
ಚಿಪ್ ವಿನ್ಯಾಸಗೊಳಿಸುವ ಭಾರತದ ಪ್ರತಿಭೆ ನಿಜಕ್ಕೂ ಅಸಾಧಾರಣವಾದುದು. ಅದು ದೇಶದ ಅತ್ಯುತ್ತಮ ಆಸ್ತಿ. ಆದರೆ ಅದರಿಂದ ಅರ್ಥ ವ್ಯವಸ್ಥೆ ಸುಧಾರಿಸುತ್ತದೆ ಎಂದು ನಿರೀಕ್ಷಿಸುವುದು ಅವಾಸ್ತವಿಕವಾಗಿದೆ.
1980ರ ದಶಕದಲ್ಲಿ ಇಂಟರ್ನೆಟ್ ಸಬಲೀಕರಣ ಸೇವಾ ಕಂಪನಿಗಳ ಉದಯದೊಂದಿಗೆ ಸೇವಾ ವಲಯದಲ್ಲಿ ಉಂಟಾದ ಭಾರತದ ನಿರ್ಣಾಯಕ ಪಾತ್ರದಿಂದ ಹಿಡಿದು, ಹೊಸ ವಲಯದ ಕೇಂದ್ರಬಿಂದುವಾಗಿ ಬೆಂಗಳೂರು ಹೊರಹೊಮ್ಮುವುದರ ಮೂಲಕ ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ಎಲೆಕ್ಟ್ರಿಕ್ ವಾಹನಗಳು, ಸ್ಮಾರ್ಟ್‌ಫೋನ್‌ಗಳು ಹಾಗೂ ಉದಯೋನ್ಮುಖ AI ಡೇಟಾ ಸೆಂಟರ್ಗಳಲ್ಲಿ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಚಿಪ್ಗಳ ತಯಾರಿಕೆಗೆ ಒತ್ತು ನೀಡುವ ಮೂಲಕ ಸೆಮಿಕಂಡಕ್ಟರ್ ಉದ್ಯಮದ ಉದಯದವರೆಗೆ - ಭಾರತದ ತಾಂತ್ರಿಕ ಪ್ರಯಾಣವು ತಾರ್ಕಿಕವಾಗಿ ಅನಿವಾರ್ಯವೆಂಬಂತೆ ತೋರುತ್ತದೆ.
ಉದ್ಯಮದ ಬೆಳವಣಿಗೆಗೆ ಕಾರಣಗಳು
ಭಾರತವು ಮೂರು ಲಕ್ಷ ಚಿಪ್ ವಿನ್ಯಾಸ ಎಂಜಿನಿಯರ್ಗಳನ್ನು ಹೊಂದಿದೆ, ಅಂದರೆ ಇದು ಜಾಗತಿಕ ಕಾರ್ಯಪಡೆಯ ಶೇಕಡಾ 20 ರಷ್ಟಿದೆ ಎಂದು ಉದ್ಯಮದ ವರದಿಗಳು ಹೇಳುತ್ತವೆ. ಮುಂದಿನ ದಶಕದ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಭಾರತಕ್ಕೆ ಅನುಕೂಲವನ್ನು ತಂದುಕೊಡಲಿರುವ ಈ ಉದಯೋನ್ಮುಖ ಉದ್ಯಮವನ್ನು ಮೋದಿ ಸರ್ಕಾರವು ಶ್ರದ್ಧೆಯಿಂದ ಬೆಂಬಲಿಸುತ್ತಿರುವುದು ಅಚ್ಚರಿಯ ಸಂಗತಿ ಏನೂ ಅಲ್ಲ. ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆಯಲ್ಲಿ ಭಾರತದ ಪಾಲು 2026ರಲ್ಲಿ ಶೇಕಡಾ ಮೂರರಿಂದ 2031ರ ವೇಳೆಗೆ ಶೇಕಡಾ ಒಂಬತ್ತಕ್ಕೆ ಏರುವ ನಿರೀಕ್ಷೆಯಿದೆ. ಸೆಮಿಕಂಡಕ್ಟರ್ ವಿಭಾಗಕ್ಕೆ ಸರ್ಕಾರದ ಬೆಂಬಲವು ಉದ್ಯಮದ ಬೆಳವಣಿಗೆಗೆ ನಿರ್ಣಾಯಕವೆಂದು ಪರಿಗಣಿಸಲಾಗಿದೆ.
ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಯು ಹೆಚ್ಚಾಗಿ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ವಿದ್ಯುತ್ ವಾಹನಗಳ ಮತ್ತು ಸ್ಮಾರ್ಟ್‌ಫೋನ್‌ಗಳ, ವಿಶೇಷವಾಗಿ 5G ಫೋನ್‌ಗಳ ಮಾರುಕಟ್ಟೆಯ ವೃದ್ಧಿಯ ಮೇಲೆ ಅವಲಂಬಿತವಾಗಿರುತ್ತದೆ. ಈ ಎರಡೂ ಕ್ಷೇತ್ರಗಳು ಸಾಧನಗಳನ್ನು ಚಲಾಯಿಸಲು ವಿನ್ಯಾಸಗೊಳಿಸಿದ ಚಿಪ್ಗಳನ್ನು ಅವಲಂಬಿಸಿವೆ.
ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಯಲ್ಲಿ ಮೂರನೇ ಪ್ರಮುಖ ಅಂಶವೆಂದರೆ ಕೃತಕ ಬುದ್ಧಿಮತ್ತೆ ಡೇಟಾ ಕೇಂದ್ರಗಳ ವಿಸ್ತರಣೆ.
ವಿದ್ಯುತ್ ಚಾಲಿತ ವಾಹನಗಳು ಮತ್ತು ವಿದ್ಯುತ್ ಉತ್ಪಾದನೆ
ಆಟೋಮೋಟಿವ್ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಳವಣಿಗೆಯು ಒಂದು ದಶಕ ಅಥವಾ ಅದಕ್ಕಿಂತ ಹೆಚ್ಚು ಕಾಲ ಪ್ರಗತಿಯಲ್ಲಿರುವ ಕೆಲಸವಾಗಿ ಉಳಿಯುತ್ತದೆ. ಅನಿವಾರ್ಯತೆಗಳಿಂದಾಗಿ ಪಳೆಯುಳಿಕೆ ಇಂಧನದಿಂದ ಚಲಿಸುವ ವಾಹನಗಳು ಮುಂಬರುವ ವರ್ಷಗಳಲ್ಲಿ ಪ್ರಮುಖ ಪಾತ್ರವಾಗಿ ಮುಂದುವರಿಯಲಿವೆ ಎಂದು ಅರ್ಥಮಾಡಿಕೊಳ್ಳಬಹುದು. ಮುಂಚೂಣಿಯಲ್ಲಿರುವ ಸೌರಶಕ್ತಿಯ ನವೀಕರಿಸಬಹುದಾದ ಇಂಧನ ಮೂಲಗಳ ಪ್ರಭಾವಶಾಲಿ ಬೆಳವಣಿಗೆಯ ಹೊರತಾಗಿಯೂ, ಹೆಚ್ಚಿದ ವಿದ್ಯುತ್ ಉತ್ಪಾದನೆಯ ಬೇಡಿಕೆಯು ಪ್ರಮುಖ ಸವಾಲಾಗಿ ಉಳಿಯುತ್ತದೆ.
ನವೀಕರಿಸಬಹುದಾದ ಮತ್ತು ಸಾಂಪ್ರದಾಯಿಕವಲ್ಲದ ಮೂಲಗಳು ಇನ್ನೂ ವ್ಯವಸ್ಥೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಉದಾಹರಣೆಗೆ, ಸೌರಶಕ್ತಿಯ ಸಂಗ್ರಹಣೆಯು ಇನ್ನೂ ಸಮಸ್ಯೆಯಾಗಿ ಉಳಿದಿದೆ.
ಸಹಜವಾಗಿ, ಇದು ಕಾಲಾನಂತರದಲ್ಲಿ ಬಗೆಹರಿಯುತ್ತದೆ, ಮತ್ತು ಆರಂಭದಲ್ಲಿ ಇದು ದಕ್ಷತೆಯ ವೆಚ್ಚದಲ್ಲಿ ಆಗಬಹುದು. ಆದರೆ ಅದು ತಾಂತ್ರಿಕ ವಿಕಾಸದ ಒಂದು ಭಾಗವಾಗಿದೆ.
ಸೀಮಿತ ಸಂಖ್ಯೆಯ ಉದ್ಯೋಗಗಳು
ಇನ್ಫೋಸಿಸ್ನ ನಂದನ್ ನಿಲೇಕಣಿ ಅವರು ಭಾರತದ ಐಟಿ ಉದ್ಯೋಗ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂಬ ಗಂಭೀರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು, ಯಾಕೆಂದರೆ ಅದು ಹತ್ತು ಲಕ್ಷಕ್ಕಿಂತ ಹೆಚ್ಚು ಉದ್ಯೋಗಗಳನ್ನು ಒದಗಿಸಲು ಸಾಧ್ಯವಿಲ್ಲ. ಸೆಮಿಕಂಡಕ್ಟರ್ ಉದ್ಯಮಕ್ಕೂ ಇದು ಅನ್ವಯಿಸುತ್ತದೆ. ಭಾರತವು ತಯಾರಿಸುವ ಚಿಪ್ ವಿನ್ಯಾಸ ಇಂಜಿನಿಯರ್ಗಳ ಒಟ್ಟು ಸಂಖ್ಯೆಗೆ ಹೋಲಿಸಿದರೆ, ದೇಶದೊಳಗೆ ಉದ್ಯೋಗ ಪಡೆದುಕೊಳ್ಳುವ ಚಿಪ್ ವಿನ್ಯಾಸಕರ ಸಂಖ್ಯೆಯು ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ.
ಭಾರತವು ತನ್ನ ಚಿಪ್ ವಿನ್ಯಾಸ ಇಂಜಿನಿಯರ್ಗಳ ಸಾಮರ್ಥ್ಯದಿಂದ ಪಡೆಯಬಹುದಾದ ಕಾರ್ಯತಂತ್ರದ ಅನುಕೂಲಗಳ ಮೇಲೆ ಹೆಚ್ಚು ಗಮನಹರಿಸಬೇಕು, ಆದರೆ ಇದರ ಉದ್ಯೋಗಾವಕಾಶಗಳ ಸಂಖ್ಯೆಯು ಬಹಳ ಕಡಿಮೆ ಎಂಬುದನ್ನು ಮನಸ್ಸಿನಲ್ಲಿಡಬೇಕು. ಒಟ್ಟಾರೆ ಆರ್ಥಿಕತೆಯ ಮೇಲೆ ಅಥವಾ ಜನರ ಜೀವನದ ಮೇಲೆ ಉದ್ಯೋಗಗಳ ದೃಷ್ಟಿಯಿಂದ ಗಣನೀಯವಾಗಿ ಪರಿಣಾಮ ಬೀರದೆಯೇ ಭಾರತವು ಸೆಮಿಕಂಡಕ್ಟರ್ ಉದ್ಯಮದ ಜಾಗತಿಕ ಕೇಂದ್ರವಾಗಬಹುದು ಮತ್ತು ಇದಕ್ಕಾಗಿ ಸೆಮಿಕಂಡಕ್ಟರ್ ಉದ್ಯಮವನ್ನು ದೂಷಿಸಲು ಸಾಧ್ಯವಿಲ್ಲ.
ಜಾದೂ ದಂಡವಲ್ಲ
ಈ ವಲಯಕ್ಕೆ ಸರ್ಕಾರ ನೀಡುವ ಪ್ರೋತ್ಸಾಹವೇನೋ ಉತ್ತಮ ಉದ್ದೇಶದಿಂದ ಕೂಡಿದೆ. ಆದಾಗ್ಯೂ, ಸೆಮಿಕಂಡಕ್ಟರ್ ಉದ್ಯಮವು ಭಾರತದ ಅರ್ಥ ವ್ಯವಸ್ಥೆಯನ್ನು ಪರಿವರ್ತಿಸಿ ಅದನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುತ್ತದೆ ಎಂದು ನಿರೀಕ್ಷಿಸುವುದು ಅವಾಸ್ತವಿಕ ಸಂಗತಿ. ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಇದು ಪ್ರಮುಖ ಅಂಶ. ಆದರೆ ಇದು ದೇಶಕ್ಕೆ ಮತ್ತು ಆರ್ಥಿಕತೆಗೆ ಒಂದು ಜಾದೂ ದಂಡವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.
ಆದಾಗ್ಯೂ, ಇದು ದೊಡ್ಡ ಆರ್ಥಿಕ ಸೌಧದಲ್ಲಿ ಅಗತ್ಯವಾದ ಮತ್ತು ಉಪಯುಕ್ತವಾದ ಇಟ್ಟಿಗೆಯಾಗಿ ಸೇವೆ ಸಲ್ಲಿಸಬಹುದು. ಸೆಮಿಕಂಡಕ್ಟರ್ ಉದ್ಯಮದ ಸಹಾಯದಿಂದ ಭಾರತವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯನ್ನಾಗಿ ಮಾಡಬಹುದು ಎಂದು ನಂಬುವುದು ತಪ್ಪುದಾರಿಗೆಳೆದಂತೆ.
ಬಜೆಟ್ ಸ್ಮಾರ್ಟ್‌ಫೋನ್‌ಗಳು
ಸಿ.ಎಂ.ಎಫನ್ನು ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಸ್ವತಂತ್ರ ಭಾರತೀಯ ತಯಾರಕರನ್ನಾಗಿ ಮಾಡಲು ಬಯಸುವ 'ನಥಿಂಗ್' ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಕಾರ್ಲ್ ಪೀ, ಭಾರತವು ತನ್ನದೇ ಆದ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಸೃಷ್ಟಿಸಬೇಕಾಗಿದೆ ಮತ್ತು ಅದನ್ನು ಮಾಡಲು ನಿರಂತರವಾಗಿ ಸುಧಾರಿತ ಸಾಧನಗಳನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಆಂತರಿಕ ವಿನ್ಯಾಸ ಘಟಕವನ್ನು ಸ್ಥಾಪಿಸಬೇಕಾದ ಅಗತ್ಯವಿದೆ ಎಂಬ ಸದಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ವಿಚಾರದಲ್ಲಿ ಭಾರತೀಯ ಮಾರುಕಟ್ಟೆಯ ಒಟ್ಟಾರೆ ಸಾಮರ್ಥ್ಯವನ್ನು ನೋಡುವ ಕಾರ್ಲ್ ಪೀ, ಭಾರತೀಯ ನೆಲೆಯನ್ನು ಬಳಸಿಕೊಳ್ಳಲು ಆಕರ್ಷಿತರಾಗಿದ್ದಾರೆ. ಭಾರತದಲ್ಲಿ ಅವರು ಸೃಷ್ಟಿಸಲು ಬಯಸುವ ಬ್ರ್ಯಾಂಡ್ನ್ನು ಅದರ ವೆಚ್ಚದ ಸ್ಪರ್ಧಾತ್ಮಕತೆಯಿಂದಾಗಿ ಯಶಸ್ವಿಗೊಳಿಸಬೇಕು ಎಂದು ಅವರು ಭಾವಿಸುತ್ತಾರೆ. ಇದು ನಮ್ಮನ್ನು ಮೂಲಭೂತ ಪ್ರಶ್ನೆಗೆ ಕರೆದೊಯ್ಯುತ್ತದೆ: ತುಲನಾತ್ಮಕವಾಗಿ ಚಿಪ್-ವಿನ್ಯಾಸ ಮಾಡುವ ದೊಡ್ಡ ದಂಡೇ ಇಲ್ಲಿದ್ದರೂ, ಯಾವುದೇ ಭಾರತೀಯ ತಯಾರಕರು ಇದರ ಅವಕಾಶವನ್ನು ಇನ್ನೂ ಯಾಕೆ ಪಡೆದುಕೊಂಡಿಲ್ಲ?
ಓಪನ್ಎಐ (OpenAI), ಆಂಥ್ರೋಪಿಕ್ (Anthropic) ನಂತಹ ಅಮೆರಿಕದ ತಂತ್ರಜ್ಞಾನ ದಿಗ್ಗಜರ ಸಾಲಿನಲ್ಲಿ ಅಥವಾ ಎನ್ವಿಡಿಯಾ (Nvidia) ದಂತಹ ಉನ್ನತ ಚಿಪ್ ತಯಾರಕರ ಶೈಲಿಯಲ್ಲಿ ಚಿಪ್ ವಿನ್ಯಾಸ ಅಥವಾ ಕೃತಕ ಬುದ್ಧಿಮತ್ತೆ ಸಾಫ್ಟ್ವೇರ್ ಮಾದರಿಯ ರೂಪದಲ್ಲಿ ಬ್ರಾಂಡ್ ಮಾಡಲಾದ AI ಉತ್ಪನ್ನವನ್ನು ರಚಿಸಲು, ಭಾರತೀಯ ಕಂಪನಿಗಳು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕಾಗುತ್ತದೆ. ಇದಕ್ಕೆ ದೀರ್ಘಾವಧಿಯ ಅವಶ್ಯಕತೆಯಿರುತ್ತದೆ. ಅಮೆರಿಕದ AI ದೈತ್ಯರು ಯಶಸ್ಸಿನ ಮೈಲಿಗಲ್ಲು ತಲುಪಲು ಅಪಾರ ಸಮಯ ಮತ್ತು ಹಣವನ್ನು ವೆಚ್ಚ ಮಾಡಿದ್ದಾರೆ. ಐಬಿಎಂನಂತಹ ತಂತ್ರಜ್ಞಾನದ ದಿಗ್ಗಜರೂ ಕೂಡ ಇದೇ ಕೆಲಸವನ್ನು ಮಾಡುತ್ತಿದ್ದಾರೆ.
ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ ಕೇವಲ ಓಪನ್ಎಐ ಜೊತೆ ಕೈಜೋಡಿಸಿ ಹೊಸ ಉತ್ಪನ್ನದ ಕೀಲಿಕೈಯನ್ನು ಪಡೆದುಕೊಂಡಿದೆ. ಟಿಸಿಎಸ್, ಇನ್ಫೋಸಿಸ್, ಮತ್ತು ವಿಪ್ರೋನಂತಹ ಭಾರತೀಯ ಐಟಿ ದಿಗ್ಗಜರು ತಾವು ಮಾಡಬೇಕಿದ್ದ ಕೃತಕ ಬುದ್ಧಿಮತ್ತೆಯ ಕ್ಷೇತ್ರಕ್ಕೆ ಇನ್ನೂ ಧುಮುಕಿಲ್ಲ. ತಮ್ಮದೇ ಆದ AI ಉತ್ಪನ್ನವನ್ನು ನಿರ್ಮಿಸುವ ಬದಲು, ಮಾರುಕಟ್ಟೆಗೆ ಪ್ರವೇಶಿಸುವ AI ಮಾದರಿಗಳನ್ನು ಅಳವಡಿಸಿಕೊಳ್ಳಲು ಅವರು ಕಾಯುತ್ತಿರುವಂತೆ ತೋರುತ್ತಿದೆ.
ಭಾರತೀಯರಲ್ಲಿ ತಾಳ್ಮೆಯ ಕೊರತೆ
ಭಾರತ ಸರ್ಕಾರವು ಈ ಅಂತರವನ್ನು ತುಂಬಲು ಮತ್ತು ಉದಯೋನ್ಮುಖ AI ಕ್ಷೇತ್ರದಲ್ಲಿ ಸ್ಟಾರ್ಟ್ಅಪ್ಗಳನ್ನು ಬೆಂಬಲಿಸಲು ಬಯಸುತ್ತಿರುವಂತೆ ಕಾಣುತ್ತದೆ, ಮತ್ತು ಇದರ ಮೊದಲ ಹೆಜ್ಜೆಯು ಭಾರತದ ಚಿಪ್-ವಿನ್ಯಾಸ ಉದ್ಯಮಗಳನ್ನು ಬೆಂಬಲಿಸುವುದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ವಿದೇಶಿ ಕಂಪನಿಗಳೊಂದಿಗೆ ಜಂಟಿ ಉದ್ಯಮ ಯೋಜನೆಗಳನ್ನು ಮುಂದುವರಿಸಲು ಸರ್ಕಾರವು ಬಯಸಿದೆ. ಇದು ಒಂದು ಪ್ರಾಯೋಗಿಕ ವಿಧಾನವಾಗಿದೆ.
1980ರ ದಶಕದಲ್ಲಿ, ಕ್ರೀಡಾಂಗಣದಲ್ಲಿ ಹೋರಾಟದ ಛಲ ಭಾರತೀಯರಲ್ಲಿ ಯಾಕಿಲ್ಲ ಎಂದು ರಾಜೀವ್ ಗಾಂಧಿ ಅವರು ಬಹಿರಂಗವಾಗಿ ಕೇಳಿದ್ದರು.
ಇದನ್ನು ತಂತ್ರಜ್ಞಾನ ರಂಗಕ್ಕೂ ವಿಸ್ತರಿಸಬಹುದು. ಭಾರತೀಯರು ತಂತ್ರಜ್ಞಾನದ ಕ್ಷೇತ್ರದಲ್ಲಿ ಮುಂಚೂಣಿಯನ್ನು ತಲುಪುವುದರಿಂದ ಮತ್ತು ಇತರರನ್ನು ಹಿಂದಿಕ್ಕಲು ಇರುವ ಅಡ್ಡಿಗಳಾದರೂ ಏನು? ಭಾರತ ಸರ್ಕಾರ ಮತ್ತು ಖಾಸಗಿ ಉದ್ಯಮಗಳು ದೀರ್ಘಕಾಲೀನ ಸಂಶೋಧನಾ ಪ್ರಯತ್ನಗಳ ವಿಚಾರದಲ್ಲಿ ಹೆಚ್ಚಿನ ತಾಳ್ಮೆಯನ್ನು ಪ್ರದರ್ಶಿಸಬೇಕಾಗಿದೆ. ಅವುಗಳು ತ್ವರಿತವಾಗಿ ಫಲಿತಾಂಶಕ್ಕಾಗಿ ಕಾತರಿಸುತ್ತವೆ ಎಂಬುದು ಇದಕ್ಕೆ ಉತ್ತರವಾಗಿ ನೀಡಬಹುದಾಗಿದೆ.
ಅನೇಕ ವೈಫಲ್ಯಗಳನ್ನು ದಾಟಿದ ನಂತರವೇ ಸಂಶೋಧನಾ ಪ್ರಗತಿ ಸಾಧ್ಯವಾಗುತ್ತದೆ ಮತ್ತು ಯಶಸ್ಸನ್ನು ತಲುಪಲು ಕಷ್ಟಕರವಾದ ಹಂತಗಳನ್ನು ದಾಟಿಯೇ ಮುಂದೆ ಹೋಗಬೇಕಾಗುತ್ತದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು 'ದ ಫೆಡರಲ್ ಕರ್ನಾಟಕ'ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

