Parsa Venkateshwar Rao Jr

ಜಾಗತಿಕ ಶೃಂಗಸಭೆಗಳ ಚಾವಡಿ: ಬ್ರಿಕ್ಸ್‌ ಸಮಾವೇಶದಲ್ಲಿ ಭಾರತಕ್ಕೆ ಮುಳ್ಳಿನ ಹಾದಿ


ಜಾಗತಿಕ ಶೃಂಗಸಭೆಗಳ ಚಾವಡಿ: ಬ್ರಿಕ್ಸ್‌ ಸಮಾವೇಶದಲ್ಲಿ ಭಾರತಕ್ಕೆ ಮುಳ್ಳಿನ ಹಾದಿ
x
ರಷ್ಯಾ ಮತ್ತು ಚೀನಾ ಅಧ್ಯಕ್ಷರಾದ ವ್ಲಾಡಿಮಿರ್‌ ಪುಟಿನ್‌ ಮತ್ತು ಕ್ಸಿ ಜಿನ್‌ಪಿಂಗ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ
Click the Play button to hear this message in audio format

ಬ್ರಿಕ್ಸ್‌ ಸದಸ್ಯರು ಹಾಗೂ ಅಮೆರಿಕ ಮತ್ತು ಇಸ್ರೇಲ್‌ ನಡುವಿನ ಉದ್ವಿಗ್ನ ಸಂಬಂಧಗಳ ವಿಚಾರದಲ್ಲಿ ಭಾರತ ಅತ್ಯಂತ ಜಾಗರೂಕತೆಯಿಂದಿದೆ. ಆದರೆ ಯಾವುದೇ ಮೈತ್ರಿಕೂಟದ ಒತ್ತಡಗಳಿಗೆ ಮಣಿಯದೆ ತನ್ನದೇ ಹಾದಿಯಲ್ಲಿ ಸಾಗುವ ಇರಾದೆ ಅದರದ್ದು.

ಪ್ರಧಾನಿ ನರೇಂದ್ರ ಮೋದಿ ಅವರು ಕಿರ್ಗಿಸ್ತಾನದ ರಾಜಧಾನಿ ಬಿಶ್ಕೆಕ್‌ನ 25ನೇ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಇತರ ಒಂಭತ್ತು ಸದಸ್ಯ ಪ್ರತಿನಿಧಿಗಳ ಜೊತೆ ಭಾಗವಹಿಸಿದ ಬಳಿಕ ಈ ತಿಂಗಳ ಹನ್ನೊಂದು ಮತ್ತು ಹನ್ನೆರಡರಂದು ನಡೆಯಲಿರುವ ಬ್ರಿಕ್ಸ್‌ ಶೃಂಗಸಭೆಗೆ ಆತಿಥ್ಯ ವಹಿಸಲಿದ್ದಾರೆ. ಈ ಶೃಂಗಸಭೆಯಲ್ಲಿ ಬ್ರೆಜಿಲ್‌, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ಇರಾನ್‌, ಈಜಿಪ್ಟ್‌, ಇಥಿಯೋಪಿಯಾ, ಸೌದಿ ಅರೇಬಿಯಾ, ಸಂಯುಕ್ತ ಅರಬ್‌ ಗಣರಾಜ್ಯ ಮತ್ತು ಭಾರತವನ್ನು ಒಳಗೊಂಡಂತೆ ಹನ್ನೊಂದು ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿವೆ.

ಪಾಕಿಸ್ತಾನದ ಉಪಸ್ಥಿತಿಯಿಂದಾಗಿ ಭಾರತಕ್ಕೆ ಎಸ್‌ಸಿಒ ಸಾಕಷ್ಟು ಮುಜುಗರದ ಹಾಗೂ ಕ್ಲಿಷ್ಟವಾದ ವೇದಿಕೆಯಾಗಿದೆ. ಎರಡೂ ದೇಶಗಳಿಗೆ ಪೂರ್ಣ ಪ್ರಮಾಣದ ಸದಸ್ಯತ್ವ ನೀಡಿದ್ದು 2017ರಲ್ಲಿ. ಭಾರತಕ್ಕೆ ಎಸ್‌ಸಿಒ ವೇದಿಕೆಯಲ್ಲಿರುವ ಮುಖ್ಯ ಆಸಕ್ತಿ ಏನೆಂದರೆ ಅದರ ಭಯೋತ್ಪಾದನಾ ನಿಗ್ರಹ ಘಟಕವಾಗಿದೆ. ತಾಷ್ಕೆಂಟ್‌ ಮೂಲದ ಭಯೋತ್ಪಾದನಾ ನಿಗ್ರಹ ರಚನೆಯ (ಆರ್‌ಎಟಿಎಸ್‌) ಮೂಲಕ ಈ ಘಟಕ್ಕೆ ಸಾಂಸ್ಥಿಕ ರೂಪ ನೀಡಲಾಗಿದೆ. ಭಾರತವು ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸುವ ಮೂಲಕ ಎಸ್‌ಸಿಒ ವೇದಿಕೆಯನ್ನು ಭಯೋತ್ಪಾದನೆ ನಿಗ್ರಹದತ್ತ ಗಮನಹರಿಸಲು ಬಳಕೆ ಮಾಡಲಾಗುತ್ತದೆ.

ಮಧ್ಯ ಏಷ್ಯಾದ ನಂಟು

2000ನೇ ಇಸವಿಯಲ್ಲಿ ಎಸ್‌ಸಿಒನ ಆರಂಭಿಕ ಕಲ್ಪನೆಯು ರೂಪುಗೊಂಡಾಗ ಕಜಗಿಸ್ತಾನ, ಕಿರ್ಗಿಸ್ತಾನ, ತಜಕಿಸ್ತಾನ ಮತ್ತು ಉಜ್ಬೇಕಿಸ್ತಾನ ಮುಂತಾದ ಮಧ್ಯ ಏಷ್ಯಾದ ಗಣರಾಜ್ಯಗಳು ಎದುರಿಸುತ್ತಿದ್ದ ಭಯೋತ್ಪಾದನಾ ವಿರೋಧಿ ಅಂಶದ ಮೇಲೆ ಅದರ ಗಮನವನ್ನು ಕೇಂದ್ರೀಕರಿಸಲಾಗಿತ್ತು. ಈ ದೇಶಗಳಲ್ಲಿ ಇಸ್ಲಾಮಿಕ್‌ ಭಯೋತ್ಪಾದಕ ಗುಂಪುಗಳು ತಲೆ ಎತ್ತದಂತೆ ತಡೆಯುವುದು ರಷ್ಯಾ ಮತ್ತು ಚೀನಾ ದೇಶಗಳಿಗಿರುವ ಆಸಕ್ತಿಯಾಗಿದೆ. ಎಸ್‌ಸಿಒ ಸದಸ್ಯ ರಾಷ್ಟ್ರಗಳು ಆರ್‌ಎಟಿಎಸ್‌ ಕಾರ್ಯಕಾರಿ ಸಮಿತಿಯಲ್ಲಿ ಹಾಗೂ ಬೀಜಿಂಗ್‌ ಮೂಲದ ಎಸ್‌ಸಿಒ ಕಾರ್ಯಾಲಯದಲ್ಲಿ ತಮ್ಮ ರಾಷ್ಟ್ರೀಯ ಪ್ರತಿನಿಧಿಗಳನ್ನು ಹೊಂದಿವೆ.

1191ರಲ್ಲಿ ಸೋವಿಯತ್‌ ಒಕ್ಕೂಟವು ಪತನ ಹೊಂದಿದಾಗ ಕಾಮನ್‌ವೆಲ್ತ್‌ ಆಫ್‌ ಇಂಡಿಪೆಂಡೆಂಟ್‌ ಸ್ಟೇಟ್ಸ್‌ (ಸಿಐಎಸ್‌) ಎಂದು ಕರೆಯಲಾಗುತ್ತಿದ್ದ ಮಧ್ಯ ಏಷ್ಯಾದ ಗಣರಾಜ್ಯಗಳ ಜೊತೆಗೆ ಸಂಪರ್ಕ ಸಾಧಿಸಲು ನವದೆಹಲಿಯಲ್ಲಿ ತೀವ್ರತರದ ಪ್ರಯತ್ನಗಳು ನಡೆದವು. ಆದರೆ ಆಫ್ಘಾನಿಸ್ತಾನದಲ್ಲಿ ನಡೆದ ಬೆಳವಣಿಗೆಗಳು ಹಾಗೂ ತಾಲಿಬಾನ್‌ ದೇಶದ ಅಧಿಕಾರವನ್ನು ವಶಪಡಿಸಿಕೊಂಡಿದ್ದರಿಂದ ಆ ಪ್ರಯತ್ನಗಳಿಗೆ ಹೆಚ್ಚಿನ ಫಲ ಸಿಗದೇ ಹೋಯಿತು.

ತಜಕೀಸ್ತಾನದಿಂದ ತೈಲ ಕೊಳವೆ ಮಾರ್ಗಗಳನ್ನು ನಿರ್ಮಿಸುವ ಯೋಜನೆಗಳಿದ್ದವು. ಆದರೆ ಕಾಬೂಲ್‌ ಮತ್ತು ಇಸ್ಲಾಮಾಬಾದ್‌ನ ಪ್ರತಿಕೂಲ ಸರ್ಕಾರಗಳ ಕಾರಣದಿಂದ ಅವುಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಿರಲಿಲ್ಲ. ಈಗ ತಾಲಿಬಾನ್‌ ತನ್ನ ಎರಡನೇ ಅವತಾರದಲ್ಲಿ ಭಾರತದ ಜೊತೆ ಹೆಚ್ಚು ಸ್ನೇಹಪೂರ್ಣವಾಗಿದೆ. ಹಾಗಾಗಿ ತೈಲ ಕೊಳವೆಮಾರ್ಗ ನಿರ್ಮಾಣ ಸಾಧ್ಯವಾಗದೇ ಇದ್ದರೂ ಒಟ್ಟಾರೆಯಾಗಿ ಮಧ್ಯ ಏಷ್ಯಾದ ಸಂಪರ್ಕಕ್ಕೆ ಮರುಜೀವ ನೀಡಲು ಅವಕಾಶಗಳು ಲಭ್ಯವಾಗಲಿವೆ.

ಮಗ್ಗುಲ ಮುಳ್ಳಿನಂತಿದೆ ಸವಾಲು

ಭಾರತ ವಿರೋಧಿ ಜಿಹಾದಿ ಗುಂಪುಗಳಿಗೆ ಆಶ್ರಯ ನೀಡುವ ಪಾಕಿಸ್ತಾನದ ವಿರುದ್ಧ ಒತ್ತಡ ಹೇರುವ ಭಾರತದ ತಂತ್ರಗಳಿಗೆ ಹೆಚ್ಚಿನ ಯಶಸ್ಸು ಸಿಕ್ಕಿಲ್ಲ. ಅದಕ್ಕು ಮುಖ್ಯ ಕಾರಣ ಚೀನಾ ನೀಡುತ್ತಿರುವ ಭಾರೀ ಬೆಂಬಲ. ಮಧ್ಯ ಏಷ್ಯಾದ ಗಣರಾಜ್ಯ ಸರ್ಕಾರಗಳು ಉಗ್ರವಾದಿ ಜಿಹಾದಿ ವಿದ್ಯಮಾನದಿಂದ ತೀವ್ರ ಅಸಮಾಧಾನಕ್ಕೆ ಒಳಗಾಗಿವೆ. ಭಯೋತ್ಪಾದನೆ ಸಮಸ್ಯೆ ಹಿನ್ನೆಲೆಗೆ ಸರಿದಿದ್ದರೂ ಅದನ್ನು ಶತಾಯಗತಾಯ ಜೀವಂತವಿಡಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಂದು ಎಸ್‌ಸಿಒ ಶೃಂಗಸಭೆಗೂ ಹಾಜರಾಗುವುದನ್ನು ತಪ್ಪಿಸುವುದಿಲ್ಲ. ಅದೊಂದು ಅವಶ್ಯಕ ಹೆಜ್ಜೆಯೂ ಆಗಿದೆ.

ಶಾಂಘೈ ಸಹಕಾರ ಸಂಘಟನೆ ಆರ್ಥಿಕ ಆಯಾಮವನ್ನು ಹೊಂದಿದ್ದರೂ ಕೂಡ ಅದರ ಮೂಲ ಅಜೆಂಡಾ ಭಯೋತ್ಪಾದನೆಯ ಸುತ್ತ ಕೇಂದ್ರೀಕೃತವಾಗಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅದು ಪರೋಕ್ಷವಾಗಿ ಜಿಹಾದಿ ಭಯೋತ್ಪಾದನೆಯಾಗಿದೆ. ಯಾಕೆಂದರೆ ಎಸ್‌ಸಿಒನ ಎಲ್ಲ ಮಧ್ಯ ಏಷ್ಯಾದ ಸದಸ್ಯ ರಾಷ್ಟ್ರಗಳು ಮುಸ್ಲಿಂ ರಾಷ್ಟ್ರಗಳೇ ಆಗಿವೆ. ಒಂದು ರೀತಿಯಲ್ಲಿ ಭಯೋತ್ಪಾದನೆಯ ಬಗ್ಗೆ ಗಣರಾಜ್ಯಗಳು ಹೊಂದಿರುವ ಆತಂಕವು ಭಾರತಕ್ಕೆ ಸಮಾಧಾನದ ಮೂಲ ಮತ್ತು ಪಾಕಿಸ್ತಾನಕ್ಕೆ ವಾಸ್ತವದ ಅರಿವು.

ತೆಹ್ರಿಕ್‌-ಇ—ತಾಲಿಬಾನ್‌ ಪಾಕಿಸ್ತಾನ್‌ (ಟಿಟಿಪಿ)ನಂತಹ ತನ್ನದೇ ದೇಶದಲ್ಲಿ ಹುಟ್ಟಿಕೊಂಡ ಜಿಹಾದಿ ಗುಂಪುಗಳ ವಿರುದ್ಧ ಹೋರಾಡುತ್ತಿರುವುದು ಪಾಕಿಸ್ತಾನದ ಪಾಲಿಗೆ ವಿಪರ್ಯಾಸದ ಸಂಗತಿ. ಜೊತೆಗೆ ಟಿಟಿಪಿಗೆ ಬೆಂಬಲ ನೀಡುತ್ತಿದೆ ಎಂದು ಅದು ತಾಲಿಬಾನ್‌ ಸರ್ಕಾರದ ಕಡೆಗೆ ಬೊಟ್ಟು ಮಾಡಿದೆ. ಹಾಗಂತ ಅದು ಲಷ್ಕರ್‌-ಇ—ತೈಬಾ, ಜೈಶ್‌-ಇ-ಮೊಹಮ್ಮದ್‌ ಸಂಘಟನೆಗಳನ್ನು ಮುಚ್ಚುವ ಇರಾದೆ ತೋರುತ್ತಿಲ್ಲ. ಯಾಕೆಂದರೆ ಈ ಎರಡು ಸಂಸ್ಥೆಗಳು ಪಾಕಿಸ್ತಾನದ ಕಾಶ್ಮೀರ ನೀತಿಯ ಭಾಗವಾಗಿವೆ. ಹಾಗಾಗಿ ಭಾರತ-ಪಾಕಿಸ್ತಾನದ ಗಡಿಯಲ್ಲಿ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿಲ ಭಾರತವು ನಿರಂತರ ಎಚ್ಚರಿಕೆಯಿಂದ ಇರುವುದು ಅನಿವಾರ್ಯವಾಗಿ ಪರಿಣಮಿಸಿದೆ.

ರಾಜಕೀಯದ ತಳಕು

ಬ್ರಿಕ್ಸ್ ಸಂಘಟನೆ ಯಾವುದೇ ಭದ್ರತಾ ಆಯಾಮವನ್ನು ಹೊಂದಿಲ್ಲದಿದ್ದರೂ ಮತ್ತು ಇದು ಮೂಲತಃ ಆರ್ಥಿಕ ಸಹಕಾರ ಹಾಗೂ ಸಹಯೋಗವನ್ನು ಆಧರಿಸಿದ್ದರೂ, ಇದರೊಂದಿಗೆ ಸೈದ್ಧಾಂತಿಕ ಆಯಾಮ ಮತ್ತು ಅಧಿಕಾರ ರಾಜಕಾರಣದ ಅಂಶಗಳು ತಳಕುಹಾಕಿಕೊಂಡಿವೆ. ಬ್ರೆಜಿಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಅಮೆರಿಕದೊಂದಿಗೆ, ವಿಶೇಷವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ಉತ್ತಮ ಸಂಬಂಧ ಹೊಂದಿಲ್ಲ. ಇಸ್ರೇಲ್‌ನ ಪಾತ್ರದಿಂದಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 70,000ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿರುವ ಘಟನೆಯನ್ನು ಖಂಡಿಸಿ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ದೇಶಗಳು ಇಸ್ರೇಲ್ ವಿರುದ್ಧ ಕಠಿಣ ನಿಲುವು ತಾಳಿವೆ. ಬ್ರಿಕ್ಸ್ ಒಕ್ಕೂಟದಲ್ಲಿ ಇರಾನ್ ಕೂಡ ಸದಸ್ಯನಾಗಿದ್ದು, ಇದರೊಂದಿಗೆ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಎಂಬ ಎರಡು ಗಲ್ಫ್ ಅರಬ್ ರಾಷ್ಟ್ರಗಳು ಇರಾನ್‌ನ ವಿರುದ್ಧ ನೆಲೆಗೊಂಡಿವೆ.

ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೂ ಅಮೆರಿಕ ಹಾಗೂ ಇಸ್ರೇಲ್ ನಡುವೆ ಇರುವ ಉದ್ವಿಗ್ನ ಸಮೀಕರಣಗಳ ಬಗ್ಗೆ ಭಾರತಕ್ಕೆ ಸಂಪೂರ್ಣ ಅರಿವಿದೆ. ಭಾರತವು ಇಸ್ರೇಲ್‌ನೊಂದಿಗಿನ ತನ್ನ ಸಂಬಂಧದ ಕುರಿತು ಸಾಕಷ್ಟು ದೃಢವಾದ ನಿಲುವು ಹೊಂದಿದೆ. ಭಾರತೀಯ ರಫ್ತುಗಳ ಮೇಲೆ ಟ್ರಂಪ್ ವಿಧಿಸಿರುವ ಸುಂಕಗಳ ಬಗ್ಗೆ ಭಾರತಕ್ಕೆ ತನ್ನದೇ ಆದ ಕಳವಳಗಳಿರುವುದು ನಿಜವಾದರೂ ಅದು ವಾಷಿಂಗ್ಟನ್ ವಿರುದ್ಧ ಯಾವುದೇ ವಿರೋಧಾಭಾಸದ ಧೋರಣೆಯನ್ನು ತಳೆದಿಲ್ಲ ಎಂಬುದನ್ನೂ ಒಪ್ಪಿಕೊಳ್ಳಬೇಕು.

ಮೋದಿ ಸರ್ಕಾರದ ಟೀಕಾಕಾರರು ಭಾರತದ ಈ ಇಸ್ರೇಲ್-ಪರ ಮತ್ತು ಅಮೆರಿಕ-ಪರ ನಿಲುವನ್ನು ಆಗಾಗ್ಗೆ ಪ್ರಸ್ತಾಪ ಮಾಡುತ್ತಾರೆ. ಆದರೆ, ಅಮೆರಿಕವನ್ನು ಟೀಕಿಸುವ ಮತ್ತು ಇಸ್ರೇಲ್‌ನ್ನು ವಿರೋಧಿಸುವ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಂತಹ ಬ್ರಿಕ್ಸ್‌ನ ಇತರ ಸದಸ್ಯರೊಂದಿಗೆ ತನ್ನ ಪ್ರಮುಖ ರಾಜತಾಂತ್ರಿಕ ಹಾಗೂ ಆರ್ಥಿಕ ಸಂಬಂಧಗಳನ್ನು ಮುಂದುವರಿಸಲು ಇದು ಭಾರತಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗಿಲ್ಲ.

ಭಾರತದ ಸಮತೋಲನದ ಹೆಜ್ಜೆ

ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮತ್ತು ಪ್ರಮುಖ ಆರ್ಥಿಕತೆಯಾಗಿರುವ ಭಾರತವು, ತಾವು ಹಲವು ವಿಷಯಗಳಲ್ಲಿ ಒಪ್ಪದ ನೀತಿಗಳನ್ನು ಹೊಂದಿರುವ ದೇಶಗಳು ಮತ್ತು ಸರ್ಕಾರಗಳೊಂದಿಗೆ ಕೆಲಸ ಮಾಡಬೇಕಾದ ಅಗತ್ಯವನ್ನು ಮನಗಂಡಿದೆ. ಭಿನ್ನಾಭಿಪ್ರಾಯಗಳನ್ನು ಮರೆಮಾಚುವುದು ಇದರ ಉದ್ದೇಶವಲ್ಲ, ಬದಲಿಗೆ ಭಿನ್ನತೆಗಳನ್ನು ನಿಭಾಯಿಸುವುದು ಮತ್ತು ಸಾಮಾನ್ಯ ಕಾರ್ಯಸೂಚಿಯತ್ತ ಕೆಲಸ ಮಾಡುವುದಾಗಿದೆ.

ಭಯೋತ್ಪಾದನೆಯ ಅಪಾಯಗಳ ಬಗ್ಗೆ ಮತ್ತೆ ಮತ್ತೆ ಪ್ರಸ್ತಾಪ ಮಾಡಲು ಭಾರತ ಇಷ್ಟಪಡುತ್ತದೆ, ಆದರೆ ಉಳಿದ ಸದಸ್ಯರು ಅದೇ ರೀತಿಯಲ್ಲಿ ಬೆದರಿಕೆಯನ್ನು ಗ್ರಹಿಸುವುದಿಲ್ಲ ಎಂಬ ಕಾರಣಕ್ಕಾಗಿ ಅದು ಎಸ್‌ಸಿಒಯಿಂದ ಏಕಾಏಕಿ ಹಿಂದೆ ಸರಿಯುವ ಇರಾದೆ ಹೊಂದಿಲ್ಲ. ಅಲ್ಲದೆ, ಭಾರತವು ಬಯಸುವಂತೆ ಅವರು ಇಸ್ಲಾಮಾಬಾದ್ ಮೇಲೆ ಒತ್ತಡ ಹೇರುವುದಿಲ್ಲ. ಭಾರತವು ಎಸ್‌ಸಿಒನಲ್ಲಿಯೇ ಮುಂದುವರಿಯಲು ಬಯಸುತ್ತದೆ ಮತ್ತು ಭಯೋತ್ಪಾದನೆಯ ವಿರುದ್ಧ ಸಾಮಾನ್ಯ ಕಾರ್ಯತಂತ್ರದ ಅಗತ್ಯತೆಯ ಬಗ್ಗೆ ಅದರ ಸದಸ್ಯರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತದೆ.

ಕೆಲವೊಮ್ಮೆ ಅತೃಪ್ತಿಯ ಕ್ಷಣಗಳು ಎದುರಾಗಬಹುದು, ಆದರೆ ಇದರಿಂದ ರಾಜತಾಂತ್ರಿಕವಾಗಿ ನಿರಾಶೆ ಉಂಟಾಗಲು ಭಾರತ ಅವಕಾಶ ನೀಡುವುದಿಲ್ಲ. ಅದೇ ರೀತಿಯಲ್ಲಿ, ಜಾಗತಿಕ ವ್ಯಾಪಾರದ ವಿಚಾರದಲ್ಲಿ ಬ್ರಿಕ್ಸ್ ಸಂಘಟನೆಯು ಅಮೆರಿಕ ವಿರೋಧಿ ಗುಂಪಾಗಿ ಬಿಂಬಿತವಾಗಬಾರದು ಎಂದು ಭಾರತ ಬಯಸುತ್ತದೆ; ಜೊತೆಗೆ ಬ್ರಿಕ್ಸ್ ಒಕ್ಕೂಟದೊಳಗಿನ ಸಹಕಾರ ಮತ್ತು ವ್ಯಾಪಾರ ಹೊಂದಾಣಿಕೆಯನ್ನು ಮತ್ತಷ್ಟು ಹೆಚ್ಚಿಸಲು ನಿರಂತರವಾಗಿ ಶ್ರಮಿಸುತ್ತಿದೆ.

ಸ್ವತಂತ್ರ ಹೆಜ್ಜೆ

ಮೈತ್ರಿಕೂಟಗಳ ಒತ್ತಡಗಳಿಂದ ಮುಕ್ತವಾಗಿ, ತನ್ನದೇ ಆದ ಸ್ವತಂತ್ರ ಹಾದಿಯಲ್ಲಿ ಸಾಗಬೇಕು ಎನ್ನುವುದು ಭಾರತದ ಇರಾದೆ. ಶೀತಲ ಸಮರದ ಬಣ ರಾಜಕೀಯದಿಂದ ಭಾರತ ದೂರ ಉಳಿಯಲು ಇದೇ ಕಾರಣವಾಗಿದೆ. ಸಮಾನ ಮನಸ್ಕ ದೇಶಗಳೊಂದಿಗೆ ಕೆಲಸ ಮಾಡಲು ಭಾರತ ಬಯಸಿತ್ತಾದರೂ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು 1955ರ ಬಂಡುಂಗ್ ಆಫ್ರೋ-ಏಷ್ಯನ್ ಸಮ್ಮೇಳನ ಅಥವಾ 1961ರ ಬೆಲ್ಗ್ರೇಡ್‌ನ ಅಲಿಪ್ತ ಚಳುವಳಿ ಬಗ್ಗೆ ಹೆಚ್ಚು ಉತ್ಸುಕರಾಗಿರಲಿಲ್ಲ ಎಂಬುದು ಅಚ್ಚರಿಯ ಸಂಗತಿ.

ಭಾರತವು ಮಹಾಶಕ್ತಿಯಲ್ಲ, ಆದರೆ ಅದೇನೂ ಗುಂಪುಗಳಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿಲ್ಲ ಎಂಬ ಭಾವನೆಯನ್ನು ಹೊಂದಿದೆ. ನೆಹರು ಅವರಿಂದ ಆರಂಭಿಸಿ ಮನಮೋಹನ್ ಸಿಂಗ್ ಅವರ ವರೆಗೆ, ಕಾಂಗ್ರೆಸ್ ಸರ್ಕಾರಗಳು ಸ್ವತಂತ್ರವಾಗಿ ಮುನ್ನಡೆಯಲು ಬಯಸಿದವು. ʼವಿಶ್ವಗುರುʼ ಎಂಬ ಪದವನ್ನು ಬಳಸದೇ ಇದ್ದರೂ ಕೂಡ ಸ್ವತಂತ್ರ ಭಾರತದ ನಾಯಕರು ಮೌಲ್ಯಗಳು ಮತ್ತು ದೃಷ್ಟಿಕೋನದ ವಿಷಯದಲ್ಲಿ ಜಗತ್ತಿಗೆ ನೀಡುವ ಬಹಳಷ್ಟು ಸತ್ವವನ್ನು ಭಾರತವು ಹೊಂದಿದೆ ಎಂದು ಭಾವಿಸಿದ್ದರು ಎಂಬುವುದಂತೂ ನಿಜ.

Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story