
ಇತ್ತೀಚಿನ ಬಾಂಬೆ ಹೈಕೋರ್ಟ್ ತೀರ್ಪಿನಲ್ಲಿ ಕಂಡುಬಂದಂತೆ, ಮಕ್ಕಳು ಪಾಲಕರನ್ನು ಸರಿಯಾಗಿ ಆರೈಕೆ ಮಾಡದಿದ್ದರೆ ನೀಡಿದ ಆಸ್ತಿಯನ್ನು ವಾಪಸ್ ಪಡೆಯಲು ಕಾನೂನಿನಲ್ಲಿ ಅವಕಾಶವಿದ್ದರೂ, ಕುಟುಂಬದ ಬಾಂಧವ್ಯ ಕೆಡುತ್ತದೆ ಎಂಬ ಭಯದಿಂದ ಪಾಲಕರು ಕಾನೂನು ಕ್ರಮಕ್ಕೆ ಮುಂದಾಗುವುದಿಲ್ಲ.)
ಭಾರತದಲ್ಲಿ ವಯಸ್ಸಾದ ಪಾಲಕರು ತಮ್ಮ ಮಕ್ಕಳ ಹೆಸರಿಗೆ ಮಾಡುವ ಅನೇಕ ಆಸ್ತಿ ವರ್ಗಾವಣೆಗಳನ್ನು ಕಾನೂನುಬದ್ಧವಾಗಿ ʼಉಡುಗೊರೆʼ (ಗಿಫ್ಟ್) ಎಂದು ಕರೆಯಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಮಕ್ಕಳು ಪಾಲಕರನ್ನು ಆರೈಕೆ ಮಾಡುತ್ತಾರೆ ಹಾಗೂ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಭಾವಿಸಲಾಗುತ್ತದೆ. ಅದೊಂದು ಅವ್ಯಕ್ತವಾದ ತಿಳುವಳಿಕೆ. ಇಂತಹ ತಿಳುವಳಿಕೆಯನ್ನು ಗುರುತಿಸಲು ಭಾರತೀಯ ಕಾನೂನು ನ್ಯಾಯಾಲಯಗಳಿಗೆ ಅವಕಾಶ ನೀಡುತ್ತದೆ. ಆದರೆ ಇದು ಸಾಮಾನ್ಯವಾಗಿ ಸಾಧ್ಯವಾಗುವುದು ಸಂಬಂಧವು ಸಂಪೂರ್ಣ ಹದಗೆಟ್ಟ ನಂತರವೇ. ಪಾಲಕರ ಆರೈಕೆ ಮಾಡಲು ವಿಫಲನಾದ ಮಗನೊಬ್ಬನ ಆಸ್ತಿ ವರ್ಗಾವಣೆಯನ್ನು ರದ್ದು ಮಾಡಿರುವ ಆದೇಶವನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿರುವ ತೀರ್ಪು ಈ ವಿರೋಧಾಭಾಸವನ್ನು ತೋರಿಸುತ್ತದೆ.
ಅದು ನೈಜ ಉಡುಗೊರೆಯಲ್ಲ
ಆಸ್ತಿ ವರ್ಗಾವಣೆ ಕಾಯ್ದೆಯಡಿ ಉಡುಗೊರೆಯು ಬೇಷರತ್ತಾಗಿರುತ್ತದೆ. ಅಂದರೆ ಅದಕ್ಕೆ ಯಾವುದೇ ಷರತ್ತುಗಳು ಅನ್ವಯ ಆಗುವುದಿಲ್ಲ. ಇದಕ್ಕೆ ಯಾವುದೇ ಪ್ರತಿಫಲದ ಅಗತ್ಯ ಇರುವುದಿಲ್ಲ. ಜೊತೆಗೆ ಸ್ವೀಕರಿಸುವ ವ್ಯಕ್ತಿಯ ಮೇಲೆ ಯಾವುದೇ ಜವಾಬ್ದಾರಿಯನ್ನು ಹೇರುವುದಿಲ್ಲ. ಹಾಗಿದ್ದೂ ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯ ಸೆಕ್ಷನ್ 23 ಈ ತತ್ವಕ್ಕಿಂತ ಭಿನ್ನವಾಗಿದೆ. ಆಸ್ತಿಯನ್ನು ಪಡೆದ ಮಗುವು ಪಾಲಕರ ಮೂಲಭೂತ ಅಗತ್ಯಗಳನ್ನು ಪೂರೈಸಲು ನಿಕಾರಿಸಿದರೆ ಅಥವಾ ವಿಫಲವಾದರೆ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಲು ಇದು ಅವಕಾಶ ಒದಗಿಸುತ್ತದೆ.
ಇಲ್ಲಿ ಕೇವಲ ಪಾಲಕರ ಆರ್ಥಿಕ ಅಗತ್ಯ ಮಾತ್ರ ಇರುವುದಿಲ್ಲ. ಬದಲಿಗೆ ಆಸ್ತಿ ವರ್ಗಾವಣೆಗೆ ಆಧಾರವಾಗಿದ್ದ ಆರೈಕೆ ಮಾಡುವ ಜವಾಬ್ದಾರಿಯನ್ನು ಕೂಡ ಗೌರವಿಸಲಾಗಿದೆಯೇ ಎಂಬ ಸಂಗತಿ ಕೂಡ ಮುಖ್ಯವಾಗುತ್ತದೆ ಎಂದು ನ್ಯಾಯಾಲಯಗಳು ಪದೇ ಪದೇ ಪ್ರತಿಪಾದಿಸಿವೆ. ವಾಸ್ತವವಾಗಿ ಕಾನೂನು ಔಪಚಾರಿಕವಾಗಿ ಉಡುಗೊರೆಯಾಗಿರುವ, ಆದರೆ ಒಪ್ಪಂದದಂತಹ ವಿನಿಮಯದ ರೂಪದಲ್ಲಿ ಕಾರ್ಯನಿರ್ವಹಿಸುವ ವಿಷಯಕ್ಕೆ ಕಾನೂನು ಮಾನ್ಯತೆ ನೀಡುತ್ತದೆ. ಇದು ಎರಡು ಪರಸ್ಪರ ವಿರೋಧಿ ಕಲ್ಪನೆಗಳನ್ನು ಸರಿಪಡಿಸುವ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಒಂದು ಕಡೆ ಉಡುಗೊರೆ ಎಂಬುದು ಬೇಷರತ್ ವರ್ಗಾವಣೆ ಎಂಬ ಕಾನೂನಿನ ವ್ಯಾಖ್ಯಾನವಿದ್ದರೆ, ಇನ್ನೊಂದು ಕಡೆ ಕುಟುಂಬದ ಆಸ್ತಿಯನ್ನು ಪಡೆದುಕೊಂಡ ಮಕ್ಕಳು ವಯಸ್ಸಾದ ಪೋಷಕರ ಆರೈಕೆ ಮಾಡಬೇಕು ಎಂಬ ಸಾಮಾಜಿಕ ನಿರೀಕ್ಷೆಯಿದೆ.
ಬಾಡಿಗೆ ಅಥವಾ ಆಸ್ತಿ ವರ್ಗಾವಣೆಯ ಸ್ವರೂಪವನ್ನು ಮರು ವ್ಯಾಖ್ಯಾನ ಮಾಡುವುದಕ್ಕೆ ಬದಲಾಗಿ ನ್ಯಾಯಾಲಯಗಳು ಎಂದಿಗೂ ಔಪಚಾರಿಕವಾಗಿ ದಾಖಲಿಸದ ನಿಬಂಧನೆಯೊಂದನ್ನು ಊಹಿಸಲು ಸೆಕ್ಷನ್ 23 ನಮಗೆ ಅನುವುಮಾಡಿಕೊಡುತ್ತದೆ. ಆಸ್ತಿ ಕಾನೂನಿನ ಕೆಲವೇ ಕೆಲವು ಅಂಶಗಳು ಇಂತಹ ಸೂಚ್ಯವಾದ ನಿಬಂಧನೆಯನ್ನು ಬೇಷರತ್ ವರ್ಗಾವಣೆಯ ವ್ಯಾಪ್ತಿಯಲ್ಲಿ ಬೇರೆ ರೀತಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ನ್ಯಾಯಾಲಯಗಳಿಗೆ ಅವಕಾಶ ಮಾಡಿಕೊಡುತ್ತವೆ. ಕುಟುಂಬಕ್ಕೆ ಸಂಬಂಧಿಸಿದ ವಾಸ್ತವ ಸಂಗತಿಗಳು ಕಾನೂನಿನ ಸ್ವರೂಪವನ್ನು ಮೀರಿ ನಿಲ್ಲಲು ಇದು ಅವಕಾಶ ಮಾಡಿಕೊಡುವ ಕಾರಣದಿಂದ ಸೆಕ್ಷನ್ 23 ಅಸಾಮಾನ್ಯವಾಗಿದೆ.
ಇತರ ದೇಶಗಳ ಕಾಯ್ದೆಗಳು
ಈ ವಿಷಯದಲ್ಲಿ ಇತರ ದೇಶಗಳು ಹೆಚ್ಚು ನೇರಾನೇರ ವಿಧಾನವನ್ನು ಅನುಸರಿಸಿವೆ. ಸಿಂಗಾಪುರ ಪಾಲಕರ ನಿರ್ವಹಣಾ ಕಾಯ್ದೆಯು, ವೃದ್ಧ ಪಾಲಕರು ತಮ್ಮನ್ನು ಬೆಂಬಲಿಸಲು ಸಮರ್ಥರಿದ್ದು ಹಾಗೆ ಮಾಡಲು ನಿರಾಕರಿಸುವ ಮಕ್ಕಳಿಂ ನಿರ್ವಹಣಾ ವೆಚ್ಚವನ್ನು ಕೋರಲು ಅವಕಾಶ ಕಲ್ಪಿಸುತ್ತದೆ. ಆ ಮೂಲಕ ಹಿಂದೆ ನೈತಿಕ ಜವಾಬ್ದಾರಿ ಎಂದು ಪರಿಗಣಿಸದ್ದನ್ನು ಕಾನೂನು ಬಾಧ್ಯತೆಯಾಗಿ ಮುಕ್ತವಾಗಿ ಪರಿವರ್ತಿಸುತ್ತದೆ.
ಆಸ್ಟ್ರೇಲಿಯಾ ಕೂಡ ತನ್ನ ಆಸ್ತಿ, ಒಪ್ಪಂದ ಮತ್ತು ಸಾಮಾಜಿಕ ಭದ್ರತಾ ನಿಯಮಗಳ ಅಡಿಯಲ್ಲಿ ವೃದ್ಧರು ವಸತಿ ಹಾಗೂ ಆರೈಕೆಯ ಬದಲಾಗಿ ಆಸ್ತಿಗಳನ್ನು ವರ್ಗಾವಣೆ ಮಾಡುವ ವ್ಯವಸ್ಥೆಗಳನ್ನು ಸ್ಪಷ್ಟವಾಗಿ ಗುರುತಿಸುತ್ತದೆ. ಭಾರತದಲ್ಲಿ ಇವೆಲ್ಲಕ್ಕೆ ವ್ಯತಿರಿಕ್ತವಾಗಿ ವಿವಾದ ತಲೆದೋರಿದಾಗ ಅವುಗಳ ಆಧಾರವಾಗಿರುವ ಒಪ್ಪಂದದಂತಹ ತಿಳುವಳಿಕೆಯನ್ನು ಗುರುತಿಸಲು ನ್ಯಾಯಾಲಯಗಳಿಗೆ ಅವಕಾಶ ನೀಡುತ್ತದೆ ಮತ್ತು ಅದರ ಜೊತೆಯಲ್ಲಿಯೇ ಈ ವರ್ಗಾವಣೆಗಳನ್ನು ಉಡುಗೊರೆಗಳೆಂದು ವಿಶ್ಲೇಷಿಸುವುದನ್ನು ಮುಂದುವರಿಸಿದೆ.
ಇಲ್ಲಿ ವೃದ್ಧ ಪೋಷಕರ ಆರೈಕೆಯನ್ನು ಸಾಂಪ್ರದಾಯಿಕವಾಗಿ ಮಾತುಕತೆ ಅಥವಾ ದಾಖಲಾತಿಯ ಅಗತ್ಯವಿರುವ ಬಾಧ್ಯತೆಗಿಂತ ಮಿಗಿಲಾಗಿ ನೈತಿಕ ಕರ್ತವ್ಯವೆಂದು ಅರ್ಥೈಸಲಾಗಿದೆ. ಮಕ್ಕಳು ಹೇಗಿದ್ದರೂ ಆರೈಕೆ ಮಾಡಿಯೇ ಮಾಡುತ್ತಾರೆ ಎಂಬ ನಂಬಿಕೆಯಿಂದ ಪಾಲಕರು ಆಸ್ತಿಯ ವರ್ಗಾವಣೆ ಮಾಡಿರುತ್ತಾರೆ. ಈ ವ್ಯವಸ್ಥೆಯು ಸಾಮಾನ್ಯವಾಗಿ ಲಿಖಿತ ರೂಪದಲ್ಲಿ ಇಲ್ಲದೇ ಇರಲು ಒಂದು ಕಾರಣವೆಂದರೆ ಅದನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳುವುದರಿಂದ ಕೌಟುಂಬಿಕ ಸಂಬಂಧಗಳು ಪ್ರೀತಿಗಿಂತ ವಿನಿಮಯದ ಮೇಲೆ ಆಧಾರಿತವಾಗಿವೆ ಎಂಬ ಭಾವನೆ ಮೂಡುವಂತೆ ಮಾಡುತ್ತದೆ. ಈ ನಿರೀಕ್ಷೆಗಳು ವಿಶ್ವಾಸಾರ್ಹತೆಯ ಕೊರತೆಯಾಗಿ ಪರಿವರ್ತನೆ ಹೊಂದುತ್ತಿದ್ದಂತೆ ಕಾನೂನು ಪರಿಹಾರಕ್ಕೆ ಹೆಚ್ಚಿನ ಮಹತ್ವ ಪಡೆಯುತ್ತದೆ.
ಪಾಲಕರೇಕೆ ಕೋರ್ಟ್ ಮೊರೆ ಹೋಗುತ್ತಾರೆ?
ಇಷ್ಟಾಗಿಯೂ ಕಾನೂನು ಸಿದ್ಧಾಂತವನ್ನು ಮೀರಿದ ದೊಡ್ಡ ಸವಾಲೊಂದು ಎದ್ದು ಕಾಣುತ್ತದೆ. ಇದು ಕಾನೂನು ನೀಡುವ ರಕ್ಷಣೆಯನ್ನು ಬಳಸಿಕೊಳ್ಳುವ ವೃದ್ಧ ಪಾಲಕರ ಸಾಮರ್ಥ್ಯಕ್ಕೆ ಸಂಬಂಧಿಸಿದ್ದಾಗಿದೆ.
ಅನೇಕ ಮಂದಿ ಪಾಲಕರು ನ್ಯಾಯಮಂಡಳಿಗಳನ್ನು ಸಂಪರ್ಕಿಸದೇ ಇರಲು ಮುಖ್ಯ ಕಾರಣವೆಂದರೆ ಅವರಿಗಿರುವ ಅರಿವಿನ ಕೊರತೆ ಎಂದು ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ. ಕೆಲವರಿಗೆ ಕಾನೂನಿನ ಅಡಿಯಲ್ಲಿ ಲಭ್ಯವಿರುವ ಪರಿಹಾರಗಳ ಬಗ್ಗೆ ತಿಳಿದಿರಲಾರದು ಎಂಬ ವಾದವೇನೋ ಸರಿ. ಆದರೆ ಕೇವಲ ಅರಿವು ವಿಳಂಬವನ್ನು ವಿವರಿಸುವುದಿಲ್ಲ. ಅನೇಕ ಪಾಲಕರಿಗೆ ತಮ್ಮ ಕಾನೂನಿನ ಹಕ್ಕುಗಳ ಬಗ್ಗೆ ತಿಳಿದಿದ್ದರೂ ಕೂಡ ಅಧಿಕಾರಿಗಳನ್ನು ಸಂಪರ್ಕಿಸಲು ಹಿಂಜರಿಯುತ್ತಾರೆ. ಇಂತಹ ಹಿಂಜರಿಕೆಯು ಕಾನೂನಾತ್ಮಕವಾಗಿ ಇರುವಷ್ಟೇ ಮಾನಸಿಕ ಭಾವನೆಯೂ ಆಗಿದೆ.
ಅನೇಕ ವೃದ್ಧ ಪಾಲಕರಿಗೆ, ಅದರಲ್ಲೂ ವಿಶೇಷವಾಗಿ ವೈಯಕ್ತಿಕ ಹಕ್ಕುಗಳಿಗಿಂತ ಕುಟುಂಬದ ಜವಾಬ್ದಾರಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಪೀಳಿಗೆಯಲ್ಲಿ ಬೆಳೆದವರಿಗೆ, ಅವರ ಗುರುತು ಕಾನೂನಾತ್ಮಕ ಹಕ್ಕುಗಳಿಗಿಂತ ಸಂಬಂಧಗಳಲ್ಲೇ ಬೇರೂರಿರುವುದು ಸ್ಪಷ್ಟ. ಈ ಕಾರಣದಿಂದ ದೂರು ದಾಖಲಿಸುವುದು ಎಂದರೆ ಅವರು ತಮ್ಮ ಸ್ವಂತ ಮಕ್ಕಳ ವಿರುದ್ಧವೇ ದೂರುದಾರರಾಗಬೇಕಾಗುತ್ತದೆ ಮತ್ತು ತಾವು ಬೇಷರತ್ತಾದದ್ದು ಎಂದು ನಂಬಿದ್ದ ಸಂಬಂಧವು ವಿಫಲವಾಗಿದೆ ಎಂಬುದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಇನ್ನೂ ಒಂದು ರೀತಿಯಲ್ಲಿ ಹೇಳುವುದಾದರೆ, ಸಾಮಾಜಿಕವಾಗಿ ಆಗಬಹುದಾದ ಕಳಂಕವು ಈ ಹಿಂಜರಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ತಮ್ಮ ಮಕ್ಕಳ ವಿರುದ್ಧ ಕಾನೂನು ಕ್ರಮ ಜರುಗಿಸುವುದನ್ನು ಇಂದಿಗೂ ಸಹ ಹಕ್ಕುಗಳ ನ್ಯಾಯಸಮ್ಮತ ಪ್ರತಿಪಾದನೆಗಿಂತ ಕುಟುಂಬದ ವೈಫಲ್ಯದ ಸಂಕೇತ ಎಂದೇ ವ್ಯಾಪಕವಾಗಿ ನೋಡಲಾಗುತ್ತದೆ. ವೃದ್ಧಾಶ್ರಮಗಳು ಮತ್ತು ಹಣ ನೀಡಿ ಇಟ್ಟುಕೊಳ್ಳುವ ಆರೈಕೆದಾರರ ವಿಚಾರದಲ್ಲೂ ಇದೇ ರೀತಿಯ ಕಳಂಕವಿದೆ; ಮಕ್ಕಳು ತಮ್ಮ ಜವಾಬ್ದಾರಿಗಳನ್ನು ತೊರೆದಿದ್ದಾರೆ ಎಂಬುದಕ್ಕೆ ಇದುವೇ ಸಾಕ್ಷಿ ಎಂದು ಅನೇಕ ಕುಟುಂಬಗಳು ಭಾವಿಸುತ್ತವೆ. ಇದರ ಪರಿಣಾಮವಾಗಿ, ಅನೇಕ ವೃದ್ಧರು ನಿರ್ಲಕ್ಷ್ಯವು ಗಂಭೀರ ಸ್ವರೂಪ ಪಡೆದ ಬಹಳ ಸಮಯದ ನಂತರವೂ ಅದನ್ನು ಸಹಿಸಿಕೊಂಡೇ ಇರುತ್ತಾರೆ. ಅವರು ಸಂಬಂಧಿಕರ ಮೂಲಕ ಅಥವಾ ಸಹಾಯವಾಣಿಗಳಿಂದ ಅನೌಪಚಾರಿಕ ಸಹಾಯವನ್ನು ಕೋರಬಹುದು, ಆದರೆ ಔಪಚಾರಿಕ ಕಾನೂನು ಪ್ರಕ್ರಿಯೆಗಳನ್ನು ತಪ್ಪಿಸುತ್ತಾರೆ ಏಕೆಂದರೆ ಹಾಗೆ ಮಾಡುವುದರಿಂದ ಕುಟುಂಬದ ಮೇಲಿನ ನಂಬಿಕೆಯು ಸಂಪೂರ್ಣವಾಗಿ ಮುರಿದುಹೋಗಿದೆ ಎಂಬುದು ಸಾರ್ವಜನಿಕವಾಗಿ ದೃಢಪಡುತ್ತದೆ.
ವಿಳಂಬಿತ ಮಧ್ಯಪ್ರವೇಶ
ಹಾಗಂತ ಇದ್ಯಾವುದೂ ಸೆಕ್ಷನ್ 23 ರ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ, ಈ ನಿಬಂಧನೆ ಏಕೆ ಅವಶ್ಯಕ ಎಂಬುದನ್ನು ಇದು ಮತ್ತೆ ಒತ್ತಿ ಹೇಳುತ್ತದೆ. ಕೇವಲ ಸಮಾಲೋಚನೆ, ಮನವೊಲಿಕೆ ಮತ್ತು ಕುಟುಂಬದ ಮೌಲ್ಯಗಳಿಗೆ ಮಾಡುವ ಮನವಿಗಳ ಮೇಲೆ ಮಾತ್ರ ಆಧಾರಿತವಾಗಿರುವ ವ್ಯವಸ್ಥೆಯು, ವೃದ್ಧ ಪಾಲಕರನ್ನು ಈಗಾಗಲೇ ಕೈಬಿಟ್ಟಿರಬಹುದಾದವರ ಒಳಿತಿನ ಮೇಲೆ ಅವಲಂಬಿತರನ್ನಾಗಿ ಮಾಡುತ್ತದೆ. ನೈತಿಕ ನಿರೀಕ್ಷೆಗಳು ವಿಫಲವಾದಾಗ ಕಾನೂನು ಜಾರಿಗೊಳಿಸಬಹುದಾದ ಪರಿಹಾರವನ್ನು ಒದಗಿಸುತ್ತದೆ.
ಆದಾಗ್ಯೂ, ಸಂಬಂಧಗಳು ಸರಿಪಡಿಸಲಾಗದಷ್ಟು ಹದಗೆಟ್ಟ ನಂತರವೇ ಕಾನೂನು ಮಧ್ಯಪ್ರವೇಶ ಮಾಡುತ್ತದೆ. ಪೋಷಕರು ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಕೋರುವಷ್ಟರಲ್ಲಿ, ನಿರ್ಲಕ್ಷ್ಯವಹಿಸಿ ಸಾಕಷ್ಟು ಕಾಲವೇ ಕಳೆದಿರುತ್ತದೆ ಮತ್ತು ಪುನರಾವರ್ತನೆಯೂ ಆಗಿರುತ್ತದೆ. ವಿವಾದವು ನ್ಯಾಯಮಂಡಳಿಯನ್ನು ತಲುಪಿದ ನಂತರವಷ್ಟೇ ಕಾನೂನು ಪರಿಹಾರವು ಪರಿಣಾಮಕಾರಿಯಾಗುತ್ತದೆ. ಆದರೆ ಮೊದಲ ಹಂತದಲ್ಲೇ ವ್ಯಾಜ್ಯಕ್ಕೆ ಕಾರಣವಾಗುವ ಪರಿಸ್ಥಿತಿಗಳನ್ನು ತಡೆಯುವಲ್ಲಿ ಇದು ಕಡಿಮೆ ಪರಿಣಾಮಕಾರಿಯಾಗಿದೆ.
ಬದಲಾಗಬೇಕಾದದ್ದಾರೂ ಏನು?
ಭಾರತದ ಜನಸಂಖ್ಯೆಯು ವೃದ್ಧರಾಗುತ್ತಿದ್ದಂತೆ ಈ ಮಿತಿಯು ಹೆಚ್ಚು ಮಹತ್ವಪೂರ್ಣವಾಗುತ್ತದೆ. 2050ರ ವೇಳೆಗೆ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಂಖ್ಯೆಯು ಸುಮಾರು 319 ಮಿಲಿಯನ್ ತಲುಪುವ ಮುನ್ಸೂಚನೆ ಇದೆ. ಇಷ್ಟು ದೊಡ್ಡ ವೃದ್ಧ ಅಥವಾ ಹಿರಿಯರ ಜನಸಂಖ್ಯೆಯನ್ನು ಹೊಂದಿರುವ ಸಮಾಜವು, ಅವು ಮುರಿದುಬಿದ್ದ ನಂತರವಷ್ಟೇ ಕಾನೂನುಬದ್ಧವಾಗಿ ಜಾರಿಗೆ ಬರುವ ಖಾಸಗಿ ಕುಟುಂಬ ವ್ಯವಸ್ಥೆಗಳನ್ನೇ ಸಂಪೂರ್ಣವಾಗಿ ಅವಲಂಬಿಸಲು ಸಾಧ್ಯವಿಲ್ಲ. ಇದಕ್ಕೆ ಬಲವಾದ ಸಾಮಾಜಿಕ ರಕ್ಷಣಾ ವ್ಯವಸ್ಥೆಗಳು, ಕಾನೂನು ಪರಿಹಾರಗಳಿಗೆ ಸುಲಭವಾದ ಪ್ರವೇಶ ಮತ್ತು ವೃದ್ಧ ಪಾಲಕರು ಕುಟುಂಬದ ಮೌಲ್ಯಗಳನ್ನು ತೊರೆದಿದ್ದಾರೆ ಎಂದು ಭಾವಿಸದೆ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಬಹುದು ಎಂಬ ಕಲ್ಪನೆಗೆ ಹೆಚ್ಚಿನ ಸಾರ್ವಜನಿಕ ಸ್ವೀಕೃತಿ ಅಗತ್ಯವಿದೆ.
ಆದ್ದರಿಂದ, ಬಾಂಬೆ ಹೈಕೋರ್ಟ್ನ ತೀರ್ಪು ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಬಹುದೇ ಎಂಬ ಪ್ರಶ್ನೆಗಿಂತಲೂ ವಿಶಾಲವಾದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಭಾರತೀಯ ಕಾನೂನು ಈ ವ್ಯವಹಾರಗಳನ್ನು ಉಡುಗೊರೆಗಳು ಎಂದು ವರ್ಣಿಸುವುದನ್ನು ಮುಂದುವರಿಸಬೇಕೇ ಮತ್ತು ಅದೇ ಸಮಯದಲ್ಲಿ ಅವುಗಳ ಒಳಗೆ ಅಡಗಿರುವ ಒಪ್ಪಂದವನ್ನು ಗುಪ್ತವಾಗಿ ಜಾರಿಗೆ ತರಬೇಕೇ? ದುರದೃಷ್ಟವಶಾತ್, ಕಾನೂನುಬದ್ಧ ಹಕ್ಕುಗಳನ್ನು ಪ್ರತಿಪಾದಿಸುವುದು ಕುಟುಂಬದ ಸಂಬಂಧಗಳಿಗೆ ಮಾಡುವ ದ್ರೋಹ ಎಂದು ಪರಿಗಣಿಸುವುದು ನಿಲ್ಲುವವರೆಗೆ, ಅನೇಕ ವೃದ್ಧ ಪಾಲಕರು ಬೇರೆ ಎಲ್ಲಾ ಆಯ್ಕೆಗಳು ವಿಫಲವಾದ ನಂತರವೇ ಕಾನೂನಿನ ರಕ್ಷಣೆಯನ್ನು ಕೋರುತ್ತಾರೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.


