ಪಶ್ಚಿಮ ಬಂಗಾಳ: ಎಡ ಪಕ್ಷ -ಕಾಂಗ್ರೆಸ್ ಮೈತ್ರಿಯಿಂದ ಟಿಎಂಸಿ- ಬಿಜೆಪಿಗೆ ಆತಂಕ
x
ಕೋಲ್ಕತ್ತಾದಲ್ಲಿ ಈದ್-ಉಲ್-ಫಿತರ್‌ ಪ್ರಯುಕ್ತ ನಡೆದ ಸಭೆಯಲ್ಲಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದರು.

ಪಶ್ಚಿಮ ಬಂಗಾಳ: ಎಡ ಪಕ್ಷ -ಕಾಂಗ್ರೆಸ್ ಮೈತ್ರಿಯಿಂದ ಟಿಎಂಸಿ- ಬಿಜೆಪಿಗೆ ಆತಂಕ


ಏಪ್ರಿಲ್ 11 ರಂದು ರಾಯ್‌ಗಂಜ್‌ನಲ್ಲಿ ಈದ್ ದಿನದಂದು ನಡೆದ ಘಟನೆಯು ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಆತಂಕ ಮೂಡಿಸಿದೆ. ಟಿಎಂಸಿ ಕಾರ್ಯಕರ್ತ ಮತ್ತು ನಿವೃತ್ತ ಶಿಕ್ಷಕ ರಫೀಕ್ ಆಲಂ ಅವರು ಚುನಾವಣೆಯಲ್ಲಿ ವೆಚ್ಚ ಮಾಡಲು ಹಣದ ಕೊರತೆ ಇರುವ ಕಾಂಗ್ರೆ ಸ್-ಎಡರಂಗದ ಜಂಟಿ ಅಭ್ಯರ್ಥಿ ಇಮ್ರಾನ್ ಅಲಿ ರಾಮ್ಜ್(ಅಥವಾ ವಿಕ್ಟರ್) ಅವರಿಗೆ ದೇಣಿಗೆ ನೀಡುವ ಮೂಲಕ ಅನೇಕರನ್ನು ಅಚ್ಚರಿ‌ಗೊಳಿಸಿದರು.

ಈದ್‌ನಲ್ಲಿ ಹಿರಿಯರು ಯುವಕರಿಗೆ ಹಣ ಉಡುಗೊರೆಯಾಗಿ ನೀಡುವ ಸಂಪ್ರದಾಯವಿದೆ. ಆದರೆ, ಪ್ರತಿಸ್ಪರ್ಧಿ ಪಕ್ಷದ ಅಭ್ಯರ್ಥಿಗೆ ದೇಣಿಗೆ ನೀಡುವುದು ಯಾವುದೇ ರಾಜಕೀಯ ಸಂಪ್ರದಾಯವನ್ನು ಮೀರಿದ ವರ್ತನೆಯಾಗಿದೆ; ಬಂಗಾಳದಲ್ಲಿ ಪಕ್ಷಗಳ ನಡುವಿನ ಪೈಪೋಟಿ ಕ್ರೂರ ವಾಗಿರುತ್ತವೆ. ಈ ಹಗೆತನದಿಂದಾಗಿ ಟಿಎಂಸಿ, ಕಾಂಗ್ರೆಸ್ ಮತ್ತು ಎಡರಂಗಗಳು ರಾಷ್ಟ್ರದೆಲ್ಲೆಡೆ ಇಂಡಿಯ ಒಕ್ಕೂಟದ ಭಾಗವಾಗಿದ್ದರೂ, ಬಂಗಾಳದಲ್ಲಿ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳಲು ಅಡ್ಡಿಯಾಯಿತು. ಕಾಂಗ್ರೆಸ್ ಮತ್ತು ಎಡರಂಗ ಎರಡೂ ಟಿಎಂಸಿಯ ಅಲ್ಪಸಂಖ್ಯಾತರ ಮತಬ್ಯಾಂಕ್‌ಗೆ ಕೈಹಾಕಲು ಪ್ರಯತ್ನಿಸುತ್ತಿರುವ ಹೊತ್ತಿನಲ್ಲಿ ಆಲಂ ಅವರ ಪ್ರತಿಕ್ರಿಯೆ ಗಮನಾರ್ಹ ರಾಜಕೀಯ ಮಹತ್ವ ಪಡೆದುಕೊಂಡಿದೆ.

ಟಿಎಂಸಿ ಬಗ್ಗೆ ಅಸಮಾಧಾನ: ಅಧೀರ್ ʻಬಂಗಾಳದ ಅಲ್ಪಸಂಖ್ಯಾತರು ಟಿಎಂಸಿ ಬಗ್ಗೆ ಅಸಂತೋಷಗೊಂಡಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ನೆಲೆ ಗಳಿಸಿಕೊಳ್ಳುವ ಸಮಯ ಬಂದಿದೆʼ ಎಂದು ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಹೇಳುತ್ತಾರೆ.

ಆಲಂ ಅವರು ವಿಕ್ಟರ್ ಅವರ ಚುನಾವಣೆ ನಿಧಿಗೆ 5,000 ರೂ ಹಾಗೂ ಅಳಿಯನ ಪರವಾಗಿ 2,000 ರೂ. ದೇಣಿಗೆ ನೀಡಿದರು. ʻಅವರ ತಂದೆಯಂತೆ, ವಿಕ್ಟರ್ ಎಂದಿಗೂ ಭ್ರಷ್ಟಾಚಾರದಲ್ಲಿ ತೊಡಗಿಲ್ಲ. ಅವರ ಬಳಿ ಹಣವಿಲ್ಲದ ಕಾರಣ ನಾನು ಕೊಡುಗೆ ನೀಡಿದ್ದೇನೆ. ಇದಲ್ಲದೆ, ಕೇಂದ್ರದ ಬಿಜೆಪಿ ಸರ್ಕಾರವು ಕಾಂಗ್ರೆಸ್ಸಿನ ಬ್ಯಾಂಕ್‌ ಖಾತೆಯನ್ನು ಸ್ಥಗಿತಗೊಳಿಸಿದೆ,ʼ ಎಂದು ಆಲಂ ಹೇಳಿದರು. ವಿಕ್ಟರ್ ಅವರ ತಂದೆ ಮತ್ತು ಚಿಕ್ಕಪ್ಪ ಫಾರ್ವರ್ಡ್ ಬ್ಲಾಕ್‌ ನಿಂದ ಶಾಸಕರಾಗಿದ್ದರು. ಫಾರ್ವರ್ಡ್ ಬ್ಲಾಕ್ ನಿಂದ ಶಾಸಕರಾಗಿದ್ದ ವಿಕ್ಟರ್, 2022 ರಲ್ಲಿ ಕಾಂಗ್ರೆಸ್‌ ಸೇರಿದರು.

ವಿರೋಧ ಅಲೆ: ಟಿಎಂಸಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ: ಅಡೆತಡೆಯಿಲ್ಲದ ರಾಜಕೀಯ ಹಿಂಸಾಚಾರ ಮತ್ತು ಭ್ರಷ್ಟಾಚಾರ ಇದಕ್ಕೆ ಕಾರಣ. ಅಸಮಾಧಾನ ಇನ್ನೂ ಅಲೆಯಾಗಿಲ್ಲವಾದರೂ, ಕೆಲವು ಶೇಕಡಾವಾರು ಮತಗಳು ಪಕ್ಷದಿಂದ ದೂರವಾಗುವುದು ನಿರ್ಣಾಯಕ ವಾಗಬಹುದು.

2021 ರ ವಿಧಾನಸಭೆ ಚುನಾವಣೆಯಲ್ಲಿ ಆದಂತೆ ಈ ಬಾರಿ ಅಲ್ಪಸಂಖ್ಯಾತರು ಟಿಎಂಸಿ ಹಿಂದೆ ಸಂಪೂರ್ಣ ಒಟ್ಟುಗೂಡುವುದಿಲ್ಲ ಎಂಬ ಸೂಚನೆಯಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ನಡುವಿನ ಅಲ್ಪಸಂಖ್ಯಾತ ಮತಗಳ ವಿಭಜನೆಯಿಂದ ಅಲ್ಪಸಂಖ್ಯಾತರು ಹೆಚ್ಚು ಸಂಖ್ಯೆಯಲ್ಲಿರುವ ಮಾಲ್ಡಾ ಮತ್ತು ಉತ್ತರ ದಿನಾಜ್‌ಪುರ ಜಿಲ್ಲೆಗಳಲ್ಲಿ ಬಿಜೆಪಿಗೆ ಕೆಲವು ಸ್ಥಾನ ಸಿಕ್ಕಿತ್ತು.

ಅಲ್ಪಸಂಖ್ಯಾತರು ಒಂದೇ ಪಕ್ಷಕ್ಕೆ ಸಾಮೂಹಿಕವಾಗಿ ಮತ ಹಾಕುವುದಿಲ್ಲ; ಪಕ್ಷವನ್ನು ಪರಿಗಣಿಸದೆ ಪ್ರಬಲ ಬಿಜೆಪಿಯೇತರ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಇಂಥ ಸೂಚನೆ ಮೊದಲು ಬಂದಿದ್ದು 2023ರ ಮಾರ್ಚ್‌ ನಲ್ಲಿ ಮುರ್ಷಿದಾಬಾದ್ ಜಿಲ್ಲೆಯ ಅಲ್ಪಸಂಖ್ಯಾತರ ಪ್ರಾಬಲ್ಯದ ಸಾಗರ್ದಿಘಿಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಜಂಟಿ ಅಭ್ಯರ್ಥಿ ಬೇರೊನ್ ಬಿಸ್ವಾಸ್ ಗೆದ್ದಾಗ.

2023ರ ಜುಲೈನಲ್ಲಿ ನಡೆದ ಪಂಚಾಯತ್ ಚುನಾವಣೆಗಳಲ್ಲಿ ಈ ಪ್ರವೃತ್ತಿ ಮುಂದುವರಿಯಿತು. ಮುಸ್ಲಿಮರು ಶೇ.66 ಕ್ಕಿಂತ ಹೆಚ್ಚು ಜನ ಸಂಖ್ಯೆ ಹೊಂದಿರುವ ಜಿಲ್ಲೆಯಲ್ಲಿ ಕಾಂಗ್ರೆಸ್ 1,000 ಹಾಗೂ ಸಿಪಿಐ (ಎಂ) ಸುಮಾರು 600 ಗ್ರಾಮ ಪಂಚಾಯತಿ ಸ್ಥಾನಗಳನ್ನು ಗಳಿಸಿದವು.

ʻಎನ್‌ಆರ್‌ಸಿ-ಸಿಎಎಯಂತಹ ಬಲವಾದ ಧ್ರುವೀಕರಣ ಸಮಸ್ಯೆಗಳ ಅನುಪಸ್ಥಿತಿಯಲ್ಲಿ ಮುಸ್ಲಿಮರ ಮತಗಳು ಈ ಬಾರಿ ಸಂಪೂರ್ಣವಾಗಿ ಟಿಎಂಸಿಗೆ ಹೋಗುವುದಿಲ್ಲʼ ಎಂದು ಬೆಂಗಾಲ್ ಮದ್ರಸಾ ಎಜುಕೇಶನ್ ಫೋರಂನ ಇಸ್ರಾರುಲ್ ಹೊಕ್ ಮೊಂಡಲ್ ಹೇಳಿದರು.

ಸಿಎಎ ಪ್ರಮುಖ ವಿಷಯವಲ್ಲ: ಸಿಎಎ ನಿಯಮಗಳನ್ನು 2024 ರ ಲೋಕಸಭೆ ವೇಳಾಪಟ್ಟಿಗಳ ಘೋಷಣೆಗೆ ಸ್ವಲ್ಪ ಮುಂಚಿತವಾಗಿ ಕೇಂದ್ರ ರಚಿಸಿದೆ. ಆದರೆ ಈ ಚುನಾವಣೆಯಲ್ಲಿ ರಾಜ್ಯದ ಅಲ್ಪಸಂಖ್ಯಾತರಲ್ಲಿ ಇದು ಪ್ರಮುಖ ವಿಷಯವಾಗಿಲ್ಲ. 2021 ರ ವಿಧಾನಸಭೆ ಚುನಾವಣೆಗೆ ಮುನ್ನ ನಾಗರಿಕ ಸಮಾಜ ಸಂಘಟನೆಗಳ ʻಬಿಜೆಪಿಗೆ ಮತ ನೀಡಬೇಡಿʼ ಅಭಿಯಾನ ರಾಜ್ಯಾದ್ಯಂತ ಪ್ರತಿಧ್ವನಿಸಿತು. ಈ ವಿಷಯದ ಬಗ್ಗೆ ಈ ಬಾರಿ ಆಂದೋಲನ ಕಂಡುಬಂದಿಲ್ಲ. ಆದರೆ, ಟಿಎಂಸಿ ದೊಡ್ಡ ರೀತಿಯಲ್ಲಿ ಅದನ್ನು ಕೈಗೆತ್ತಿಕೊಂಡಿದೆ.

ʻರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ತಲೆಯಾಗಿದ್ದರೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹೊಟ್ಟೆ ಮತ್ತು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಬಾಲ. ಅವುಗಳನ್ನು ಜಾರಿಗೆ ತರಲು ಮತ್ತು ಜನರನ್ನು ವಿಭಜಿಸಲು ನಾವು ಬಿಜೆಪಿಗೆ ಅವಕಾಶ ನೀಡುವುದಿಲ್ಲʼ ಎಂದು ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ಈದ್ ಕೂಟದಲ್ಲಿ ಹೇಳಿದ್ದರು.

ರಾಜ್ಯದಲ್ಲಿ ಬಿಜೆಪಿ ವಿರೋಧಿ ಮತಗಳ ವಿಭಜನೆ ವಿರುದ್‌ ಎಚ್ಚರಿಸಿದರು.ʻ ಬಂಗಾಳದಲ್ಲಿ ಕೇಸರಿ ಪಕ್ಷದ ವಿರುದ್ಧ ಟಿಎಂಸಿ ಮಾತ್ರ ಹೋರಾಡುತ್ತಿದೆʼ ಎಂದು ಹೇಳಿದರು.

ಎಡ-ಕಾಂಗ್ರೆಸ್ ಬಗ್ಗೆ ಬಿಜೆಪಿಗೂ ಆತಂಕ: ಟಿಎಂಸಿಗೆ ಅಲ್ಪಸಂಖ್ಯಾತರ ಮತಗಳ ಕುಸಿತದಿಂದ ಬಿಜೆಪಿಗೆ ಲಾಭವಾಗಬೇಕಿತ್ತು. ಆದರೆ, ಬಿಜೆಪಿ ನಾಯಕರ ಪ್ರಚಾರವನ್ನು ನೋಡಿದರೆ, ಪಕ್ಷವು ಎಡ-ಕಾಂಗ್ರೆಸ್‌ ಬಗ್ಗೆ ಸಮಾನವಾಗಿ ಜಾಗರೂಕರಾಗಿರುವಂತೆ ಕಂಡುಬರುತ್ತದೆ.

ʻಬಂಗಾಳದಲ್ಲಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಟಿಎಂಸಿ, ಎಡ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆʼ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ ಆರಂಭದಲ್ಲಿ ಹೇಳಿದ್ದರು.

ಟಿಎಂಸಿಯನ್ನು ಸೋಲಿಸಲು ಎಡ ಪಕ್ಷಗಳೊಂದಿಗೆ ʻಮಹಾಜೋತ್ʼ (ಮಹಾಮೈತ್ರಿ) ಕಲ್ಪನೆಯನ್ನು ಕಳೆದ ವರ್ಷ ಪ್ರಸ್ತಾಪಿಸಿದ್ದ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಎಡ ಪಕ್ಷ ಮತ್ತು ಕಾಂಗ್ರೆಸ್ ಅನ್ನು ʻವೋಟ್‌ ಗಳನ್ನು ಕತ್ತರಿಸುವವರುʼ ಎಂದು ದೂರಿದ್ದಾರೆ. ಮಮತಾ ಬ್ಯಾನರ್ಜಿ ಮತ್ತು ಇತರ ಟಿಎಂಸಿ ನಾಯಕರು ಸಹ ಬಿಜೆಪಿ ವಿರುದ್ಧ ಇದೇ ರೀತಿ ಮನವಿ ಮಾಡುತ್ತಿದ್ದಾರೆ; ಕಾಂಗ್ರೆಸ್ ಮತ್ತು ಎಡಪಕ್ಷಗಳು ಬಿಜೆಪಿಯೊಂದಿಗೆ ಮೌನ ಒಪ್ಪಂದು ಮಾಡಿಕೊಂಡಿವೆ ಎಂದು ಟಿಎಂಸಿ ದೂರಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಟಿಎಂಸಿ ನಾಯಕರು ತಮ್ಮ ಚುನಾವಣೆ ಭಾಷಣಗಳಲ್ಲಿ ಎಡ-ಕಾಂಗ್ರೆಸ್ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಎಡಪಕ್ಷಗಳ ಮತದಾರರ ಬೆಂಬಲದಿಂದ, ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿದೆ.

ಬಿಜೆಪಿ ಮತಗಳ ನಿರಂತರ ಕುಸಿತ: 2019 ರಲ್ಲಿ ಬಿಜೆಪಿ ಗಳಿಸಿದ ಶೇ.40ರ ಮತ ಪಾಲು, ನಿರಂತರವಾಗಿ ಕುಸಿಯುತ್ತಿದೆ. 2021 ರ ವಿಧಾನಸಭೆ ಚುನಾವಣೆಯಲ್ಲಿ ಶೇ.35 ಕ್ಕೆ ಇಳಿದಿದೆ. 2022 ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಶೇ.12 ಹಾಗೂ ಪಂಚಾಯತ್ ಚುನಾವಣೆಗಳಲ್ಲಿ ಶೇ. 22ಕ್ಕೆ ಇಳಿಯಿತು. ಎಡ ಪಕ್ಷಗಳು, ಕಾಂಗ್ರೆಸ್ ಮತ್ತು ಇಂಡಿಯನ್‌ ಸೆಕ್ಯುಲರ್‌ ಫ್ರಂಟ್‌ ಶೇ. 23 ಕ್ಕಿಂತ ಹೆಚ್ಚು ಮತ ಪಡೆದವು. ಆದರೆ, ಈ ಬಾರಿ ಐಎಸ್‌ಎಫ್ ಯಾವುದೇ ಮೈತ್ರಿಕೂಟದ ಭಾಗವಾಗಿಲ್ಲ.

ಎಡ-ಕಾಂಗ್ರೆಸ್ ಮೈತ್ರಿಕೂಟದ ಪರವಾದ ಮತಗಳು ಟಿಎಂಸಿ ವಿರೋಧಿ ಮತಗಳನ್ನು ವಿಭಜಿಸಬಹುದು. ಇದರಿಂದ ಆಡಳಿತ ಪಕ್ಷಕ್ಕೆ ಲಾಭವಾಗುತ್ತದೆ.

ಹಿಂದೂ ಮತಗಳ ಕ್ರೋಡೀಕರಣ: ಅಲ್ಪಸಂಖ್ಯಾತರ ಮತಗಳ ಕುರಿತು ಟಿಎಂಸಿ ಆತಂಕಪಡುತ್ತಿರುವಂತೆಯೇ, ಬಿಜೆಪಿ ಹಿಂದೂ ಮತಗಳ ಬಗ್ಗೆ ಆತಂಕ ಹೊಂದಿದೆ. ಒಂದು ಪಕ್ಷದ ಪರವಾಗಿ ಮತವನ್ನು ಗಣನೀಯವಾಗಿ ತಿರುಗಿಸಲು ಪ್ರಮುಖ ವಿಷಯವಿಲ್ಲದೆ ಇರುವುದರಿಂದ, ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಸ್ಪರ್ಧೆ ನಡೆಯಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ.

ಶೇ. ಮೂರರಿಂದ ನಾಲ್ಕರಷ್ಟು ಮತಗಳ ಅಂತರವು ಸೀಟುಗಳ ಸಂಖ್ಯೆಯನ್ನು ತೀವ್ರವಾಗಿ ಬದಲಾಯಿಸಬಹುದು. ಎಡ-ಕಾಂಗ್ರೆಸ್ ಏಕೆ ಟಿಎಂಸಿ- ಬಿಜೆಪಿಯನ್ನು ತುದಿಗಾಲಲ್ಲಿ ನಿಲ್ಲಿಸಿವೆ ಎಂಬುದನ್ನು ಅದು ವಿವರಿಸುತ್ತದೆ. ಬಂಗಾಳದ ಚುನಾವಣೆ ಫಲಿತಾಂಶ ಎಡ-ಕಾಂಗ್ರೆಸ್‌ ಪಕ್ಷಗಳು ಯಾರ ಮತಗಳನ್ನು ಕಟಾವು ಮಾಡುತ್ತಾರೆ ಎಂಬುದನ್ನು ಅವಲಂಬಿಸಿರುತ್ತದೆ.

Read More
Next Story