೋಧನೆ ಹಾಗೂ ಫೋನ್ ಮತ್ತು ಸಾಧನಗಳನ್ನು ವಶಪಡಿಸಿಕೊಳ್ಳಲಾಯಿತು. 1992 ಮತ್ತು 2023 ರ ನಡುವೆ ದೇಶದಲ್ಲಿ 91 ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ. ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಮತ್ತಷ್ಟು ಕುಸಿದಿದ್ದು, 180 ದೇಶಗಳಲ್ಲಿ 161 ನೇ ಸ್ಥಾನದಲ್ಲಿದೆ (ಪಾಕಿ ಸ್ತಾನಕ್ಕಿಂತ ಏಳು ಸ್ಥಾನ ಕಡಿಮೆ). ದೇಶದಲ್ಲಿ ಪ್ರಜಾಪ್ರಭುತ್ವ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಸೂಚನೆಯಾಗಿದೆ.

ಆದರೆ, ಮುಖ್ಯ ಪ್ರಶ್ನೆ ಇದು; ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನ ತೀರ್ಪಿನ ಅನ್ವಯ ಪತ್ರಕರ್ತರನ್ನು ರಕ್ಷಿಸಲು ಮತ್ತು ಮಾರ್ಗಸೂಚಿಗಳನ್ನು ರೂಪಿಸಲು ಸುಪ್ರೀಂ ಕೋರ್ಟ್ ಮುಂದಾಗುವುದೇ? ಅಥವಾ, ವಕೀಲ ಪ್ರಶಾಂತ್ ಭೂಷಣ್ ಹೇಳಿದಂತೆ, ಆಡುದಾರವನ್ನು ತಿರುಗಿಸುತ್ತ ಕೂರುವುದೇ?

(ದ ಫೆಡರಲ್ ನಲ್ಲಿ ಜನವರಿ 9,2024ರಲ್ಲಿ ಪ್ರಕಟಿತ)

Read More
Next Story