ಮಧ್ಯಪ್ರದೇಶದ ಸೋಲು ಕಾಂಗ್ರೆಸ್ಸಿಗೆ ಏಕೆ ಯಾತನಾಮಯ?
x

ಮಧ್ಯಪ್ರದೇಶದ ಸೋಲು ಕಾಂಗ್ರೆಸ್ಸಿಗೆ ಏಕೆ ಯಾತನಾಮಯ?

ವಿಧಾನಸಭೆ ಚುನಾವಣೆಯಲ್ಲಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್ ಭಾರೀ ಸೋಲು ಅನುಭವಿಸಿದೆ. ಛತ್ತೀಸ್‌ಗಢದ ಸೋಲು ಆಶ್ಚರ್ಯಕರ. ಆದರೆ, ಮಧ್ಯಪ್ರದೇಶದ ಸೋಲಿನ ಕಾರಣಗಳತ್ತ ಹೆಚ್ಚು ಗಮನ ಹರಿಸಬೇಕಿದೆ.


ಮಧ್ಯಪ್ರದೇಶದ ಸೋಲು ಕಾಂಗ್ರೆಸ್ಸಿಗೆ ಏಕೆ ಯಾತನಾಮಯ?

-ಪುನೀತ್ ನಿಕೋಲಸ್ ಯಾದವ್


2018ರ ಚುನಾವಣೆಯ ಯಶಸ್ಸು ಹೊರತುಪಡಿಸಿದರೆ, ಎರಡು ದಶಕಗಳಿಂದ ರಾಜ್ಯದಲ್ಲಿ ನಿರ್ಣಾಯಕ ಗೆಲುವು ದಾಖಲಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕಾಂಗ್ರೆಸ್ ಶೇ.40.40 ಮತ್ತು ಬಿಜೆಪಿ ಶೇ.48.55 ಮತ ಗಳಿಸಿದೆ. 2018 ರಲ್ಲಿ ಗಳಿಸಿದ ಮತಪ್ರಮಾಣವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ.


ಮೋದಿಯವರ ತವರು ರಾಜ್ಯ ಗುಜರಾತ್‌ನಂತೆ ಮಧ್ಯಪ್ರವೇಶ ಕೂಡ ಬಿಜೆಪಿಯ ಭದ್ರಕೋಟೆಯಾಗಿದೆ. ಶಿವರಾಜ್ ಸಿಂಗ್ ಚೌಹಾಣ್ ಅಥವಾ ಬೇರೆಯವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸದಿರುವ ಬಗ್ಗೆ ಮತದಾರರು ತಲೆ ಕೆಡಿಸಿಕೊಂಡಿಲ್ಲ. ಒಬಿಸಿ, ಎಸ್‌ಟಿ-ಎಸ್‌ಸಿ ಸಮುದಾಯಗಳ ಪ್ರಗತಿಗೆ ಮುಖ್ಯ ಎನ್ನಲಾದ ಜಾತಿಗಣತಿ/ಸಮೀಕ್ಷೆ ನಡೆಸುವ ಕಾಂಗ್ರೆಸ್‌ನ ಆಶ್ವಾಸನೆ ಮತದಾರರಿಗೆ ಇಷ್ಟವಾಗಿಲ್ಲ.

ಬಿಜೆಪಿಯ ಸುದೀರ್ಘ ಆಡಳಿತದ ಬಗ್ಗೆ ಹಲವಾರು ದೂರು, ನಿರುದ್ಯೋಗ, ಬೆಲೆ ಹೆಚ್ಚಳ ಮತ್ತು ರೈತರ ಸಂಕಷ್ಟದ ಹೊರತಾಗಿಯೂ, ಮತದಾರರು ಪ್ರಧಾನಿ ಮೋದಿ ಮತ್ತು ಅವರ ಪಕ್ಷವನ್ನು ಬೆಂಬಲಿಸಿದರು. ಹನುಮಾನ್ ಭಕ್ತ ಕಮಲ್ ನಾಥ್ ಅವರ ಹಿಂದೂ ಐಡೆಂಟಿಟಿ ರಾಜಕಾರಣದ ನಕಲು ಮಾಡುವ ಪ್ರಯತ್ನ ಕಳಪೆಯಾಗಿತ್ತು ಮತ್ತು ವಿಫಲವಾಯಿತು. 230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 163 ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್‌ ಕೇವಲ 66 ಶಾಸಕರನ್ನು ಹೊಂದಿದೆ. ಇದರರ್ಥ, ಕಾಂಗ್ರೆಸ್ ಐದು ವರ್ಷ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿರಬೇಕಾಗುತ್ತದೆ. ಪಕ್ಷವನ್ನು ಕೆಳ ಹಂತದಿಂದ ಬಲಪಡಿಸುವ ಮತ್ತು 2028ರ ಚುನಾವಣೆಗೆ ಸಿದ್ಧತೆ ನಡೆಸಬಹುದು.

ಚತ್ತೀಸ್‌ಗಢ ಮತ್ತು ರಾಜಸ್ಥಾನಕ್ಕೆ ಹೋಲಿಸಿದರೆ, ಕಾಂಗ್ರೆಸ್‌ಗೆ ದೊಡ್ಡ ಸವಾಲು ಮಧ್ಯಪ್ರದೇಶದಲ್ಲಿದೆ. ಯಾವುದೇ ಪಕ್ಷ ಬಿಜೆಪಿಯನ್ನು ಸೋಲಿಸುವುದು ಕಷ್ಟ. ಏಕೆಂದರೆ, ಅವರ ಬಳಿ ಆರ್ಥಿಕ ಸಂಪನ್ಮೂಲಗಳು, ಸಾರ್ವಜನಿಕರ ಬೆಂಬಲ, ವಿಭಿನ್ನ ಕಥನ, ಚಾಣಾಕ್ಷ ಚುನಾವಣಾ ಕಾರ್ಯತಂತ್ರಗಳು ಮತ್ತು ಮುಖ್ಯವಾಗಿ, ಪ್ರಬಲ ನಾಯಕ ಇದ್ದಾರೆ. ಚತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಭೂಪೇಶ್ ಬಘೇಲ್, ದೀಪಕ್ ಬೈಜ್, ಸಚಿನ್ ಪೈಲಟ್ ಮತ್ತು ಮತ್ತಿತರ ನಾಯಕರು ಇದ್ದಾರೆ. ಪಕ್ಷ ಇತ್ತೀಚಿನ ಚುನಾವಣೆಯಲ್ಲಿ ಸೋತಿದ್ದರೂ, 5 ವರ್ಷಗಳಲ್ಲಿ ಸುಧಾರಣೆ ಮತ್ತು ಪುನರುಜ್ಜೀವನಗೊಳಿಸಲು ಸಮರ್ಥರಾಗಿದ್ದಾರೆ. ಆದರೆ, ಮಧ್ಯಪ್ರದೇಶ ದಲ್ಲಿ ಪಕ್ಷವನ್ನು ಮುನ್ನಡೆಸಬಲ್ಲ ವಿಶ್ವಾಸಾರ್ಹ ನಾಯಕನ ಕೊರತೆಯಿದೆ. ಇಡೀ ರಾಜ್ಯವನ್ನು ಪ್ರತಿನಿಧಿಬಲ್ಲ ನಾಯಕರು ಇಲ್ಲ. ಪ್ರಮುಖ ನಾಯಕರಾದ ಕಮಲ್‌ ನಾಥ್ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಇಬ್ಬರಿಗೆ 76 ವರ್ಷ ವಯಸ್ಸು. ಕಮಲ್‌ನಾಥ್ ರಾಜೀನಾಮೆ ನೀಡಲು ನಿರಾಕರಿಸಿರುವುದು ಕಾಂಗ್ರೆಸ್‌ಗೆ ಸಮಸ್ಯೆ ಉಂಟುಮಾಡಿದೆ. 2029 ರ ಲೋಕಸಭೆ ಚುನಾವಣೆ ವೇಳೆಗೆ ಇಬ್ಬರೂ 81 ವರ್ಷ ದಾಟಿರುತ್ತಾರೆ ಮತ್ತು ಪಕ್ಷದ ನಾಯಕನ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಯಿಲ್ಲ. ಅಷ್ಟರೊಳಗೆ ಮಾಜಿ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಅವರ ಮಗ ಅಜಯ್ ಸಿಂಗ್ 'ರಾಹುಲ್'(68 ), ಮಾಜಿ ಕೇಂದ್ರ ಸಚಿವ ಸುರೇಶ್ ಪಚೌ ರಿ(71), ಪ್ರತಿಪಕ್ಷ ನಾಯಕ ಗೋವಿಂದ್ ಸಿಂಗ್(72) ಮತ್ತು ಮಾಜಿ ಕೇಂದ್ರ ಸಚಿವ ಕಾಂತಿಲಾಲ್ ಭುರಿಯಾ(73) ಎಲ್ಲರೂ ವಯಸ್ಸಾಗಿರುತ್ತದೆ. ನಾಥ್-ಸಿಂಗ್ ಜೋಡಿ ರಾಜ್ಯದಲ್ಲಿ ಯುವ ನಾಯಕರನ್ನು ರೂಪಿಸುವುದನ್ನು ನಿಲ್ಲಿಸಿದೆ ಮತ್ತು ಹೈಕಮಾಂಡ್‌ ಪಕ್ಷವನ್ನು ನಿಯಂತ್ರಿಸಲಾಗದೆ ಅವರಿಬ್ಬರಿಗೂ ಅವಕಾಶ ನೀಡಿದೆ ಎಂಬುದು ಸತ್ಯ. ನಾಥ್ ಮತ್ತು ಸಿಂಗ್ ನಿವೃತ್ತಿ ಬಳಿಕ ಜ್ಯೋತಿರಾದಿತ್ಯ ಸಿಂಧಿಯಾ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನಂಬಿಕೊಂಡಿತ್ತು. ಆದರೆ, ಗ್ವಾಲಿಯರ್ ರಾಜಮನೆತನದವರು ಮಾರ್ಚ್ 2020 ರಲ್ಲಿ ಬಿಜೆಪಿ ಸೇರಿದರು.

ಗ್ವಾಲಿಯರ್‌ ರಾಜ ಮನೆತನಕ್ಕೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವುದು ಮುಖ್ಯವಾಗಿತ್ತು. ಆದರೆ, ಜ್ಯೋತಿರಾಧಿತ್ಯ ಈಗ ಬಿಜೆಪಿಯ ಕೆಳಹಂತದ ನಾಯಕರಲ್ಲಿ ಒಬ್ಬರು. ರಾಜ್ಯ ಸರ್ಕಾರವನ್ನು ಮುನ್ನಡೆಸುವ ಅವಕಾಶಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದಾರೆ. ಕಾಂಗ್ರೆಸ್ ಸಿಂಧ್ಯಾಗೆ ಶಾಶ್ವತವಾಗಿ ಬಾಗಿಲು ಮುಚ್ಚಿದೆ. ಕಾಂಗ್ರೆಸ್‌ ಮುಂದಿರುವ ಪ್ರಶ್ನೆ ಏನೆಂದರೆ, ಪಕ್ಷವನ್ನು ಸರಿಪಡಿಸಲು ಮತ್ತು ಬಲಪಡಿಸಲು ಯಾರನ್ನು ಅವಲಂಬಿಸಬೇಕು? ನಾಥ್ ಮತ್ತು ಸಿಂಗ್ ಸಕ್ರಿಯರಾಗಿರುವವರೆಗೆ ಅಧಿಕಾರವನ್ನು ಸ್ವಇಚ್ಛೆಯಿಂದ ಬಿಡುವುದಿಲ್ಲ. ಎಪ್ಪತ್ತರ ಹರೆಯದ ಇಬ್ಬರೂ ನಾಯಕರು ಒಟ್ಟಾಗಿ ಯೋಜನೆಯೊಂದನ್ನು ರೂಪಿಸುತ್ತಿರುವುದಾಗಿ ವದಂತಿಯಿದೆ. ಭವಿಷ್ಯದಲ್ಲಿ ಮಗ ಜೈವರ್ಧನ್ ಸಿಂಗ್ ಪಕ್ಷದ ಮುಖವಾಗಬೇಕೆಂದು ಸಿಂಗ್ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಗ ನಕುಲ್ ನಾಥ್ ಇಂಥದ್ದೇ ಪಾತ್ರ ವಹಿಸಬೇಕೆಂದು ನಾಥ್ ಬಯಸುತ್ತಾರೆ. ಜೈವರ್ಧನ್ ಈ ಬಾರಿ 4,500 ಕ್ಕೂ ಹೆಚ್ಚು ಮತಗಳಿಂದ ರಾಘೋಗಢದಲ್ಲಿ ಗೆದ್ದಿದ್ದಾರೆ. ಆದರೆ, ಜೈವರ್ಧನ್ ಮತ್ತು ನಕುಲ್ ಪ್ರಬಲ ನಾಯಕರು ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ ಅಥವಾ ತಂದೆಯರಂತೆ ರಾಜಕೀಯ ಜ್ಞಾನ ಹೊಂದಿಲ್ಲ. ರೇವಂತ್ ರೆಡ್ಡಿ ಮತ್ತು ಸುಖವಿಂದ ರ್ ಸುಖು ಅವರಂತೆ ಬಲಿಷ್ಠ ನಾಯಕತ್ವದ ಗುಣಗಳನ್ನು ತೋರಿಸಿಲ್ಲ.

ಜೈವರ್ಧನ್ ಮತ್ತು ನಕುಲ್ ಅವರನ್ನು ಹೊರತುಪಡಿಸಿದರೆ, ಪರಿಗಣಿಸಬೇಕಾದವರು ಮಾಜಿ ಕೇಂದ್ರ ಸಚಿವ ಅರುಣ್ ಯಾದವ್. ಆದರೆ, ಅವರು ರಾಜ್ಯ ಘಟಕದ ಮುಖ್ಯಸ್ಥರಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಕಮಲೇಶ್ವರ್ ಪಟೇಲ್ ಮತ್ತು ರಾಹುಲ್ ಗಾಂಧಿ ಅವರ ಹಿಂಬಾಲಕ ಹಾಗೂ ಮಾಜಿ ಶಾಸಕ ಜಿತು ಪಟ್ವಾರಿ ಕೂಡ ಚುನಾವಣೆ ಸೋಲುಂಡಿದ್ದಾರೆ. ಬುಡಕಟ್ಟು ನಾಯಕ ಕಾಂತಿಲಾಲ್ ಭುರಿಯಾ ಅವರ ಮಗ ಮತ್ತು ಝಬುವಾ ಶಾಸಕ ವಿಕ್ರಾಂತ್ ಭುರಿಯಾ ರಾಜ್ಯ ಯುವ ಘಟಕದ ಮುಖ್ಯಸ್ಥರಾಗಿದ್ದರು. ಅವರಿಗೆ ಒಳ್ಳೆಯ ಹೆಸರಿಲ್ಲ. ಗಂಧವಾನಿ ಶಾಸಕ ಉಮಂಗ್ ಸಿಂಘಾರ್(49), ಬುಡಕಟ್ಟು ಜನಾಂಗದ ನಾಯಕಿ ಮತ್ತು ಮಾಜಿ ಉಪ ಮುಖ್ಯಮಂತ್ರಿ ದಿವಂಗತ ಜಮುನಾ ದೇವಿ ಅವರ ಸಂಬಂಧಿ. ಸಿಂಘಾರ್ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದಾರೆ. ಸಿಂಘಾರ್ ಒಬ್ಬ ಪ್ರಬಲ ನಾಯಕ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ, ಸ್ಥಳೀಯ ಬುಡಕಟ್ಟು ಸಮುದಾಯದ ಮೇಲೆ ಅವರಿಗೆ ಹಿಡಿತ ಇಲ್ಲ.

ಬಿಜೆಪಿ ಪ್ರಭಾವಿ ರಾಜಕಾರಣಿಗಳಾದ ಚೌಹಾಣ್, ವಿಜಯವರ್ಗಿಯ, ಮಿಶ್ರಾ, ಪಟೇಲ್ ಮತ್ತು ಸಿಂಧಿಯಾ ಅವರನ್ನು ಅವಲಂಬಿಸಬಹುದು. ಇವರೆಲ್ಲರೂ ಪ್ರಮುಖ ಜಾತಿ ಮತ್ತು ಸಮುದಾಯಗಳಿಂದ ಬಂದವರು. ಕಾಂಗ್ರೆಸ್ ಪಕ್ಷ ಹೊಸ ನಾಯಕರನ್ನು ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ಅವರ ಸಲಹೆ ಮೇಲೆ ಆಯ್ಕೆ ಮಾಡುತ್ತಾರೆ. ಆದರೆ, ಬಿಜೆಪಿಯ ಸೇಡಿನ ರಾಜಕಾರಣದ ವಿರುದ್ಧ ಐದು ವರ್ಷ ಕಾಲ ಹೋರಾಡಬೇಕಿರುವ ಸಂಘಟನೆ ಇಂಥ ಆಯ್ಕೆ ಪುನಶ್ಚೇತನ ನೀಡುವುದಿಲ್ಲ. ಗ್ರ್ಯಾಂಡ್ ಓಲ್ಡ್ ಪಾರ್ಟಿ(ಜಿಒಪಿ) ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಏಕೆಂದರೆ, ಅದಕ್ಕೆ ಹೆಚ್ಚು ಆಯ್ಕೆಗಳಿಲ್ಲ; ಇರುವ ಆಯ್ಕೆಗಳು ಆಶಾದಾಯಕವಾಗಿಲ್ಲ. ಇದರಿಂದಾಗಿಯೇ ಚತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿನ ಸೋಲಿಗಿಂತ ಮಧ್ಯಪ್ರದೇಶದಲ್ಲಿ ಸೋಲು ಯಾತನಾಮಯವಾಗಿದೆ.


Read More
Next Story