
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಡಿ.ಕೆ. ಶಿವಕುಮಾರ್ ಬೆಂಗಳೂರಿನ ಬಗ್ಗೆ ದೊಡ್ಡ ಕನಸು ಕಂಡಿದ್ದಾರೆ. ಅದರ ಬಗ್ಗೆ ಭಿನ್ನಾಭಿಪ್ರಾಯವಿಲ್ಲ, ಆದರೆ ಕಾಗದದ ಮೇಲಿರುವ ಯೋಜನೆಗಳು ಮತ್ತು ವಾಸ್ತವಗಳ ನಡುವೆ ಬಹಳ ದೊಡ್ಡ ಅಂತರವಿದೆ.
ಹೊಸದಾಗಿ ಅಧಿಕಾರ ಸ್ವೀಕರಿಸಿರುವ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೃಹತ್ ಮತ್ತು 'ಭವ್ಯವಾದ' ಯೋಜನೆಗಳ ಕಡೆಗೆ ಹೆಚ್ಚು ಆಕರ್ಷಿತರು. ಅವರ ಆಡಳಿತದಲ್ಲಿ, ನಾಗರಿಕ ಸಮಾಜದಿಂದ ವಿರೋಧ ವ್ಯಕ್ತವಾಗುವ ಅನೇಕ ವಿವಾದಾತ್ಮಕ ಬೃಹತ್ ಯೋಜನೆಗಳಿಗೆ ಬೆಂಗಳೂರು ಸಾಕ್ಷಿಯಾಗುವ ಸಾಧ್ಯತೆಯಿದೆ.
ಅವುಗಳಲ್ಲಿ ಪ್ರಮುಖವಾದುದೆಂದರೆ, ಸುಮಾರು 18,000 ರಿಂದ 40,000 ಕೋಟಿ ರೂ. ವೆಚ್ಚದ 17 ಕಿ.ಮೀ ಉದ್ದದ ಬೆಂಗಳೂರು ಸುರಂಗ ಮಾರ್ಗ ಯೋಜನೆ. ಇದು ಈ ನಗರದ ಅತ್ಯಂತ ದುಬಾರಿ ಮೂಲಸೌಕರ್ಯ ಯೋಜನೆ ಎಂದರೆ ತಪ್ಪಲ್ಲ. ಈ ಸುರಂಗವು ನಗರದ ಒಳಭಾಗದಲ್ಲಿ ಹಾದುಹೋಗಲಿದ್ದು, ಸೂಕ್ಷ್ಮವಾದ ಭೂವೈಜ್ಞಾನಿಕ ರಚನೆಯನ್ನು ಅಸ್ಥಿರಗೊಳಿಸುವ ಮತ್ತು ಲಾಲ್ಬಾಗ್ನಂತಹ ಐತಿಹಾಸಿಕ ತಾಣಗಳ ಮೇಲೆ ಪ್ರಭಾವ ಬೀರುವ ಅಪಾಯವನ್ನು ಹೊಂದಿದೆ.
ಬೆಂಗಳೂರಿನಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸುವ ರೀತಿಯನ್ನು ನೋಡಿದರೆ, ಈ ಯೋಜನೆಯು ಕಾಗದದ ಮೇಲೆ ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದ್ದರೂ, ಸದ್ಯದಲ್ಲೇ ಅಂತಹ ಭರವಸೆ ಕಾಣುವ ಸಾಧ್ಯತೆ ಕಡಿಮೆ.
ಹೆಚ್ಚು ಸಂಭವನೀಯ ಸಂಗತಿಯೆಂದರೆ, ಈ ಯೋಜನೆಯು ಈಗಾಗಲೇ ಬಳಲುತ್ತಿರುವ ಕರ್ನಾಟಕದ ರಾಜಧಾನಿಯನ್ನು ದಶಕಗಳ ಕಾಲ 'ನಿರ್ಮಾಣ ಹಂತದಲ್ಲೇ' ಇರುವ ಒಂದು ದುಃಸ್ವಪ್ನದಂತೆ ಪರಿವರ್ತಿಸಬಹುದು.
ಪ್ರತಿರೋಧವನ್ನು ಹತ್ತಿಕ್ಕುವ ಬಗೆ
ನಗರದ ಸದುದ್ದೇಶದ ದೃಷ್ಟಿಯಿಂದ ಈ ಯೋಜನೆಗೆ ನಾನಾ ವಿಭಾಗಗಳಿಂದ ವಿರೋಧ ವ್ಯಕ್ತವಾಗಿದ್ದರೂ, ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವಕುಮಾರ್ ಅವರು ಆ ವಿರೋಧವನ್ನು ಕಡೆಗಣಿಸಿ, ನಿರ್ಮಾಣಕ್ಕಾಗಿ ಟೆಂಡರ್ ಕರೆದರು ಮತ್ತು ಯೋಜನೆಯನ್ನು ಕಾರ್ಯಗತಗೊಳಿಸಲು ಅದಾನಿ ಸಮೂಹವನ್ನು ಆಯ್ಕೆ ಮಾಡಿದರು.
ಹಾಗೆ ಆಯ್ಕೆ ಮಾಡಿಕೊಂಡಿದ್ದರಿಂದ ವಿರೋಧ ಪಕ್ಷವಾದ ಬಿಜೆಪಿ ಮಾಡಬಹುದಾದ ಪ್ರತಿಭಟನೆಗಳನ್ನು ಪರಿಣಾಮಕಾರಿಯಾಗಿ ತಡೆಹಿಡಿದಿದೆ, ಯಾಕೆಂದರೆ ಆ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಅವರಿಗೆ ಮೋದಿ ಸರ್ಕಾರದೊಂದಿಗೆ ಇರುವ ನಿಕಟ ಸಂಬಂಧ ಎಲ್ಲರಿಗೂ ತಿಳಿದಿರುವ ವಿಷಯ. ಆದರೂ, ಸ್ವತಂತ್ರ ಗುಂಪುಗಳು ಈ ಯೋಜನೆಯ ಉಪಯುಕ್ತತೆಯ ಬಗ್ಗೆ ಕಾಯ್ದಿರಿಸಿದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಇವೆ. ಬೆಂಗಳೂರಿನ ಕುಖ್ಯಾತ ಮತ್ತು ಮೀಮ್ಗಳಿಗೆ ಆಹಾರವಾಗುವ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ಉದ್ದೇಶವನ್ನು ಇದು ಈಡೇರಿಸುತ್ತದೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಇತ್ತೀಚೆಗೆ ನಾನಾ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟವು 'ಬೃಹತ್ ಬೆಂಗಳೂರು ಪ್ರಾಧಿಕಾರ'ದ ಮುಖ್ಯಸ್ಥರಿಗೆ ಮನವಿ ಸಲ್ಲಿಸಿ, ಈ ಯೋಜನೆಯು ನಗರದ ಸೂಕ್ಷ್ಮ ಅಂತರ್ಜಲ ವ್ಯವಸ್ಥೆಗೆ ಮಾರಕವಾಗಿದೆ ಎಂಬ ಆತಂಕ ವ್ಯಕ್ತಪಡಿಸಿ ಅದನ್ನು ಕೈಬಿಡಬೇಕೆಂದು ತನ್ನ ಹಕ್ಕೊತ್ತಾಯ ಮಂಡಿಸಿದೆ. ಆದರೆ, ಶಿವಕುಮಾರ್ ಅವರು ಯೋಜನೆಯನ್ನು ಜಾರಿಗೆ ತರಲು ತೋರಿಸುತ್ತಿರುವ ಆಸಕ್ತಿಯನ್ನು ಗಮನಿಸಿದರೆ, ಇದರ ಚಾಲನೆಯನ್ನು ತಡೆಯುವುದು ನಗರದ ನಿವಾಸಿಗಳಿಗೆ ಕಷ್ಟವಾಗುವುದು ನಿಶ್ಚಿತ.
ಭಿನ್ನ ವ್ಯಕ್ತಿತ್ವದ ಸಿಎಂ
ತಮ್ಮ ಪೂರ್ವವರ್ತಿಯಾದ ಸಿದ್ದರಾಮಯ್ಯ ಅವರಿಗಿಂತ ಭಿನ್ನವಾಗಿ, ಡಿ.ಕೆ. ಶಿವಕುಮಾರ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಯೋಜನೆಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದರು. ಉದಾಹರಣೆಗೆ, ಸಾರ್ವಜನಿಕ ವಿರೋಧಕ್ಕೆ ಮಣಿದು, ಸಿದ್ದರಾಮಯ್ಯನವರು ಬೆಂಗಳೂರಿನ ಹೊರವಲಯದಲ್ಲಿ ಪ್ರಸ್ತಾಪಿಸಲಾಗಿದ್ದ 1,777 ಎಕರೆಗಳ ಬೃಹತ್ ರಕ್ಷಣಾ ಮತ್ತು ಏರೋಸ್ಪೇಸ್ ಯೋಜನೆಯನ್ನು ಕೈಬಿಟ್ಟಿದ್ದರು. ಹಾಗೆಯೇ, ಮೈಸೂರಿನ ಬಳಿ ರೇಷ್ಮೆ ನೂಲುವವರು ಬಳಸುತ್ತಿದ್ದ ಜಮೀನಿನಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಯನ್ನೂ ಅವರು ರದ್ದುಗೊಳಿಸಿದ್ದರು, ಏಕೆಂದರೆ ಅದರಿಂದ 1,000ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಸಾಂಪ್ರದಾಯಿಕ ಉದ್ಯೋಗದಿಂದ ದೂರ ಉಳಿಯಬೇಕಾಗಿತ್ತು.
ಆದರೆ ಶಿವಕುಮಾರ್ ಅವರ ದೃಷ್ಟಿಕೋನವೇ ಬೇರೆ. ಅವರು ವಾಣಿಜ್ಯ ಹಿತಾಸಕ್ತಿಯ ಮನೋಭಾವದವರು. ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಆಪ್ತರಾಗಿದ್ದರು. ಸುಮಾರು ಮೂರು ದಶಕಗಳ ಹಿಂದೆ ಬೆಂಗಳೂರನ್ನು ಭಾರತದ ಐಟಿ ಹಬ್ ಆಗಿ ಪರಿವರ್ತಿಸಲು ತಮ್ಮ ಮಾರ್ಗದರ್ಶಕರು ಹೇಗೆ ಬೆಂಬಲ ನೀಡಿದರು ಎಂಬುದನ್ನು ಅವರು ಹತ್ತಿರದಿಂದ ಗಮನಿಸಿದವರು. ಬಹುಶಃ ಕೃಷ್ಣ ಅವರ ಯಶಸ್ಸೇ ಬೆಂಗಳೂರಿನ ಬಗ್ಗೆ ಶಿವಕುಮಾರ್ ಹೊಂದಿರುವ ಭವಿಷ್ಯದ ದೃಷ್ಟಿಕೋನದ ಮೇಲೆ ಪ್ರಭಾವ ಬೀರಿದೆ ಎಂದರೂ ತಪ್ಪಾಗದು.
ಇತರೆ ಬೃಹತ್ ಯೋಜನೆಗಳು
ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಪ್ರಸ್ತಾಪಿಸಿದ್ದ ಇತರ ಬೃಹತ್ ಯೋಜನೆಗಳಲ್ಲಿ 17 ಕಿ.ಮೀ ಸುರಂಗ ಮಾರ್ಗದ ಜೊತೆಗೆ 114 ಕಿ.ಮೀ ಉದ್ದದ ಎತ್ತರಿಸಿದ ಕಾರಿಡಾರ್ ಡಬಲ್ ಡೆಕ್ಕರ್ ಮೇಲ್ಸೇತುವೆಗಳು ಮತ್ತು 700 ಕಿ.ಮೀ ಉದ್ದದ ಹೊಸ ರಸ್ತೆಗಳು ಸೇರಿವೆ.
ಜಗತ್ತಿನ ಪ್ರಮುಖ ನಗರಗಳು ಇದೇ ರೀತಿ ವಿಸ್ತರಣೆ ಮತ್ತು ಅಭಿವೃದ್ಧಿಯನ್ನು ಕಂಡಿರುವುದರಿಂದ, ಶಿವಕುಮಾರ್ ಅವರ ದೂರದೃಷ್ಟಿಯನ್ನು ಯಾರೂ ತಳ್ಳಿಹಾಕುವಂತಿಲ್ಲ. ಕಾಗದದ ಮೇಲೆ ಮತ್ತು ಹೊಳೆಯುವ ಸಭಾಂಗಣಗಳಲ್ಲಿ ನೀಡುವ ಪ್ರೆಸೆಂಟೇಶನ್ಗಳನ್ನು ಗಮನಿಸಿದರೆ ಈ ಯೋಜನೆಗಳು ಕಾರ್ಯಸಾಧ್ಯವೆಂದೇ ಕಾಣುತ್ತವೆ.
ಆದರೆ, ಕಾಗದದ ಮೇಲಿನ ಯೋಜನೆಗಳು ಮತ್ತು ವಾಸ್ತವವಾಗಿ ಸಾಧಿಸಬಹುದಾದ ಕೆಲಸಗಳ ನಡುವೆ ದೊಡ್ಡ ಅಂತರವಿದೆ. ಇದಕ್ಕಾಗಿ ನಾವು ಹಿಂದೆ ಕೈಗೊಂಡ ಕೆಲವು ಯೋಜನೆಗಳನ್ನು, ಅವು ಯಾವ ರೀತಿಯಲ್ಲಿ ಭರವಸೆ ನೀಡಿದ್ದವು ಮತ್ತು ನಂತರ ಅವುಗಳ ಸ್ಥಿತಿ ಏನಾಯಿತು ಎಂಬುದನ್ನು ಪರಿಶೀಲಿಸಿದರೆ ಸಾಕಾಗುತ್ತದೆ.
ಹಿಂದಿನ ಮೇಲ್ಸೇತುವೆಗಳ ಭವಿಷ್ಯ
ಮೆಟ್ರೋ ನಿಲ್ದಾಣಕ್ಕಾಗಿ ಬಹು-ಹಂತದ ಮೇಲ್ಸೇತುವೆ ನಿರ್ಮಿಸುವ ಉದ್ದೇಶದಿಂದ 2005ರ ಸುಮಾರಿಗೆ ಬನ್ನೇರುಘಟ್ಟ ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಜಯದೇವ ಮೇಲ್ಸೇತುವೆಯನ್ನು, ಕೆಡವಲಾಯಿತು. ಹಳೆಯ ಮೇಲ್ಸೇತುವೆಯನ್ನು ನಿರ್ಮಿಸಲು ಸುಮಾರು ನಾಲ್ಕು ವರ್ಷಗಳು ಬೇಕಾಗಿದ್ದವು. 2008ರಲ್ಲಿ ಪ್ಯಾಲೇಸ್ ಆರ್ಚರಡ್ಸ್ ಬಳಿ ನಿರ್ಮಿಸಲಾಗಿದ್ದ "ಮ್ಯಾಜಿಕ್ ಬಾಕ್ಸ್" ಅಂಡರ್ಪಾಸ್, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರವೆಂದು ಹೇಳಲಾಗಿತ್ತು, ಆದರೆ ಈಗ ಅದು ಮುಚ್ಚಲ್ಪಟ್ಟಿದ್ದು ಅನಾಥವಾಗಿದೆ. ಅದೊಂದು ಇಂಜಿನಿಯರಿಂಗ್ ವೈಫಲ್ಯವೆಂದೇ ಬಹುತೇಕರು ಕರೆಯುತ್ತಾರೆ.
ಅದೇ ರೀತಿ ವಿಮಾನ ನಿಲ್ದಾಣದಿಂದ ನಗರದ ಕಡೆಗೆ ಬರುವ ದಾರಿಯಲ್ಲಿ ಹೆಬ್ಬಾಳ ಜಂಕ್ಷನ್ ನಿರ್ಮಿಸಲಾಯಿತು, ಭಾಗಶಃ ಕೆಡವಲಾಯಿತು, ಮತ್ತು ಮಾರ್ಪಡಿಸಿದ ಮೇಲ್ಸೇತುವೆಗಳು ಹಾಗೂ ಸಂಚಾರ ಬದಲಾವಣೆಗಳೊಂದಿಗೆ ಮತ್ತೆ ಮರುನಿರ್ಮಾಣ ಮಾಡಲಾಯಿತು. ಆದರೂ, ಇವೆಲ್ಲವೂ ಸಂಚಾರ ದಟ್ಟಣೆಯಲ್ಲಿ ದೊಡ್ಡ ಬದಲಾವಣೆಯನ್ನೇನೂ ತಂದಿಲ್ಲ. ಈಗ, ಶಿವಕುಮಾರ್ ಅವರು ಆ ಜಂಕ್ಷನ್ನಿಂದ ಉಂಟಾಗುವ ತೀವ್ರ ಸಂಚಾರ ದಟ್ಟಣೆಯನ್ನು ಬಗೆಹರಿಸಲು ಸುರಂಗಗಳು ಮತ್ತು ಮೇಲ್ಸೇತುವೆಗಳ ಸಂಯೋಜನೆಯ ಮತ್ತೊಂದು ಯೋಜನೆಯನ್ನು ರೂಪಿಸಿದ್ದಾರೆ.
ಸಾರಿಗೆ ತಜ್ಞರನ್ನು ಉಲ್ಲೇಖಿಸುವ ವರದಿಗಳ ಪ್ರಕಾರ, ಈ ಸುರಂಗ-ಮೇಲ್ಸೇತುವೆ ನಿರ್ಮಾಣವಾದಾಗ, ಇದು ಭೂಗತ ಭಾಗದಲ್ಲಿ ಇನ್ನಷ್ಟು ಟ್ರಾಫಿಕ್ ದಟ್ಟಣೆಯನ್ನು ಉಂಟುಮಾಡುತ್ತದೆ ಮತ್ತು ಅದರ ತೀಕ್ಷ್ಣವಾದ ತಿರುವುಗಳು ವಾಹನ ಚಾಲನೆಗೆ ಅಪಾಯಕಾರಿಯಾಗಲಿವೆ. ಆದರೆ, 2,250 ಕೋಟಿ ರೂ.ಗಳ ಈ ಯೋಜನೆ ಈಗಾಗಲೇ ಜಾರಿಯಲ್ಲಿದೆ.
ಮೃತ್ಯುಕೂಪವಾದ ಅಂಡರ್ಪಾಸ್
ಬೆಂಗಳೂರಿನಲ್ಲಿ ಮಳೆ ಸುರಿಯಿತೆಂದರೆ ಪ್ರಮುಖ ಜಂಕ್ಷನ್ಗಳಲ್ಲಿ ಅಸ್ತಿತ್ವದಲ್ಲಿರುವ ಕೆಲವು ಅಂಡರ್ಪಾಸ್ಗಳು ಮೃತ್ಯುಕೂಪಗಳಾಗಿ ಪರಿಣಮಿಸುತ್ತಿವೆ. ಭೂಗತ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಸರ್ಕಾರ ನಿರಂತರವಾಗಿ ಹೇಳುತ್ತಿದ್ದರೂ, ಪ್ರತಿ ಬಾರಿ ವರುಣನ ಆರ್ಭಟ ಹೆಚ್ಚಾದಾಗ ಅಂಡರ್ಪಾಸ್ಗಳು ಜಲಾವೃತವಾಗುತ್ತವೆ.
ಮೂರು ವರ್ಷಗಳ ಹಿಂದೆ ನಡೆದ ಒಂದು ದುರಂತದಲ್ಲಿ, ರಾಜ್ಯ ವಿಧಾನಸಭೆಗೆ ಕೂಗಳತೆಯ ದೂರದಲ್ಲಿರುವ ಕೆ.ಆರ್. ಸರ್ಕಲ್ನಲ್ಲಿ, ಭಾರಿ ಮಳೆಯಿಂದ ಜಲಾವೃತವಾಗಿದ್ದ ಅಂಡರ್ಪಾಸ್ನಲ್ಲಿ ಕಾರು ಸಿಕ್ಕಿಹಾಕಿಕೊಂಡು ಅದರಲ್ಲಿನ ಪ್ರಯಾಣಿಕರಲ್ಲಿ ಒಬ್ಬರು ಮೃತಪಟ್ಟಿದ್ದರು. ಇಂದಿಗೂ ಸಹ ಮಳೆ ಪ್ರಾರಂಭವಾದ ತಕ್ಷಣ ಆ ಅಂಡರ್ಪಾಸ್ನ್ನು ಬ್ಯಾರಿಕೇಡ್ ಹಾಕಿ ಮುಚ್ಚಲಾಗುತ್ತದೆ, ಯಾಕೆಂದರೆ ದುರಂತ ಸಂಭವಿಸಿ ಇಷ್ಟೂ ವರ್ಷಗಳು ಗತಿಸಿದರೂ ಅಲ್ಲಿನ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಯೋಜನೆಗಳ ಸಾಕಾರಕ್ಕೆ ಸದವಕಾಶ
ಇಂತಹ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುವ ಅಧಿಕಾರ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಗೆ ಖಂಡಿತವಾಗಿಯೂ ಇರುತ್ತದೆ. ಈಗ ಶಿವಕುಮಾರ್ ಅವರು ರಾಜ್ಯದ ಆಡಳಿತ ಶ್ರೇಣಿಯ ಅತ್ಯುನ್ನತ ಹಂತದಲ್ಲಿದ್ದಾರೆ. ಈಗ ಅವರು ತಮ್ಮ ಕನಸಿನ ಯೋಜನೆಗಳನ್ನು ಕಾರ್ಯಗತಗೊಳಿಸಲು ಈ ಸ್ಥಾನವನ್ನು ಬಳಸಿಕೊಳ್ಳುವುದು ಸಹಜ. ಆದರೆ, ನಗರದ ಮೂಲಸೌಕರ್ಯ ನಿರ್ಮಾಣದ ನಿರಾಶಾದಾಯಕ ಅನುಭವವನ್ನು ಗಮನಿಸಿದರೆ, ಇದು ಸಾಮಾನ್ಯ ಬೆಂಗಳೂರಿಗರ ಬೆನ್ನುಮೂಳೆಯಲ್ಲಿ ನಡುಕ ಹುಟ್ಟಿಸುವುದು ಖಚಿತ.
ಯಾಕೆ ಹೀಗೆ ಹೇಳುತ್ತಿದ್ದೇನೆಂದರೆ ಒಂದು ಯೋಜನೆಯನ್ನು ರೂಪಿಸಿದರೆ ಸಮಯಮಿತಿಯನ್ನು ಯಾವತ್ತೆಂದರೆ ಯಾವತ್ತಿಗೂ ಪಾಲಿಸುವುದಿಲ್ಲ. ನಗರದ ಬಹುಮುಖ್ಯ ಸ್ಟಾರ್ಟ್-ಅಪ್ ಕೇಂದ್ರವಾದ ಕೋರಮಂಗಲದಲ್ಲಿ "ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು" ಉದ್ದೇಶಿಸಲಾಗಿದ್ದ 2.4 ಕಿ.ಮೀ ಗಿಂತ ಕಡಿಮೆ ಉದ್ದದ ಇಂದಿರಾನಗರ- ಈಜೀಪುರ ಫ್ಲೈಓವರ್ ಕಾಮಗಾರಿಯನ್ನು ಆರಂಭಿಸಿದ್ದು 2017 ರಲ್ಲಿ. ಅಂದರೆ ಸುಮಾರು ಒಂದು ದಶಕ ಕಳೆದರೂ ಆ ಮೇಲ್ಸೇತುವೆ ನಿರ್ಮಾಣ ಹಂತದಲ್ಲಿಯೇ ಇದೆ, ಸದ್ಯಕ್ಕದು ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ.
ಸ್ಥಳೀಯ ಆಡಳಿತದಲ್ಲಿ ಭ್ರಷ್ಟಾಚಾರ
ಬೆಂಗಳೂರು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದಿಲ್ಲ ಎಂಬ ಕುಖ್ಯಾತಿ ಇರುವುದು ಹೊಸತೇನೂ ಅಲ್ಲ. ಅದು ಅನೇಕ ವರ್ಷಗಳಿಂದ ಅಂಟಿದ ಶಾಪ. ಇನ್ನು ಸ್ಥಳೀಯ ಆಡಳಿತದಲ್ಲಿರುವ ಭ್ರಷ್ಟಾಚಾರದ ಬಗ್ಗೆ ವರದಿಗಳು ಆಗಾಗ್ಗೆ ಬಹಿರಂಗವಾಗುತ್ತಲೇ ಇರುತ್ತವೆ. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಯೋಜನೆಗಳಿಗೆ ಅನುಮೋದನೆ ನೀಡಲು ರಾಜಕಾರಣಿಗಳು "40% ಕಮಿಷನ್" ಕೇಳುತ್ತಿದ್ದಾರೆ ಎಂದು ಆರೋಪಿಸಿತ್ತು.
ಸಿದ್ದರಾಮಯ್ಯ ಅವರ ನೇತೃತ್ವದ ನಂತರದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಇದೇ ರೀತಿಯ ಆರೋಪವನ್ನು ಗುತ್ತಿಗೆದಾರರ ಸಂಘ ಮಾಡಿರುವುದು ಜನಮಾನಸದಿಂದ ಇನ್ನೂ ಮರೆಯಾಗಿಲ್ಲ.
ವಿಡಂಬನೆಯ ಸಂಗತಿ ಏನೆಂದರೆ ಕಳೆದ ಐದು ದಶಕಗಳಲ್ಲಿ ನಾಗಾಲೋಟದಲ್ಲಿ ಬೆಳೆದಿರುವ ಬೆಂಗಳೂರಿಗೆ ಮೂಲಸೌಕರ್ಯ ವಿಸ್ತರಣೆ ಅನಿವಾರ್ಯ ಎಂಬುದರಲ್ಲಿ ಅನ್ಯ ಮಾತಿಲ್ಲ. ಆದರೆ, ಶಿವಕುಮಾರ್ ಅವರು ಇಲ್ಲಿಯವರೆಗೆ ಪರಿಚಿತರಾಗಿರುವ ಮತ್ತು ಈಗ ಪರಂಪರೆಯಾಗಿ ಸ್ವೀಕರಿಸುತ್ತಿರುವ ಆಡಳಿತ ಸಂಸ್ಕೃತಿಯು, ಅವರ ಭರವಸೆಗಳು ಮತ್ತು ಯೋಜನೆಗಳನ್ನು ಈಡೇರಿಸುವ ಯಾವುದೇ ಸ್ಥಿತಿಯಲ್ಲಿ ಇರುವಂತೆ ಕಾಣುತ್ತಿಲ್ಲ.
ಹೊಸ ಯೋಜನೆಗಳು
ಆದಾಗ್ಯೂ, ಹೆಚ್ಚಿನ ಯೋಜನೆಗಳು ಗರಿಗೆದರುತ್ತಿವೆ. ಮುಂದಿನ ಕೆಲವು ವರ್ಷಗಳಲ್ಲಿ ಸಾಮರ್ಥ್ಯದ ಮಿತಿಯನ್ನು ತಲುಪಲಿರುವ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣಕ್ಕೆ ಪೂರಕವಾಗಿ, ಹೊಸ ಮೆಗಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಗರದ ದಕ್ಷಿಣ ಉಪನಗರವಾದ ಬಿಡದಿಯ ಕಡೆಗೆ ಶಿವಕುಮಾರ್ ಅವರು ಮೆಗಾ ಟೌನ್ಶಿಪ್ ಯೋಜನೆಯನ್ನು ತಳ್ಳುತ್ತಿದ್ದಾರೆ, ಇದು ರೈತರ ಒಂದು ವರ್ಗದಿಂದ ವಿರೋಧಕ್ಕೆ ಕಾರಣವಾಗಿದೆ. ಅವರು ಬೆಂಗಳೂರು ಮತ್ತು ಮೈಸೂರು ನಡುವೆ ಮತ್ತೊಂದು ಎಕ್ಸ್ಪ್ರೆಸ್-ವೇ ಬಗ್ಗೆಯೂ ಮಾತನಾಡುತ್ತಿದ್ದಾರೆ.
ಮೊದಲ ದಿನವೇ, ಹೊಸ ಮುಖ್ಯಮಂತ್ರಿಯವರು ನಗರದ ರಸ್ತೆಗಳಿಗಾಗಿ ಬರೋಬ್ಬರಿ 2,000 ಕೋಟಿ ರೂಪಾಯಿ ಮಂಜೂರು ಮಾಡಿದ್ದಾರೆ. ಇದುವರೆಗೆ, ಇದೇ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು, ಗುಂಡಿಗಳನ್ನು ಮುಚ್ಚಲು ಮತ್ತು ಪ್ರಯಾಣವನ್ನು ಸುಲಭಗೊಳಿಸಲು ನಿಯಮಿತವಾಗಿ ಹಲವಾರು ಕೋಟಿ ರೂ. ಮಂಜೂರು ಮಾಡಲಾಗಿದೆ. ಆ ಹಣ ಬಹುಶಃ ಖರ್ಚಾಗಿದೆ, ಆದರೆ ರಸ್ತೆಗಳ ಸ್ಥಿತಿ ಮೊದಲಿನಂತೆಯೇ ಇದೆ, ಅಥವಾ ಇನ್ನೂ ಹದಗೆಟ್ಟಿದೆ.
ಬೆಂಗಳೂರಿನ ಬಗ್ಗೆ ಶಿವಕುಮಾರ್ ಅವರ ಕನಸುಗಳು ಬರೀ ಹಗಲುಗನಸಾಗಬಾರದು ಎಂದರೆ, ಅದಕ್ಕೆ ಕೇವಲ ಮಾತು ಸಾಲದು, ಅತ್ಯಂತ ಗಂಭೀರವಾದ ಮತ್ತು ಬದ್ಧತೆಯ ಪ್ರಯತ್ನ ಬೇಕಾಗುತ್ತದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

