ಉತ್ತರಾಖಂಡದಲ್ಲಿ ಮತಾಂತರ ನಿಷೇಧಕ್ಕೆ ಕಠಿಣ ಕಾಯ್ದೆ: ಧಾರ್ಮಿಕ ಸಮುದಾಯಗಳೇ ಟಾರ್ಗೆಟ್?
x
ಈ ಕಾನೂನು ಶಾಸಕಾಂಗ ಮತ್ತು ಕಾರ್ಯಾಂಗದ ಕ್ಷೇತ್ರಗಳಿಗೂ ವಿಸ್ತರಿಸಿದೆ ಎಂಬುದು ಇನ್ನಷ್ಟು ಆತಂಕಕಾರಿ ವಿಷಯ.

ಉತ್ತರಾಖಂಡದಲ್ಲಿ ಮತಾಂತರ ನಿಷೇಧಕ್ಕೆ ಕಠಿಣ ಕಾಯ್ದೆ: ಧಾರ್ಮಿಕ ಸಮುದಾಯಗಳೇ ಟಾರ್ಗೆಟ್?

ಉತ್ತಾರಾಖಂಡದಲ್ಲಿ ಉತ್ತರ ಪ್ರದೇಶ ಮಾದರಿಯ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ಉದ್ದೇಶ ಹೊಂದಲಾಗಿದೆ. ಆ ಕಾರಣದಿಂದಲೇ ಈಗಿರುವ ಉತ್ತರಾಖಂಡ ಧಾರ್ಮಿಕ ಸ್ವಾತಂತ್ರ್ಯ ಮಸೂದೆಗೆ ತಿದ್ದುಪಡಿ ಮಾಡಲಾಗಿದೆ. ಇದರಲ್ಲಿ ಅಡಕವಾಗಿರುವ ನಿಯಮಗಳು ನಿಜಕ್ಕೂ ಕಠಿಣಾತಿ ಕಠಿಣ.


ತನ್ನ ದೈನಂದಿನ ರಾಜಕೀಯದ ಚೌಕಟ್ಟನ್ನು ಮೀರಿ ಬಿಜೆಪಿ ತನ್ನ ಕಾರ್ಯತಂತ್ರವನ್ನು ವಿಸ್ತರಿಸುತ್ತ ಸಾಗಿದ್ದು, ಅದರಿಂದ ಪಕ್ಷಕ್ಕೆ ಉತ್ತಮ ಫಲಿತಾಂಶ ತಂದುಕೊಟ್ಟಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ವಿಭಿನ್ನ ಭೌಗೋಳಿಕ ಪ್ರದೇಶಗಳಲ್ಲಿನ ನಾನಾ ಪ್ರಯೋಗಗಳು ಪಕ್ಷವು ತನ್ನ ಗಡಿಗಳನ್ನು ವಿಸ್ತರಿಸಲು ಮತ್ತು ಹೊಸ ನೆಲೆಯನ್ನು ಕಂಡುಕೊಳ್ಳಲು ಸಹಾಯ ಮಾಡಿದೆ. ಈ ಪ್ರಕ್ರಿಯೆಯಲ್ಲಿ ಕೆಲವು ಸ್ಥಾಪಿತ ಸಿದ್ಧಾಂತಗಳಿಗೆ ತಿಲಾಂಜಲಿ ಇಡಲಾಗಿದ್ದರೂ ಇದನ್ನು ಸಾಮಾನ್ಯವೆಂದು ಪರಿಗಣಿಸಬೇಕಾಗುತ್ತದೆ.

ಈಗ ಉತ್ತರಾಖಂಡ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಮಸೂದೆ, 2025ರ ಪ್ರಸ್ತಾವಿತ ತಿದ್ದುಪಡಿಗಳನ್ನೇ ಬೇಕಿದ್ದರೆ ಗಮನಿಸಿ. ‘ಹಿರಿಯಣ್ಣ’ನಾದ ಉತ್ತರ ಪ್ರದೇಶದ ಹಾದಿಯಲ್ಲಿಯೇ ಸಾಗಿರುವ ಪುಷ್ಕರ್ ಸಿಂಗ್ ಧಾಮಿ ಅವರ ರಾಜ್ಯ ಸಚಿವ ಸಂಪುಟ ತಾನೇನು ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಸಚಿವ ಸಂಪುಟದ ಈ ಪ್ರಸ್ತಾವನೆಗೆ ನೀಡಿರುವ ಅನುಮೋದನೆಯನ್ನು ಅತ್ಯಂತ ಅನಿಯಂತ್ರಿತ ಮತ್ತು ಕಠಿಣ ಎಂದು ಮಾತ್ರ ವಿಶ್ಲೇಷಿಬಹುದಾಗಿದೆ.

ಜೀವಾವಧಿ ತನಕ ಶಿಕ್ಷೆ: ರಾಜ್ಯದಲ್ಲಿ ಪ್ರಸ್ತುತ ಇರುವ ಮತಾಂತರ-ವಿರೋಧಿ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಲು, ಈ ಮಸೂದೆಯು "ಬಲವಂತದ ಮತಾಂತರ" ಮಾಡಿದವರಿಗೆ ಮೂರು ವರ್ಷಗಳಿಂದ ಜೀವಾವಧಿ ತನಕ ಶಿಕ್ಷೆಯನ್ನು ವಿಧಿಸಲು ಅವಕಾಶ ಮಾಡಿಕೊಡುತ್ತದೆ. ಈ ಮೊದಲು, “ಬಲವಂತದ ಮತಾಂತರ”ಕ್ಕೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಇತ್ತು. ಈ ಮಸೂದೆಯಲ್ಲಿ ಇನ್ನೂ ಕಠಿಣವಾದುದೆಂದರೆ ಆರೋಪಿಗಳ ಆಸ್ತಿಯನ್ನು ಮನಬಂದಂತೆ ವಶಪಡಿಸಿಕೊಳ್ಳುವ ಮೂಲಕ ಕಾನೂನಿನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಪ್ರಸ್ತಾಪ.

ಅಪರಾಧವನ್ನು ವ್ಯಾಖ್ಯಾನಿಸುವ ವಿಷಯವಲ್ಲಿ ಸಡಿಲವಾದ ಪದಗಳ ಬಳಕೆಯಿಂದಾಗಿ ಈ ಕಾನೂನು ಗಂಭೀರ ಸಮಸ್ಯೆಯನ್ನು ಸೃಷ್ಟಿಸುತ್ತದೆ. ಉದಾಹರಣೆಗೆ, ಪ್ರಚೋದನೆ/ಆಮಿಷ ಎಂಬ ಪದವನ್ನು “ಒಂದು ಧರ್ಮವನ್ನು ಇನ್ನೊಂದರ ವಿರುದ್ಧ ವೈಭವೀಕರಿಸುವುದು” ಎಂದು ವಿಸ್ತರಿಸಲಾಗಿದೆ. ಮಸೂದೆಯು “ಆಮಿಷ”ವನ್ನು “ಯಾವುದೇ ಉಡುಗೊರೆ, ಸೌಲಭ್ಯ, ಸುಲಭದ ಹಣ ಅಥವಾ ಭೌತಿಕ ಲಾಭ, ನಗದು ರೂಪದಲ್ಲಿರಲಿ ಅಥವಾ ವಸ್ತುವಿನ ರೂಪದಲ್ಲಿರಲಿ, ಉದ್ಯೋಗ, ಅಥವಾ ದೈವಿಕ ಕೋಪಕ್ಕೆ ಗುರಿಯಾಗುವಂತೆ ಮಾಡುವುದು” ಎಂದು ವ್ಯಾಖ್ಯಾನಿಸುತ್ತದೆ.

ಆಸಕ್ತಿ ಮತ್ತು ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳುವ ಅಥವಾ ಇತರರ ಆಸಕ್ತಿ ಮತ್ತು ಚಟುವಟಿಕೆಗಳನ್ನು ಅನ್ವೇಷಿಸುವ ಆಸಕ್ತಿ ಹೊಂದಿರುವ ಜನರ ಆನ್ಲೈನ್ ಗ್ರೂಪ್ ರಚನೆ ಮಾಡುವ ಉದ್ದೇಶದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳನ್ನು ಈ ಕಾನೂನು ನಿಷೇಧಿಸುತ್ತದೆ. ಹಾಗಾದರೆ ಇದರ ಅರ್ಥವೇನು? ಇದರ ಅಸ್ಪಷ್ಟತೆಯ ಹೊರತಾಗಿಯೂ, ಈ ಕಾನೂನು ಜಾರಿ ವಿಭಾಗಕ್ಕೆ ಕಾನೂನನ್ನು ತಮ್ಮ ಇಚ್ಛೆಗೆ ತಕ್ಕಂತೆ ಅರ್ಥೈಸಲು ವಾಸ್ತವಿಕ ವೀಟೋ ಅಧಿಕಾರವನ್ನು ನೀಡುತ್ತದೆ. ಪ್ರಜಾಪ್ರಭುತ್ವದಲ್ಲಿ, ಇದನ್ನು ಒಂದು ವೈಪರೀತ್ಯ ಎಂದೇ ಪರಿಗಣಿಸಲಾಗುತ್ತದೆ.

ಉಚಿತ ಶಿಕ್ಷಣದ ಭರವಸೆಯೂ ಆಮಿಷ

ಈಗ ಮಾಡಿರುವ ತಿದ್ದುಪಡಿಗಳ ಪ್ರಕಾರ, ಇತರ ಆಮಿಷಗಳು ಎಂದರೆ ಯಾವುವು? “ಉದ್ಯೋಗ, ಹಣ ಅಥವಾ ಇತರ ಉಡುಗೊರೆಗಳ ಆಮಿಷವೊಡ್ಡಿ ಒಬ್ಬ ವ್ಯಕ್ತಿಯನ್ನು ಬೇರೊಂದು ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸಿದರೆ ಅದನ್ನು ಬಲವಂತದ ಮತಾಂತರವೆಂದು ಪರಿಗಣಿಸಲಾಗುವುದು” ಎಂದು ಮಸೂದೆಯನ್ನು ರೂಪಿಸುವಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ಪತ್ರಕರ್ತರಿಗೆ ತಿಳಿಸಿದ್ದಾರೆ.

ಇದರ ಜೊತೆಗೆ, “ಧಾರ್ಮಿಕ ಮತಾಂತರಕ್ಕೂ ಮುನ್ನ ಉತ್ತಮ ಜೀವನ, ಅಥವಾ ಧಾರ್ಮಿಕ ಸಂಸ್ಥೆಯು ನಡೆಸುವ ಶಾಲೆ ಅಥವಾ ಕಾಲೇಜಿನಲ್ಲಿ ಉಚಿತ ಶಿಕ್ಷಣದ ಭರವಸೆ ನೀಡಿದರೆ ಮೂರರಿಂದ ಹತ್ತು ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ. ಸಾಮೂಹಿಕ ಮತಾಂತರ ಮತ್ತು ವಿದೇಶಿ ನಿಧಿಯ ನೆರವಿನೊಂದಿಗೆ ಮತಾಂತರ ಚಟುವಟಿಕೆ ನಡೆಸಿದರೆ ಏಳರಿಂದ ಹದಿನಾಲ್ಕು ವರ್ಷಗಳ ಶಿಕ್ಷೆ ಅನುಭವಿಸಬೇಕಾಗುತ್ತದೆ. ಮಹಿಳೆ, ಮಗು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿ ಅಥವಾ ವಿಕಲಚೇತನ ವ್ಯಕ್ತಿಯನ್ನು ಬಲವಂತವಾಗಿ ಮತಾಂತರ ಮಾಡಿದ ಅಪರಾಧಿಗಳಿಗೆ ಐದರಿಂದ ಹದಿನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ” ಎಂದು ಅವರು ವಿವರಿಸಿದರು.

ಇನ್ನೂ ಒಂದು ರೀತಿಯಲ್ಲಿ ಹೇಳುವುದಾದರೆ, ಹೊಸ ತಿದ್ದುಪಡಿಗಳಿಂದಾಗಿ ಜೈಲು ಶಿಕ್ಷೆಯನ್ನು ಜೀವಾವಧಿ, ಅಂದರೆ 14 ವರ್ಷಗಳಿಗೆ ಹೆಚ್ಚಿಸುತ್ತವೆ. ಉತ್ತರ ಪ್ರದೇಶದ ಕಾನೂನಿನಂತೆಯೇ, ಅಪ್ರಾಪ್ತ ವಯಸ್ಕರು ಅಥವಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಕಾನೂನುಬಾಹಿರ ಮತಾಂತರದಲ್ಲಿ ತಪ್ಪಿತಸ್ಥ ಎಂದು ಕಂಡುಬಂದರೆ, ಜೈಲು ಶಿಕ್ಷೆಯ ಅವಧಿ 20 ವರ್ಷ ಅಥವಾ ಜೀವಾತಾವಧಿಯೂ ಆಗಬಹುದು.

ಉತ್ತರಾಖಂಡದ ಬಿಜೆಪಿ ಸರ್ಕಾರವು ಮತಾಂತರದ ವಿಷಯದಲ್ಲಿ ನಿರಂತರವಾಗಿ ಬಿಗಿ ಕ್ರಮಗಳನ್ನು ಕೈಕೊಳ್ಳುತ್ತಿರುವುದು ಆತಂಕದ ವಿಷಯ. ಭಾರತದ ಸಂವಿಧಾನದ 25, 26, 27 ಮತ್ತು 28ನೇ ವಿಧಿಗಳಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ಪ್ರತಿಯೊಂದು ಧರ್ಮದ ಸಮಾನ ಪ್ರಾಮುಖ್ಯತೆಯನ್ನು ಪುನರುಚ್ಚರಿಸಲು ಉತ್ತರಾಖಂಡದಲ್ಲಿ 2018ರಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯನ್ನು ಪರಿಚಯಿಸಲಾಗಿತ್ತು. ಈ ಕಾಯ್ದೆಯನ್ನು ಮೊದಲು 2022 ರಲ್ಲಿ ತಿದ್ದುಪಡಿ ಮಾಡಲಾಯಿತು.

ಬಂಧನಕ್ಕೆ ವಾರಂಟ್ ಕೂಡ ಬೇಕಿಲ್ಲ

2022ರ ತಿದ್ದುಪಡಿಯ ಮೂಲಕ ಈಗಾಗಲೇ ಅತ್ಯಂತ ಕಠಿಣ ಕಾನೂನುಗಳಾದ ಯುಎಪಿಎ (UAPA)ಯ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಆದ್ದರಿಂದ, ಕಾನೂನು ಪರಿಭಾಷೆಯಲ್ಲಿ ಇದು ಒಂದು ದಂಡನಾರ್ಹ ಮತ್ತು ಜಾಮೀನು ರಹಿತ ಅಪರಾಧವಾಗಿದೆ. ಪೊಲೀಸರಿಗೆ ಬಂಧಿಸಲು ಯಾವುದೇ ವಾರೆಂಟ್ ಅಗತ್ಯವಿಲ್ಲ, ಕೇವಲ ಸಂಶಯವೇ ಸಾಕಾಗುತ್ತದೆ ಮತ್ತು ಸಾಬೀತುಪಡಿಸುವ ಹೊಣೆ ಆರೋಪಿಯ ಮೇಲೆಯೇ ಇರುತ್ತದೆ. ಈ ಕಾಯ್ದೆ ಇದಕ್ಕಿಂತ ಹೆಚ್ಚು ನಿರಂಕುಶವಾಗಿರಲು ಸಾಧ್ಯವಿಲ್ಲ.

“ರಾಜ್ಯದಲ್ಲಿ ಕಾನೂನುಬಾಹಿರ ಮತ್ತು ಬಲವಂತದ ಮತಾಂತರಗಳ ಮೂಲಕ ವ್ಯವಸ್ಥಿತವಾಗಿ “ಜನಸಂಖ್ಯಾ ಬದಲಾವಣೆಯನ್ನು ತರಲು ಪ್ರಯತ್ನಿಸಲಾಗುತ್ತಿದೆ” ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಧಾಮಿ ಅವರು ತಿದ್ದುಪಡಿಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಶೇ 83ರಷ್ಟು ಹಿಂದೂಗಳು, ಸುಮಾರು ಶೇ.14ರಷ್ಟು ಮುಸ್ಲಿಮರು, ಮತ್ತು ಅಲ್ಪಸಂಖ್ಯೆಯ ಕ್ರಿಶ್ಚಿಯನ್ನರು ಹಾಗೂ ಇತರರನ್ನು ಹೊಂದಿರುವ ಉತ್ತರಾಖಂಡ ರಾಜ್ಯವು ಹೇಗೆ ಜನಸಂಖ್ಯಾ ಬದಲಾವಣೆಯ ಬಿಸಿಯನ್ನು ಎದುರಿಸುತ್ತಿದೆ ಮತ್ತು ಅಲ್ಪಸಂಖ್ಯಾತರ ಓಲೈಕೆಯ ಅನಿವಾರ್ಯ ಬೆದರಿಕೆಯನ್ನು ಎದುರಿಸುತ್ತಿದೆ ಎಂಬುದನ್ನು ಯಾರಾದರೂ ಕೇಳಬೇಕಾಗಿತ್ತು.

ಜನಸಂಖ್ಯಾ ಬದಲಾವಣೆಯ ಉದ್ದೇಶದಿಂದ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಮತಾಂತರಗಳ ಪ್ರಕರಣಗಳಿಂದಾಗಿ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಲು ಮತ್ತೊಂದು ತಿದ್ದುಪಡಿ ಮಸೂದೆಗೆ ಅವಕಾಶ ದೊರಕಿದೆ ಎಂದು ಬಿಜೆಪಿ ನಾಯಕ ಮತ್ತು ಬದರೀನಾಥ್ ಕೇದಾರನಾಥ್ ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷ ಅಜೇಂದ್ರ ಅಜಯ್ ಹೇಳಿದ್ದಾರೆ.

ರಾಜ್ಯದಲ್ಲಿ “ಭೂಮಿ ಜಿಹಾದ್” ಸಮಸ್ಯೆಯ ವಿರುದ್ಧ ಗಟ್ಟಿ ಧ್ವನಿ ಎತ್ತಿದ್ದ ಅಜೇಂದ್ರ ಅವರು, ಮತಾಂತರದ ವಿರುದ್ಧ ಹೊಸ, ಕಠಿಣ ಕಾನೂನು ಇಂದಿನ ಅಗತ್ಯವಾಗಿದೆ. ಇದು ಮತಾಂತರಕ್ಕೆ ಸಂಬಂಧಿಸಿ ದೇಶಾದ್ಯಂತ ನಡೆಯುತ್ತಿರುವ ಅಭಿಯಾನಕ್ಕೆ ಕಡಿವಾಣ ಹಾಕಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಖಚಿತ ಮಾತುಗಳಲ್ಲಿ ಹೇಳುವುದಾದರೆ, ಅಜೇಂದ್ರ ಅಥವಾ ರಾಜ್ಯ ಸರ್ಕಾರ ಇತ್ತೀಚಿನ ಮತಾಂತರ ಪ್ರಕರಣಗಳ ಬಗ್ಗೆ ಯಾವುದೇ ದತ್ತಾಂಶವನ್ನು ಹೊಂದಿಲ್ಲ, ಅಥವಾ “ಜನಸಂಖ್ಯಾ ಬದಲಾವಣೆ”ಯ ಬಗ್ಗೆಯೂ ಅವರ ಬಳಿ ಯಾವ ಮಾಹಿತಿ ಇಲ್ಲ.

ಆಸ್ತಿ ಮುಟ್ಟುಗೋಲಿಗೂ ಅವಕಾಶ

ಇನ್ನೂ ಆಘಾತಕಾರಿ ಸಂಗತಿಯೆಂದರೆ, ಕಾನೂನಿನ ವ್ಯಾಪ್ತಿಯು ಶಾಸಕಾಂಗ ಮತ್ತು ಕಾರ್ಯಾಂಗಕ್ಕೂ ವಿಸ್ತರಿಸಿದೆ. ವಿದೇಶಿ ನಿಧಿ ಶಾಮೀಲಾಗಿದೆ ಎಂಬ ಕೇವಲ ಅನುಮಾನದ ಮೇರೆಗೆ, ಯಾವುದೇ ಪುರಾವೆಗಳ ಅಗತ್ಯವಿಲ್ಲದೆ, ಸ್ಥಳೀಯ ಸರ್ಕಾರವು ಆರೋಪಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡುವಂತೆ ತಿದ್ದುಪಡಿ ಮಾಡಲಾಗುತ್ತಿದೆ.

ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಅಪರಾಧಗಳಿಂದ ಪಡೆದ ಆಸ್ತಿಗಳನ್ನು ವಶಪಡಿಸಿಕೊಳ್ಳಲು ತಿದ್ದುಪಡಿ ಮಾಡಿದ ಮಸೂದೆಯು ಜಿಲ್ಲಾಧಿಕಾರಿಗೆ ಅಧಿಕಾರ ನೀಡುತ್ತದೆ. ಕಾನೂನುಬದ್ಧ ಮಾಲೀಕತ್ವವನ್ನು ಸಾಬೀತುಪಡಿಸುವ ಅಗತ್ಯವಿರುತ್ತದೆ. ಜಿಲ್ಲಾಧಿಕಾರಿಗಳು ತಾವು ‘ನಂಬಲು ಕಾರಣವಿರುವ’ ಯಾವುದೇ ಆಸ್ತಿಯನ್ನು ವಶಪಡಿಸಿಕೊಳ್ಳಲು ಆದೇಶಿಸಬಹುದು. ನ್ಯಾಯಾಲಯವು ಅಂತಹ ಅಪರಾಧವನ್ನು ಪರಿಗಣನೆಗೆ ತೆಗೆದುಕೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಇದನ್ನು ಮಾಡಬಹುದು.

ಹೊಸ ತಿದ್ದುಪಡಿಗಳು ಜಾರಿಗೆ ಬಂದರೆ, ಆರೋಪಿಯ ಮೇಲೆ ಈಗಾಗಲೇ ಇರುವ ಸಾಕ್ಷ್ಯದ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ, ಅದರಲ್ಲೂ ಯಾವುದೇ ವಾರೆಂಟ್ ಇಲ್ಲದೆ ಬಂಧಿಸಬಹುದಾದ ಸಂದರ್ಭದಲ್ಲಿ ಇದು ಮತ್ತಷ್ಟು ಕಠಿಣವಾಗಲಿದೆ. 2025ರ ಹೊಸ ಮಸೂದೆ ಪ್ರಕಾರ, ನ್ಯಾಯಾಲಯಕ್ಕೆ ಆರೋಪಿಯು ತಪ್ಪಿತಸ್ಥನಲ್ಲ ಮತ್ತು ಇಂತಹ ಅಪರಾಧವನ್ನು ಮತ್ತೆ ಮಾಡುವುದಿಲ್ಲ ಎಂದು ಮನವರಿಕೆಯಾದರೆ ಮಾತ್ರ ಜಾಮೀನು ನೀಡಲಾಗುತ್ತದೆ.

ಪ್ರಸ್ತಾವಿತ ಕ್ರಮಗಳನ್ನು ಅಧಿಕಾರಿಗಳು ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಬಿಜ್ನೋರ್ ಧರ್ಮಪ್ರಾಂತ್ಯದ ಅಧಿಕಾರಿಯಾಗಿರುವ ಫಾದರ್ ಜಿಂಟೋ ಅಂಬೂಕರಂ, “ಚರ್ಚ್ಗಳನ್ನು ಗುರಿಯಾಗಿಟ್ಟು ಸಮಾಜವಿರೋಧಿ ಶಕ್ತಿಗಳಿಂದ ಪ್ರಸ್ತಾವಿತ ಕಾಯ್ದೆಯ ದುರುಪಯೋಗವಾಗದಂತೆ ಕ್ರೈಸ್ತ ಸಮುದಾಯವು ಎಚ್ಚರ ವಹಿಸಬೇಕು” ಎಂದು ಹೇಳಿದರು.

“ನಾವು ಬಹಳ ಎಚ್ಚರಿಕೆಯಿಂದ ಇರಬೇಕಾದ ಕಾಲವಿದು. ಏಕೆಂದರೆ ನಾವು ನಡೆಸುವ ಭಾನುವಾರದ ಸಾಮೂಹಿಕ ಪ್ರಾರ್ಥನೆಗಳು, ಸೇವೆಗಳು ಅಥವಾ ಯಾವುದೇ ಇತರ ಚರ್ಚ್ ಕಾರ್ಯಗಳನ್ನು ಕೂಡ 'ಧಾರ್ಮಿಕ ಮತಾಂತರ ಚಟುವಟಿಕೆಗಳು' ಎಂದು ಹಣೆಪಟ್ಟಿ ಕಟ್ಟಬಹುದು" ಎಂದು ಧರ್ಮಗುರು ಯೂನಿಯನ್ ಆಫ್ ಕ್ಯಾಥೋಲಿಕ್ ಏಷಿಯನ್ ನ್ಯೂಸ್ (UCA News) ಗೆ ತಿಳಿಸಿದ್ದಾರೆ.

ಸಂವಿಧಾನದ ಉಲ್ಲಂಘನೆ

ಯುನೈಟೆಡ್ ಕ್ರಿಶ್ಚಿಯನ್ ಫೋರಂನ ಸಂಚಾಲಕ ಎ.ಸಿ. ಮೈಕೆಲ್ ಮಾತನಾಡಿ, “ಈ ತಿದ್ದುಪಡಿಗಳು ನಮ್ಮ ಸಂವಿಧಾನದ ಸಂಪೂರ್ಣ ಉಲ್ಲಂಘನೆ. ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಸಮಾನವಾಗಿ ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಹೊಂದಿದೆ ಎಂದು ಹೇಳುತ್ತದೆ” ಎಂದು ತಿಳಿಸಿದರು.

ಕ್ಯಾಥೋಲಿಕ್ ಸಮುದಾಯದ ನಾಯಕರು, ಮೇ 16, 2025 ರಂದು ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನಿನ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, "ಅದರ ಕೆಲವು ಭಾಗಗಳು ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿದ ಧರ್ಮದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿರುವಂತೆ ಎಂದು ಕಾಣುತ್ತದೆ” ಎಂದು ಹೇಳಿದ್ದನ್ನು ಉಲ್ಲೇಖಿಸಿದ್ದಾರೆ.

ಉತ್ತರ ಪ್ರದೇಶ ಧರ್ಮದ ಕಾನೂನುಬಾಹಿರ ಮತಾಂತರ ನಿಷೇಧ ಕಾಯಿದೆ, 2021 (The Uttar Pradesh Prohibition of Unlawful Conversion of Religion Act, 2021) ಬಲವಂತ, ತಪ್ಪು ನಿರೂಪಣೆ, ಅನಗತ್ಯ ಪ್ರಭಾವ, ಬೆದರಿಕೆ, ಆಮಿಷ ಅಥವಾ ಮೋಸದ ವಿಧಾನಗಳ ಮೂಲಕ ನಡೆಯುವ ಧಾರ್ಮಿಕ ಮತಾಂತರವನ್ನು ನಿಷೇಧಿಸಲು ಜಾರಿಗೆ ತಂದ ಮತಾಂತರ-ವಿರೋಧಿ ಕಾನೂನು. ಮದುವೆಯ ಉದ್ದೇಶದಿಂದ ಮತಾಂತರ ಮಾಡುವುದು ಕೂಡ ಇದರ ವ್ಯಾಪ್ತಿಗೆ ಬರುತ್ತದೆ.

ಬಲವಂತದ ಮದುವೆಗೆ 20 ವರ್ಷ ಶಿಕ್ಷೆ

2024ರಲ್ಲಿ ಈ ಕಾನೂನಿಗೆ ತಿದ್ದುಪಡಿ ತಂದು, ದಂಡವನ್ನು ಹೆಚ್ಚಿಸಲಾಗಿದೆ ಮತ್ತು ದೂರುಗಳನ್ನು ದಾಖಲಿಸುವ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಪ್ರಸ್ತಾವಿತ ಶಿಕ್ಷೆಗಳು ಬಲವಂತದ ಮತಾಂತರ, ಮದುವೆ ಅಥವಾ ಕಳ್ಳಸಾಗಣೆ ಅಪರಾಧಗಳಿಗೆ 20 ವರ್ಷಗಳ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆಯವರೆಗೆ ಇವೆ.

ಈ ಕಾನೂನನ್ನು ಯೋಗಿ ಆದಿತ್ಯನಾಥ್ ಸರ್ಕಾರವು “ಲವ್ ಜಿಹಾದ್” ಎಂದು ಕರೆಯಲ್ಪಡುವ, ಮದುವೆಯ ಮೂಲಕ ಬಲವಂತದ ಧಾರ್ಮಿಕ ಮತಾಂತರದ ಆರೋಪಿತ ಪದ್ಧತಿಯನ್ನು ತಡೆಯಲು ಜಾರಿಗೆ ತಂದಿದೆ. "ಲವ್ ಜಿಹಾದ್" ಎಂಬ ಪದವನ್ನು ಕೆಲವು ಹಿಂದೂ ಸಂಘಟನೆಗಳು ಬಳಸುತ್ತವೆ.

ಇಂತಹ ಕಾನೂನುಗಳಲ್ಲಿ ಕೇವಲ “ಉದ್ದೇಶ”ದ ಸಂಶಯದ ಮೇಲೆ ಯಾರನ್ನೇ ಆಗಲಿ ಬಂಧಿಸಬಹುದು ಮತ್ತು ಆರೋಪಿಯ ಆಸ್ತಿಯನ್ನು ವಶಪಡಿಸಿಕೊಳ್ಳಬಹುದು ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

Read More
Next Story