ಸಿಎಂಸಿಯಂತಹ ಆಸ್ಪತ್ರೆ ಕಟ್ಟಲು ಆರ್.ಎಸ್.ಎಸ್.ಗೆ ಯಾಕೆ ಸಾಧ್ಯವಾಗಿಲ್ಲ?
x
ತಮಿಳು ನಾಡಿನ ವೆಲ್ಲೂರಿನಲ್ಲಿರುವ ಸಿಎಂಸಿ ಆಸ್ಪತ್ರೆಯನ್ನು ಸ್ಥಾಪಿಸಿದ್ದು ಅಮೆರಿಕದ ಮಿಷಿನರಿ ಮಹಿಳೆ ಡಾ.ಇಡಾ ಸೋಫಿಯಾ ಸ್ಕಡರ್. ಅದು ಮೊದಲು ನರ್ಸಿಂಗ್ ಮತ್ತು ಡೆಲಿವರಿ ಕ್ಲಿನಿಕ್ ಆಗಿತ್ತು. ಆ ಬಳಿಕ ಅದು ಭಾರತದಲ್ಲಿ ಪ್ರಮುಖ ವಿಶ್ವದರ್ಜೆಯ ವೈದ್ಯಕೀಯ ಸಂಸ್ಥೆಯಾಗಿ ಬೆಳೆಯಿತು. ಚಿತ್ರ: ವಿಕಿಮೀಡಿಯಾ ಕಾಮನ್

ಸಿಎಂಸಿಯಂತಹ ಆಸ್ಪತ್ರೆ ಕಟ್ಟಲು ಆರ್.ಎಸ್.ಎಸ್.ಗೆ ಯಾಕೆ ಸಾಧ್ಯವಾಗಿಲ್ಲ?

ಸ್ವಾತಂತ್ರ್ಯಾನಂತರ ಆರ್.ಎಸ್.ಎಸ್. ರೀತಿಯ ರಾಜಕೀಯ ಶಕ್ತಿಗಳೇನಾದರೂ ಅಧಿಕಾರಕ್ಕೆ ಬಂದಿದ್ದರೆ ಸಿಎಂಸಿಯನ್ನು ಎಂದು ಮುಚ್ಚಿಹಾಕುತ್ತಿದ್ದರು ಮತ್ತು ಕಟ್ಟಯ್ಯ ಅವರು ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪಬೇಕಾಗಿತ್ತು.


ಕಂಚ ಕಟ್ಟಯ್ಯ ಅವರು ಜನಿಸಿದ್ದು 1948ರಲ್ಲಿ. ಈಗಿನ ತೆಲಂಗಾಣದ ಚೆನ್ನಾರಾವ್ ಪೇಟೆ ಮಂಡಲದ ಪಾಪಯ್ಯ ಪೇಟೆ ಎಂಬ ಸಣ್ಣ ಪ್ರದೇಶದ ಗ್ರಾಮದಲ್ಲಿ. ತಮ್ಮೂರಿನ ಸನಿಹದ ಸಣ್ಣ ಪಟ್ಟಣದಲ್ಲಿ ಹನ್ನೊಂದನೇ ತರಗತಿ ತನಕ ಶಾಲಾ ಶಿಕ್ಷಣವನ್ನು ಮುಗಿಸಿದ ಕಟ್ಟಯ್ಯ ಓದನ್ನು ತೊರೆದು ಮದುವೆಯಾದರು. ನಂತರ ಅವರು ಆರಂಭಿಸಿದ್ದು ತಮ್ಮದೇ ಕುಟುಂಬದ ವೃತ್ತಿಯಾದ ಕುರಿ ಕಾಯುವುದು ಮತ್ತು ಕೃಷಿಯನ್ನು.

1976ರಲ್ಲಿ ಅವರಿಗೆ ತೀವ್ರ ಹೃದಯದ ಕಾಯಿಲೆ ಕಾಣಿಸಿಕೊಂಡಿತು. ಅವರನ್ನು ಹೊರರೋಗಿಯಾಗಿ ತಪಾಸಣೆ ನಡೆಸಿದ ಹೈದರಾಬಾದಿನ ಡಾಕ್ಟರ್, ನಿಮ್ಮ ಹೃದಯದ ಎರಡು ಕವಾಟಗಳೂ ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ ನೀವು ಬದುಕುಳಿಯುವುದಿಲ್ಲ ಎಂದು ತಿಳಿಸಿದರು.

ವೆಲ್ಲೂರಿನ ಸಿಎಂಸಿಗೆ

ಹೃದಯದ ಕವಾಟ ಬದಲಾವಣೆ ಕೆಲಸವೇನಿದ್ದರೂ ತಮಿಳು ನಾಡಿನ ವೆಲ್ಲೂರಿನಲ್ಲಿರುವ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಾತ್ರ ಸಾಧ್ಯ ಎಂಬ ಸಂಗತಿ ತಿಳಿದುಬಂತು. ಆ ಕಾಲದಲ್ಲಿ ಅವಿಭಜಿತ ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದ್ ನಲ್ಲಿಯೂ ಪರಿಪೂರ್ಣ ತರಬೇತಿಯನ್ನು ಪಡೆದ ಹೃದ್ರೋಗ ತಜ್ಞರು ಇದ್ದಿರಲಿಲ್ಲ. ಎಕೋಗ್ರಾಮ್ ನಂತಹ ವೈದ್ಯಕೀಯ ತಂತ್ರಜ್ಞಾನವೂ ಇರಲಿಲ್ಲ.

ಅಸಲಿಗೆ ಕಟ್ಟಯ್ಯ ಧೈರ್ಯಗೆಡುವವರಲ್ಲ. ಅವರು ತಮ್ಮಲ್ಲಿರುವ ಎಲ್ಲ ಹಣಕಾಸು ಸಂಪನ್ಮೂಲಗಳನ್ನು ಒಟ್ಟುಗೂಡಿಸಿಕೊಂಡು ವೆಲ್ಲೂರಿನ ಸಿಎಂಸಿಗೆ ಹೋದರು. ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದ ಕಟ್ಟಯ್ಯ ಅವರ ಕಿರಿಯ ಸಹೋದರನಾದ ಈ ಲೇಖಕರ ಸಹಾಯದಿಂದ ವೈದ್ಯಕೀಯ ಉದ್ದೇಶಕ್ಕಾಗಿ ನಿಜಾಮ್ ಟ್ರಸ್ಟ್ ನಿಂದ ಆರ್ಥಿಕ ನೆರವನ್ನು ಕೋರಿದರು.

ಆ ಕಾಲದಲ್ಲಿ ಟ್ರಸ್ಟ್ ತೀವ್ರ ಸ್ವರೂಪದ ಹೃದಯದ ಸಮಸ್ಯೆ ಇದ್ದವರಿಗೆ ಸಹಾಯಮಾಡುತ್ತಿತ್ತು. ಕಟ್ಟಯ್ಯ ಅವರಿಗೆ 8000 ರೂ. ನೆರವು ದೊರೆಯಿತು. ಅದು ಅವರಿಗೆ ದೊರೆತ ಮೊದಲ ಹಣಕಾಸು ಸಹಾಯವಾಗಿತ್ತು.

ಸಿಎಂಸಿ ಆಸ್ಪತ್ರೆಯಲ್ಲಿ ಇವರ ಹೃದಯದ ಕಿರೀಟ ಕವಾಟ (mitral valve)ದಲ್ಲಿ ಸಮಸ್ಯೆಯಿದ್ದು ಅದನ್ನು ಬದಲಾಯಿಸಬೇಕು ಎಂಬ ಸಂಗತಿಯನ್ನು ಪತ್ತೆ ಮಾಡಲಾಯಿತು. ಆ ಸಮಸ್ಯೆಯನ್ನು ಪರಿಹರಿಸಬಹುದು ಎಂದೂ ಅವರು ತಿಳಿಸಿದ್ದರು. ಕಟ್ಟಯ್ಯ ಅವರ ಜೀವನವನ್ನೇ ಬದಲಾಯಿಸುವ ಆ ಆಸ್ಪತ್ರೆಯಲ್ಲಿ ಅವರ ದಾಖಲಾತಿ ಸಂಖ್ಯೆ 912829 ಎಂದಾಗಿತ್ತು. ಅದು ಅತ್ಯಂತ ಹಳೆಯ ಪದ್ಧತಿಯಾಗಿತ್ತು. ಅಂದು ಸಂಪೂರ್ಣ ಶಸ್ತ್ರಚಿಕಿತ್ಸೆಗೆ ಅವರ ಕುಟುಂಬ ಮಾಡಿದ ಖರ್ಚು 50000 ರೂ. ಅದರಲ್ಲಿ ಬಹುತೇಕ ಸಾಲವಾಗಿ ಪಡೆದ ಮೊತ್ತವೇ ಆಗಿತ್ತು.

ವೈದ್ಯರು ಹೆಚ್ಚು ಕಾಲ ಬದುಕುವುದಿಲ್ಲ ಎಂದು ಹೇಳಿದ್ದರೂ ಕೂಡ ಅವರು ಧೈರ್ಯಗೆಡದೆ ಬದುಕಿನ ಭರವಸೆಯೊಂದಿಗೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಂಡರು. ಅದು ಅವರ ಬದುಕನ್ನೇ ಬದಲಿಸಿತು. 1979ರ ಡಿಸೆಂಬರ್ 17ರಂದು ಅವರು ಶಸ್ತ್ರಚಿಕಿತ್ಸೆಗೆ ಒಳಗಾದರು ಮತ್ತು ಅಲ್ಲಿಂದ ಮುಂದೆ 46 ವರ್ಷಗಳ ಕಾಲ ಸುಖೀ ಜೀವನವನ್ನು ನಡೆಸಿದರು. ಈ ವರ್ಷದ ಜೂನ್ ತಿಂಗಳ ಆರಂಭದಲ್ಲಿ ಹೈದರಾಬಾದ್ ನ ಅಪಾರ್ಟ್ಮೆಂಟ್ ನಲ್ಲಿ ತಮ್ಮ 77ರ ವಯಸ್ಸಿನಲ್ಲಿ ನಿಧನರಾದರು.

ವಿಜ್ಞಾನದ ಮೂಲ ಹುಡುಕುವವರು

ಪ್ರಶ್ನೆ ಏನೆಂದರೆ, ಅಂತಹುದೊಂದು ಬಹುಮುಖ್ಯ ಬದಲಿ ಕವಾಟದ ಸರ್ಜರಿಯನ್ನು ಯಾಕೆ ಕ್ರಿಶ್ಚಿಯನ್ ಮಿಷನರಿ ಆಸ್ಪತ್ರೆಯಲ್ಲಿ ಮಾಡಬೇಕಾಯಿತು, ಹಿಂದೂ ಸಂಘಟನೆಗೆ ಸೇರಿದ ಆಸ್ಪತ್ರೆಯಲ್ಲಿ ಯಾಕೆ ಮಾಡಲಿಲ್ಲ?

ಪ್ರಾಚೀನ ಕಾಲದಿಂದ ಇಲ್ಲಿಯ ವರೆಗೂ ಎಲ್ಲ ವಿಜ್ಞಾನಕ್ಕೆ ಮೂಲವೆಂದರೆ ಹಿಂದೂ ಧರ್ಮ, ಪಾಶ್ಚಿಮಾತ್ಯರಿಂದ ನಾವು ಏನನ್ನೂ ಕಲಿಯಬೇಕಾದ ಅಗತ್ಯವಿಲ್ಲ ಎಂದು ಈಗಿನ ಆಡಳಿತಾರೂಢ ಆರ್.ಎಸ್.ಎಸ್./ಬಿಜೆಪಿ ಶಕ್ತಿಗಳು ಪ್ರತಿಪಾದಿಸುತ್ತವೆ.

ನಿಜ, ಪಾಶ್ಚಿಮಾತ್ಯ ವೈಜ್ಞಾನಿಕ ಬೆಳವಣಿಗೆಯನ್ನು ಕ್ರಿಶ್ಚಿಯನ್ ಸಂಪ್ರದಾಯವನ್ನು ಪ್ರಶ್ನಿಸುವ ಮೂಲಕ ನಡೆಯಿತು. ಆದರೆ ಹಿಂದೂ ಸಂಪ್ರದಾಯದ ಮಧ್ಯಕಾಲೀನ ಪೂರ್ವಜರನ್ನು ಜ್ಞಾನದ ಎಲ್ಲ ಶಾಖೆಗಳ ವಾರಸುದಾರರಾಗಿದ್ದ ಬ್ರಾಹ್ಮಣ ಬುದ್ಧಿಜೀವಿಗಳು ಎಂದಿಗೂ ಪ್ರಶ್ನಿಸಿರಲಿಲ್ಲ.

ಈಗ ಹಿಂದುಗಳೆಂದು ಪ್ರತಿಪಾದಿಸಲಾಗುತ್ತಿರುವ ಜನಸಂಖ್ಯೆಯ ಬಹುತೇಕ ಭಾಗವಾಗಿರುವ ಶೂದ್ರರು, ದಲಿತರು ಮತ್ತು ಆದಿವಾಸಿಗಳಿಗೆ, ವೈಜ್ಞಾನಿಕ ನೆಲೆಯನ್ನು ಸೃಷ್ಟಿಸುವ ದಿಸೆಯಲ್ಲಿ ಹಿಂದೂ ಸಂಪ್ರದಾಯವನ್ನು ಅಧ್ಯಯನ ಮಾಡಲು ಮತ್ತು ಪ್ರಶ್ನಿಸಲು ಅವಕಾಶವೇ ಇರಲಿಲ್ಲ. ವಾಸ್ತವ ಸಂಗತಿ ಎಂದರೆ ಅವರಿಗೆ ಹಿಂದೂ ಧಾರ್ಮಿಕ ಭಾಷೆಯಾದ ಸಂಸ್ಕೃತವನ್ನು ಕಲಿಯಲು ಅನುಮತಿ ಇರಲಿಲ್ಲ. ಹಿಂದೂ ಇತಿಹಾಸದ ಯಾವ ಹಂತದಲ್ಲಿಯೂ ಗೆಲಿಲಿಯೊ ಮತ್ತು ಕೊಪರ್ನಿಕಸ್ ಹೊರಹೊಮ್ಮಲು ಅವಕಾಶವೇ ಇರಲಿಲ್ಲ.

ಮೂಢನಂಬಿಕೆಯೇ ವಿಜ್ಞಾನವೆನ್ನುವ ಜನ

ಹಿಂದುತ್ವ ಶಕ್ತಿಗಳ ಆಧುನಿಕ ಸಂಘಟಕರು ತಮ್ಮ ಹಿಂದಿನ ದೌರ್ಬಲ್ಯಗಳನ್ನು ಸುತಾರಾಂ ಒಪ್ಪಿಕೊಳ್ಳುವುದೇ ಇಲ್ಲ. ಅವರು ತಮ್ಮ ದೌರ್ಬಲ್ಯಗಳನ್ನೇ ಶಕ್ತಿಯಾಗಿ, ಮೂಢನಂಬಿಕೆಗಳನ್ನೇ ವಿಜ್ಞಾನವಾಗಿ ಬಿಂಬಿಸಲು ಬಯಸುತ್ತಾರೆ.

ಹಾಗಾಗಿಯೇ ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ಸಂಸ್ಥೆಗಳು ಅಪಾಯದಲ್ಲಿರುವುದು. ಮೂಢನಂಬಿಕೆಗಳನ್ನೇ ಧರ್ಮ ಮತ್ತು ವಿಜ್ಞಾನವೆಂದು ಉತ್ತೇಜಿಸುವ ದೃಷ್ಟಿಯಿಂದ ಸಂಸ್ಕೃತ ಪುಸ್ತಕಗಳನ್ನು ಓದುವಂತೆ ಭಾರತದ ಯುವಕರ ಮೇಲೆ ಒತ್ತಡ ಹೇರುತ್ತಿದ್ದಾರೆ.

ನಿಸ್ಸಂದೇಹವಾಗಿ ಧರ್ಮ ಮತ್ತು ವಿಜ್ಞಾನದ ನಡುವೆ ಸೂಕ್ಷ್ಮ ಸಂಬಂಧವಿದೆ. ವಿಜ್ಞಾನ ಮತ್ತು ಧರ್ಮದ ನಡುವಿನ ಸಂಘರ್ಷದ ಸುತ್ತಲೂ ಇರುವ ಐತಿಹಾಸಿಕ ಆಧ್ಯಾತ್ಮಿಕ ಚರ್ಚೆಯನ್ನು ವಿಕಾಸವಾದ ಮತ್ತು ಸೃಷ್ಟಿವಾದದ ಪರಿಭಾಷೆಯಲ್ಲಿ ರೂಪಿಸಲಾಗಿದೆ. ದೇವರ ಬಗೆಗಿನ ಕಲ್ಪನೆಯು ಮಾನವನ ಊಹೆಯನ್ನು ಆಧರಿಸಿದ್ದಾಗಿದೆ.

ಆದರೆ ಹಿಂದೂ ಧರ್ಮದಲ್ಲಿರುವ ಕರ್ಮ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಇರುವ ಮೂಲ ಪಾಪದಂತಹ ಪರಿಕಲ್ಪನೆಗಳು ಮೂಢನಂಬಿಕೆಯಾಗಿದ್ದರೂ ಧಾರ್ಮಿಕವಾಗಿದೆ. ಮೂಢನಂಬಿಕೆಯು ವಿಜ್ಞಾನದೊಂದಿಗೆ ಸಂವಾದಿಯಾಗಿರಲು ಸಾಧ್ಯವಿಲ್ಲ. ವೈದ್ಯಕೀಯ ಅನ್ನುವುದು ವಿಜ್ಞಾನ. ಆಸ್ತತ್ರೆ ಎನ್ನುವುದು ಅದರ ಸಾಂಸ್ಥಿಕ ನೆಲೆ.

ಮಧ್ಯಕಾಲೀನ ಯುಗದಲ್ಲಿ ಭಾರತಕ್ಕೆ ಬಂದ ಇಸ್ಲಾಂ, ಅಲ್ಲಾ ಎಲ್ಲ ರೋಗಗಳನ್ನು ಗುಣಪಡಿಸುತ್ತಾನೆ ಎನ್ನುತ್ತ ತನ್ನದೇ ಆದ ಪುರಾಣಗಳನ್ನು ಸೃಷ್ಟಿಸಿತು. ಆದರೆ ಭಾರತದ ಇಸ್ಲಾಂ ಸಿಎಂಸಿ ಗುಣಮಟ್ಟದ ಆಸ್ಪತ್ರೆಯನ್ನು ನಿರ್ಮಿಸಲಿಲ್ಲ.

ಮೂಢನಂಬಿಕೆ ಹಳ್ಳಿಗರನ್ನು ಉದ್ದಾರಮಾಡಲು ಬಿಡುವುದಿಲ್ಲ ಎಂಬುದು ಕಟ್ಟಯ್ಯ ಅವರಿಗೆ ಹೃದ್ರೋಗಿಯಾಗುವುದಕ್ಕೂ ಮೊದಲೇ ಗೊತ್ತಿತ್ತು. ಅದು ಅವರ ಆರ್ಥಿಕ ಸಂಕಷ್ಟವನ್ನು ಮಾತ್ರ ಹೆಚ್ಚಿಸುತ್ತದೆ. ಅವರ ತಂದೆ ಮತ್ತು ತಾಯಿ ಸತ್ತಾಗಲೂ ಮನೆಯಲ್ಲಿ ಯಾವುದೇ ಮೂಢನಂಬಿಕೆ ಆಚರಣೆಗಳಿಗೆ ಉತ್ತೇಜನವನ್ನು ನೀಡಲಿಲ್ಲ.

ಆಗಿನ ಕಾಲಘಟ್ಟದಲ್ಲಿ ಹಳ್ಳಿಯ ಸಾಂಸ್ಕೃತಿಕ ವಾತಾವರಣ ಮೂಢನಂಬಿಕೆಗಳಿಂದಲೇ ತುಂಬಿತ್ತು. ಜನ ಮಾಂತ್ರಿಕರು, ಸ್ಥಳೀಯ ಮಂದಿರಗಳು ಮತ್ತು ಅರ್ಚಕರಿಗಾಗಿ ಸಾಕಷ್ಟು ಖರ್ಚು ಮಾಡುತ್ತಿದ್ದರು. ತಮ್ಮ ಶಾಲಾ ಶಿಕ್ಷಣ ಕೊನೆಗೊಳ್ಳುವ ಹೊತ್ತಿಗಾಗಲೇ ಕಟ್ಟಯ್ಯ ಅವರು ಅಂತಹ ಮೂಢನಂಬಿಕೆಗಳನ್ನು ಮೀರುವ ಕೆಲಸ ಮಾಡುತ್ತಿದ್ದರು.

ಸಾಮಾನ್ಯವಾಗಿ ಇಂತಹ ಆರೋಗ್ಯ ಸ್ಥಿತಿಗಳು ಭಯವನ್ನು ಹುಟ್ಟುಹಾಕುತ್ತದೆ ಮತ್ತು ಮನುಷ್ಯನನ್ನು ಬದುಕಿನ ಸುತ್ತಲೂ ಪುರಾಣವನ್ನು ಕಟ್ಟುವ ಯಾವುದೇ ವಿಷಯದ ಕಡೆಗೆ ಒಲವು ಮೂಡುವಂತೆ ಮಾಡುತ್ತದೆ. ಕಟ್ಟಯ್ಯ ಅವರು ವೆಲ್ಲೂರು ಆಸ್ಪತ್ರೆಗೆ ತೆರಳುವ ಮುನ್ನ ತಿರುಪತಿಯಲ್ಲಿ ನಿಲ್ಲಬೇಕಾಗಿತ್ತು. ಅವರನ್ನು ನೋಡಿಕೊಳ್ಳುತ್ತಿದ್ದ ಸಹೋದರ, ದೇವರ ದರ್ಶನ ಮಾಡುವಿರಾ ಎಂದು ಅವರನ್ನು ಕೇಳಿದರು. ಅದಕ್ಕೆ ಅವರು ಕೊಟ್ಟ ಉತ್ತರ ಮಾರ್ಮಿಕವಾಗಿತ್ತು:

“ನನಗೆ ಆಪರೇಷನ್ ಮಾಡುವ ಸರ್ಜನ್ ಒಳ್ಳೆಯವರಾಗಿದ್ದರೆ ನಾನು ಬದುಕುತ್ತೇನೆ ಮತ್ತು ವೈದ್ಯರು ಒಳ್ಳೆಯವರಾಗಿದ್ದು ಸರಿಯಾದ ಔಷಧಿಗಳನ್ನು ಶಿಫಾರಸು ಮಾಡಿದರೆ ನಾನು ಇನ್ನೂ ದೀರ್ಘಕಾಲ ಬದುಕುತ್ತೇನೆ, ಬದಲಾಗಿ ದೇವರ ವಿಗ್ರಹಗಳ ದರ್ಶನದಿಂದ ಅಲ್ಲ” ಎಂದು ಹೇಳಿದ್ದರು.

ಒಂದೇ ಒಂದು ಕವಾಟವನ್ನು ಹೃದಯಕ್ಕೆ ಅಳವಡಿಸಿಕೊಂಡು 45 ವರ್ಷ ಮತ್ತು ಆರು ತಿಂಗಳ ಕಾಲ ಹೆಚ್ಚುವರಿಯಾಗಿ ಬದುಕುವ ಮೂಲಕ ಅವರು ಅದನ್ನು ಸಾಬೀತುಪಡಿಸಿದರು ಕೂಡ.

ನೆಹರೂ ವಿಜ್ಞಾನ ಮತ್ತು ವಿಜ್ಞಾನ ವಿರೋಧಿ ಆರ್.ಎಸ್.ಎಸ್.

ಭಾರತವು ಮೂಢನಂಬಿಕೆಗಳ ದೇಶ. ಆರ್.ಎಸ್.ಎಸ್., ಹಿಂದೂ ಮಹಾಸಭಾ ಮತ್ತು ಬಜರಂಗದಳದಂತಹ ಸಂಘಟನೆಗಳ ಪ್ರಚಾರದೊಂದಿಗೆ ವಿದ್ಯಾವಂತ ಪುರುಷರು ಮತ್ತು ಮಹಿಳೆಯರು ಕೂಡ ನೆಹರುವಿನ ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧವಾಗಿ ಮೂಢನಂಬಿಕೆಗಳನ್ನು ಹರಡುತ್ತಿದ್ದಾರೆ. ನೆಹರೂ ಅವರ ವೈಜ್ಞಾನಿಕ ದೃಷ್ಟಿಕೋನವು ಕ್ರಿಶ್ಚಿಯನ್ ಮಿಷನರಿ ಆಸ್ಪತ್ರೆಗಳು ಮತ್ತು ಶಾಲೆಗಳಿಗೆ ಉತ್ತೇಜನ ನೀಡಿತು.

ವೆಲ್ಲೂರಿನ ಸಿಎಂಸಿ ಆಸ್ಪತ್ರೆಗೆ ಸರಿಸಮಾನವಾದ ಒಂದೇ ಒಂದು ಆಸ್ಪತ್ರೆಯನ್ನು ಆರ್.ಎಸ್.ಎಸ್. ನಾಗಪುರ ಅಥವಾ ಇನ್ನೆಲ್ಲೇ ಆಗಲಿ ಸ್ಥಾಪಿಸಲಿಲ್ಲ. ಕ್ರಿಶ್ಚಿಯನ್ ಮಿಷನರಿ ಸಂಘಟನೆಗಳು ಸಿಎಂಸಿಯನ್ನು ಸ್ಥಾಪಿಸಿದರೆ ಹಿಂದೂ ಸಂಘಟನೆಗಳು ಕುಂಭ ಮೇಳ, ದೇಗುಲ ದರ್ಶನ, ಕಾಶಿ ಯಾತ್ರಾ, ದುರ್ಗಾ ಪೂಜಾ ಇತ್ಯಾದಿಗಳನ್ನು ಆಯೋಜಿಸಿದವೇ ಹೊರತು ಆಧುನಿಕ ವೈದ್ಯಕೀಯದ ಕಡೆಗೆ ಎಂದೂ ಕಣ್ಣು ಹಾಯಿಸಲಿಲ್ಲ.

ವಾಸ್ತವವಾಗಿ ಆಧುನಿಕ ವೈದ್ಯ ಪದ್ಧತಿಯನ್ನು ಬ್ರಿಟಿಷ್ ವಸಾಹತುಶಾಹಿ ವೈದ್ಯ ಪದ್ಧತಿ ಎಂದೂ, ಆಯುರ್ವೇದಕ್ಕೆ ವಿರುದ್ಧವೆಂದೂ ಪರಿಗಣಿಸಲಾಯಿತು. ‘ಇಂಗ್ಲಿಷ್ ಮೆಡಿಸಿನ್’ ಎಂದು ಲೇವಡಿ ಮಾಡುವ ರೀತಿಯಲ್ಲಿ ಆಯುರ್ವೇದ ಮಾತ್ರ ಬೆಳೆಯಲಿಲ್ಲ. ಅವರೆಂದೂ ವಿಜ್ಞಾನ ಮತ್ತು ವಸಾಹತುಶಾಹಿಯ ನಡುವಿನ ವ್ಯತ್ಯಾಸವನ್ನು ಪರಿಗಣಿಸಲಿಲ್ಲ.

ತೆಲಂಗಾಣದಲ್ಲಿಯೂ ಕೂಡ ಜನ ಗಂಗಾ ನದಿಯಲ್ಲಿ ಮುಳುಗಿ ರೋಗಗಳಿಂದ ಗುಣಮುಖರಾಗುತ್ತೇವೆ ಎಂಬ ಮೂಢನಂಬಿಕೆಗೆ ಒಳಗಾದರು. ಅವರು ಧರ್ಮ ಮತ್ತು ಮೂಢನಂಬಿಕೆ ನಡುವಿನ ವ್ಯತ್ಯಾಸವನ್ನು ಗುರುತಿಸಲಿಲ್ಲ.

ಮತ್ತೆ ಕಟ್ಟಯ್ಯ ಅವರ ವಿಚಾರಕ್ಕೆ ಬರುವುದಾದರೆ, ಶತಾಯಗತಾಯ ಬದುಕಲೇಬೇಕು ಎಂದು ಅವರು ನಿರ್ಧಾರಮಾಡಿದ್ದರು. ಸಿಎಂಸಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ಸುಮಾರು ಐವತ್ತು ಸಾವಿರ ರೂ. ವೆಚ್ಚದಲ್ಲಿ ಹೃದಯದ ಕವಾಟವನ್ನು ಬದಲಿಸಿಕೊಂಡಿದ್ದರು. 1979ರಲ್ಲಿ ಇದು ನಿಜಕ್ಕೂ ದೊಡ್ಡ ಮೊತ್ತವೇ ಆಗಿತ್ತು.

ಪ್ರಪ್ರಥಮ ಮಾನವ ನಿರ್ಮಿತ ವಾಲ್ವ್

ಅಂದು ಆಸ್ಪತ್ರೆಯಲ್ಲಿ ಅವರನ್ನು ಆಪರೇಟ್ ಮಾಡಿದವರು ಡಾ.ಸ್ಟ್ಯಾನ್ಲಿ ಜಾನ್. ಅವರು ಅಳವಡಿಸಿದ್ದು ಸ್ಟಾರ್ ಎಡ್ವರ್ಡ್ ಸ್ಟೀಲ್ ವಾಲ್ವ್. ಅದನ್ನು ಅಮೆರಿಕದ ಮೆಡಿಕಲ್ ಮಾರ್ಕೆಟ್ ನಿಂದ ತರಲಾಗಿತ್ತು. ಡಾ.ಜಾರ್ಜ್ ಚೆರಿಯನ್ ಅವರು ಫಿಸಿಸಿಯನ್ ಆಗಿದ್ದರು. ಅದು ಜಗತ್ತಿನಲ್ಲಿಯೇ ಮೊಟ್ಟಮೊದಲ ಮಾನವ ನಿರ್ಮಿತ ವಾಲ್ವ್ ಆಗಿತ್ತು. ಅದು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿತು.

ನೆಹರೂ ಅವರ ರಾಷ್ಟ್ರೀಯತೆಯು ಸಿಎಂಸಿಯಂತಹ ಕ್ರಿಶ್ಚಿಯನ್ ಆಸ್ಪತ್ರೆಗಳಿಗೆ ಮತ್ತು ಭಾಭಾ ಅಣು ಸಂಶೋಧನಾ ಕೇಂದ್ರದಂತಹ ಅತ್ಯಾಧುನಿಕ ಸಂಸ್ಥೆಗಳ ಸ್ಥಾಪನೆಗೆ ದಾರಿಮಾಡಿಕೊಟ್ಟಿತು.


ಕಂಚ ಕಟ್ಟಯ್ಯ ಅವರ ವೈದ್ಯಕೀಯ ದಾಖಲೆಗಳು

ಅಮೆರಿಕದ ಮಿಷಿನರಿ ಮಹಿಳೆ ಡಾ.ಇಡಾ ಸೋಫಿಯಾ ಸ್ಕಡರ್ ಅವರಿಂದ ಸ್ಥಾಪನೆಗೊಂಡ ಸಿಎಂಸಿ ಮೊದಲು ನರ್ಸಿಂಗ್ ಮತ್ತು ಡೆಲಿವರಿ ಕ್ಲಿನಿಕ್ ಆಗಿತ್ತು. ಆ ಬಳಿಕ ಅದು ಭಾರತದಲ್ಲಿ ಪ್ರಮುಖ ವಿಶ್ವದರ್ಜೆಯ ವೈದ್ಯಕೀಯ ಸಂಸ್ಥೆಯಾಗಿ ಬೆಳೆಯಿತು. ಕಾಲಾನಂತರದಲ್ಲಿ ವಿದೇಶಿ ಮಿಷನ್ ಧನ ಸಹಾಯ ಮತ್ತು ರೋಗಿಗಳಿಂದ ಸಂಗ್ರಹಿಸಿದ ಹಣದಿಂದ ಅದು ಮತ್ತಷ್ಟು ಅಭಿವೃದ್ಧಿಯಾಗುತ್ತ ಹೋಯಿತು. ದೆಹಲಿಯಲ್ಲಿನ ಸರ್ಕಾರ ಕೂಡ ಧನ ಸಹಾಯ ಮಾಡಿತು.

ವಿರೋಧಿ ಸಂಸ್ಥೆಗಳು

ಒಂದು ವೇಳೆ ಭಾರತದಲ್ಲಿ ಆರ್.ಎಸ್.ಎಸ್./ಬಿಜೆಪಿ ಮೊದಲು ಆಡಳಿತಕ್ಕೆ ಬಂದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಿ. ಅವರು ಸಿಎಂಸಿಯನ್ನು ‘ಮತಾಂತರವಾದಿ’ ಮತ್ತು ‘ಗೋಮಾಂಸ ತಿನ್ನಿಸುವ’ ಹಣೆಪಟ್ಟಿ ಕಟ್ಟಿ ಮುಚ್ಚಿಸಿಬಿಡುತ್ತಿದ್ದರೇನೋ. ಸಿಎಂಸಿಯ ಕ್ಯಾಂಟೀನ್ ನಲ್ಲಿ ರೋಗಿಗಳಿಗೆ ಮತ್ತು ಅವರನ್ನು ಭೇಟಿಯಾಗಲು ಬರುವವರಿಗೆ ಗೋಮಾಂಸವನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅದು ಪ್ರೋಟೀನ್ ಪೂರೈಕೆಯ ಉದ್ದೇಶದಿಂದ. ವೈದ್ಯರು ಕಟ್ಟಯ್ಯ ಅವರಂತಹ ರೋಗಿಗಳಿಗೆ ಗೋಮಾಂಸವನ್ನು ಶಿಫಾರಸು ಮಾಡುತ್ತಿದ್ದರು. ಆದರೆ ಯಾವುದೇ ಆಹಾರ ಪದಾರ್ಥ ಸೇವಿಸಲು ಒತ್ತಾಯ ಮಾಡುತ್ತಿರಲಿಲ್ಲ.

ವಿಜ್ಞಾನ ಮತ್ತು ಮೂಢನಂಬಿಕೆಗಳು ಯಾವತ್ತೂ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುವ ಘಟಕಗಳು ಮತ್ತು ಮಾನವರ ಆಚರಣೆಗಳು. ಮೂಡನಂಬಿಕೆಗಳನ್ನು ಹರಡುವ ಆರ್.ಎಸ್.ಎಸ್. ವಿಜ್ಞಾನ ಮತ್ತು ಧರ್ಮ ಎರಡಕ್ಕೂ ಸಂವಾದಿಯಾಗುವಂತಹ ಸೈದ್ಧಾಂತಿಕ ಸಾಮರ್ಥ್ಯವನ್ನು ಹೊಂದಿಲ್ಲ. ಅದಕ್ಕಾಗಿಯೇ ಭಾರತದಲ್ಲಿ ಮೂಢನಂಬಿಕೆ ವಿರೋಧಿ ಕಾನೂನಿನ ಅಗತ್ಯವಿದೆ. ಅನೇಕ ಮಂದಿ ಹೃದಯ ಮತ್ತು ಇತರ ಕಾಯಿಲೆಗಳನ್ನು ಹೊಂದಿದ ರೋಗಿಗಳು ಅಪಾರ ಪ್ರಮಾಣದ ಹಣವನ್ನು ಖರ್ಚುಮಾಡಿಯೂ ಮೂಢನಂಬಿಕೆ ಸಂಬಂಧಿ ಆಚರಣೆಗಳಿಂದ ಮೃತಪಟ್ಟಿದ್ದಾರೆ.

ಜನರ ಮನಸ್ಸಿನೊಳಕ್ಕೆ ನಿರಂತರವಾಗಿ ಮೂಡನಂಬಿಕೆಯನ್ನು ತುಂಬುವುದು, ಅವರನ್ನು ಜಾತಿವಾದ ಮತ್ತು ಬ್ರಾಹ್ಮಣವಾದದ ಗುಲಾಮರನ್ನಾಗಿ ಮಾಡಲು ಇಂತಹವುಗಳನ್ನು ಅಸ್ತ್ರಗಳಾಗಿ ಬಳಸುತ್ತ ಬರಲಾಗಿದೆ.

ಜಾತಿಯೇ ಒಂದು ಮೂಢನಂಬಿಕೆ

ಜಾತಿ ಎನ್ನುವುದು ಧಾರ್ಮಿಕ ಸಂಸ್ಥೆಯಲ್ಲ. ಅದೇ ಒಂದು ಮೂಢನಂಬಿಕೆ. ಆರ್.ಎಸ್.ಎಸ್. ಸಿದ್ಧಾಂತಿಗಳ ಪೂರ್ವಜರು ರಚಿಸಿದ ಪ್ರಮುಖ ಸಂಸ್ಥೆಗಳಲ್ಲಿ ಜಾತಿ ಕೂಡ ಒಂದು. ಇಂತಹ ಜಾತಿ ವ್ಯವಸ್ಥೆಯು ಈಗ ಹೆಚ್ಚಿನ ಭಾರತೀಯರ ಮನಸ್ಸಿನಲ್ಲಿ ಮೂಢನಂಬಿಕೆಗಳನ್ನು ತುಂಬಿದೆ.

ಸ್ವಾತಂತ್ರ್ಯಾನಂತರ ಆರ್.ಎಸ್.ಎಸ್. (ಅದು ತನ್ನನ್ನು ಸಾಮಾಜಿಕ ಸಂಘಟನೆ ಎಂದು ಕರೆದುಕೊಂಡಿದೆ) ರೀತಿಯ ರಾಜಕೀಯ ಶಕ್ತಿಗಳೇನಾದರೂ ಅಧಿಕಾರಕ್ಕೆ ಬಂದಿದ್ದರೆ ಸಿಎಂಸಿಯನ್ನು ಯಾವತ್ತೋ ಮುಚ್ಚಿಹಾಕುತ್ತಿದ್ದರು ಮತ್ತು ಕಟ್ಟಯ್ಯ ಅವರು 46 ವರ್ಷಗಳ ಹಿಂದೆಯೇ ಸಾವನ್ನಪ್ಪಬೇಕಾಗಿತ್ತು. ಅವರು ಭಾರತದಲ್ಲಿ, ಬಹುಷಃ ವಿಶ್ವದಲ್ಲಿಯೇ ಕೃತಕ ಕವಾಟವನ್ನು ಧರಿಸಿ ಬದುಕುಳಿದವರ ಇತಿಹಾಸದಲ್ಲಿಯೇ ದಾಖಲೆ ಸ್ಥಾಪಿಸಿದರು.

ಇಂದು ಜಗತ್ತಿನಲ್ಲಿ ವೈದ್ಯಕೀಯ ವಿಜ್ಞಾನ ಅಪಾರ ಪ್ರಗತಿಯನ್ನು ಸಾಧಿಸಿದೆ. ಪ್ರತಿದಿನವೂ ಹೊಸ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೆ ಭಾರತ ಮಾತ್ರ ಅದರಲ್ಲಿ ಸಾಕಷ್ಟು ಹಿಂದುಳಿದಿದೆ. ಆರ್.ಎಸ್.ಎಸ್./ಬಿಜೆಪಿಯ ವಿಜ್ಞಾನ ವಿರೋಧಿ ಮತ್ತು ಇಂಗ್ಲಿಷ್ ವಿರೋಧಿ ನೀತಿಗಳು ನಮ್ಮನ್ನು ಇನ್ನಷ್ಟು ಹಿಂದುಳಿಯುವಂತೆ ಮಾಡುವ ಸಾಧ್ಯತೆಗಳೇ ಹೆಚ್ಚು. ಭಾರತದಲ್ಲಿ ಈಗ ವೈಜ್ಞಾನಿಕ ಮನೋಭಾವದ ಯಾವ ಚರ್ಚೆಯೂ ನಡೆಯುತ್ತಿಲ್ಲ.

(ದಿವಂಗತ ಕಂಚ ಕಟ್ಟಯ್ಯ ಅವರು ಈ ಲೇಖಕರ ಸಹೋದರ)

(ಮೂಲ ಲೇಖನ The Federal ನಲ್ಲಿ ಪ್ರಕಟವಾಗಿದೆ. ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು. ಅವು 'ದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕೆಂದಿಲ್ಲ)

Read More
Next Story