ಸಂಸತ್‌ ಅವರಣದಿಂದ ಗಾಂಧಿ, ಅಂಬೇಡ್ಕರ್‌ ಪ್ರತಿಮೆಗಳ ತೆರವಿನ ಹಿಂದೆ ರಾಜಕೀಯ?
x
ಸಂಸತ್ತಿನ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರ ಪ್ರತಿಮೆಗಳನ್ನು ಸ್ಥಳಾಂತರಿಸಿರುವುದು ಪ್ರತಿಭಟನೆಯ ಬಿರುಗಾಳಿಯನ್ನು ಹುಟ್ಟುಹಾಕಿದೆ.

ಸಂಸತ್‌ ಅವರಣದಿಂದ ಗಾಂಧಿ, ಅಂಬೇಡ್ಕರ್‌ ಪ್ರತಿಮೆಗಳ ತೆರವಿನ ಹಿಂದೆ ರಾಜಕೀಯ?

ಅಂತಹ ಪ್ರತಿಮೆಗಳನ್ನು ಧ್ವಂಸ ಮಾಡಿದರೆ ನಾಗರೀಕರು ಸರ್ಕಾರಕ್ಕೆ ದೂರು ನೀಡುತ್ತಾರೆ. ಆದರೆ, ಸರ್ಕಾರವೇ ʼಪ್ರತಿಮೆಗಳನ್ನು ಧ್ವಂಸʼ ಮಾಡಿದರೆ ಜನ ಯಾರ ಬಳಿ ದೂರು ನೀಡಬೇಕು?


ಮಹಾತ್ಮಾ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್‌ ಮತ್ತಿತರ ನಾಯಕರ ಪ್ರತಿಮೆಗಳು ಅವರ ಚಹರೆಯ ವಸ್ತು ಚಿತ್ರಣಗಳಲ್ಲ. ಬದಲಿಗೆ ಅವು ಅವರ ಆದರ್ಶಗಳ ಸಂಕೇತಗಳಾಗಿವೆ. ಈ ಆದರ್ಶಗಳಿಂದ ಪ್ರೇರಿತರಾದವರು ಅವರನ್ನು ಗೌರವಿಸುತ್ತಾರೆ, ಆದರೆ ಅವರಿಂದ ಮನನೊಂದವರು ಅವರ ಮೇಲೆ ದಾಳಿ ಮಾಡುತ್ತಾರೆ. ಇದು ಡಾ ಅಂಬೇಡ್ಕರ್ ಅವರ ವಿಷಯದಲ್ಲಿ ಹೆಚ್ಚು ಅನ್ವಯವಾಗುತ್ತದೆ.

ದೇಶದ ಮೂಲೆ ಮೂಲೆಯಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಕಾಣಬಹುದು ಆ ಪ್ರತಿಮೆಗಳು ಲಕ್ಷಾಂತರ ದೀನದಲಿತರಿಗೆ ವಾತ್ಸಲ್ಯದ ಚಿಲುಮೆಗಳು ಮಾತ್ರವಲ್ಲದೆ ದ್ವೇಷ ಕಾರುವವವರ ಗುರಿಗಳಾಗಿಯೂ ಪರಿವರ್ತಿತವಾಗಿವೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಧ್ವಂಸಗೊಳಿಸುವ ಘಟನೆಗಳು ಆಗಾಗ್ಗೆ ಸಂಭವಿಸುತ್ತವೆ.

ಅಂಬೇಡ್ಕರ್ ಪ್ರತಿಮೆ ಧ್ವಂಸವಾದಾಗಲೆಲ್ಲಾ ಜನರು ಸರ್ಕಾರಕ್ಕೆ ದೂರು ನೀಡುತ್ತಾರೆ. ಆದರೆ ಸರ್ಕಾರವೇ ಅವರನ್ನು ಧ್ವಂಸಗೊಳಿಸಿದಾಗ ಜನ ದೂರು ನೀಡಲು ಯಾರ ಬಳಿ ತೆರಳಬೇಕು?

ಸ್ಥಳ ಬದಲಾವಣೆ

ಗಾಂಧೀಜಿ, ಅಂಬೇಡ್ಕರ್ ಮತ್ತು ಇತರ ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು ಬಹಳ ಹಿಂದೆ ಸಂಸತ್ತಿನ ಸಂಕೀರ್ಣದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇತ್ತೀಚೆಗೆ, ಬಿಜೆಪಿ ಸರ್ಕಾರವು ಈ ಪ್ರತಿಮೆಗಳನ್ನು ತೆರವುಗೊಳಿಸಿ 'ಪ್ರೇರಣಾ ಸ್ಥಳ' ಎಂಬ ನಿರ್ಧಿಷ್ಟ ಪ್ರದೇಶದಲ್ಲಿ ಪ್ರದರ್ಶಿಸಲು ಯೋಜಿಸಿದೆ.

1967 ರ ಏಪ್ರಿಲ್ 2 ರಂದು ಅಂದಿನ ರಾಷ್ಟ್ರಪತಿ ಡಾ ಎಸ್ ರಾಧಾಕೃಷ್ಣನ್ ಅವರು ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸಂಸತ್ತಿನ ಸಂಕೀರ್ಣದಲ್ಲಿ ಉದ್ಘಾಟಿಸಿದರು. ಖ್ಯಾತ ಶಿಲ್ಪಿ ವಿವಿ ಬಾಘ್ ವಿನ್ಯಾಸಗೊಳಿಸಿದ ಈ 3.66 ಮೀಟರ್ ಎತ್ತರದ ಕಂಚಿನ ಪ್ರತಿಮೆಯನ್ನು ಡಾ ಬಾಬಾಸಾಹೇಬ್ ಅಂಬೇಡ್ಕರ್ ಸ್ಮಾರಕ ಸಮಿತಿ ಕೊಡುಗೆಯಾಗಿ ನೀಡಿತ್ತು.

4.9 ಮೀಟರ್ ಎತ್ತರದ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಖ್ಯಾತ ಕಲಾವಿದ ರಾಮ್ ವಿ ಸುತಾರ್ ಅವರು ಕೆತ್ತಿಸಿದ್ದಾರೆ, ಇದನ್ನು 1993 ರಲ್ಲಿ ಉದ್ಘಾಟಿಸಲಾಗಿತ್ತು.

ಸಾಂಕೇತಿಕ ಮಹತ್ವ

ಈ ಪ್ರತಿಮೆಗಳು ಕೇವಲ ಆ ನಾಯಕರನ್ನು ಪ್ರತಿನಿಧಿಸುವುದು ಮಾತ್ರವಲ್ಲ, ಆ ಮಹಾ ನಾಯಕರ ಅವರ ತತ್ವಗಳ ಸಂಕೇತಗಳನ್ನು ಬಿಂಬಿಸುತ್ತವೆ. ರಾಜಕೀಯ ಪಕ್ಷಗಳು ಸಂಸತ್ತಿನೊಳಗೆ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಕಾರ್ಯದಲ್ಲಿ ಮತ್ತು ಪ್ರತಿಭಟನೆಗಾಗಿ ಗಾಂಧಿ, ಅಂಬೇಡ್ಕರ್ ಪ್ರತಿಮೆಗಳ ಬಳಿ ಆಗಾಗ ಸೇರುತ್ತಲೇ ಇರುತ್ತಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಹಾಗೂ ಸಂಸ್ಮರಣಾ ದಿನದಂದು ಸಂಸತ್ತಿನ ಆವರಣದಲ್ಲಿರುವ ಅವರ ಪ್ರತಿಮೆಗೆ ಸಾವಿರಾರು ಮಂದಿ ಗೌರವ ಸಲ್ಲಿಸುತ್ತಾರೆ.

ಆದರೆ ಇತ್ತೀಚಿಗಿನ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ, “ಸಂಸತ್ತಿನ ಸಂಕೀರ್ಣದ ಸೌಂದರ್ಯೀಕರಣದ” ಭಾಗವಾಗಿ ನರೇಂದ್ರ ಮೋದಿ ನೇತೃತ್ವದ ಉಸ್ತುವಾರಿ ಸರ್ಕಾರವು ಸಾರ್ವಜನಿಕರ ಗಮನಕ್ಕೆ ಬಾರದಂತೆ ಈ ಪ್ರತಿಮೆಗಳನ್ನು ತರಾತುರಿಯಲ್ಲಿ ತೆಗೆದುಹಾಕಿತು. ನೂತನಾಗಿ ಆಯ್ಕೆಯಾದ ಸದಸ್ಯರು ತಮ್ಮ ಹೆಸರು ನೋಂದಣಿ ಮಾಡಲು ಹೋದಾಗ ಈ ವಿಚಾರ ಬೆಳಕಿಗೆ ಬಂದಿದೆ!

ಇತಿಹಾಸವನ್ನು ಅಳಿಸಲಾಗುತ್ತಿದೆ

ನೂತನವಾಗಿ ನಿರ್ಮಿಸಲಾಗಿರುವ ಸಂಸತ್ ಭವನಕ್ಕೆ ರಾಷ್ಟ್ರಪತಿ ಮತ್ತು ಪ್ರಧಾನಿ ಪ್ರವೇಶಿಸಲು ಪ್ರತ್ಯೇಕ ದ್ವಾರವನ್ನು ಸ್ಥಾಪಿಸಲಾಗಿದ್ದು, ಈ ಪ್ರತಿಮೆಗಳ ಸುತ್ತಲಿನ ಮಾರ್ಗವನ್ನು ಬದಲಾಯಿಸುವ ಅಗತ್ಯವಿದ್ದಿರಬಹುದು.

ಬಿಜೆಪಿಯ ರಾಜಕೀಯ ಕಾರ್ಯಸೂಚಿಗೆ ಅಂಬೇಡ್ಕರ್, ಗಾಂಧಿ ಅವರ ತತ್ವಗಳಿಂದ ಉಂಟಾದ ಅನನುಕೂಲತೆಯೇ ಅವರ ಪ್ರತಿಮೆಗಳನ್ನು ಅವರನ್ನು ತೆಗೆದುಹಾಕಲು ನಿಜವಾದ ಕಾರಣವವಿರುವಂತೆ ತೋರುತ್ತದೆ. ಈ ಪ್ರತಿಮೆಗಳ ಐತಿಹಾಸಿಕ ಮಹತ್ವವನ್ನು ಅಳಿಸುವುದು ಬಿಜೆಪಿ ಗುರಿಯಾಗಿದೆ!

ಪ್ರತಿಮೆಗಳನ್ನು ತೆಗೆದುಹಾಕುವ ಸಂಬಂಧ ಪ್ರತಿಭಟನೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಈಗ ಸಂಸತ್ ಸಚಿವಾಲಯ ವಿವರಣೆ ನೀಡಿದೆ. ಪ್ರತಿಮೆಗಳು ಅಲ್ಲಲ್ಲಿ ಇರುವುದರಿಂದ ಅವುಗಳನ್ನು ವೀಕ್ಷಿಸಲು ಸಂದರ್ಶಕರಿಗೆ ಕಷ್ಟಕರವಾಗಿದೆ, ಆದ್ದರಿಂದ ಅವುಗಳು ಎಲ್ಲರಿಗೂ ಚೆನ್ನಾಗಿ ಕಾಣುವಂತಾಗಲು ಒಂದೇ ಸ್ಥಳದಲ್ಲಿ ಕ್ರೋಢೀಕರಿಸಲು ಯೋಜಿಸಲಾಗಿದೆ ಎಂದು ಕಾರಣ ನೀಡಲಾಗಿದೆ. ಲೋಕಸಭೆಯ ಸ್ಪೀಕರ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದೂ ಹೇಳಲಾಗಿದೆ.

ಏಕಾಏಕಿ ತೆರವು ಏಕೆ?

ಸಂಸತ್ತಿನ ಸಂಕೀರ್ಣದ ಆಡಳಿತವು ಸ್ಪೀಕರ್ ನಿಯಂತ್ರಣಕ್ಕೆ ಒಳಪಟ್ಟಿದ್ದರೂ, ಈ ಪ್ರತಿಮೆಗಳನ್ನು ಏಕಾಏಕಿ ತೆರವುಗೊಳಿಸಿರುವುದು ಸರಿಯಾದ ಕ್ರಮವಲ್ಲ. ಚುನಾವಣೆಯ ಸಮಯದಲ್ಲಿ ಆ ಪ್ರತಿಮೆಗಳನ್ನು ರಹಸ್ಯವಾಗಿ ಮತ್ತು ಆತುರದ ರೀತಿಯಲ್ಲಿ ತೆಗೆದುಹಾಕುವುದು ಪ್ರಶ್ನಾರ್ಹವಾಗಿದೆ.

ಹಿಂದಿನ ಸ್ಪೀಕರ್ ಓಂ ಬಿರ್ಲಾ ಅವರು ಹೊಸ ಸರ್ಕಾರ ಬಂದು ಹೊಸ ಸ್ಪೀಕರ್ ಆಯ್ಕೆಯಾಗುವ ಮೊದಲು ಇಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದ್ದಾರೆಯೇ ಎಂಬುದು ಚರ್ಚಾಸ್ಪದ ವಿಷಯವಾಗಿದೆ. ಈ ಘಟನೆಯು ಚುನಾವಣೆಯಲ್ಲಿ ಬಹುಮತ ಕಳೆದುಕೊಂಡರೂ ಬಿಜೆಪಿ ನಡೆಸುವ ಅಪ್ರಜಾಸತ್ತಾತ್ಮಕ ಕ್ರಮಗಳನ್ನು ಪ್ರತಿಬಿಂಬಿಸುತ್ತದೆ.

ಮಹಾತ್ಮಾ ಗಾಂಧಿ ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ರಾಷ್ಟ್ರೀಯ ನಾಯಕರಿಗೆ ಅಗೌರವ ತೋರುವ ಈ ಕೃತ್ಯದ ಬಗ್ಗೆ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು.

ಹೊಸ ಸರ್ಕಾರ ಸ್ಥಾಪನೆಗೂ ಮುನ್ನವೇ ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರಂಕುಶ ಶಕ್ತಿಗಳು ನಿರತವಾಗಿರುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಲಕ್ಷಣವಲ್ಲ.

(ದ ಫೆಡರಲ್ ಎಲ್ಲಾ ದೃಷ್ಟಿಕೋನಗಳಿಂದ ಬರುವ ಅಭಿಪ್ರಾಯಗಳನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದೆ.. ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದಾಗಿದೆ ಮತ್ತು ಫೆಡರಲ್ನ ದೃಷ್ಟಿಕೋನಗಳನ್ನು ಖಂಡಿತವಾಗಿ ಪ್ರತಿಬಿಂಬಿಸುವುದಿಲ್ಲ.)

Read More
Next Story