
ಜಾತಿ ಜನಗಣತಿ ವರದಿ: ಕರ್ನಾಟಕದ ಪಾಲಿಗೆ ಸಾಮಾಜಿಕ "ಮನ್ವಂತರ" ಆಗಲಿದೆಯೆ?
ಇದೀಗ ಸೋರಿಕೆ ಆಗಿರುವ ವರದಿ ಗಮನಿಸಿದರೆ ಕರ್ನಾಟಕ ಸಾಮಾಜಿಕ ವ್ಯವಸ್ಥೆಯೇ ತಲೆಗೆಳಗಾಗುವಷ್ಟು, ಇಲ್ಲಿಯ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆಯೇ ಉಲ್ಟಾಪಲ್ಟಾ ಆಗುವಷ್ಟು ಈ ವರದಿ ತೀಕ್ಷ್ಣತೆಯನ್ನು, ಪರಿವರ್ತನೆಯನ್ನು ಬಯಸಿದೆ.
ಜಾತಿ ಜನಗಣತಿ ವರದಿ ಕರ್ನಾಟಕದ ಪಾಲಿಗೆ ಸಾಮಾಜಿಕ "ಮನ್ವಂತರ " ಆಗುತ್ತಾ? ಅಥವಾ ರಾಜಕಾರಣವೇ ಒಂದು ಚದುರಂಗದಂತೆ ಕಂಗೊಳಿಸುತ್ತಿರುವ ಈ ಹೊತ್ತಲ್ಲಿ ಅದೇ ಶೈಲಿಯಲ್ಲೇ ಹೇಳಬೇಕೆಂದರೆ "ಗೇಮ್ ಚೆಂಜರ್" ಆಗುತ್ತಾ?
ಜಾತಿ ಜನಗಣತಿ ವರದಿಯು ಮುಖ್ಯಾಂಶಗಳು ಸೋರಿಕೆ ಆದ ಬಳಿಕ ಇದೀಗ ಸಾರ್ವಜನಿಕ ವಲಯದಲ್ಲಿ , ರಾಜಕೀಯ ಆಸಕ್ತರಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ ಇದು.
ಇದೀಗ ಸೋರಿಕೆ ಆಗಿರುವ ವರದಿ ಗಮನಿಸಿದರೆ ಕರ್ನಾಟಕ ಸಾಮಾಜಿಕ ವ್ಯವಸ್ಥೆಯೇ ತಲೆಗೆಳಗಾಗುವಷ್ಟು, ಇಲ್ಲಿಯ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆಯೇ ಉಲ್ಟಾಪಲ್ಟಾ ಆಗುವಷ್ಟು ಈ ವರದಿ ತೀಕ್ಷ್ಣತೆಯನ್ನು, ಪರಿವರ್ತನೆಯನ್ನು ಬಯಸಿದೆ.
ಪರಿಶಿಷ್ಟ ಜಾತಿ ಜನಗಣತಿ ಒಂದು ಕೋಟಿ ಒಂಬತ್ತು ಸಾವಿರ, ಪರಿಶಿಷ್ಟ ಪಂಗಡ 42.81ಲಕ್ಷ ಜನಸಂಖ್ಯೆ ಇದ್ದಾರೆ ಎಂದ ಮೇಲೆ.. ಆ ಸಮುದಾಯ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಕ್ಕಿನ ಪ್ರಶ್ನೆ ಖಂಡಿತ ಉದ್ಭವಿಸುತ್ತದೆ. ಆ ಸಮುದಾಯಗಳ ಹೋರಾಟದ ದ್ವನಿ ಸಂಘಟಿತ ಸ್ವರೂಪ ಪಡೆಯುತ್ತದೆ. ಇಂಥ ಮುಖ್ಯ ಪರಿವರ್ತನೆಗೆ ರಾಜಕೀಯ ಪಕ್ಷಗಳು, ಜೊತೆಗೆ ದಶಕಗಳ ಕಾಲ ಕರ್ನಾಟಕದ ಎಲ್ಲಾ ಆಗುಹೋಗುಗಳ ಮೇಲೆ ಪ್ರಾಬಲ್ಯ ಸಾಧಿಸಿದ ಲಿಂಗಾಯಿತ, ಒಕ್ಕಲಿಗ ಸಮುದಾಯಗಳು ಇದನ್ನು ಒಪ್ಪಿಕೊಳ್ಳಲು ಸಿದ್ದರಿದ್ದಾರೆಯೇ? ಎನ್ನುವ ಮಹತ್ವದ ಪ್ರಶ್ನೆಯನ್ನು ಇದು ಹುಟ್ಟಿ ಹಾಕಿದೆ.
ಇದನ್ನು ಇನ್ನಷ್ಟು ಸರಳವಾಗಿ ರಾಜಕೀಕರಣಗೊಳಿಸಿ ಹೇಳಬೇಕೆಂದರೆ ಮುಖ್ಯಮಂತ್ರಿ ಸ್ಥಾನ ದಲಿತರಿಗೆ ಸಿಗಬೇಕು. ಸಂಪುಟದಲ್ಲಿ ದಲಿತರಿಗೆ ಹೆಚ್ಚು ಸ್ಥಾನ ನೀಡಬೇಕು ಎನ್ನುವ ಕೂಗು ವಾಸ್ತವಕ್ಕೆ ಹತ್ತಿರವಾಗುತ್ತದೆ.ಇದು ತತ್ ಕ್ಷಣ ಹೊಳೆಯುವ ಒಂದು ಅಂಶ.
ಇಲ್ಲಿ ರಾಜಕಾರಣವನ್ನು ವಿಶ್ಲೇಷಿಸುವುದು ತುಂಬಾ ಸರಳ. ಕರ್ನಾಟಕದಲ್ಲಿ ರಾಜಕೀಯ ಬಲಾಬಲಗಳು ನಿಂತಿರುವುದೇ ಈ ಜಾತಿ ಆಧಾರಿತ ವೋಟ್ ಬ್ಯಾಂಕ್ ಮೇಲೆ. ಜೆಡಿಎಸ್ ಹಳೆ ಮೈಸೂರು ರಾಜಕೀಯ ಪಕ್ಷವಾಗಿ ಒಕ್ಕಲಿಗರ ಬೆಂಬಲ ಪಡೆದ ಪಕ್ಷ, ಬಿಜೆಪಿಗೆ ಲಿಂಗಾಯಿತರ ಬೆಂಬಲ, ಕಾಂಗ್ರೆಸ್ ಗೆ ಮುಸ್ಲಿಂ, ಹಿಂದುಳಿತ ವರ್ಗ, ದೊಡ್ಡ ಮಟ್ಟಕ್ಕೆ ದಲಿತರ ಬೆಂಬಲ. ಇದು ಒಂದು ಲೆಕ್ಕ. ಹೀಗಿರುವಾಗ ಲಿಂಗಾಯಿತರು(ಬರೀ ಲಿಂಗಾಯಿತರಾದರೆ66.35ಲಕ್ಷ) ಮತ್ತು ಎಲ್ಲಾ ಒಳಪಂಗದ ಸೇರಿ 81ಲಕ್ಷ 37ಸಾವಿರ ಜನಸಂಖ್ಯೆ ಎಂದು ಆಯೋಗ ಹೇಳಿರುವುದನ್ನು, ಒಕ್ಕಲಿಗರು ( ಬರೀ ಒಕ್ಕಲಿಗಾರದಾರೆ 61ಲಕ್ಷ 58ಸಾವಿರ)ಮತ್ತು ಸಮುದಾಯದ ಎಲ್ಲ ಪಂಗಡಗಳು ಸೇರಿ72ಲಕ್ಷ 99ಸಾವಿರ ಎಂದು ಗುರುತಿಸಿರುವುದನ್ನು ಈ ಸಮುದಾಯದ ನಾಯಕರು, ಸ್ವಾಮೀಜಿಗಳು, ಸಂಘಟನೆಗಳು ಒಪ್ಪುತ್ತರಾ? ಒಪ್ಪಲಿಲ್ಲ ಎಂದ ಮೇಲೆ ಒಕ್ಕಲಿಗರು, ಲಿಂಗಾಯಿತರು ಒಂದಾಗಿ ಪ್ರಚಂಡ ರಾಜಕೀಯ ಶಕ್ತಿಯಾಗಿ ಮತ್ತೊಮ್ಮೆ ತಾವು ಬಲಶಾಲಿ ಎನ್ನುವುದನ್ನು ಸಾಬೀತು ಮಾಡುತ್ತಾರ? ಎನ್ನುವ ಮುಖ್ಯ ಪ್ರಶ್ನೆ ಎದುರಾಗಿದೆ.
ಇಂಥದ್ದೇ ಸವಾಲು ಕಾಂಗ್ರೆಸ್ ಪಕ್ಷದ ಮುಂದಿದೆ. 75ಲಕ್ಷ ಮುಸ್ಲಿಮರು, ಒಂದು ಕೋಟಿ 53ಲಕ್ಷ ಹಿಂದುಳಿದ ವರ್ಗದ ಜನ, ಸುಮಾರು ಒಂದೂವರೆ ಕೋಟಿ ದಲಿತರು ಈ ವರದಿಯ ನಂತರ ತಮ್ಮ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮರುಹುಟ್ಟಿ ಗಾಗಿ ಮೇಲ್ಜಾತಿಗಳ ವಿರುದ್ಧ ಪ್ರಚಂಡ ರಾಜಕೀಯ ಶಕ್ತಿಯಾಗಿ ನಿಲ್ಲುತ್ತಾರ?
ಒಟ್ಟಾರೆ ಹೇಳ ಬೇಕೆಂದರೆ ಇದು ಮನ್ವಂತರವೂ ಹೌದು. ಜಾತಿ ಧೃವೀಕರಣವೂ ಹೌದು.
ಇಂಥದ್ದೊಂದು ಚಾರಿತ್ರಿಕ ವರದಿಯನ್ನು ಕಾಂಗ್ರೆಸ್ ಪಕ್ಷ ಹೇಗೆ ತನ್ನ ಭದ್ರ ಕೋಟೆಯನ್ನಾಗಿ ಪರಿವರ್ತಿಸಿ, ಎದುರಾಳಿ ಪಕ್ಷಗಳನ್ನು ಹೇಗೆ ರಾಜಕೀಯವಾಗಿ ಮಟ್ಟ ಹಾಕುತ್ತದೆ ಎನ್ನುವುದೇ ಇದೀಗ ಮಿಲಿಯನ್ ಡಾಲರ್ ಪ್ರಶ್ನೆ.
ಇದು ಸಾಮಾನ್ಯವಾದ ವಿಶ್ಲೇಷಣೆ ಆಯಿತು.
ಇಲ್ಲಿ ಹೆಚ್ಚಿನ ಜವಾಬ್ದಾರಿ ಆಡಳಿತ ರೂಢ ಕಾಂಗ್ರೆಸ್ ಪಕ್ಷದ್ದು. ಈ ವರದಿಯನ್ನು ಮತಗಳಾಗಿ ಪರಿವರ್ತಿಸಲು ಕಾಂಗ್ರೆಸ್ ಪಕ್ಷ ಎಂಥ ಸಿದ್ಧತೆ ನಡೆಸಿದೆ. ಈ "ಪರಿವರ್ತನಾ ಪರ್ವ" ವನ್ನು ಸಾಮಾಜಿಕ ಕಳಕಳಿಯಿಂದ ನಿಭಾಯಿಸಿ, ಇತಿಹಾಸದಲ್ಲಿ ಹೆಸರು ಮಾಡಬೇಕೆಂಬ ಹಂಬಲ ಇರುವ ನಾಯಕರು ಈ ಹಂತದಲ್ಲಿ ಬೇಕಾಗುತ್ತಾರೆ.
ಸಿಎಂ ಸಿದ್ದರಾಮಯ್ಯ ಈ ಪರಿವರ್ತನಾ ಪರ್ವದ ನಾಯಕರಾಗುತ್ತಾರ? ಅವರ ಸಾರಥ್ಯದಲ್ಲಿ ಹಿಂದುಳಿದ ವರ್ಗಗಳನ್ನು, ದಲಿತರನ್ನು, ಅಲ್ಪಸಂಖ್ಯಾತರನ್ನು ಒಗ್ಗೂಡಿಸುವ "ಪ್ರಚಂಡ ರಾಜಕೀಯ ಶಕ್ತಿಯಾಗಿ " ಬೆಳೆಸುವ ಪ್ರಕ್ರಿಯೆ ನಡೆಯುತ್ತಾ? ಜೊತೆಗೆ ಪಕ್ಷದ ಒಳಗೇ ಇರುವ ಒಕ್ಕಲಿಗ , ಲಿಂಗಾಯಿತರ ಸಚಿವರು, ನಾಯಕರ ಪ್ರತಿಭಟನೆಯನ್ನು ಅವರು ಹೇಗೆ ಅರಗಿಸಿಕೊಳ್ಳುತ್ತಾರೆ ಎನ್ನುವುದು ಕೂಡ ಮುಖ್ಯ ಆಗುತ್ತದೆ. ಈ ವರದಿ ಜಾರಿಗೆ ದಿಟ್ಟ ಸಂಕಲ್ಪದ ರಾಜಕೀಯ ನಾಯಕತ್ವ ಇಲ್ಲದಿದ್ದರೆ, ಸಾಧ್ಯವೇ ಇಲ್ಲ ಎನ್ನುವುದು ಒಪ್ಪುವ ವಿಚಾರ. ಇಂಥದ್ದೊಂದು ಹಿಂದುಳಿದ ವರ್ಗಗಳ , ದಲಿತರ, ಅಲ್ಪಸಂಖ್ಯಾತರ ಪರವಾದ ವರದಿ ಜಾರಿಗಾಗಿ ಗಟ್ಟಿ ನಾಯಕತ್ವ ಬೇಕಾಗುವ ಹೊತ್ತಲ್ಲಿ ಅದೇ ಸಮುದಾಯಗಳಿಗೆ ಸೇರಿದ ನಾಯಕನ ಬದಲಾವಣೆ ಕೂಗು ಜಾರಿ ಆಗಲು ಸಾಧ್ಯವಾ? ಎನ್ನುವ ಮಹತ್ವದ ಪ್ರಶ್ನೆಯೂ ಈ ಹಂತದಲ್ಲಿ ಉದ್ಭವಾಗಿದೆ.
ಈ ವರದಿ ಮಂಡಿಸುವಾಗಲೇ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ರಾಹುಲ್ ಗಾಂಧಿ ಹೆಸರು ಹೇಳಿ ಜಾಣತನ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಆದೇಶದ ಮೇರೆಗೆ ಈ ವರದಿ ಮಂಡನೆ ಎಂದು ಹೇಳಿ ಅವರು ಪಕ್ಷದ ಒಳಗಿನ ಲಿಂಗಾಯಿತ, ಒಕ್ಕಲಿಗರ ವಿರೋಧ ತಗ್ಗಿಸುವ ಪ್ರಯತ್ನ ನಡೆಸಿದ್ದಾರೆ.
ಇಲ್ಲಿ ಒಕ್ಕಲಿಗರಾಗಲಿ, ಲಿಂಗಾಯತರಾಗಲಿ ಸಾರಾಸಗಟು ಆರೋಪಕ್ಕೆ ಆಸ್ಪದವೂ ಇಲ್ಲ. ಮೀಸಲಾತಿಯನ್ನು ಶೇಕಡಾ 32 ರಿಂದ 51 ಕ್ಕೆ ಹೆಚ್ಚಿಸಬೇಕು ಎನ್ನುವ ಶಿಫಾರಸಿನಲ್ಲಿ ಈ ಸಮುದಾಯಗಳಿಗೂ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಸರಕಾರ ಇದನ್ನು ರಕ್ಷಣಾತ್ಮಕವಾಗಿ ಬಳಸಿಕೊಳ್ಳಬಹುದಾಗಿದೆ.
ಕೆನೆ ಪದರ ಮೀಸಲಾತಿ, ಇದೆ ಮೊದಲ ಬಾರಿ ಅತಿ ಸಣ್ಣ ಜಾತಿ, ಅಲೆಮಾರಿಗಳ ಪ್ರತ್ಯೇಕ ವರ್ಗ ಸೃಷ್ಟಿಸಿ ಅವರನ್ನು ಗುರುತಿಸಿರುವುದು ದೊಡ್ಡ ಸಾಮಾಜಿಕ ನ್ಯಾಯದ ಕೆಲಸ ಆಗಿದೆ.
ಬಿಜೆಪಿ ಕಾರ್ಯತಂತ್ರ?
ಜಾತಿ ಜನಗಣತಿ ವರದಿಯನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ತಿರುಗುಬಾಣವಾಗಿ ಪ್ರಯೋಗಿಸುವ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರೂ ಕಾರ್ಯತಂತ್ರ ರೂಪಿಸುತ್ತಿರುವುದು ಗೊತ್ತಾಗಿದೆ. ವರದಿಯ ಕೆಲವು ಅಂಶಗಳು ಬಯಲಾಗುತ್ತಿದ್ದಂತೆ ಅದರ ಸಮಗ್ರ ಮಾಹಿತಿಯನ್ನು ತರಿಸಿಕೊಂಡಿರುವ ಬಿಜೆಪಿ ನಾಯಕರು ಈ ವರದಿಗೆ ಕೋಮು ಭಾವನೆಯ ಸ್ವರೂಪ ನೀಡಲು ಚರ್ಚೆ ನಡೆಸಿದ್ದಾರೆ.
ಏಪ್ರಿಲ್ 17 ರ ಸಚಿವ ಸಂಪುಟ ಸಭೆ ಬಳಿಕ ಬಿಜೆಪಿ ತಂತ್ರ ಗಾರಿಕೆ ನಿರ್ದಿಷ್ಟ ಸ್ವರೂಪ ನಡೆಯಲಿದೆ. ಈ ವರೆಗೆ ಹಲವು ಹೋರಾಟಗಳಲ್ಲಿ ಜೆಡಿಎಸ್ ನ್ನು ನಿರ್ಲಕ್ಷಿಸುತ್ತ ಬಂದ ಬಿಜೆಪಿ ಈ ವಿಚಾರದಲ್ಲಿ ಸಂಘಟಿತ ಹೋರಾಟ ನಡೆಸಲು ತೀರ್ಮಾನಿಸಿದೆ. ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳಲ್ಲಿ ಒಗ್ಗಟ್ಟು ಮೂಡಿಸಿ ಬಲಿಷ್ಠ ವೋಟ್ ಬ್ಯಾಂಕ್ ರೂಪಿಸುವುದು ಒಂದು ತಂತ್ರವಾದರೆ ಮುಸ್ಲಿಂ ಸಮುದಾಯಕ್ಕೆ ಅಭೂತಪೂರ್ವ ಆದ್ಯತೆ ನೀಡಲು ಆಯೋಗವನ್ನು ಬಳಸಿಕೊಳ್ಳಲಾಗಿದೆ ಎನ್ನುವ ಸಂಗತಿ ಮುಂದಿಟ್ಟು ಸಾರ್ವಜನಿಕ ವಲಯದಲ್ಲಿ ಹೋರಾಟ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಈ ವಿಚಾರದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರಾಜ್ಯ ಬಿಜೆಪಿ ಜೆಡಿಎಸ್ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಜಾತಿ ಜನಗಣತಿಯ ಪ್ರಕಾರ ಲಿಂಗಾಯಿತರು 66.35 ಲಕ್ಷ ಅಂದ್ರೆ ಶೇಕಡಾ 11 ರಷ್ಟು, ಒಕ್ಕಲಿಗರು 61.58 ಲಕ್ಷ ಮಾತ್ರ ಅಂದರೆ ಶೇಕಡಾ 10.29 ರಷ್ಟು, ಆದರೆ ಮುಸ್ಲಿಂ ಸಮುದಾಯದ ಜಾತಿ ಜನಗಣತಿ75.25ಲಕ್ಷ ಅಂದ್ರೆ ಶೇಕಡಾ 12.58ರಷ್ಟು.
ಒಕ್ಕಲಿಗ ಲಿಂಗಾಯತ ಸಮುದಾಯಕ್ಕಿಂತ ಮುಸ್ಲಿಂ ಸಮುದಾಯದ ಸಂಖ್ಯೆಯೇ ಹೆಚ್ಚು ತೋರಿಸಿ ಉಳಿದ ಎಲ್ಲಾ ಸಮುದಾಯಗಳಿಗೆ ಅನ್ಯಾಯ ಮಾಡಲು ಯತ್ನಿಸಿದ್ದಾರೆ ಎನ್ನುವ ಸಂಗತಿ ಮುಂದಿಟ್ಟು ಹೋರಾಟ ರೂಪಿಸುವ ಬಗ್ಗೆ ಆರಂಭಿಕ ಚರ್ಚೆ ನಡೆದಿದೆ. ಸಚಿವ ಸಂಪುಟದ, ಸರಕಾರದ ಅಧಿಕೃತ ಹೇಳಿಕೆ ಬಳಿಕ ಬಿಜೆಪಿ ರಾಜಕೀಯ ತಂತ್ರಕ್ಕೆ ಹೊಸ ಸ್ವರೂಪ ಬರಲಿದೆ