ಸುಂಕದ ದೊರೆಯ ದೇಶದಲ್ಲಿಯೇ ದುರ್ಬಲವಾಗಿದೆ ದೈತ್ಯ ತಯಾರಿಕಾ ವಲಯ
x

ಸುಂಕದ ದೊರೆಯ ದೇಶದಲ್ಲಿಯೇ ದುರ್ಬಲವಾಗಿದೆ ದೈತ್ಯ ತಯಾರಿಕಾ ವಲಯ

ಅಮೆರಿಕದ ಆರ್ಥಿಕ ರಚನೆಯಲ್ಲಿ ಆಗಿರುವ ಬದಲಾವಣೆಗಳು ಮತ್ತು ಸೇವಾ ವಲಯದಲ್ಲಿ ಅದರ ಜಾಗತಿಕ ಪಾರಮ್ಯವು ಆ ದೇಶದ ಜಿಡಿಪಿಯಲ್ಲಿ ತಯಾರಿಕಾ ಕ್ಷೇತ್ರದ ಪಾಲು ಎಷ್ಟು ಸಾಧಾರಣವಾಗಿದೆ ಎಂಬುದಕ್ಕೆ ಸಾಕ್ಷಿ ನುಡಿಯುತ್ತದೆ.


ಜಾಗತೀಕರಣಗೊಂಡ ಆರ್ಥಿಕ ಪ್ರಗತಿಯ ಮೇಲೆ ‘ಮೇಕ್-ಅಮೆರಿಕ-ಗ್ರೇಟ್-ಅಗೇನ್’ ದಾಳಿಯ ಇತ್ತೀಚಿನ ಭಾಗವಾಗಿ ಔಷಧಗಳ ಕೆಲವು ನಿರ್ದಿಷ್ಟ ವಲಯದ ಮೇಲೆ ಶೇ.100ರಷ್ಟು ಆಮದು ಸುಂಕವನ್ನು ವಿಧಿಸಲಾಗಿದೆ.

ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಪ್ರಮುಖ ವಲಯವೆಂದರೆ ಔಷಧಗಳು. ಪೇಟೆಂಟ್ ಹೊಂದಿದ ಮತ್ತು ಬ್ರಾಂಡ್ ಮೌಲ್ಯದ ಔಷಧಗಳಿಗೆ ಈ ಸುಂಕವು ಅನ್ವಯವಾಗುತ್ತದೆ. ಭಾರತವು ಅಮೆರಿಕಕ್ಕೆ ಹೆಚ್ಚಾಗಿ ಜನರಿಕ್ ಔಷಧಗಳನ್ನು ರಫ್ತು ಮಾಡುತ್ತದೆ. ಆದರೆ ಜನರಿಕ್ ಔಷಧಗಳು ಕೂಡ ಬ್ರಾಂಡ್ ಹೆಸರುಗಳನ್ನು ಹೊಂದಿರುತ್ತವೆ. ಉದಾಹರಣೆಗೆ ಹೇಳುವುದಾದರೆ, ಪ್ಯಾರಸೆಟಮೊಲ್ ಎಂಬ ಜನರಿಕ್ ಔಷಧವು ಕ್ರೋಸಿನ್ ಅಥವಾ ಡೋಲೊ ಹೆಸರಿನ ಬ್ರಾಂಡ್ ನಲ್ಲಿ ಮಾರಾಟವಾಗಬಹುದು. ಒಂದು ವೇಳೆ ಪೇಟೆಂಟ್ ಅವಧಿ ಮುಗಿದ ಪ್ಯಾರಸೆಟಮೋಲ್ ಕೂಡ ಅದರ ಬ್ಲಿಸ್ಟರ್ ಪ್ಯಾಕ್ ಮೇಲೆ ಬ್ರಾಂಡ್ ಹೆಸರು ಇರುವ ಕಾರಣ ಅಮೆರಿಕದಲ್ಲಿ ಶೇ.100ರಷ್ಟು ಆಮದು ಸುಂಕವನ್ನು ಭರಿಸಬೇಕಾಗುವುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಭಾರತದ ಔಷಧ ರಫ್ತುದಾರರಲ್ಲಿ ಆತಂಕದ ಛಾಯೆ

ಔಷಧ ಉದ್ಯಮವು ಎರಡು ಬಹುಮುಖ್ಯ ವಿಚಾರಗಳಿಗೆ ಸಂಬಂಧಿಸಿದಂತೆ ಆತಂಕಕ್ಕೆ ಒಳಗಾಗಿದೆ. ಮೊದಲನೆಯದಾಗಿ ಅಸಮಂಜಸ ರೀತಿಯ ವರ್ಗೀಕರಣ. ಅಂದರೆ ಒಬ್ಬ ಕಸ್ಟಮ್ಸ್ ಅಧಿಕಾರಿ ಕ್ರೋಸಿನ್ ಮಾತ್ರೆಯನ್ನು ಬ್ರಾಂಡ್ ಇರುವ ಔಷಧವೆಂದು ಪರಿಗಣಿಸಿದರೆ, ಇನ್ನೊಬ್ಬರು ಅದನ್ನು ಅವಧಿ ಮುಗಿದ ಪೇಟೆಂಟ್ ಎಂದು ಪರಿಗಣಿಸಬಹುದು. ಎರಡನೇ ಅಂಶವೇನೆಂದರೆ ಪೇಟೆಂಟ್ ಹೊಂದಿದ ಔಷಧಿಗಳು ತುಟ್ಟಿಯಾಗುತ್ತಿದ್ದಂತೆ ಅಮೆರಿಕದ ಗ್ರಾಹಕರು ಜನರಿಕ್ ಔಷಧಗಳ ಮೇಲೆ ಹೆಚ್ಚು ಅವಲಂಬಿತರಾಗುವ ಸಾಧ್ಯತೆಯಿದೆ. ಇದು ಜನರಿಕ್ ಆಮದುಗಳ ಮೇಲೆ ಮತ್ತಷ್ಟು ಕಠಿಣ ಕ್ರಮಕ್ಕೆ ಪ್ರಚೋದನೆಯನ್ನು ನೀಡಬಹುದು. ‘ಒನ್ ಬಿಗ್ ಬ್ಯೂಟಿಫುಲ್ ಬಿಲ್’ (ಈ ಹೆಸರು ನಿಮಗೆ ವಿಚಿತ್ರವಾಗಿದೆ ಅನ್ನಿಸಿದರೆ ಅದರ ಮೂಲವನ್ನು ನೆನಪಿಡಿ)ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹಂಚಿಕೆಯಾದ ಬಜೆಟ್ ಕಡಿತ ಮಾಡಿದ ರೀತಿಯನ್ನು ಗಮನಿಸಿದರೆ ಟ್ರಂಪ್ ಆಡಳಿತವು ಅಮೆರಿಕದ ಜನರಿಗೆ ಔಷಧಗಳ ಬೆಲೆಗಳನ್ನು ಹೆಚ್ಚಿಸುವ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಅಗ್ಗದ ಬೆಲೆಯ ಆಮದು ಸರಕುಗಳನ್ನು ಹೊರಗಿಡುವ ಮೂಲಕ ತಯಾರಿಕಾ ಕ್ಷೇತ್ರದಲ್ಲಿ ಅಮೆರಿಕವನ್ನು ಮತ್ತೆ ಮಹಾನ್ ರಾಷ್ಟ್ರವನ್ನಾಗಿ ರೂಪಿಸಬೇಕು ಎಂಬ ಅಧ್ಯಕ್ಷ ಟ್ರಂಪ್ ಅವರ ಕನಸು ಕೇವಲ ಹಗಲು ಗನಸಷ್ಟೇ. ಅದನ್ನು ಕಂಡು ಮಕ್ಕಳು ಕೂಡ ಅಣಕಿಸದೇ ಇರಲಾರರು. ಯಾಕೆಂದರೆ ಇದು ಅಂತಿಮವಾಗಿ ಅಮೆರಿಕವನ್ನೇ ತೊಂದರೆಗೆ ಸಿಲುಕಿಸುತ್ತದೆ ಮತ್ತು ಅಮೆರಿಕದ ಆರ್ಥಿಕ ಉತ್ಪಾದನೆಯಲ್ಲಿ ತಯಾರಿಕಾ ವಲಯದ ಪಾಲನ್ನು ಗಮನಾರ್ಹವಾಗಿ ಹೆಚ್ಚಿಸಲು ವಿಫಲವಾಗುತ್ತದೆ.

ಅಮೆರಿಕದ ಒಟ್ಟು ಜಿಡಿಪಿಯಲ್ಲಿ ತಯಾರಿಕಾ ವಲಯದ ಪಾಲು ಇರುವುದು ಶೇ.10ರಷ್ಟು ಮಾತ್ರ. ಜೊತೆಗೆ ಒಟ್ಟು ಉದ್ಯೋಗದಲ್ಲಿ ಆ ವಲಯ ನೀಡಿರುವ ಪಾಲು ಕೇವಲ ಶೇ.9ರಷ್ಟು. ಆರ್ಥಿಕತೆಗಳು ಅಭಿವೃದ್ಧಿಯ ಜಾಡು ಹಿಡಿದಂತೆ ಮತ್ತು ಹೆಚ್ಚು ಸಂಕೀರ್ಣ ಆರ್ಥಿಕತೆಗಳಿಗೆ ಅಗತ್ಯವಿರುವ ಸೇವೆಗಳನ್ನು ನೀಡಲು ಆರಂಭಿಸಿದಂತೆ ಜಿಡಿಪಿಯಲ್ಲಿ ತಯಾರಿಕಾ ವಲಯದ ಸರಾಸರಿ ಜಾಗತಿಕ ಪಾಲು ಕ್ರಮೇಣ ಕುಸಿಯುತ್ತಿದೆ. 1997ರಲ್ಲಿ ಶೇ.19ರಷ್ಟಿದ್ದ ಈ ಪ್ರಮಾಣ ಶೇ.15ಕ್ಕೆ ಕುಸಿದಿದೆ. ಕ್ರೀಡಾ ಕ್ಷೇತ್ರದಲ್ಲಿನ ತೀವ್ರತರದ ಪೈಪೋಟಿಯಿಂದಾಗಿ ಭಾರತ ಮತ್ತು ಪಾಕಿಸ್ತಾನ ಒಂದಾಗಿಲ್ಲ. ಆದರೆ ಎರಡೂ ದೇಶಗಳಲ್ಲಿ ತಯಾರಿಕಾ ವಲಯದ ಜಿಡಿಪಿ ಪಾಲು ಶೇ.13ರಷ್ಟಿರುವುದು ಒಂದು ಸಾಮ್ಯತೆ.

ವಿಸ್ತರಿಸುತ್ತಿರುವ ಸೇವಾ ವಲಯ

ಕೆನಡಾ, ಬ್ರಿಟನ್ ಮತ್ತು ಫ್ರಾನ್ಸ್ ದೇಶದಲ್ಲಿ ಜಿಡಿಪಿಯಲ್ಲಿ ತಯಾರಿಕಾ ವಲಯದ ಪಾಲು ಶೇ.9ರಷ್ಟಿದೆ. ಟ್ರಂಪ್ ಯೋಚನೆ ಹೇಗಾದರೂ ಇರಲಿ, ತೃತೀಯ ಜಗತ್ತಿನ ಅರ್ಥ ವ್ಯವಸ್ಥೆಯಲ್ಲಿ ಇವುಗಳಲ್ಲಿ ಯಾವುದೂ ಬಡರಾಷ್ಟ್ರವಲ್ಲ. ಹೆಚ್ಚು ಆದಾಯವಿರುವ ಕೆಲವು ರಾಷ್ಟ್ರಗಳಲ್ಲಿ ತಯಾರಿಕಾ ವಲಯದ ಪಾಲು ಅಧಿಕವಾಗಿದೆ. ಡೆನ್ಮಾರ್ಕ್ ನಲ್ಲಿ ಶೇ.17, ಐರ್ಲೆಂಡ್ ಮತ್ತು ಜರ್ಮನಿಯಲ್ಲಿ ಶೇ.18 ಮತ್ತು ಜಪಾನ್ ನಲ್ಲಿ ಶೇ.21ರಷ್ಟಿದೆ ಎಂಬುದು ಗಮನಾರ್ಹ.

ಜರ್ಮನಿ ಮತ್ತು ಜಪಾನ್ ದೇಶಗಳ ಅರ್ಥ ವ್ಯವಸ್ಥೆಯಲ್ಲಿ ತಯಾರಿಕಾ ವಲಯದ ಪಾಲು ದೊಡ್ಡದಿದೆ ಎಂದು ಪರಿಗಣಿಸಿದರೂ ಅಮೆರಿಕದ ತಯಾರಿಕಾ ವಲಯ ಚಿಕ್ಕದಾಗಿದೆ ಎಂದೇನೂ ಅಲ್ಲ. ಇದಕ್ಕೆ ಪ್ರತಿಯಾಗಿ ಅಮೆರಿಕಾ ಜಗತ್ತಿನಲ್ಲಿಯೇ ಬೃಹತ್ ಅರ್ಥ ವ್ಯವಸ್ಥೆಯನ್ನು ಹೊಂದಿದ್ದು ಅದರ ಮೌಲ್ಯ 29,185 ಶತಕೋಟಿ ಡಾಲರ್. ಜರ್ಮನಿ (839 ಶತಕೋಟಿ ಡಾಲರ್) ಅಥವಾ ಜಪಾನಿನ (845 ಶತಕೋಟಿ ಡಾಲರ್) ಒಟ್ಟು ತಯಾರಿಕೆಯು ಅಮೆರಿಕದ ಒಟ್ಟು ತಯಾರಿಕೆಯಾದ 2,918.5 ಶತಕೋಟಿ ಡಾಲರ್ ನಲ್ಲಿ ಶೇ.30ಕ್ಕಿಂತಲೂ ಕಡಿಮೆಯಾಗಿದೆ.

ಅಮೆರಿಕದ ಬಹಳಷ್ಟು ಮಂದಿಗೆ ತಯಾರಿಕಾ ವಲಯವನ್ನು ಹಿಂದಿನ ಸ್ಥಿತಿಗೆ ಹೋಲಿಕೆ ಮಾಡಿದರೆ ಯಾಕೆ ಕುಗ್ಗಿದಂತೆ ಕಾಣುತ್ತದೆ? ಅದಕ್ಕೆ ಮುಖ್ಯ ಕಾರಣ ಸೇವಾ ವಲಯ ಕ್ಷಿಪ್ರಗತಿಯಲ್ಲಿ ಬೆಳೆದಿರುವುದು. ಅದು ತಯಾರಿಕಾ ವಲಯವನ್ನು ಹಿಂದಿಕ್ಕೆ ಸರಿಸಿದೆ. ಮಾಹಿತಿ ತಂತ್ರಜ್ಞಾನ, ಹಣಕಾಸು, ಚಿಲ್ಲರೆ ವ್ಯಾಪಾರ, ವೈಜ್ಞಾನಿಕ ಸಂಶೋಧನೆ, ಆರೋಗ್ಯ ಸೇವೆ, ವಿದೇಶಿಗರಿಗೆ ಕಾಲೇಜು ಶಿಕ್ಷಣದ ಮಾರಾಟ, ರೆಸ್ಟೊರೆಂಟ್-ಗಳು, ಮನರಂಜನೆ, ದೂರದರ್ಶನ ಮತ್ತು ಪುಸ್ತಕ ಪ್ರಕಾಶನವನ್ನು ಒಳಗೊಂಡಿರುವ ಅಮೆರಿಕದ ಸೇವಾವಲಯವು ಪ್ರಪಂಚದಲ್ಲಿಯೇ ಪ್ರಾಬಲ್ಯವನ್ನು ಮೆರೆದಿದೆ. ತೈವಾನ್ ಸೆಮಿಕಂಡಕ್ಟರ್ ತಯಾರಿಕಾ ಕಂಪನಿಯು ತನ್ನ ಹೊಸ ಅರಿಜೋನಾ ಘಟಕದಲ್ಲಿ ಅನುಭವಿಸುತ್ತಿರುವಂತೆ ಒಂದು ವೇಳೆ ತಯಾರಿಕಾ ವಲಯದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಯಿತು ಎಂದಾದರೆ ಅವುಗಳನ್ನು ಭರ್ತಿಮಾಡಲು ಅಮೆರಿಕ ಸಂಕಷ್ಟಕ್ಕೆ ಸಿಲುಕಬಹುದು.

ಆ ಘಟಕವು ಅಸ್ತಿತ್ವಕ್ಕೆ ಬಂದಿದ್ದು ಟ್ರಂಪ್ ಅವರ ಸುಂಕ ನೀತಿಯಿಂದಾಗಿ ಅಲ್ಲ. ಬದಲಾಗಿ ಬಿಡೆನ್ ಆಡಳಿತ ಕೈಗಾರಿಕಾ ನೀತಿಯಿಂದ. ಆ ಆಡಳಿತದಲ್ಲಿ ಜಾರಿಗೆ ಬಂದ ಮೂಲಸೌಕರ್ಯ ಕಾಯ್ದೆ, ಚಿಪ್ಸ್ ಕಾಯ್ದೆ ಮತ್ತು ಹಣದುಬ್ಬರ ಕಡಿತ ಕಾಯ್ದೆಯ ಫಲವಾಗಿ ಅನುಷ್ಠಾನಕ್ಕೆ ಬಂದಿತ್ತು. ಈ ಕಾಯ್ದೆಯ ಹೆಸರುಗಳು ಗೊಂದಲಮಯವಾಗಿವೆ. ಈ ಕಾನೂನುಗಳು ಅಮೆರಿಕದಲ್ಲಿ ಹೊಸ ಕೈಗಾರಿಕಾ ಕ್ಷೇತ್ರಗಳಾದ ಸುಧಾರಿತ ಸೆಮಿಕಂಡಕ್ಟರ್ ಉತ್ಪಾದನೆ, ವಿದ್ಯುತ್ ವಾಹನಗಳೂ ಸೇರಿದಂತೆ ಹಸಿರು ಇಂಥನ ಪರಿವರ್ತನೆ, ಕಾರ್ಬನ್ ಕ್ಯಾಪ್ಟರ್ ಮತ್ತು ಹಸಿರು ಹೈಡ್ರೋಜನ್ ನಂತಹ ಹೊಸ ಇಂಧನಗಳಲ್ಲಿ ಬೃಹತ್ ಪ್ರಮಾಣದ ಖಾಸಗಿ ಹೂಡಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದ್ದವು.

ಮತದಾರರ ತಳಮಳ ಅರ್ಥಮಾಡಿಕೊಳ್ಳದ ಫಲ

ಭಾರತದಲ್ಲಿ ಕೇಂದ್ರ ಅಥವಾ ವಿರೋಧ ಪಕ್ಷದ ಆಡಳಿತವಿರುವ ರಾಜ್ಯ ಸರ್ಕಾರಗಳು ತಮ್ಮ ಯೋಜನೆಗಳಿಗಾಗಿ ಬಳಸಿದ ಮಾರ್ಕೆಟಿಂಗ್ ತಂತ್ರದ ಒಂದು ಸಣ್ಣ ಭಾಗವನ್ನು ಬೈಡನ್ ಆಡಳಿತವೇನಾದರೂ ಬಳಸಿದ್ದಿದ್ದರೆ ಹೆಚ್ಚುತ್ತಿರುವ ಬೆಲೆಗಳು ಅಥವಾ ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ವಲಸಿಗರ ಪ್ರವಾಹವನ್ನು ನಿಯಂತ್ರಿಸಲು ಸಾಧ್ಯವಾಗದ ವಿಫಲ ಸರ್ಕಾರ ಎಂಬ ಹಣೆಪಟ್ಟಿ ಕಟ್ಟಿಕೊಂಡು ಅಮೆರಿಕದ ಜನರಿಂದ ತಿರಸ್ಕಾರಕ್ಕೆ ಒಳಗಾಗುತ್ತಿರಲಿಲ್ಲ.

ವಲಸೆಯನ್ನು ನಿಯಂತ್ರಿಸುವಲ್ಲಿ ಬಿಡೆನ್ ಅವರ ನಿರ್ವಹಣೆ ಜನರು ಅಂದುಕೊಂಡಿದ್ದಕ್ಕಿಂತ ಉತ್ತಮವಾಗಿತ್ತು. ಆದರೆ ಅವರು ವಲಸೆಗಾಗಿ ಮುಖ್ಯವಾದ ಕಾಯ್ದೆಯನ್ನು ತರುವಲ್ಲಿ ವಿಫಲರಾದರು. ಇದಕ್ಕೆ ಕಾರಣವಿಷ್ಟೇ; ಮಸೂದೆಗಳನ್ನು ನಿರ್ಬಂಧಿಸುವಂತೆ ಟ್ರಂಪ್ ರಿಪಬ್ಲಿಕನ್ ಸಂಸದರನ್ನು ಕೇಳಿಕೊಂಡಿದ್ದರಿಂದ. ಹಾಗಾಗಿ ತಾತ್ವಿಕವಾಗಿ ಒಪ್ಪಿಕೊಂಡಿದ್ದ ಪ್ರಮುಖ ವಲಸೆ ಮಸೂದೆ ಜಾರಿಗೆ ಬರಲಿಲ್ಲ.

ಆದರೆ ಇಷ್ಟೊಂದು ಸಂಖ್ಯೆಯ ಅಮೆರಿಕನ್ನರು ಯಾಕೆ ಟ್ರಂಪ್ ಅವರ ಬೆಂಬಲಕ್ಕೆ ನಿಂತರು? ಡೆಮೊಕ್ರಾಟ್-ಗಳು ಅರ್ಥಮಾಡಿಕೊಳ್ಳಲು ವಿಫಲವಾದ ಅವರ ತಳಮಳವಾದರೂ ಏನು?

ಒಂದು ನೈಜ ಸಮಸ್ಯೆಗೆ ಟ್ರಂಪ್ ತಪ್ಪು ಉತ್ತರವಾಗಿದ್ದರು. ಅಸಮಾನತೆ, ಕೈಗೆಟುಕದ ಮನೆ ಖರೀದಿ, ಕಾಲೇಜು ಶಿಕ್ಷಣ ಮತ್ತು ಭಾರಿ ಮೊತ್ತದ ವಿದ್ಯಾರ್ಥಿ ಸಾಲಗಳ ಹೊರೆಯ ಬಳಿಕವೂ ಸಿಗದ ಉದ್ಯೋಗದ ಬಗ್ಗೆ ಹೆಚ್ಚುತ್ತಿರುವ ಆತಂಕ ಮುಂತಾದ ಸಮಸ್ಯೆಗಳಿಂದ ಅಮೆರಿಕವು ತುಂಬಿಹೋಗಿದೆ.

ಒಂದು ರಾಷ್ಟ್ರ ಎರಡು ಅರ್ಥ ವ್ಯವಸ್ಥೆ

ಅಮೆರಿಕದಲ್ಲಿ ತಲಾದಾಯ 89000 ಡಾಲರ್. ಆದರೆ ಮಧ್ಯಂತರ ಆದಾಯ 40000 ಡಾಲರ್ ಗಿಂತ ಕಡಿಮೆ. ಒಟ್ಟು ಜನಸಂಖ್ಯೆಯಿಂದ ಪ್ರತಿ ನಿವಾಸಿಯ ಒಟ್ಟು ಆದಾಯವನ್ನು ಭಾಗಿಸುವುದರಿಂದ ತಲಾ ಆದಾಯವನ್ನು ಪಡೆಯಲಾಗುತ್ತದೆ. ಇದು ಒಂದು ಸರಳ ಸರಾಸರಿ. ಆದರೆ ಮಧ್ಯಮ ಆದಾಯದ ಮಾನದಂಡವು ಭಿನ್ನವಾಗಿದೆ. ನೀವು ಇಡೀ ಜನಸಂಖ್ಯೆಯ ಆದಾಯವನ್ನು ಒಂದು ಪಟ್ಟಿಯಲ್ಲಿ ಜೋಡಿಸಿದರೆ ಅರ್ಧಕ್ಕರ್ಧ ಜನಸಂಖ್ಯೆ ಒಂದು ಕಡೆ ನಿಂತರೆ ಇನ್ನರ್ಧ ಇನ್ನೊಂದು ಕಡೆಯ ಮಧ್ಯಬಿಂದುವನ್ನು ಆಯ್ಕೆಮಾಡಿಕೊಂಡರೆ ಆ ಬಿಂದುವಿನಲ್ಲಿನ ಆದಾಯವೇ ಮಧ್ಯಮ ಆದಾಯ.

ಅಮೆರಿಕದಂತಹ ಹೆಚ್ಚು ಆದಾಯದ ಅಸಮಾನತೆ ಇರುವ ದೇಶಗಳಲ್ಲಿ ಅತಿ ಹೆಚ್ಚು ಶತಕೋಟ್ಯಾಧಿಪತಿಗಳು ಐಷಾರಾಮಿ ಜೀವನ ನಡೆಸುತ್ತಿರುವುದರಿಂದ ಸರಾಸರಿ ಆದಾಯದ ಪ್ರಮಾಣ ಹೆಚ್ಚಾಗಿರುತ್ತದೆ. ಆದರೆ ಸಾಮಾನ್ಯ ಜನರ ಆದಾಯವನ್ನು ನಿಜವಾಗಿಯೂ ಪ್ರತಿನಿಧಿಸುವುದಿಲ್ಲ. ಅತಿ ಹೆಚ್ಚು ಮತ್ತು ಅತಿ ಕಡಿಮೆ ಆದಾಯಗಳಿಂದ ಮಧ್ಯಮ ಆದಾಯವು ಪ್ರಭಾವಕ್ಕೆ ಒಳಗಾಗುವುದಿಲ್ಲ. ಇದು ಜನಸಾಮಾನ್ಯರ ಆದಾಯವನ್ನು ಹೆಚ್ಚಾಗಿ ಪ್ರತಿನಿಧಿಸುತ್ತದೆ.

ಸಾಮಾನ್ಯವಾಗಿ ಶ್ರೀಮಂತ ದೇಶಗಳಲ್ಲಿ ಬಡ ದೇಶಗಳಿಗಿಂತ ಹೆಚ್ಚು ಸಮಾನವಾದ ಆದಾಯದ ಹಂಚಿಕೆ ಇರುತ್ತದೆ. ಉದಾಹರಣೆಗೆ ಅಮೆರಿಕಾವು ದಕ್ಷಿಣ ಆಫ್ರಿಕಾಗಿಂತ ಉತ್ತಮ ಸ್ಥಿತಿಯಲ್ಲಿದೆ. ಆದರೂ ಅಮೆರಿಕಾದಲ್ಲಿ ಇರುವ ಆದಾಯದ ಅಸಮಾನತೆಯು ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಅತ್ಯಂತ ಕೆಟ್ಟದಾಗಿದೆ. ಇದಕ್ಕೆ ತಳಕುಹಾಕಿಕೊಂಡಂತೆ ಹಲವಾರು ಸಾಮಾಜಿಕ ಸಮಸ್ಯೆಗಳೂ ಇವೆ. ಅವುಗಳೆಂದರೆ ಜನಾಂಗೀಯ ತಾರತಮ್ಯ, ಪೊಲೀಸರ ವರ್ತನೆಗಳು, ಮಾದಕ ದ್ರವ್ಯ ಬಳಕೆ, ಕುಟುಂಬಗಳಲ್ಲಿನ ಅಸ್ಥಿರತೆ, ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಪ್ರವೇಶ ಸಿಗದೇ ಇರುವುದು ಹೀಗೆ ಅನೇಕ ಸಮಸ್ಯೆಗಳನ್ನು ಗುರುತಿಸಬಹುದು.

ಜನಪ್ರಿಯತೆಯಿಂದ ದೂರ ಸರಿಯುವ ಸವಾಲು

ಜಾಗತೀಕರಣ ಪರಿಣಾಮವಾಗಿ ಸಿರಿವಂತರು ಇನ್ನಷ್ಟು ಮತ್ತಷ್ಟು ಸಿರಿವಂತರಾಗಿದ್ದಾರೆ. ಆದರೆ ತಯಾರಿಕಾ ವಲಯದ ಉದ್ಯೋಗಗಳು ವಲಸೆ ಹೋಗಿದ್ದು ಚೀನಾ ಮತ್ತು ಏಷ್ಯಾದ ಇತರ ಭಾಗಗಳಿಗೆ. ಕಚೇರಿಗೆ ಸೀಮಿತವಾದ ಉದ್ಯೋಗಗಳನ್ನು ತಂತ್ರಜ್ಞಾನವು ಹಿಂದಿಕ್ಕಿದೆ ಅಥವಾ ಭಾರತಕ್ಕೆ ಹೊರಗುತ್ತಿಗೆ ನೀಡಲಾಗಿದೆ. ಇದನ್ನೆಲ್ಲ ಗಮನಿಸಿದವರಿಗೆ ಮೋಸಕ್ಕೆ ಒಳಗಾದ ಭಾವನೆ ಮೂಡಿದರೆ ಅಚ್ಚರಿಯಿಲ್ಲ.

ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜಿಡಿಪಿಗೆ ಹೋಲಿಸಿದರೆ ಅಮೆರಿಕವು ಅತಿ ಕಡಿಮೆ ತೆರಿಗೆಯನ್ನು ಸಂಗ್ರಹಿಸುತ್ತದೆ ಮತ್ತು ಅತಿ ಕಡಿಮೆ ಹಣವನ್ನು ಖರ್ಚು ಮಾಡುತ್ತದೆ. ಅಮೆರಿಕ ಸರ್ಕಾರವು ಶ್ರೀಮಂತರಿಂದ ತೆರಿಗೆಯನ್ನು ಸಂಗ್ರಹಿಸಿ ಜಾಗತೀಕರಣದಿಂದ ಸಂಕಷ್ಟಕ್ಕೆ ಒಳಗಾದ ರಾಷ್ಟ್ರಗಳ ಜೀವನ ಸುಧಾರಿಸುವ ಪರೋಪಕಾರಕ್ಕೆ ಇಳಿಯುವ ಬದಲಾಗಿ ತನ್ನದೇ ರಾಜಕೀಯ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳುವಲ್ಲಿ ಸೋತಿದೆ. ಇಂತಹ ಹಳವಂಡಗಳ ಕಾರಣದಿಂದಾಗಿಯೇ ಡೋನಾಲ್ಡ್ ಟ್ರಂಪ್ ಅವರಂತಹ ಸರಳ ಘೋಷ ವಾಖ್ಯಗಳನ್ನು ಹೊಂದಿದ ವ್ಯಕ್ತಿಗಳು ಅಧಿಕಾರಕ್ಕೇರಲು ಸಾಧ್ಯವಾಯಿತು.

ಭಾರತವು ಅಮೆರಿಕಕ್ಕೆ ಉತ್ತಮ ರಾಜಕೀಯ ವ್ಯವಸ್ಥೆಗಳನ್ನು ನೀಡಲು ಸಾಧ್ಯವಿಲ್ಲ. ಯಾಕೆಂದರೆ ಅಸಲಿಗೆ ಭಾರತದಲ್ಲಿಯೇ ಉತ್ತಮ ರಾಜಕೀಯ ವ್ಯವಸ್ಥೆಯ ಕೊರತೆ ಇದೆ. ಅದೇ ರೀತಿ ಅಮೆರಿಕದವರು ಕೂಡ ಬೇರೆ ಯಾವುದೇ ದೇಶದ ಆಡಳಿತ ವ್ಯವಸ್ಥೆಯನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಅಮೆರಿಕದಲ್ಲಿ ಜನಪ್ರಿಯ ರಾಜಕಾರಣವು ಸವಾರಿ ಹೊರಟಾಗ ಅದರಿಂದ ಇಡೀ ವಿಶ್ವದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಕಾಲಘಟ್ಟದಲ್ಲಿ ನಮ್ಮ ದೇಶವನ್ನು ರಕ್ಷಿಸಿಕೊಳ್ಳುವುದಷ್ಟೇ ಭಾರತದ ರಾಜಕಾರಣಿಗಳ ಆದ್ಯತೆಯಾಗಬೇಕು. ಆ ರಾಷ್ಟ್ರದ ರಾಜಕೀಯ ನಾಯಕರ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸುತ್ತೇವೆ ಎಂದು ಹೋಗುವುದಕ್ಕಿಂತ ನಮ್ಮ ದೇಶವನ್ನು ರಕ್ಷಿಸಿಕೊಳ್ಳುವುದು ಸದ್ಯದ ಮಟ್ಟಿಗೆ ಸಂಕೀರ್ಣವೂ ಸವಾಲಿನ ಕೆಲಸವೂ ಆಗಿದೆ.

ಕ್ಯಾಪ್: ಅಗ್ಗದ ಆಮದುಗಳ ಪ್ರವೇಶಕ್ಕೆ ಬಾಗಿಲು ಜಡಿಯುವ ಮೂಲಕ ಅಮೆರಿಕವನ್ನು ಮತ್ತೊಮ್ಮೆ ತಯಾರಿಕಾ ವಲಯದ ದೈತ್ಯನನ್ನಾಗಿ ಮಾಡುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಕನಸು ಕೇವಲ ಹಗಲು ಗನಸಷ್ಟೇ. ಅದನ್ನು ಕಂಡು ಮಕ್ಕಳು ಕೂಡ ಅಣಕಿಸದೇ ಇರಲಾರರು.

Read More
Next Story