ಅಯೋಧ್ಯೆ ಮೋದಿಯವರ ರಾಜಕೀಯ ಯೋಜನೆ
x

ಅಯೋಧ್ಯೆ ಮೋದಿಯವರ ರಾಜಕೀಯ ಯೋಜನೆ


ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಸಮಾರಂಭ ಮತ್ತು ಆಮಂತ್ರಣ ಪತ್ರಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುವಲ್ಲಿ ವಿಫಲವಾಗಿವೆ. ದೇವಾಲಯದ ಟ್ರಸ್ಟ್ ಎಲ್ಲ ಪಕ್ಷಗಳನ್ನೂ ಆಹ್ವಾನಿಸಿತ್ತು, ಆದರೆ, ಅವ್ಯವಸ್ಥೆ ಮತ್ತು ಗೊಂದಲದಲ್ಲಿ ಸಿಲುಕಿರುವ ಪ್ರತಿಪಕ್ಷಗಳು ರಾಜಕೀಯ ವಿಜಯ ಸಾಧಿಸಲು ಬಿಜೆಪಿಗೆ ಅವಕಾಶ ಮಾಡಿಕೊಟ್ಟವು. ಸಂಘ ಪರಿವಾರ ಮತ್ತು ಅದರ ಅಂಗಸಂಸ್ಥೆಗಳು ಪ್ರತಿಪಕ್ಷಗಳು ಅಲ್ಪಸಂಖ್ಯಾತರನ್ನು (ನಿರ್ದಿಷ್ಟವಾಗಿ ಮುಸ್ಲಿಮರು) ಬೆಂಬಲಿಸುತ್ತವೆ ಎಂದು ಪ್ರಚಾರ ಮಾಡಲು ಆರಂಭಿಸಿದವು.

ಟ್ರಸ್ಟ್ ಒಂದು ಸ್ವಾಯತ್ತ ಸಂಸ್ಥೆಯಂತೆ ಕಾರ್ಯನಿರ್ವಹಿಸುವುದಿಲ್ಲ. ಬದಲಾಗಿ, ಸರ್ಕಾರಿ ಸಂಸ್ಥೆಗಳು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸೆಸ್)ದ ಸಂಸ್ಥೆಗಳೊಟ್ಟಿಗೆ ಕಾರ್ಯನಿರ್ವಹಿಸುತ್ತದೆ. ಉನ್ನತ ಹಂತದ ಅನುಮತಿ ಪಡೆದು ಟ್ರಸ್ಟ್ ಯಾರನ್ನಾದರೂ ಆಹ್ವಾನಿಸಬಹುದು ಅಥವಾ ಆಹ್ವಾನಿಸದೆ ಇರಬಹುದು. ಕಾಂಗ್ರೆಸ್ ನೇತೃತ್ವದ ಪ್ರತಿಯೊಂದು ವಿರೋಧ ಪಕ್ಷಗಳು ಪಾಲ್ಗೊಳ್ಳುವ ಕುರಿತು ನಿರ್ಧರಿಸಲು ಏಕೆ ಇಷ್ಟು ಸಮಯ ತೆಗೆದುಕೊಂಡವು? ಕನಿಷ್ಠ ರಾಜಕೀಯ ಜ್ಞಾನ ಇರುವವರಿಗೆ ಪ್ರಧಾನಿ ಅವರು ಲೋಕಸಭೆ ಚುನಾವಣೆಗೆ ಮೊದಲು ಮಂದಿರವನ್ನು ಉದ್ಘಾಟಿಸುತ್ತಾರೆ ಎನ್ನುವುದು ಗೊತ್ತಿತ್ತು. ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಅವರಿಗೆ ಹಿಂದುತ್ವ ಬೆನ್ನೆಲುಬಾಗಿತ್ತು. ಅವರ ಪ್ರಕಾರ, ರಾಮ ಮಂದಿರದ ನಿರ್ಮಾಣ ಮತ್ತು ವಾರಣಾಸಿ ಮತ್ತು ಮಥುರಾದಲ್ಲಿನ ವಿವಾದಿತ ಇಸ್ಲಾಮಿಕ್ ಪೂಜಾ ಸ್ಥಳಗಳ ನಿಯಂತ್ರಣ ಚುನಾವಣಾ ಯಶಸ್ಸಿಗೆ ಕೊಡುಗೆ ನೀಡುತ್ತದೆ.

ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ನೀಡಿದ ನವೆಂಬರ್ 9, 2019 ಶಿಲಾನ್ಯಾಸ ಸಮಾರಂಭದ 13 ನೇ ವಾರ್ಷಿಕೋತ್ಸವದ ದಿನವಾಗಿತ್ತು ಎನ್ನುವುದು ಗಮನಿಸಬೇಕಾದ ಅಂಶ. ದೇವಸ್ಥಾನ ಯೋಜನೆ: ಮೂರು ತಿಂಗಳ ನಂತರ, ಅಂದರೆ, ಫೆಬ್ರವರಿ 5 ರಂದು ಸರ್ಕಾರವು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಸ್ಥಾಪಿಸಿತು. ತಿಂಗಳೊಳಗೆ ಅದಕ್ಕೊಂದು ರೂಪ ಕೊಡಲಾಯಿತು ಮತ್ತು ಸದಸ್ಯರು ಅಧಿಕಾರ ವಹಿಸಿಕೊಂಡರು. ಜೂನ್ 2014 ರಿಂದ ಆಗಸ್ಟ್ 2019 ರವರೆಗೆ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವನ್ನು ಪ್ರಧಾನ ಮಂತ್ರಿಯುವ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಿದ ಮಾಜಿ ಐಎಎಸ್ ಅಧಿಕಾರಿ ಮತ್ತು ಪ್ರಧಾನಿ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರನ್ನು ಟ್ರಸ್ಟಿನ ದೇವಾಯ ನಿರ್ಮಾಣ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

ನಿಸ್ಸಂಶಯವಾಗಿ, ಪ್ರಧಾನಿಗೆ ನಿರ್ಮಾಣ ಕಾಮಗಾರಿಯ ಪ್ರಗತಿ ಬಗ್ಗೆ ತಿಳಿಸಲು ಮತ್ತು ಸಲಹೆಯನ್ನು ನೀಡಲು ನೆರವಾಗಲು ಅವರನ್ನು ನೇಮಿಸಲಾಗಿದೆ. ಮಿಶ್ರಾ ಅವರು ಮಾಧ್ಯಮ ಸಂವಾದದಲ್ಲಿ ದೇವಾಲಯಕ್ಕೆ ಸಂಬಂಧಿಸಿದಂತೆ ತಮ್ಮ ಮುನ್ನೋಟ ಕುರಿತು ವಿವರಿಸಿದರು. ಇದೆಲ್ಲವೂ ಉನ್ನತ ಹಂತದಿಂದ ಬಂದಿವೆ ಎನ್ನುವುದು ಸ್ಪಷ್ಟ. ಕೋವಿಡ್ ನಡುವೆಯೂ ಕಾಮಗಾರಿ: ಆದರೆ, ಮಂದಿರ ನಿರ್ಮಾಣ ಪ್ರಾರಂಭವಾಗುವ ಮೊದಲು ಲಾಕ್ಡೌನ್ ವಿಧಿಸಲಾಯಿತು. ಆದರೆ, ಕೆಲವೇ ವಾರಗಳಲ್ಲಿ, ಕೆಲಸ ಪ್ರಾರಂಭ ವಾಯಿತು. ಜೂನ್ ವೇಳೆಗೆ ಕೋವಿಡ್ ಉತ್ತುಂಗಕ್ಕೇರಿದ ಸಮಯದಲ್ಲೇ ಪ್ರಧಾನಿಯಿಂದ ಭೂಮಿಪೂಜೆ ನಡೆಸಲು ಯೋಜಿಸಲಾಯಿತು.

ಆರ್ಟಿಕಲ್ 370 ನ್ನು ಹಿಂಪಡೆದ ಮೊದಲ ವಾರ್ಷಿಕ ಆಚರಣೆಯನ್ನು ಆಗಸ್ಟ್ 5 ರಂದು ನಡೆಸುವ ಆಲೋಚನೆಯು ಒಂದು ರಾಜಕೀಯ ವಿಷಯವಾಗಿತ್ತು. ಪ್ರಧಾನಿಗೆ ಎಲ್ಲ ಶ್ರೇಯಸ್ಸು ಲಭಿಸುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ಧೇಶವಾಗಿತ್ತು. ಪ್ರಧಾನಿ ಖುದ್ದಾಗಿ ಆಚರಣೆಗಳನ್ನು ಆರಂಭಿಸುವರೇ ಅಥವಾ ಹಾಜರಿರುತ್ತಾರೆಯೇ ಎಂಬುದನ್ನು ಸಾರ್ವಜನಿಕಗೊಳಿಸಲಿಲ್ಲ.

ಸಾಲುಗಳೇ ಮಸುಕು: ಈ ಸಮಾರಂಭ ಧರ್ಮ ಮತ್ತು ರಾಜ್ಯದ ನಡುವಿನ ಗೆರೆಗಳನ್ನು ಅಳಿಸಿಹಾಕಿತು ಮತ್ತು ಆರೆಸ್ಸೆಸ್ ಹಾಗೂ ರಾಜ್ಯದ ನಡುವಿನ ಗೆರೆಗಳನ್ನು ಮಸುಕುಗೊಳಿಸಿತು. ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್, ಬಿಜೆಪಿಯ ಪ್ರಮುಖರು, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.

ಭೂಮಿ ಪೂಜೆ ಸಮಾರಂಭದಲ್ಲಿ ಕರೋನಾ ವ್ಯಾಪಕವಾಗಿ ಹರಡಿತ್ತು. ಆಗ ದೇಶದಲ್ಲಿ ದಾಖಲಾದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಸುಮಾರು 2 ದಶಲಕ್ಷ. ದೈನಂದಿನ ಸಂಖ್ಯೆ ಸುಮಾರು 45,000. 4,50,000 ಜನರು ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ನೋಡಿದರೆ, ಚುನಾವಣೆಗೆ ಮುನ್ನ ದೇವಾಲಯ ನಿರ್ಮಾಣಗೊಳ್ಳಲಿದೆ. ಎಲ್ಲ ಪಕ್ಷಗಳೂ ವಿಳಂಬವಾಗಿ ಪ್ರತಿಕ್ರಿಯೆ ನೀಡಿವೆ. ತೃಣಮೂಲ ಕಾಂಗ್ರೆಸ್ ಪರ್ಯಾಯ ಮಾರ್ಗವೊಂದನ್ನು ಕಂಡುಕೊಂಡಂತಿದೆ.

ಯೋಜನೆಯೇ ಇಲ್ಲ: ಪ್ರತಿಪಕ್ಷಗಳು ರಾಜಕೀಯದಲ್ಲಿ ಅತ್ಯಗತ್ಯವಾಗಿರುವ 'ಭವಿಷ್ಯದ ಯೋಜನೆ'ಯೊಂದ ನ್ನು ಸಿದ್ಧಪಡಿಸಿಕೊಂಡಿಲ್ಲ. ಪರ್ಯಾಯ ತಂತ್ರಗಳ ಕೊರತೆಯಿಂದ ಬಿಜೆಪಿಗೆ ಹಿಂದುಗಳ ಬೆಂಬಲ ಹೆಚ್ಚಲಿದೆ. ಈ ವಿಳಂಬಿತ ಪ್ರತಿಕ್ರಿಯೆಯು ಪ್ರತಿಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ಸಿನಲ್ಲಿರುವ ಗೊಂದಲವನ್ನು ಪ್ರತಿಬಿಂಬಿಸುತ್ತದೆ. 1980ರ ದಶಕದಲ್ಲಿ ರಾಮಮಂದಿರ ಚಳವಳಿಯ ಆರಂಭದ ದಿನಗಳಲ್ಲಿ ಇದು ಸ್ಪಷ್ಟವಾಗಿತ್ತು. ಮೃದು ಹಿಂದುತ್ವದ ಧೋರಣೆ ಕಾಂಗ್ರೆಸ್ಸಿಗೆ ಯಾವುದೇ ಪ್ರಯೋಜನ ಆಗಲಿಲ್ಲ. ಭಾರತ್ ಜೋಡೋ ಯಾತ್ರಾ ಮತ್ತು ಆನಂತರ ಪಕ್ಷ ತದ್ವಿರುದ್ಧ ನಿಲುವು ತಳೆಯಿತು. ಆದರೆ, ಇತ್ತೀಚಿನ ಚುನಾವಣೆಗಳ ಸಮಯದಲ್ಲಿಅದನ್ನು ಕೈಬಿಟ್ಟಿತು.

ಹಿಂದೂಗಳು, ಹಿಂದೂ ಧರ್ಮ: ಬಹುತೇಕ ಹಿಂದುಗಳು ಹಿಂದುತ್ವ ಸಿದ್ಧಾಂತವನ್ನು ಒಪ್ಪುವುದಿಲ್ಲ. ಇದೇ ʻಮೌನಿ ಬಹುಸಂಖ್ಯಾತರುʼ ಎಂದು ಕರೆಸಿಕೊಳ್ಳುವ ಗುಂಪು. ಇವರು ಪ್ರತಿನಿತ್ಯ ಕೇಸರಿ ಪಕ್ಷದ ಕಾರ್ಯಕರ್ತರನ್ನು ಎದುರಿಸುತ್ತ ಕೂರುವುದಿಲ್ಲ. ತೃಣಮೂಲ ಕಾಂಗ್ರೆಸ್ ಜನವರಿ 22 ರಂದು ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದಾದ್ಯಂತ ಸರ್ವ ಧರ್ಮ ರ್ಯಾಲಿ ಆಯೋಜಿಸಲು ನಿರ್ಧರಿಸಿ, ಸರಿಯಾದ ಕೆಲಸ ಮಾಡಿದೆ. ಸ್ವಾತಂತ್ರ್ಯಕ್ಕಾಗಿ ದೀರ್ಘಕಾಲ ಹೋರಾಡಿದ ಮಹಾತ್ಮ ಗಾಂಧಿ, ಆನಂತರ ಸ್ವಾತಂತ್ರ್ಯ ದಿನಾಚರಣೆಯಿಂದ ದೂರ ಉಳಿದರು. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕಿರುವುದು ಏನೆಂದರೆ, ಹೆಚ್ಚಿನವರು ತಮ್ಮ ಸಾಮಾಜಿಕ ಮತ್ತು ನೈತಿಕ ವರ್ತನೆಯಲ್ಲಿ ಜಾತ್ಯತೀತರಾಗಿಯೇ ಉಳಿದಿದ್ದಾರೆ. ಬಿಜೆಪಿಯನ್ನು ಬೆಂಬಲಿಸಿದವರೆಲ್ಲರೂ ಹಿಂದುತ್ವದ ಬೆಂಬಲಿಗರಲ್ಲ ಎಂದು ಅಧ್ಯಯನಗಳು ಹೇಳುತ್ತವೆ.

ಯೋಚಿಸಿ, ಭವಿಷ್ಯಕ್ಕೆ ಯೋಜನೆ ರೂಪಿಸಿ: ವಿರೋಧ ಪಕ್ಷಗಳು ಮಾರ್ಗಸೂಚಿಯನ್ನು ರಚಿಸಲೇಬೇಕು. ಈ ಕಾರ್ಯತಂತ್ರಕ್ಕೆ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಆತ್ಮವಿಶ್ವಾಸದ ಬೆಂಬಲ ಕೊಡಬೇಕಿದೆ. ಆಗ ಮಾತ್ರ ಪ್ರತಿಯೋಜನೆಗಳನ್ನು ರೂಪಿಸಬಹುದು. ಪ್ರತಿ ಪಕ್ಷಗಳು ಸ್ವಯಂಖಾತ್ರಿಯಿರುವ ಬ್ರಿಗೇಡ್ಗಳಾಗದಿದ್ದರೆ, ಅವು , ಬಿಜೆಪಿಗೆ ಸವಾಲು ಒಡ್ಡಲಾರವು.


(ಲೇಖನದಲ್ಲಿನ ಮಾಹಿತಿ, ಆಲೋಚನೆ ಅಥವಾ ಅಭಿಪ್ರಾಯಗಳು ಲೇಖಕರದ್ದು; ಅವು ಫೆಡರಲ್ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ)

Read More
Next Story